ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ್ವಾಸ್ ನುಡಿಸಿರಿ: ಮನೆಯೊಳಗಣ ದೇವರ ಸ್ಪರ್ಶಿಸಿ

ಮಹಿಳಾ ಬಿಕ್ಕಟ್ಟು ವಿಷಯ ಮಂಡಿಸಿ ಡಾ.ಉಷಾ ಸಲಹೆ
Last Updated 18 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಮೂಡುಬಿದಿರೆ:‘ಮುಟ್ಟಿನ ಕಾರಣಕ್ಕಾಗಿ ಮಹಿಳೆಯರನ್ನು ದೇವಾಲಯದಿಂದ ದೂರ ಇಡುವ ಮನಸ್ಥಿತಿಯ ವಿರುದ್ಧದ ಪ್ರತಿಭಟನೆಗೆ ಬಲ ಬರಬೇಕಾದರೆ ಮಹಿಳೆಯರು ಆ ಅವಧಿಯಲ್ಲಿ ಮನೆಯೊಳಗಿದ್ದ ದೇವರನ್ನು ಪೂಜಿಸುವ ಸಾಮೂಹಿಕ ಅಭಿಯಾನವೊಂದನ್ನು ಆರಂಭಿಸಬೇಕು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಎಂ.ಉಷಾ ಸಲಹೆ ನೀಡಿದರು.

ಇಲ್ಲಿನ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ–2018ರಲ್ಲಿ ಭಾನುವಾರ ‘ಮಹಿಳಾ ಬಿಕ್ಕಟ್ಟುಗಳು’ ವಿಷಯ ಕುರಿತು ಮಾತನಾಡಿದ ಅವರು, ‘ಶಬರಿಮಲೆ ಅಯ್ಯಪ್ಪ ದೇವಾಲಯದೊಳಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ಕಲ್ಪಿಸುವುದಕ್ಕೆ ಪೂರಕವಾಗಿ ಸಾಮೂಹಿಕ ಅಭಿಪ್ರಾಯವೊಂದನ್ನು ರೂಪಿಸುವಲ್ಲಿ ನಾವು ವಿಫಲವಾಗಿದ್ದೇವೆ. ಹೀಗಾಗಿಯೇ ಸುಪ್ರೀಂಕೋರ್ಟ್‌ ತೀರ್ಪಿನ ನಂತರವೂ ದೇವಾಲಯ ಪ್ರವೇಶ ಬಿಕ್ಕಟ್ಟಾಗಿಯೇ ಉಳಿದಿದೆ’ ಎಂದರು.

‘ಯಾವುದೇ ಕಾನೂನು ರೂಪಿಸುವುದು ಮತ್ತು ಅದನ್ನು ಜಾರಿಗೊಳಿಸುವಾಗ ಬಲವಾದ ಜನಾಭಿಪ್ರಾಯ ರೂಪಿಸಿಕೊಂಡರೆ ಆ ಪ್ರಕ್ರಿಯೆ ಸುಲಭವಾಗುತ್ತದೆ. ಮುಟ್ಟಿನ ಅವಧಿಯಲ್ಲಿ ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಕೇಡು ಉಂಟಾಗುತ್ತದೆ ಎಂಬ ಕಟ್ಟುಕತೆಯನ್ನು ನಾವು ಮೊದಲು ಒಡೆಯಬೇಕು. ಎಲ್ಲ ಮಹಿಳೆಯರು ಆ ಮೂರು ದಿನಗಳಲ್ಲಿ ಮನೆಯ ಒಳಗಿನ ದೇವರನ್ನು ಸ್ಪರ್ಶಿಸಿ ಪೂಜಿಸಬೇಕು. ಅದರಿಂದ ನಮಗೆ ಕೇಡು ಆಗಿಲ್ಲ, ಒಳಿತೇ ಆಗಿದೆ ಎಂಬುದನ್ನು ಸಮಾಜಕ್ಕೆ ಸಾರಿ ಹೇಳಬೇಕು’ ಎಂದು ಹೇಳಿದರು.

ದೇವಾಲಯ ಪ್ರವೇಶದ ವಿಚಾರದಲ್ಲಿ ಸುಪ್ರೀಂಕೋರ್ಟ್‌ ಸಂವಿಧಾನವನ್ನು ಆಧರಿಸಿ ಸಮಾನತೆಯನ್ನು ಎತ್ತಿ ಹಿಡಿದಿದೆ. ಆದರೆ, ಪ್ರತಿಭಟನೆಗೆ ಗಾಂಧಿ ಮಾರ್ಗವನ್ನು ಅನುಸರಿಸಿಕೊಂಡು ಸಮಾನತೆಯನ್ನು ನಿರಾಕರಿಸುವ ಪ್ರಯತ್ನ ನಡೆಯುತ್ತಿದೆ. ಎಲ್ಲ ಹಂತಗಳಲ್ಲೂ ಪ್ರಬಲ ಜನಾಭಿಪ್ರಾಯ ರೂಪಿಸಿಕೊಂಡು ಮುಂದಕ್ಕೆ ಸಾಗುವುದೊಂದೇ ಮಹಿಳೆಯ ಮುಂದಿರುವ ದಾರಿ ಎಂದರು.

‘ಕುಟುಂಬ’ದ ರಕ್ಷಣೆ: ಶತಮಾನಗಳ ಕಾಲದಿಂದಲೂ ‘ಕುಟುಂಬ’ದ ಹೆಸರಿನಲ್ಲಿ ಮಹಿಳೆಯ ಶೋಷಣೆ ನಡೆಯುತ್ತಾ ಬಂದಿದೆ. ಈಗ ದೇವಾಲಯ ಪ್ರವೇಶ, ಚಿತ್ರೋದ್ಯಮದಲ್ಲಿನ ದೌರ್ಜನ್ಯ, ವಿವಾಹೇತರ ಸಂಬಂಧ ಕುರಿತ ಸುಪ್ರೀಂಕೋರ್ಟ್‌ ತೀರ್ಪು ಸೇರಿದಂತೆ ಎಲ್ಲ ವಿಚಾರಗಳಲ್ಲೂ ‘ಕುಟುಂಬ’ದ ಹೆಸರಿನಲ್ಲಿ ಶೋಷಣೆ ಮುಂದುವರಿಸಲು ಸಮಾಜ ಪ್ರಯತ್ನಿಸುತ್ತಿದೆ ಎಂದು ಡಾ.ಉಷಾ ಹೇಳಿದರು.

ಮಹಿಳಾ ಸ್ವಾತಂತ್ರ್ಯ ಮತ್ತು ಸಮಾನತೆಯ ವಿಚಾರ ಒಂದು ಧರ್ಮಕ್ಕೆ ಸೀಮಿತವಾಗಿ ಚರ್ಚೆಯಾಗಬೇಕಿಲ್ಲ. ತ್ರಿವಳಿ ತಲಾಖ್‌ನಿಂದ ಆರಂಭವಾಗಿ ದೇವಾಲಯ ಪ್ರವೇಶದವರೆಗೆ ಎಲ್ಲವೂ ಚರ್ಚೆಗೆ ಒಳಗಾಗಬೇಕು. ವೈಯಕ್ತಿಕ ಅಥವಾ ಒಂದು ಗುಂಪಿಗೆ ಸೀಮಿತವಾದ ವಿಚಾರ ಎಂಬ ನೆಪವೊಡ್ಡಿ ಯಾವುದೇ ಬಗೆಯ ಅಸಮಾನತೆಯನ್ನೂ ಚರ್ಚೆಯಿಂದ ದೂರ ಇಡುವುದು ಸರಿಯಾದ ಕ್ರಮವಲ್ಲ ಎಂದು ಪ್ರತಿಪಾದಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಎಸ್.ಮಲ್ಲಿಕಾ ಘಂಟಿ, ಸ್ವಾಗತ ಸಮಿತಿ ಉಪಾಧ್ಯಕ್ಷ ಡಾ.ಸಂಪತ್‌ ಕುಮಾರ್ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT