ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕೀಕರಣ ಕಲ್ಪನೆಗೆ ಪರೋಕ್ಷ ನಾಂದಿ; ಟಿಪ್ಪು ಜಯಂತಿ ಸಂದೇಶದಲ್ಲಿ ಡಾ.ಉದಯ್‌ಕುಮರ್‌

Last Updated 10 ನವೆಂಬರ್ 2018, 8:23 IST
ಅಕ್ಷರ ಗಾತ್ರ

ಮಂಗಳೂರು: ವಿವಿಧ ಪಾಳೇಗಾರರು, ತುಂಡರಸರ ಆಡಳಿತ ವ್ಯಾಪ್ತಿಯಲ್ಲಿದ್ದ ಕನ್ನಡ ಮಾತನಾಡುವ ಸಮುದಾಯಗಳು ಟಿಪ್ಪು ಸುಲ್ತಾನ್‌ ಆಡಳಿತದ ಸಂದರ್ಭದಲ್ಲಿ ಒಂದೇ ಪ್ರಭುತ್ವದಡಿಗೆ ಬರುವಂತಾಯಿತು. ಪರೋಕ್ಷವಾಗಿ ಇದು ಕರ್ನಾಟಕದ ಏಕೀಕರಣ ಪರಿಕಲ್ಪನೆಗೆ ನಾಂದಿಯಾಯಿತು ಎಂದು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಎ. ಉದಯ್‌ ಕುಮಾರ್‌ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಹಜರತ್‌ ಟಿಪ್ಪು ಸುಲ್ತಾನ್‌ ಜಯಂತಿ ಸಂದರ್ಭದಲ್ಲಿ ಅವರು ಟಿಪ್ಪು ಜಯಂತಿ ಸಂದೇಶ ನೀಡಿದರು. ಕೃಷಿ ಭೂಮಿ ಕೂಡ ತುಂಡರಸರು, ಮಠ ಮಾನ್ಯಗಳ ಕೈಯಲ್ಲಿದ್ದ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್‌ ಸೇನೆಗೆ ಎಲ್ಲ ಸಮುದಾಯದ ಜನರನ್ನು ಸೇರಿಸಿಕೊಂಡು ಅವರಿಗೆ ಭೂಮಿಯನ್ನು ಉಂಬಳಿ ಕೊಡುವ ಪರಿಪಾಠ ಆರಂಭಿಸಿದರು. ಇದು ತಳವರ್ಗದ ಸುಧಾರಣೆಗೆ ಕಾರಣವಾಯಿತು. ಶೇ 35ರಷ್ಟು ಜಮೀನಿಗೆ ನೀರಾವರಿ ಒದಗಿಸಿದ್ದರಿಂದ ಕೃಷಿ ಉತ್ಪನ್ನಗಳು ಹೆಚ್ಚಾಗಿ ಜನರ ಆದಾಯವೂ, ರಾಜ್ಯದ ಬೊಕ್ಕಸದ ಆದಾಯವೂ ಹೆಚ್ಚಾಗಿತ್ತು ಎಂದು ಅವರು ಹೇಳಿದರು.

49 ವರ್ಷ ಜೀವನ ಮಾಡಿದ್ದ ಟಿಪ್ಪು ಸುಲ್ತಾನ್‌ ಯುದ್ಧದ ಸವಾಲುಗಳನ್ನು ಎದುರಿಸುತ್ತ ಫ್ರೆಂಚ್‌ ಮತ್ತು ತುರ್ಕಿಸ್ತಾನ್‌ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಸ್ಥಳೀಯವಾಗಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಿಟಿಷ್‌ ವಸಾಹತುಶಾಹಿಯನ್ನು ವಿರೋಧಿಸಲು ತಕ್ಕುದಾದ ಬಲ ಒಗ್ಗೂಡಿಸಲು ಪ್ರಯತ್ನಿಸಿದ್ದು ಇತಿಹಾಸವನ್ನು ಓದಿದಾಗ ಅರಿವಿಗೆ ಬರುತ್ತದೆ. ಟಿಪ್ಪುಸುಲ್ತಾನ್‌ ನಡೆಗೆ ಮುಸ್ಲಿಮರ ವಿರೋಧವೂ ಇತ್ತು. ನಿಜಾಮರ ನೆರವಿನೊಂದಿಗೇ ಕೊನೆಗೆ ಬ್ರಿಟಿಷರು ಟಿಪ್ಪುವನ್ನು ಸೋಲಿಸಿದ್ದರು ಎಂದು ಅವರು ವಿವರಿಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿ, ‘ಸಂವಿಧಾನವನ್ನು ಒಪ್ಪುವವರು ಟಿಪ್ಪು ಜಯಂತಿಯನ್ನು ಒಪ್ಪುತ್ತಾರೆ. ಟಿಪ್ಪು ಸುಲ್ತಾನ್‌ ತನ್ನ ಗುರಿಸಾಧನೆಗಾಗಿ ಮಾಡಿದ ಕೆಲಸಗಳಲ್ಲಿ ಕೆಲವರಿಗೆ ತೊಂದರೆ ಆಗಿರಬಹುದು. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಲ್ಲಿ ಸಣ್ಣ ಪುಟ್ಟ ತೊಂದರೆಗಳಾಗಿರಬಹುದು. ಆದರೆ ಟಿಪ್ಪು ಸಮರ್ಥ ರಾಜಕಾರಣಿ ಎಂಬುದರಲ್ಲಿ ಸಂಶಯವಿಲ್ಲ’ ಎಂದು ಹೇಳಿದರು.

ರಾಜ್ಯ ಸರ್ಕಾರ ಮಾಡುವ ಆಚರಣೆಗೆ ವಿರೋಧ ಮಾಡುವ ಕೆಲವು, ತಾವೇ ನಡೆಸುವ ಆಚರಣೆಯಲ್ಲಿ ಸಂಭ್ರಮಿಸುತ್ತಾರೆ. ಇದು ವಿರೋಧಿಗಳ ದ್ವಿಮುಖ ನೀತಿಯನ್ನು ತೋರಿಸುತ್ತದೆ. ವಿರೋಧ ಮಾಡುವವರಿಗೆ ಇತಿಹಾಸದ ಅರಿವಿಲ್ಲ. ಯುದ್ಧದಲ್ಲಿ ಸೋತ ಸಂದರ್ಭದಲ್ಲಿ ಯುದ್ಧವೆಚ್ಚವನ್ನು ಭರಿಸುವವರೆಗೆ ತನ್ನ ಮಕ್ಕಳನ್ನೇ ಲಾರ್ಡ್‌ ಕಾರ್ನವಾಲೀಸ್‌ಗೆ ಒತ್ತೆಯಾಗಿ ಇರಿಸಿದ ಘಟನೆ ದೇಶಭಕ್ತಿಯ ಸಂಕೇತವಲ್ಲದೆ ಮತ್ತೇನೆ ಎಂದು ಅವರು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ, ‘ಟಿಪ್ಪು ಸುಲ್ತಾನ್‌ ಜಯಂತಿಯನ್ನು ಕದ್ದುಮುಚ್ಚಿ ಒಳಾಂಗಣದಲ್ಲಿ ಆಚರಿಸುವುದು ಸರಿಯಲ್ಲ. ಮುಕ್ತವಾಗಿ ಸಾರ್ವಜನಿಕವಾಗಿ ಆಚರಿಸಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಟಿಪ್ಪುಸುಲ್ತಾನ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.

ವೇದಿಕೆಯಲ್ಲಿ ಮೇಯರ್‌ ಭಾಸ್ಕರ್‌ ಕೆ., ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್‌ ಮೋನು, ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಸೆಲ್ವಮಣಿ ಆರ್., ಎಸ್ಪಿ ಡಾ. ಬಿ.ಆರ್‌. ರವಿಕಾಂತೇಗೌಡ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT