ಉಡುಪಿ: ಹಿರಿಯಡ್ಕ ಸಮೀಪದ ಜಿಲ್ಲಾ ಉಪ ಕಾರಾಗೃಹದಲ್ಲಿ ಭಾನುವಾರ ವಿಚಾರಣಾಧೀನ ಕೈದಿ ಸದಾನಂದ ಶೇರಿಗಾರ್ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಿನ ಜಾವ ಸಹ ಕೈದಿಗಳು ನಿದ್ದೆಯಲ್ಲಿದ್ದಾಗ ಜೈಲಿನ ಕೊಠಡಿಯಲ್ಲಿ ಸದಾನಂದ ಶೇರಿಗಾರ್ ಪಂಚೆಯಲ್ಲಿ ಕುತ್ತಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾನೆ. ಈ ಸಂದರ್ಭ ಎಚ್ಚರಗೊಂಡ ಸಹ ಕೈದಿಗಳು ನೇಣುಕುಣಿಕೆಯಿಂದ ಸದಾನಂದ ಶೇರಿಗಾರ್‌ನನ್ನು ಕೆಳಗಿಳಿಸಿದ್ದಾರೆ.
ವಿಷಯ ತಿಳಿದ ಜೈಲಿನ ಸಿಬ್ಬಂದಿ ತಕ್ಷಣ ಸದಾನಂದ ಶೇರಿಗಾರ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎಂದು ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಮಾಹಿತಿ ನೀಡಿದರು.
ನ್ಯಾಯಾಧೀಶರು ಶವಾಗಾರಕ್ಕೆ ಭೇಟಿನೀಡಿ ಮಾಹಿತಿ ಪಡೆದುಕೊಂಡರು. ಮೃತ ವ್ಯಕ್ತಿಯ ಸಂಬಂಧಿಕರ ಎದುರು ಪಂಚನಾಮೆ ಮುಗಿದ ಬಳಿಕ ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಸಾಗಿಸಲಾಯಿತು.
ಪ್ರಕರಣದ ಹಿನ್ನೆಲೆ:
ಜೂನ್ 12ರಂದು ಬೈಂದೂರು ತಾಲ್ಲೂಕಿನ ಒತ್ತಿನೆಣೆ ಸಮೀಪದ ಹೆನ್‌ಬೇರಿನಲ್ಲಿ ಆನಂದ್ ದೇವಾಡಿಗ ಎಂಬುವರನ್ನು ಕಾರಿನಲ್ಲಿ ಸಜೀವವಾಗಿ ಸುಟ್ಟು ಹಾಕಿದ ಪ್ರಕರಣದಲ್ಲಿ ಸದಾನಂದ ಶೇರಿಗಾರ್ ಪ್ರಮುಖ ಆರೋಪಿಯಾಗಿ ಜೈಲು ಸೇರಿದ್ದ.