ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿ ಕೊಂದವನಿಗೆ ಸಮುದಾಯ ಸೇವೆ ಶಿಕ್ಷೆ ವಿಧಿಸಿದ ಹೈಕೋರ್ಟ್

Published 8 ಮೇ 2024, 16:13 IST
Last Updated 8 ಮೇ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ತಾಯಿಯನ್ನು ಕೊಂದಿದ್ದ ಆರೋಪಿಯನ್ನು ಖುಲಾಸೆಗೊಳಿಸಿ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿದೆ.

ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಡಿಕೇರಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಹಾಗೂ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಆರೋಪಿಯು ಈಗಾಗಲೇ ಎರಡು ವರ್ಷಗಳ ಜೈಲು ಶಿಕ್ಷೆ ಅನುಭವಿಸಿರುವ ಕಾರಣ ಸುಧಾರಣಾ ಕ್ರಮವಾಗಿ ಆತ ಸಂಪಾಜೆಯ ಸರ್ಕಾರಿ ಶಾಲೆಯ ಆವರಣ ಸ್ವಚ್ಛಗೊಳಿಸುವಿಕೆ, ಶಾಲೆಯ ತೋಟ ನಿರ್ವಹಣೆ ಮಾಡಿ ಸಮುದಾಯ ಸೇವೆ ಸಲ್ಲಿಸಬೇಕು’ ಎಂದು ಆದೇಶಿಸಿದೆ.

‘ಒಂದು ವೇಳೆ ಸಮುದಾಯ ಸೇವೆ ಮಾಡದೇ ಇದ್ದರೆ ಹೆಚ್ಚುವರಿಯಾಗಿ ₹25 ಸಾವಿರ ಮತ್ತು ಮೂರು ತಿಂಗಳು ಜೈಲು ವಾಸ ಅನುಭವಿಸಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: ‘ಮಗ ಅನಿಲ್ ದುಶ್ಚಟಗಳಿಂದ ದಾರಿ ತಪ್ಪಿದ್ದಾನೆ ಎಂದು ಆತನ ತಾಯಿ ಗಂಗಮ್ಮ 2015ರ ಏಪ್ರಿಲ್ 4ರಂದು ಬೈದಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಆತ ಅಕೆಯನ್ನು ದೊಣ್ಣೆಯಿಂದ ಥಳಿಸಿದ್ದ. ಇದರಿಂದ ಆಕೆ ಗಂಭೀರವಾಗಿ ಗಾಯಗೊಂಡಿದ್ದರು ಮತ್ತು ಏಪ್ರಿಲ್ 5ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು’ ಎಂದು ದೋಷಾರೋಪ ಪಟ್ಟಿಯಲ್ಲಿ ವಿವರಿಸಲಾಗಿತ್ತು.

ಅನಿಲ್‌ನನ್ನು ಬಂಧಿಸಿದ್ದ ಪೊಲೀಸರು ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯ, ‘ಅನುಮಾನಕ್ಕೆ ಆಸ್ಪದವಿಲ್ಲದಂತೆ ಅನಿಲ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ’ ಎಂದು ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT