ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಗದ್ದಲ: 14 ಸಂಸದರ ಅಮಾನತು

Published 14 ಡಿಸೆಂಬರ್ 2023, 16:28 IST
Last Updated 14 ಡಿಸೆಂಬರ್ 2023, 16:28 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಭದ್ರತಾ ಲೋಪ ಸಂಸತ್‌ನ ಉಭಯ ಸದನಗಳಲ್ಲಿ ಗುರುವಾರ ಪ್ರತಿಧ್ವನಿಸಿತು. ಘಟನೆ ಕುರಿತು ಕೇಂದ್ರ ಸರ್ಕಾರದ ಹೇಳಿಕೆ ಹಾಗೂ ಗೃಹ ಸಚಿವ ಅಮಿತ್‌ ಶಾ ರಾಜೀನಾಮೆಗೆ ವಿರೋಧ ಪಕ್ಷಗಳು ಉಭಯ ಸದನಗಳಲ್ಲಿ ಪಟ್ಟು ಹಿಡಿದವು. ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ 14 ಸಂಸದರನ್ನು ಅಮಾನತುಗೊಳಿಸಲಾಯಿತು. 

ರಾಜ್ಯಸಭೆಯಲ್ಲಿ ಟಿಎಂಸಿಯ ಡೆರಿಕ್‌ ಒಬ್ರಿಯಾನ್‌ ಹಾಗೂ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಒಂಬತ್ತು, ಸಿಪಿಎಂನ ಇಬ್ಬರು, ಡಿಎಂಕೆ ಹಾಗೂ ಸಿಪಿಐನ ತಲಾ ಒಬ್ಬರು ಸದಸ್ಯರನ್ನು ಅಮಾನತುಗೊಳಿಸಲಾಯಿತು.

ಕಾಂಗ್ರೆಸ್, ಟಿಎಂಸಿ ಸೇರಿದಂತೆ ವಿಪಕ್ಷಗಳ ಸದಸ್ಯರು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದರು. ಲೋಕಸಭೆಯ ಸದನದೊಳಗೆ ಜಿಗಿದ ಇಬ್ಬರು ಆರೋಪಿಗಳಿಗೆ ಪಾಸ್‌ ವ್ಯವಸ್ಥೆ ಮಾಡಿಕೊಟ್ಟ ಮೈಸೂರಿನ ಸಂಸದ ಪ್ರತಾಪ ಸಿಂಹ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು. 

ಭದ್ರತಾ ಲೋಪವನ್ನು ಪ್ರಶ್ನಿಸಿ, ಸರ್ಕಾರದ ಹೇಳಿಕೆಗೆ ಆಗ್ರಹಿಸಿ ವಿರೋಧ ಪಕ್ಷಗಳ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿದರು. ಭದ್ರತೆ ಹೆಚ್ಚಿಸುವ ಕುರಿತು ಸದಸ್ಯರ ಜತೆಗೆ ಮತ್ತೊಮ್ಮೆ ಚರ್ಚೆ ನಡೆಸಲು ಸಿದ್ಧ ಎಂದು ಸ್ಪೀಕರ್‌ ಓಂ ಬಿರ್ಲಾ ತಿಳಿಸಿದರು. ಪ್ರತಿಭಟನೆಯ ನಡುವೆಯೇ ಪ್ರಶ್ನೋತ್ತರ ಅವಧಿಯನ್ನು ನಡೆಸಲಾಯಿತು. ಗಲಾಟೆ ಹೆಚ್ಚಾದಾಗ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಬಳಿಕ ಕಲಾಪ ಶುರುವಾದಾಗ, ‘ರಾಷ್ಟ್ರದ ಗಂಭೀರ ವಿಚಾರವನ್ನು ರಾಜಕೀಯಗೊಳಿಸಬೇಡಿ’ ಎಂದು ಸರ್ಕಾರವು ಪ್ರತಿಪಕ್ಷವನ್ನು ಮನವಿ ಮಾಡಿತು. ವಿಪಕ್ಷಗಳ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆಯೇ, 13 ಸದಸ್ಯರನ್ನು ಅಮಾನತುಗೊಳಿಸುವ ಎರಡು ಪ್ರತ್ಯೇಕ ನಿರ್ಣಯಗಳನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಲೋಕಸಭೆಯಲ್ಲಿ ಮಂಡಿಸಿದರು. ಬಳಿಕ ಕಲಾಪವನ್ನು ಶುಕ್ರವಾರಕ್ಕೆ ಮುಂದೂಡಲಾಯಿತು.

ಆರಂಭದಲ್ಲಿ ಲೋಕಸಭೆಯ 14 ಸದಸ್ಯರನ್ನು ಅಮಾನತುಗೊಳಿಸಲಾಗಿತ್ತು. ಎಸ್‌.ಆರ್‌.ಪಾರ್ತಿಬನ್ ಅವರು ಕಲಾಪಕ್ಕೆ ಹಾಜರಾಗಿರಲಿಲ್ಲ. ’ಅವರು ಚೆನ್ನೈಯಲ್ಲಿ ಇದ್ದಾರೆ. ಆದರೂ, ಅವರನ್ನು ಅಮಾನತು ಮಾಡಲಾಗಿದೆ’ ಎಂದು ಹಲವು ಸಂಸದರು ದೂರಿದರು. ವಿವಾದ ಆಗುತ್ತಿದ್ದಂತೆ ಅಮಾನತುಗೊಂಡವರ ಪಟ್ಟಿಯಿಂದ ಪಾರ್ತಿಬನ್ ಹೆಸರನ್ನು ಕೈಬಿಟ್ಟು ಲೋಪ ಸರಿಪಡಿಸಲಾಯಿತು. 

ಹಟ ಬಿಡದ ಡೆರಿಕ್: ರಾಜ್ಯಸಭೆಯಲ್ಲಿ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಟಿಎಂಸಿಯ ಡೆರಿಕ್‌ ಒಬ್ರಯಾನ್‌ ಅವರು ಧರಣಿ ಆರಂಭಿಸಿದರು. ಆರೋಪಿಗಳಿಗೆ ಪಾಸ್‌ ವ್ಯವಸ್ಥೆ ಮಾಡಿಸಿದ ಸಂಸದ ಪ್ರತಾಪ ಸಿಂಹ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು. ಘೋಷಣೆಗಳನ್ನು ಕೂಗದಂತೆ ಸಭಾಪತಿ ಜಗದೀಪ್‌ ಧನಕರ್ ಸೂಚಿಸಿದರು. ಆಗ ಡೆರಿಕ್‌ ಅವರು ಸಭಾಪತಿ ಪೀಠದ ಸಮೀಪ ಧಾವಿಸಿ ಪ್ರತಿಭಟಿಸಿದರು. ಧನಕರ್ ಎದ್ದು ನಿಂತು ಎಚ್ಚರಿಕೆ ನೀಡಿದರು. ಸದನದಿಂದ ಕೂಡಲೇ ಹೊರಹೋಗುವಂತೆ ನಿರ್ದೇಶನ ನೀಡಿದರು. ಅದಕ್ಕೆ ಡೆರಿಕ್ ಒಪ್ಪಲಿಲ್ಲ. ಪ್ರತಿಭಟನೆ ಮುಂದುವರಿಸಿದರು. ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾತುಕತೆಗೆ ಆಹ್ವಾನಿಸಿ ಧನಕರ್‌ ಅವರು ಕಲಾಪವನ್ನು ಮುಂದೂಡಿದರು. ಬಳಿಕ ಕಲಾಪ ಆರಂಭವಾದಾಗ ಡೆರಿಕ್‌ ಅವರು ಪ್ರತಿಭಟನೆ ಮುಂದುವರಿಸಿದರು. ಸಭಾಪತಿ ಅವರು ಮತ್ತೊಮ್ಮೆ ಎಚ್ಚರಿಕೆ ನೀಡಿದರು. 

ನಿಯಮ 256ರ ಅಡಿಯಲ್ಲಿ ಡೆರಿಕ್‌ ಅವರನ್ನು ಅಮಾನತುಗೊಳಿಸಲು ಸಭಾನಾಯಕ ಪೀಯೂಷ್‌ ಗೋಯಲ್ ಅವರು ಪ್ರಸ್ತಾವನೆ ಮಂಡಿಸಿದರು. ಅಮಾನತುಗೊಂಡ ಬಳಿಕವೂ ಡೆರಿಕ್ ಸದನದಿಂದ ಹೊರ ಹೋಗಲಿಲ್ಲ. ಅವರ ನಡವಳಿಕೆಯನ್ನು ಸದನದ ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಿ ಸಭಾಪತಿ ಆದೇಶಿಸಿದರು. ಅವರ ಕಾರ್ಯವೈಖರಿ ಕುರಿತು ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದರು. ತಮ್ಮನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಒಬ್ರಯಾನ್‌ ಅವರು ಸಂಸತ್‌ನ ಹೊರಗೆ ಮೌನ ಪ್ರತಿಭಟನೆ ನಡೆಸಿದರು. 

ಹಳೆಯ ಘಟನೆಗಳ ಉಲ್ಲೇಖಿಸಿದ ಜೋಶಿ: 

ಲೋಕಸಭೆಯಲ್ಲಿ ಹೇಳಿಕೆ ನೀಡಿದ ಪ್ರಲ್ಹಾದ ಜೋಶಿ, ‘ಬುಧವಾರ ನಡೆದ ಅಹಿತಕರ ಘಟನೆ ಗಂಭೀರವಾದುದು ಎಂಬುದನ್ನು ನಾವೆಲ್ಲರೂ ಒಪ್ಪುತ್ತೇವೆ. ಘಟನೆಯ ನಂತರ ಸ್ಪೀಕರ್‌ ಓಂ ಬಿರ್ಲಾ ಅವರು ಸದಸ್ಯರ ಜತೆಗೆ ಸಭೆ ನಡೆಸಿ ಸಲಹೆಗಳನ್ನು ಕೇಳಿದ್ದಾರೆ ಹಾಗೂ ಸಂಸತ್‌ನ ಭದ್ರತೆಯನ್ನು ಹೆಚ್ಚಿಸುವುದಾಗಿಯೂ ಭರವಸೆ ನೀಡಿದ್ದಾರೆ. ಸಂಸದರ ಕೆಲವು ಸಲಹೆಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ಸಭಾಧ್ಯಕ್ಷರು ಅಭಯ ನೀಡಿದ್ದಾರೆ’ ಎಂದರು. 

ಭದ್ರತಾ ಉಲ್ಲಂಘನೆಯ ಹಿಂದಿನ ಘಟನೆಗಳನ್ನು ಪಟ್ಟಿ ಮಾಡಿದ ಅವರು, ‘ಘೋಷಣೆ ಕೂಗುವುದು, ಕಾಗದಗಳನ್ನು ಎಸೆಯುವುದು ಮತ್ತು ಗ್ಯಾಲರಿಯಿಂದ ಜಿಗಿಯುವಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ನಾನು ಹಿಂದಿನ ಘಟನೆಗಳನ್ನು ಹೋಲಿಕೆ ಮಾಡುತ್ತಿಲ್ಲ ಮತ್ತು ಬುಧವಾರದ ಘಟನೆಯನ್ನು ಸಮರ್ಥಿಸುತ್ತಿಲ್ಲ. ಆದರೆ, ನಾವು ಹಿಂದಿನ ಘಟನೆಗಳಿಂದ ಪಾಠ ಕಲಿಯಬೇಕಾಗಿದೆ’ ಎಂದರು.

‘ಸಂಸತ್‌ ಭವನದ ಆಂತರಿಕ ಭದ್ರತೆಯು ಸ್ಪೀಕರ್ ಅವರ ಅಧೀನದಲ್ಲಿದೆ. ಉನ್ನತ ಮಟ್ಟದ ತನಿಖೆಗಾಗಿ ಸ್ಪೀಕರ್ ಅವರು ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಈಗಾಗಲೇ ತನಿಖೆ ಆರಂಭವಾಗಿದೆ’ ಎಂದು ಸಚಿವರು ಸದನಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT