ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಪೆಕ್ಟರ್ ವರ್ಗಾವಣೆ: ಮತ್ತೆ ಕಿಡಿ

* ಶಾಸಕರು, ಸಚಿವರ ಶಿಫಾರಸು ಕಡೆಗಣೆ ಆರೋಪ * 50ಕ್ಕೂ ಹೆಚ್ಚು ಅಧಿಕಾರಿಗಳ ಅಧಿಕಾರ ಹಸ್ತಾಂತರಕ್ಕೆ ತಡೆ
Published 3 ಆಗಸ್ಟ್ 2023, 0:26 IST
Last Updated 3 ಆಗಸ್ಟ್ 2023, 0:26 IST
ಅಕ್ಷರ ಗಾತ್ರ

ವಿ.ಎಸ್‌. ಸುಬ್ರಹ್ಮಣ್ಯ

ಬೆಂಗಳೂರು: ವರ್ಗಾವಣೆ ವಿಚಾರದಲ್ಲಿ ತಮ್ಮ ಪತ್ರಕ್ಕೆ ಸಚಿವರು ಬೆಲೆ ಕೊಡುತ್ತಿಲ್ಲ ಎಂದು ಕಾಂಗ್ರೆಸ್‌ ಶಾಸಕರು ಸಿಡಿದೆದ್ದು ವಾರ ಕಳೆಯುವಷ್ಟರಲ್ಲೇ, ಪೊಲೀಸ್ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿ ಅತೃಪ್ತಿಯ ಕಿಡಿ ಎಬ್ಬಿಸಿದೆ.

211 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ಮಂಗಳವಾರ ಆದೇಶ ಹೊರಡಿಸಿದ್ದ ಬೆನ್ನಲ್ಲೇ ಐವತ್ತಕ್ಕೂ ಹೆಚ್ಚು ಅಧಿಕಾರಿಗಳು ನಿಯೋಜಿತ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಬುಧವಾರ ಸರ್ಕಾರವೇ ತಡೆ ನೀಡಿದೆ. ಇದಕ್ಕೆ ಶಾಸಕರ ಅಸಮಾಧಾನ ಕಾರಣ ಎಂದು ಮೂಲಗಳು ಹೇಳಿವೆ.

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು, ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆ ಆರಂಭವಾದ ಬಳಿಕ ಶಾಸಕರು ಆಯಾ ಕ್ಷೇತ್ರಗಳಲ್ಲಿನ ವಿವಿಧ ಇಲಾಖೆಗಳ ಅಧಿಕಾರಿಗಳ ವರ್ಗಾವಣೆಗೆ ಪತ್ರ ನೀಡಿದ್ದರು. ಕ್ಷೇತ್ರದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಿಂದ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌, ಇನ್‌ಸ್ಪೆಕ್ಟರ್‌, ಡಿವೈಎಸ್‌ಪಿ/ ಎಸಿಪಿ ದರ್ಜೆ ಅಧಿಕಾರಿಗಳ ಬದಲಾವಣೆಗೆ ಭಾರಿ ಪ್ರಯತ್ನ ನಡೆಸಿದ್ದರು.

ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮ್ಮ ಶಿಫಾರಸಿಗೆ ಸರ್ಕಾರ ಸ್ಪಂದಿಸಿಲ್ಲ ಎಂಬ ಅಸಮಾಧಾನ ಹಲವು ಶಾಸಕರಲ್ಲಿ ಇತ್ತು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿತ್ತು. ಗೃಹ ಸಚಿವ ಜಿ. ಪರಮೇಶ್ವರ ಮತ್ತು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರೊಂದಿಗೆ ಭಾನುವಾರ(ಜುಲೈ 30) ರಹಸ್ಯ ಸಭೆ ನಡಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೊಲೀಸ್‌ ಅಧಿಕಾರಿಗಳ ವರ್ಗಾವಣೆ ಕುರಿತು ಚರ್ಚಿಸಿದ್ದರು.

ಮಂಗಳವಾರ ಬೆಳಿಗ್ಗೆ ನಡೆದ ರಾಜ್ಯ ಪೊಲೀಸ್‌ ಸಿಬ್ಬಂದಿ ಮಂಡಳಿ (ಪಿಇಬಿ) ಸಭೆಯಲ್ಲಿ, 211 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆಯ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿತ್ತು. ಮಂಡಳಿಯ ನಿರ್ಣಯದಂತೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದರು. ಈ ಪಟ್ಟಿಯಲ್ಲಿ 211 ಇನ್‌ಸ್ಪೆಕ್ಟರ್‌ಗಳಿಗೆ ಸ್ಥಳ ತೋರಿಸಿದ್ದರೆ, ಆ ಸ್ಥಾನಗಳಲ್ಲಿದ್ದ ಹಲವರಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿತ್ತು.

ಶಾಸಕರ ಅಸಮಾಧಾನ: ಪೊಲೀಸ್‌ ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ಪಟ್ಟಿ ಹೊರ ಬೀಳುತ್ತಿದ್ದಂತೆಯೇ ಕಾಂಗ್ರೆಸ್‌ನ ಹಲವು ಶಾಸಕರು ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರನ್ನು ಸಂಪರ್ಕಿಸಿ ಅಸಮಾಧಾನ ಹೊರಹಾಕಿದ್ದರು. ಹಲವು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು ಮಾಡಿದ್ದ ಶಿಫಾರಸುಗಳನ್ನು ಕಡೆಗಣಿಸಿ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿರುವುದು ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.

‘ಮುಖ್ಯಮಂತ್ರಿಯವರಿಗೆ ಅತ್ಯಾಪ್ತರಾಗಿರುವ ಬೆಂಗಳೂರಿನ ಸಚಿವರೊಬ್ಬರ ಕ್ಷೇತ್ರದಲ್ಲೂ ಇಂತಹ ಬೆಳವಣಿಗೆ ನಡೆದಿದೆ. ಸಚಿವರು ಹಾಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರನ್ನು ಅದೇ ಠಾಣೆಯಲ್ಲಿ ಮುಂದುವರಿಸುವಂತೆ ಶಿಫಾರಸು ಪತ್ರ ನೀಡಿದ್ದರು. ಆದರೆ, ಅವರನ್ನು ವರ್ಗಾವಣೆ ಮಾಡಿರುವುದು ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ. ಅವರು ಖುದ್ದಾಗಿ ಮುಖ್ಯಮಂತ್ರಿಯವರ ಬಳಿಯಲ್ಲೇ ಅತೃಪ್ತಿ ಹೊರಹಾಕಿದ್ದಾರೆ’ ಎಂದು ಮೂಲಗಳು ಹೇಳಿವೆ.

ಅಧಿಕಾರ ಹಸ್ತಾಂತರಕ್ಕೆ ತಡೆ: ಶಾಸಕರು ಮತ್ತು ಸಚಿವರ ಅಸಮಾಧಾನ ಜೋರಾಗುತ್ತಿದ್ದಂತೆಯೇ ಮಧ್ಯ ಪ್ರವೇಶ ಮಾಡಿರುವ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು, ಹಲವು ಪೊಲೀಸ್‌ ಠಾಣೆಗಳಲ್ಲಿ ಇನ್‌ಸ್ಪೆಕ್ಟರ್‌ಗಳ ಅಧಿಕಾರ ಹಸ್ತಾಂತರ ತಡೆಯುವಂತೆ ಸೂಚಿಸಿದ್ದಾರೆ. ಮುಖ್ಯಮಂತ್ರಿ ಮತ್ತು ಸಚಿವರು ದೆಹಲಿ ಪ್ರವಾಸದಲ್ಲಿದ್ದು, ಅವರು ಹಿಂದಿರುಗುವವರೆಗೂ ವರ್ಗಾವಣೆ ಪಟ್ಟಿಯಲ್ಲಿ ನಿಯುಕ್ತಿಗೊಳಿಸಿರುವ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಸೂಚನೆ ರವಾನಿಸಲಾಗಿದೆ.

‘19 ಇನ್‌ಸ್ಪೆಕ್ಟರ್‌ಗಳ ವರ್ಗಾವಣೆ ತಡೆ ಹಿಡಿದು ಆದೇಶ ನೀಡಲಾಗಿದೆ. ಉಳಿದ 50ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳಿಗೆ ವರ್ಗಾವಣೆಗೊಂಡಿರುವ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಡಿಸಿಪಿ ಹಾಗೂ ಎಸ್‌ಪಿಗಳ ಮೂಲಕ ಮೌಖಿಕ ಸೂಚನೆ ನೀಡಲಾಗಿದೆ’ ಎಂದು ಪೊಲೀಸ್‌ ಇಲಾಖೆಯ ಮೂಲಗಳು ತಿಳಿಸಿವೆ.

ಪೇಚಿಗೆ ಸಿಲುಕಿದ ಅಧಿಕಾರಿಗಳು

ಪೊಲೀಸ್‌ ಇನ್‌ಸ್ಪೆಕ್ಟರ್‌ ಗಳು ವರ್ಗಾವಣೆ ಆದೇಶ ಹೊರಬೀಳುತ್ತಿದ್ದಂತೆಯೇ ನಿಯುಕ್ತಿಗೊಂಡ ಸ್ಥಳದಲ್ಲಿ ಅಧಿಕಾರ ಸ್ವೀಕರಿಸುವ ತರಾತುರಿಯಲ್ಲಿದ್ದರು. ಆದರೆ, ಅಧಿಕಾರ ಸ್ವೀಕರಿಸದಂತೆ ತಡೆಯೊಡ್ಡಿರುವುದರಿಂದ ಹಲವು ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

57 ಪಿಡಿಒಗಳಿಗೆ ಆಯುಕ್ತಾಲಯವೇ ಬಿಡಾರ

ಬೆಂಗಳೂರು: ಪ್ರಸಕ್ತ ಸಾಲಿನ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ಥಳ ತೋರಿಸದೇ
ವರ್ಗಾವಣೆಗೊಂಡಿರುವ ರಾಜ್ಯದ ವಿವಿಧ ಜಿಲ್ಲೆಗಳ 57 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ರಾಜಧಾನಿಯಲ್ಲಿರುವ ಪಂಚಾಯತ್‌ ರಾಜ್‌ ಆಯುಕ್ತಾಲಯದ ಬಾಗಿಲು ಕಾಯುತ್ತಾ ಕಾಲ ದೂಡುತ್ತಿದ್ದಾರೆ!

ಜುಲೈ 4ರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಗೆ ಹಲವು ಬಾರಿ ಆದೇಶ ಹೊರಡಿಸಲಾಗಿದೆ. ಈ ಬಾರಿ 650ಕ್ಕೂ ಹೆಚ್ಚು ಪಿಡಿಒಗಳನ್ನು ವರ್ಗಾವಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಅತ್ಯಧಿಕ ಸಂಖ್ಯೆಯಲ್ಲಿ ಪಿಡಿಒಗಳ ಅಂತರ ಜಿಲ್ಲಾ ವರ್ಗಾವಣೆಯೂ ನಡೆದಿದೆ. 60ಕ್ಕೂ ಹೆಚ್ಚು ಪಿಡಿಒಗಳಿಗೆ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿದೆ.

ಸ್ಥಳ ತೋರಿಸದೇ ವರ್ಗಾವಣೆ ಮಾಡಿರುವ ಪಿಡಿಒಗಳಿಗೆ ಪಂಚಾಯತ್‌ ರಾಜ್‌ ಆಯುಕ್ತಾಲಯಕ್ಕೆ ವರದಿ ಮಾಡಿಕೊಳ್ಳುವಂತೆ ಆದೇಶ ನೀಡಲಾಗಿತ್ತು. ಅವರಲ್ಲಿ 57 ಅಧಿಕಾರಿಗಳು ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದಾರೆ.

ಇಲ್ಲಿ ಹುದ್ದೆಯೂ ಇಲ್ಲ, ಕೆಲಸವೂ ಇಲ್ಲ ಎಂಬಂತಹ ಸ್ಥಿತಿ ಇದೆ. ಈ ಪಿಡಿಒಗಳು ನಿತ್ಯವೂ ಬೆಳಿಗ್ಗೆ ಆಯುಕ್ತರ ಕಚೇರಿಗೆ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡುತ್ತಾರೆ. ಸಂಜೆಯವರೆಗೂ ಕಚೇರಿ ಮುಂಭಾಗದ ನಿರೀಕ್ಷಣಾ ಸ್ಥಳದಲ್ಲಿ ಕುಳಿತು ಕಾಲ ಕಳೆದು ಹೋಗುತ್ತಿದ್ದಾರೆ.

ದೂರದ ಜಿಲ್ಲೆಗಳವರೇ ಹೆಚ್ಚು: ಸ್ಥಳ ತೋರಿಸದೇ ವರ್ಗಾವಣೆಗೊಂಡಿರುವ ಪಿಡಿಒಗಳಲ್ಲಿ ಬೆಂಗಳೂರಿನಿಂದ ದೂರದ ಜಿಲ್ಲೆಗಳವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರ ತವರು ಜಿಲ್ಲೆ ಕಲಬುರಗಿ, ನೆರೆಯ ಬೀದರ್‌, ರಾಯಚೂರು, ಯಾದಗಿರಿ, ಬೆಳಗಾವಿ ಮತ್ತಿತರ ಜಿಲ್ಲೆಗಳ ಪಿಡಿಒಗಳು ಈ ಪಟ್ಟಿಯಲ್ಲಿದ್ದಾರೆ.

‘ಪಿಡಿಒಗಳಿಗೆ ಸರಿ ಹೊಂದುವ ಯಾವ ಹುದ್ದೆಯೂ ಪಂಚಾಯತ್‌ ರಾಜ್‌ ಆಯುಕ್ತಾಲಯದಲ್ಲಿ ಇಲ್ಲ. ದೂರದ ಜಿಲ್ಲೆಗಳಿಂದ ಬಂದು ಬೆಂಗಳೂರಿನಲ್ಲಿ ಬಾಡಿಗೆ ಕೊಠಡಿಯಲ್ಲಿ ಉಳಿದುಕೊಂಡು ಹೀಗೆ ದಿನ ಕಳೆಯುವುದು ಕಷ್ಟವಾಗುತ್ತಿದೆ. ಮಹಿಳೆಯರಿಗಂತೂ ಕುಟುಂಬ, ಮಕ್ಕಳನ್ನು ಬಿಟ್ಟು ಬಂದು ಇಲ್ಲಿ ವರ್ಗಾವಣೆ ಆದೇಶಕ್ಕಾಗಿ ಕಾಯುವುದು ಅತ್ಯಂತ ಕಷ್ಟವಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಪಿಡಿಒಗಳು ‘ಪ್ರಜಾವಾಣಿ’ ಜತೆ ಅಳಲು ತೋಡಿಕೊಂಡರು.

700 ಹುದ್ದೆಗಳು ಖಾಲಿ: ರಾಜ್ಯದಲ್ಲಿ 6,002 ಗ್ರಾಮ ಪಂಚಾಯಿತಿಗಳಿವೆ. ಸುಮಾರು 5,300ರಷ್ಟು ಪಿಡಿಒಗಳಿದ್ದಾರೆ. 700ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ರಾಜ್ಯದಲ್ಲಿ ಪಿಡಿಒಗಳ ಕೊರತೆ ಇರುವ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಅಧಿಕಾರಿಗಳನ್ನು ಸ್ಥಳ ತೋರಿಸದೇ ಆಯುಕ್ತಾಲಯದಲ್ಲಿ ಇರಿಸಿಕೊಂಡಿರುವ ನಡೆಗೆ ರಾಜ್ಯ ಪಿಡಿಒಗಳ ಸಂಘ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT