ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸೇವೆಗೆ ವಿಲೀನಗೊಂಡಿದ್ದ ಉಪನ್ಯಾಸಕರ ನೇಮಕಾತಿ ರದ್ದು

ಮಾತೃ ಇಲಾಖೆಗೆ ವಾಪಸ್‌ ಕಳುಹಿಸಲು ಕೆಎಟಿ ನಿರ್ದೇಶನ
Published 20 ಜೂನ್ 2023, 22:29 IST
Last Updated 20 ಜೂನ್ 2023, 22:29 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸೇವೆಗೆ ವಿಲೀನಗೊಂಡಿದ್ದ ಇಬ್ಬರು ಉಪನ್ಯಾಸಕರ ನೇಮಕಾತಿ ಆದೇಶಗಳನ್ನು ರದ್ದುಪಡಿಸಿರುವ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) 15 ದಿನದೊಳಗೆ ಅವರು ಮಾತೃ ಇಲಾಖೆಗೆ ಹಿಂದಿರುಗುವಂತೆ ನಿರ್ದೇಶಿಸಿದೆ.

ಈ ಕುರಿತಂತೆ ಸಿ.ಶಿವಕುಮಾರ್ ಮತ್ತು ಬಿ.ಎಂ.ಪ್ರಕಾಶ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೆಎಟಿ ನ್ಯಾಯಿಕ ಸದಸ್ಯ ನಾರಾಯಣ ಮತ್ತು ಆಡಳಿತಾತ್ಮಕ ಸದಸ್ಯ ಎನ್. ಶಿವಶೈಲಂ ಅವರಿದ್ದ ವಿಭಾಗೀಯ ಪೀಠವು, ‘ಆಡಳಿತ ಇಲಾಖೆಯ ಸೇವೆಗಳಿಗೆ ಉಪನ್ಯಾಸಕರು ಮತ್ತು ಶಿಕ್ಷಕರು ವಿಲೀನಗೊಳ್ಳುವ ಪದ್ಧತಿಯಲ್ಲಿ ನಿಯಮಬಾಹಿರ ಪ್ರಕ್ರಿಯೆ ನಡೆದಿದೆ‘ ಎಂಬ ಅರ್ಜಿದಾರರ ವಾದವನ್ನು ಪುರಸ್ಕರಿಸಿದೆ. 

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆ ಅಲಂಕರಿಸಿದ್ದ ಕೆ.ಆರ್. ರಾಜ್‌ಕುಮಾರ್ ಮತ್ತು ಎಂ.ಎಚ್.ಸುರೇಶ್ ರೆಡ್ಡಿ ಅವರನ್ನು ಮಾತೃ ಇಲಾಖೆಯಾದ ಶಿಕ್ಷಣ ಇಲಾಖೆಗೆ ವಾಪಸ್ ಕಳುಹಿಸುವಂತೆ ನಿರ್ದೇಶಿಸಿದೆ.

ಪ್ರಕರಣವೇನು?: ಉಪನ್ಯಾಸಕರಾಗಿದ್ದ ಕೆ.ಆರ್.ರಾಜ್‌ಕುಮಾರ್ ಅವರನ್ನು 2015ರಲ್ಲಿ ಮತ್ತು ಎಂ.ಎಚ್.ಸುರೇಶ್ ರೆಡ್ಡಿ ಅವರನ್ನು 2016ರಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಕಾಯಂ ಆಗಿ ವರ್ಗಾವಣೆ ಮಾಡಲಾಗಿತ್ತು. ಇವರಿಬ್ಬರ ಸೇವೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿಲೀನಗೊಳಿಸಲಾಗಿತ್ತು. ಮತ್ತು ಕೆ.ಆರ್.ರಾಜ್‌ಕುಮಾರ್ ಮತ್ತು ಎಂ.ಎಚ್.ಸುರೇಶ್ ರೆಡ್ಡಿ ಅವರಿಗೆ 2022ರ ಜನವರಿ 31ರ ಆದೇಶದಲ್ಲಿ ಉಪನಿರ್ದೇಶಕ ವೃಂದಕ್ಕೆ ಬಡ್ತಿ ನೀಡಲಾಗಿತ್ತು.

ಬಡ್ತಿ ನೀಡಲಾದ ಹಂತದಲ್ಲಿ, ‘ಇವರಿಬ್ಬರ ನೇಮಕಾತಿಯೇ ಸರಿ ಇಲ್ಲ ಮತ್ತು ಬಡ್ತಿ ನೀಡಿರುವುದು ಕಾನೂನಿಗೆ ವಿರುದ್ಧವಾಗಿದೆ‘ ಎಂದು ಆಕ್ಷೇಪಿಸಿ ಸಿ. ಶಿವಕುಮಾರ್ ಮತ್ತು ಬಿ.ಎಂ. ಪ್ರಕಾಶ್ ಕೆಎಟಿ ಮೆಟ್ಟಿಲೇರಿದ್ದರು. ‘ಆಡಳಿತ ಇಲಾಖೆಯಲ್ಲಿ ಉಪನ್ಯಾಸಕರ ವಿಲೀನವು ಕಾನೂನುಬಾಹಿರವಾಗಿದೆ. ಅದೂ ಅಲ್ಲದೆ ಗ್ರೂಪ್ ಬಿ ವೃಂದದಲ್ಲಿದ್ದ ಈ ಉಪನ್ಯಾಸಕರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಗ್ರೂಪ್ ಎ ವೃಂದದ ಸಹಾಯಕ ನಿರ್ದೇಶಕ ವೃಂದದ ಹುದ್ದೆಗೆ ವಿಲೀನಗೊಳಿಸಿರುವುದು ಕಾನೂನು ಸಮ್ಮತವಲ್ಲ‘ ಎಂದು ಪ್ರತಿಪಾದಿಸಿದ್ದರು.

’ಸಹಾಯಕ ನಿರ್ದೇಶಕ ಹುದ್ದೆಯಿಂದ ಉಪನಿರ್ದೇಶಕ ಹುದ್ದೆ ಬಡ್ತಿಗೆ ಅರ್ಹತಾದಾಯಕ 3 ವರ್ಷಗಳನ್ನು ಪೂರೈಸಿರುವ ನಮಗೇ ಬಡ್ತಿ ನೀಡಬೇಕು. ನಿಯಮಬಾಹಿರವಾಗಿ ನೇಮಕವಾಗಿರುವ ಇವರಿಬ್ಬರ ಆದೇಶಗಳನ್ನು ರದ್ದು ಮಾಡಬೇಕು‘ ಎಂದು ಕೋರಿದ್ದರು. 

ವಿಚಾರಣೆ ನಡೆಸಿದ ಪೀಠವು, ‘ನೇಮಕಾತಿ ಆದೇಶ ಕಾನೂನು ಬಾಹಿರವಾಗಿದೆ‘ ಎಂಬ ಅಂಶವನ್ನು ಪುರಸ್ಕರಿಸಿದೆ ಹಾಗೂ ಬಡ್ತಿ ನೀಡಿರುವುದನ್ನು ಪ್ರಶ್ನಿಸಿ, ‘ನಮಗೇ ಬಡ್ತಿ ನೀಡಬೇಕು‘ ಎಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿದೆ. ಅರ್ಜಿದಾರರ ಪರವಾಗಿ ವಕೀಲ ವಿಜಯಕುಮಾರ್ ಮತ್ತು ಸರ್ಕಾರದ ಪರವಾಗಿ ಡಿ.ಸಿ.ಪರಮೇಶ್ವರಯ್ಯ ವಾದ ಮಂಡಿಸಿದ್ದರು. 

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT