ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ: ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲು

Published 25 ಮಾರ್ಚ್ 2024, 15:44 IST
Last Updated 25 ಮಾರ್ಚ್ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳಿಗೆ ಮುಂಬೈ ಪೊಲೀಸರ ಸೋಗಿನಲ್ಲಿ ದೂರವಾಣಿ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಪರಿಚಿತರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ.

ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್ ಹಾಗೂ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರು ಅವರ ನಿರ್ದೇಶನದ ಮೇರೆಗೆ ಹೈಕೋರ್ಟ್ ಭದ್ರತಾ ಇನ್‌ಸ್ಪೆಕ್ಟರ್‌ ಜಿ.ಶೋಭಾ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಎ.ಆರ್.ರಘುನಾಯ್ಕ ನೀಡಿರುವ ದೂರಿನ ಅನುಸಾರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಹಣಕ್ಕೆ ಬೇಡಿಕೆ: ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್ ಅವರ ಅವರ ಮೊಬೈಲ್‌ ಫೋನ್‌ಗೆ ಇದೇ 15ರಂದು ಸಂಜೆ 4 ಗಂಟೆಗೆ ಅಪರಿಚಿತನೊಬ್ಬ ಕರೆ ಮಾಡಿದ್ದ. ‘ನಾನು ಡಿಒಪಿಟಿ (ಆಡಳಿತ ಸುಧಾರಣೆ ಮತ್ತು ತರಬೇತಿ) ಇಲಾಖೆಯಿಂದ ಕರೆ ಮಾಡುತ್ತಿದ್ದೇನೆ’ ಎಂದು ಹೇಳಿಕೊಂಡಿದ್ದ ಆತ, ‘ನಿಮ್ಮ ಸಿಮ್‌ ಕಾರ್ಡ್‌ನಿಂದ ಕಾನೂನುಬಾಹಿರವಾಗಿ ಜಾಹೀರಾತು ಹಾಗೂ ಆಕ್ಷೇಪಾರ್ಹ ಸಂದೇಶಗಳನ್ನು ಪ್ರಕಟಿಸುತ್ತಿದ್ದೀರಿ. ಹೀಗಾಗಿ, ನಿಮ್ಮ ಮೇಲೆ ಮುಂಬೈನಲ್ಲಿ ಪ್ರಕರಣ ದಾಖಲಾಗಿದೆ. ಬೇಕಾದರೆ ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ’ ಎಂದಿದ್ದ. ಬಳಿಕ ಮತ್ತೊಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ನ್ಯಾಯಮೂರ್ತಿಯವರಿಗೆ ಏರು ದನಿಯಲ್ಲಿ ಮಾತನಾಡಿದ್ದ. ಕರೆ ಸ್ಥಗಿತಗೊಳಿಸಿದ್ದ ನ್ಯಾಯಮೂರ್ತಿಯವರು ದೂರು ದಾಖಲಿಸುವಂತೆ ಹೈಕೋರ್ಟ್‌ ಭದ್ರತಾ ವಿಭಾಗದ ಪೊಲೀಸರಿಗೆ ನಿರ್ದೇಶಿಸಿದ್ದರು.

ಮತ್ತೊಂದು ಪ್ರಕರಣ: ಅದೇ ದಿನ ಬೆಳಿಗ್ಗೆ 9 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಹೆರೂರು ಅವರಿಗೆ ಕರೆ ಮಾಡಿ ನ್ಯಾಯಮೂರ್ತಿ ಪಂಡಿತ್‌ ಅವರಿಗೆ ಬೆದರಿಕೆ ಹಾಕಿದ್ದ ರೀತಿಯಲ್ಲಿ ಬೆದರಿಕೆ ಹಾಕಿದ್ದ. ‘ನಿಮ್ಮ ಮೇಲೆ ಮುಂಬೈನ ಅಂಧೇರಿ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಕಾದರೆ ಈ ಕರೆಯನ್ನು ಪೊಲೀಸರಿಗೆ ವರ್ಗಾವಣೆ ಮಾಡುತ್ತೇನೆ. ಅವರ ಜತೆ ಮಾತನಾಡಿ ನಿಮ್ಮ ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ’ ಎಂದು ಹೇಳಿ ಕರೆಯನ್ನು ಮತ್ತೊಬ್ಬನಿಗೆ ವರ್ಗಾವಣೆ ಮಾಡಿದ್ದ. ಆ ವ್ಯಕ್ತಿಯೂ ನ್ಯಾಯಮೂರ್ತಿಗಳ ಜೊತೆಗೆ ಏರು ಧ್ವನಿಯಲ್ಲಿ ಮಾತನಾಡಿದ್ದ. ‘ದುಡ್ಡು ಕೊಟ್ಟರೆ ನಿಮ್ಮ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ತಿಳಿಸಿದ್ದ ಎಂಬುದಾಗಿ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌
ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌
ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರು
ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರು

ವ್ಯವಸ್ಥಿತ ಸಂಚು

‘ಇದೊಂದು ವ್ಯವಸ್ಥಿತವಾಗಿ ಸಂಚು ರೂಪಿಸಿಕೊಂಡು ಸಾರ್ವಜನಿಕರಿಗೆ ಬೆದರಿಕೆ ಒಡ್ಡಿ ಹಣ ಪಡೆದು ಮೋಸ ಮಾಡುವ ಗುಂಪು ಇರಬಹುದು. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರಿಗೆ ಮೋಸ ಮಾಡುತ್ತಾರೆ. ಆದ್ದರಿಂದ ಇಂತಹ ಗುಂಪಿನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.

ಹಣಕ್ಕೆ ಬೇಡಿಕೆ

‘ನೀವು ಬಳಸುತ್ತಿರುವ ಮೊಬೈಲ್‌ ಫೋನ್‌ ಸಿಮ್‌ ಕಾರ್ಡ್‌ಗಳ ಮೂಲಕ ಕಾನೂನು ಬಾಹಿರ ಜಾಹೀರಾತು ಹಾಗೂ ಆಕ್ಷೇಪಾರ್ಹ ಸಂದೇಶಗಳನ್ನು ಹಾಕುತ್ತಿದ್ದೀರಿ’ ಎಂದು ನ್ಯಾಯಮೂರ್ತಿಗಳಿಗೆ ಫೋನ್‌ ಕರೆಯ ಮೂಲಕ ಬ್ಲ್ಯಾಕ್‌ಮೇಲ್‌ ಮಾಡಿ ಹಣಕ್ಕೆ ಬೇಡಿಕೆ ಇರಿಸಲಾಗಿತ್ತು. ಹೈಕೋರ್ಟ್‌ ಭದ್ರತಾ ವಿಭಾಗದ ಪೊಲೀಸ್‌ ಅಧಿಕಾರಿಗಳು ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT