ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Muda | ಹೈಕೋರ್ಟ್‌ ಆದೇಶದಲ್ಲಿ ಹಲವು ಲೋಪ, ಮೇಲ್ಮನವಿ ಬಗ್ಗೆ ಚರ್ಚೆ: ಪೊನ್ನಣ್ಣ

Published : 26 ಸೆಪ್ಟೆಂಬರ್ 2024, 23:34 IST
Last Updated : 26 ಸೆಪ್ಟೆಂಬರ್ 2024, 23:34 IST
ಫಾಲೋ ಮಾಡಿ
Comments

ಬೆಂಗಳೂರು: ‘ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮವನ್ನು ಎತ್ತಿಹಿಡಿದ ಹೈಕೋರ್ಟ್‌ ಆದೇಶದಲ್ಲಿ ಹಲವು ಲೋಪಗಳಿವೆ. ಆ ತೀರ್ಪಿನಲ್ಲಿ ನ್ಯಾಯಿಕ ಗ್ರಹಿಕೆ ಸಮಂಜಸವಾಗಿಲ್ಲ ಎಂದು ಮೇಲ್ಮನವಿ ಸಲ್ಲಿಸುವ ಬಗ್ಗೆ ಚರ್ಚಿಸಲಾಗುತ್ತಿದೆ’ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್‌.ಪೊನ್ನಣ್ಣ ಹೇಳಿದರು.

ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಜತೆ ಚರ್ಚಿಸಲು ದೆಹಲಿಗೆ ತೆರಳಿರುವ ಅವರು, ‘ರಾಜ್ಯಪಾಲರು ತನಿಖೆಗೆ ಅನುಮತಿ ನೀಡುವಲ್ಲಿ ನ್ಯಾಯಿಕ ಗ್ರಹಿಕೆ ಸರಿಯಾಗಿಲ್ಲ ಎಂದೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಾಸ್ತವಾಂಶ, ಕಾರಣ ಮತ್ತು ಅಂತಿಮ ನಿರ್ಧಾರವು ಪರಸ್ಪರ ಹೊಂದಿಕೆಯಾಗಬೇಕು. ಇವುಗಳಲ್ಲಿ ಯಾವೊಂದು ಕೊಂಡಿ ಇಲ್ಲವಾದರೂ, ನ್ಯಾಯಿಕ ಗ್ರಹಿಕೆ ಇಲ್ಲವಾಗುತ್ತದೆ. ನ್ಯಾಯಾಂಗಕ್ಕೂ ಇದು ಅನ್ವಯವಾಗುತ್ತದೆ. ಇದೇ ಆಧಾರದಲ್ಲಿ ಮೇಲ್ಮನವಿ ಸಲ್ಲಿಸಬೇಕಾಗುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೈಕೋರ್ಟ್‌ನ ತೀರ್ಪಿನಲ್ಲಿ ಇಂತಹ ಹಲವು ಲೋಪಗಳಿವೆ. ಅವುಗಳನ್ನು ಪರಿಶೀಲಿಸಿ, ಸೂಕ್ತ ರೀತಿಯಲ್ಲಿ ಮೇಲ್ಮನವಿ ಸಲ್ಲಿಸಲಾಗುತ್ತದೆ. ಈ ಸಂಬಂಧ ಅಭಿಷೇಕ್‌ ಮನು ಸಿಂಘ್ವಿ ಅವರ ಜತೆ ಈಗಾಗಲೇ ಚರ್ಚಿಸಲಾಗಿದೆ. ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ, ಮುಂದಿನ ನಡೆ ನಿರ್ಧರಿಸೋಣ ಎಂದು ಅವರು ಹೇಳಿದ್ದಾರೆ. ಅವರ ಸಲಹೆಗಾಗಿ ಕಾಯುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

ಊಹೆಯ ಮೇಲೆ ತನಿಖೆಗೆ ಆದೇಶಿಸುವ ಅಧಿಕಾರವಿಲ್ಲ: ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಗುರುವಾರ ಮಾತನಾಡಿದ್ದ ಅವರು, ‘ಕೇವಲ ಊಹೆಗಳ ಆಧಾರದ ಮೇಲೆ ತನಿಖೆಗೆ ಆದೇಶಿಸುವ ಅಧಿಕಾರ ಹೈಕೋರ್ಟ್‌ಗೆ ಇಲ್ಲ ಎಂದು ಸಂವಿಧಾನದ 226ನೇ ವಿಧಿ ಹೇಳುತ್ತದೆ. ಸಿದ್ದರಾಮಯ್ಯ ವಿವಿಧ ಹುದ್ದೆಗಳಲ್ಲಿ ಇದ್ದಾಗ ಮತ್ತು ಮುಖ್ಯಮಂತ್ರಿ ಎಂಬ ಕಾರಣಕ್ಕೆ ಅಧಿಕಾರದ ಪ್ರಭಾವ ಬಳಕೆಯಾಗಿದೆ ಹಾಗೂ ಅಧಿಕಾರ ದುರ್ಬಳಕೆಯಾಗಿದೆ ಎಂದು ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಸಿದ್ದರಾಮಯ್ಯ ಅವರ ಪಾತ್ರವೇನು ಎಂಬುದನ್ನು ಯಾರೂ ಹೇಳಿಲ್ಲ, ಹೈಕೋರ್ಟ್‌ನ ಆದೇಶದಲ್ಲೂ ಅದಿಲ್ಲ’ ಎಂದರು.

‘ಪಾರ್ವತಿ ಅವರಿಗೆ ಹಂಚಿಕೆ ಮಾಡಲಾದ 14 ನಿವೇಶನಗಳ ಮೌಲ್ಯ ₹56 ಕೋಟಿಯಷ್ಟಾಗುತ್ತದೆ ಎಂದು ಹೈಕೋರ್ಟ್‌ ತೀರ್ಪಿನಲ್ಲಿದೆ. ಜಮೀನಿನ ಮೌಲ್ಯವನ್ನು ನ್ಯಾಯಾಲಯ ನಿರ್ಧರಿಸಲು ಬರುತ್ತದೆಯೇ? ವಿಧಾನಸೌಧದ ಮೌಲ್ಯ ₹10 ಎಂದು ನಾನು ಹೇಳಿದರೆ, ಒಪ್ಪುತ್ತೀರಾ? ಈ ಆದೇಶದಲ್ಲಿ ನ್ಯಾಯಮೂರ್ತಿ ಹೇಳಿದ್ದನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.

ಹೈಕೋರ್ಟ್‌ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಬೇಕೇ ಅಥವಾ ಸುಪ್ರೀಂ ಕೋರ್ಟ್‌ಗೆ ನೇರವಾಗಿ ಅರ್ಜಿ ಸಲ್ಲಿಸಬೇಕೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ
ಎ.ಎಸ್‌.ಪೊನ್ನಣ್ಣ ಮುಖ್ಯಮಂತ್ರಿಯ ಕಾನೂನು ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT