ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ವಿಸ್ತೀರ್ಣ ಕಡಿಮೆ: ₹21.12 ಲಕ್ಷ ತೆರಿಗೆ ವಂಚನೆ

ತೆರಿಗೆ ವಸೂಲಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬಹುದು ಎಂದು ವರದಿ ನೀಡಿದ ಜಂಟಿ ಸಾರಿಗೆ ಆಯುಕ್ತ
Published 16 ಜುಲೈ 2023, 4:28 IST
Last Updated 16 ಜುಲೈ 2023, 4:28 IST
ಅಕ್ಷರ ಗಾತ್ರ

ಬೆಂಗಳೂರು: ಅಧಿಕಾರಿಗಳು, ಸಿಬ್ಬಂದಿ ಮತ್ತು ವಾಹನ ಮಾಲೀಕರು ಸೇರಿ ವಾಹನಗಳ ವಿಸ್ತೀರ್ಣವನ್ನು ಕಡಿಮೆ ತೋರಿಸಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ. 24 ವಾಹನಗಳ ತಪಾಸಣೆ ನಡೆಸಿದಾಗ ₹21.12 ಲಕ್ಷ ವಂಚನೆಯಾಗಿರುವುದು ಗೊತ್ತಾಗಿದ್ದು, 3,240 ವಾಹನಗಳ ತಪಾಸಣೆ ನಡೆಯಬೇಕಿದೆ.

ಎಲೆಕ್ಟ್ರಾನಿಕ್‌ ಸಿಟಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಖಾಸಗಿ ಸೇವಾ ವಾಹನಗಳು ಹಾಗೂ ಮ್ಯಾಕ್ಸಿಕ್ಯಾಬ್‌ ವಾಹನಗಳ ವಿಸ್ತ್ರೀರ್ಣವನ್ನು ಸರಿಯಾಗಿ ದಾಖಲಿಸುತ್ತಿಲ್ಲ ಎಂಬ ದೂರುಗಳು ಬಂದಿದ್ದರಿಂದ ಸಾರಿಗೆ ಆಯುಕ್ತರು ತಪಾಸಣಾ ತಂಡ ರಚಿಸಿದ್ದರು. ಜಂಟಿ ಆಯುಕ್ತರ ನೇತೃತ್ವದಲ್ಲಿ 7 ಅಧಿಕಾರಿಗಳು ತಂಡದಲ್ಲಿದ್ದರು. ಅದರಲ್ಲಿ ತಪಾಸಣಾ ಕಾರ್ಯಾಚರಣೆಯಲ್ಲಿ ಐದು ಅಧಿಕಾರಿಗಳು ಭಾಗವಹಿಸಿದ್ದರು. ಕಡತ ಪರಿಶೀಲನೆ, ವಾಹನ ತಪಾಸಣೆಗಳ ಬಳಿಕ ಈ ತಂಡವು ವರದಿಯನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರಿಗೆ ನೀಡಿದೆ. ಈ ವರದಿ  ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

1,345 ಮ್ಯಾಕ್ಸಿಕ್ಯಾಬ್‌ ಹಾಗೂ 1,826 ಖಾಸಗಿ ಸೇವಾ ವಾಹನಗಳು ಸೇರಿ 3,271 ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಲು ಕಡತಗಳನ್ನು ನೀಡುವಂತೆ ತಪಾಸಣಾ ತಂಡ ಕೇಳಿಕೊಂಡಿತ್ತು. ಪ್ರಾದೇಶಿಕ ಅಧಿಕಾರಿಗಳು 628 ಮ್ಯಾಕ್ಸಿಕ್ಯಾಬ್‌ ಮತ್ತು 983 ಖಾಸಗಿ ಸೇವಾ ವಾಹನಗಳ ಕಡತಗಳನ್ನಷ್ಟೇ ಒದಗಿಸಿದ್ದರು. 1,660 ವಾಹನಗಳ ಕಡತಗಳನ್ನು ನೀಡಿಲ್ಲ.

628 ಮ್ಯಾಕ್ಸಿಕ್ಯಾಬ್‌ಗಳಿಗೆ ಸಂಬಂಧಿಸಿದಂತೆ ನಮೂನೆ 20ರಲ್ಲಿ 580 ವಾಹನಗಳ ವಿಸ್ತೀರ್ಣ ನಮೂದಿಸಲಾಗಿದೆ. 48 ವಾಹನಗಳ ವಿಸ್ತೀರ್ಣವೇ ದಾಖಲಾಗಿಲ್ಲ. ಅದೇ ರೀತಿ 981 ಇತರ ವಾಹನಗಳ ಪೈಕಿ 901 ವಾಹನಗಳ ವಿಸ್ತೀರ್ಣ ನಮೂದಿಸಲಾಗಿದೆ. 82 ವಾಹನಗಳ ವಿಸ್ತೀರ್ಣ ಇಲ್ಲ. ನಮೂದಾಗಿರುವ ವಿಸ್ತೀರ್ಣ ಕೂಡ ಒಂದೇ ಮಾದರಿಯ ವಾಹನಗಳಿಗೆ ಭಿನ್ನ ಭಿನ್ನವಾಗಿರುವುದು ಕಂಡು ಬಂದಿದೆ. 

ಈ ಕಾರಣದಿಂದ ಮೊದಲ ಹಂತದಲ್ಲಿ ಕೆಲವು ವಾಹನಗಳನ್ನು ತಪಾಸಣೆ ನಡೆಸಲು ನಿರ್ಧರಿಸಲಾಗಿತ್ತು. 117 ವಾಹನಗಳನ್ನು ಹಾಜರು ಪಡಿಸಲು ಈ ತಂಡವು ಮೋಟಾರು ವಾಹನ ನಿರೀಕ್ಷಕರಿಗೆ ಸೂಚಿಸಿತ್ತು. ನಿರೀಕ್ಷಕರು ಕೇವಲ 31 ವಾಹನಗಳನ್ನು ಹಾಜರುಪಡಿಸಿದ್ದರು. ಅದರಲ್ಲಿ 7 ವಾಹನಗಳ ಮೂಲ ಕಡತಗಳನ್ನು ಹಾಜರುಪಡಿಸಿರಲಿಲ್ಲ. ಉಳಿದ 24 ವಾಹನಗಳನ್ನು ತಪಾಸಣೆ ನಡೆಸಿ ಕಡತ ಪರಿಶೀಲಿಸಿದಾಗ 1 ಚದರ ಅಡಿಯಿಂದ 6 ಚದರ ಅಡಿವರೆಗೆ ವಿಸ್ತೀರ್ಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇದರಿಂದ ₹21.12 ಲಕ್ಷ ತೆರಿಗೆ ವಂಚನೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಿಖರವಾದ ತೆರಿಗೆಯನ್ನು ಲೆಕ್ಕ ಹಾಕಿ ನಷ್ಟವಾಗಿರುವುದನ್ನು ವಸೂಲಿ ಮಾಡಬಹುದು. ತಪ್ಪು ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ

ಕೋಟ್ಯಂತರ ರೂಪಾಯಿ ವಂಚನೆ

24 ವಾಹನಗಳ ತಪಾಸಣೆ ನಡೆಸಲಾಗಿದ್ದು 3240 ವಾಹನಗಳ ಕಡತ ಪರಿಶೀಲನೆ ಮತ್ತು ಭೌತಿಕ ತಪಾಸಣೆ ನಡೆಸಲು ಸಾಧ್ಯವಾಗಿಲ್ಲ ಎಂದು ತಂಡ ತಿಳಿಸಿದೆ. ಈ ಎಲ್ಲ ವಾಹನಗಳ ನಿಖರ ತಪಾಸಣೆ ನಡೆಸಿದರೆ ನೂರಾರು ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬರಲಿದೆ. ಎಲ್ಲ ವಾಹನಗಳ ತಪಾಸಣೆ ಮತ್ತು ಕಡತ ಪರಿಶೀಲನೆಗೆ ಇನ್ನೂ ಹೆಚ್ಚಿನ ಅಧಿಕಾರಿ ಸಿಬ್ಬಂದಿಯ ಅವಶ್ಯಕತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಕಾನೂನು ಕ್ರಮ: ರಾಮಲಿಂಗಾ ರೆಡ್ಡಿ

ವಾಹನಗಳ ವಿಸ್ತೀರ್ಣ ಕಡಿಮೆ ತೋರಿಸಿ ತೆರಿಗೆ ವಂಚಿಸಿದ್ದರೆ ಅಂಥ ವಾಹನ ಮಾಲೀಕರ ವಿರುದ್ಧ ಮತ್ತು ಕೈ ಜೋಡಿಸಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವರದಿ ನನ್ನ ಕೈ ಸೇರಿದ ಕೂಡಲೇ ಪರಿಶೀಲಿಸಲಾಗುವುದು. ವಂಚಿಸಿರುವ ತೆರಿಗೆಯನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT