ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಬಡಾವಣೆ: ₹19,622 ಕೋಟಿ ವಂಚನೆ! ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖ

1,929 ಎಕರೆ ಉದ್ಯಾನ ಜಾಗ ಕಬಳಿಕೆ
Last Updated 6 ಮಾರ್ಚ್ 2022, 22:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ನಗರ ಮತ್ತು ಪಟ್ಟಣಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳು ವಿಪರೀತ ಎನ್ನುವ ರೀತಿ ತಲೆಯೆತ್ತಿವೆ. ಇದರಿಂದಾಗಿ ಸುಮಾರು 19,291 ಎಕರೆ ಭೂಮಿ ದುರ್ಬಳಕೆಯಾಗಿದ್ದು, ಈ ಅಕ್ರಮದಿಂದಾಗಿ ₹ 19,622 ಕೋಟಿ ಮೊತ್ತದ ತೆರಿಗೆ ವಂಚನೆ ನಡೆದಿದೆ.

ವಿಧಾನಮಂಡಲದಲ್ಲಿ ಮಾರ್ಚ್‌ 4ರಂದು ಮಂಡಿಸಿದ ‘ಕರ್ನಾಟಕ ಆರ್ಥಿಕ ಸಮೀಕ್ಷೆ 2021–22’ರಲ್ಲಿ ಈ ಅನಧಿಕೃತ ಬಡಾವಣೆಗಳ ನಿರ್ಮಾಣದ ಬಗ್ಗೆ ವಿವರಗಳಿವೆ. ಉದ್ಯಾನಗಳಿಗಾಗಿ ಮೀಸಲಿಟ್ಟಿದ್ದ 1,929 ಎಕರೆ ಹಾಗೂ ರಸ್ತೆಗಾಗಿ ಮೀಸಲಿಟ್ಟಿದ್ದ 964 ಎಕರೆ ಭೂಮಿಅನಧಿಕೃತ ಬಡಾವಣೆಗಳಿಗೆ ಬಳಕೆಯಾಗಿವೆ.

ನಿಯಮಬಾಹಿರವಾದ ಅಭಿವೃದ್ಧಿಯ ಪ್ರಮಾಣ ಒಟ್ಟು ನಗರ ಪ್ರದೇಶದ ಶೇ 30ರಿಂದ ಶೇ 40ರಷ್ಟು ಇದೆ. ಯೋಜನಾ ಪ್ರಾಧಿಕಾರ, ನಗರಾಭಿವೃದ್ಧಿ ಪ್ರಾಧಿಕಾರ, ನಗರ ಸ್ಥಳೀಯ ಸಂಸ್ಥೆಗಳು, ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯನ್ನು ಮೀರಿ ಅನಧಿಕೃತ ಬೆಳವಣಿಗೆಗಳು ನಡೆದಿವೆ. ಅನಧಿಕೃತ ಬಡಾವಣೆಗಳು, ಕಾಲೊನಿಗಳು ಹಾಗೂ ಕಂದಾಯ ಬಡಾವಣೆಗಳ ನಿರ್ಮಾಣಕ್ಕೆ ಒತ್ತುವರಿ ಮಾಡಿದ್ದರಿಂದಾಗಿ ನೈಸರ್ಗಿಕ ಚರಂಡಿಗಳು, ಕೆರೆಗಳು, ಜಲಾನಯನ ಪ್ರದೇಶಗಳು, ಉದ್ಯಾನಗಳು ಹಾಗೂ ಬಯಲು ಪ್ರದೇಶಗಳು ಕಣ್ಮರೆಯಾಗಿವೆ.

ರಾಜಧಾನಿಯಲ್ಲಿ ತಿಪ್ಪಗೊಂಡನಹಳ್ಳಿ ಜಲಾನಯನ ಪ್ರದೇಶದಲ್ಲಿ ಅಭಿವೃದ್ಧಿ ನಿಷೇಧಿಸಿ ಸುಪ್ರೀಂ ಕೋರ್ಟ್‌ ಆದೇಶದ ನೀಡಿದ್ದರೂ ಇಡೀ ಜಲಾನಯನ ಪ್ರದೇಶ ಅಕ್ರಮ ಬಡಾವಣೆಗಳಿಗೆ ಬಳಕೆಯಾಗಿದೆ. ಅರ್ಕಾವತಿ, ವೃಷಭಾವತಿ, ಕಾವೇರಿ ಹಾಗೂ ಇತರ ನದಿಗಳಿಗೆ ಸಂಸ್ಕರಿಸದ ಕೊಳಚೆ ನೀರು ಬಿಡಲಾಗುತ್ತಿದೆ ಹಾಗೂ ಕೈಗಾರಿಕಾ ತ್ಯಾಜ್ಯಗಳನ್ನು ಸುರಿಯಲಾಗುತ್ತಿದೆ. ಅನಧಿಕೃತ ಬಡಾವಣೆಗಳಿಂದಾಗಿ ನಗರಗಳ ಒಟ್ಟಾರೆ ಅಭಿವೃದ್ಧಿಯ ಸಮೀಕರಣವು ಸಂಪೂರ್ಣವಾಗಿ ತೊಂದರೆಗೆ ಒಳಗಾಗುತ್ತಿದೆ ಎಂದು ಸಮೀಕ್ಷೆ ಕಳವಳ ವ್ಯಕ್ತಪಡಿಸಿದೆ.

ಕರ್ನಾಟಕ ಭೂ ಕಂದಾಯ ಕಾಯ್ದೆಯಲ್ಲಿ ಹಸಿರು ಪಟ್ಟಿ ಪರಿಕಲ್ಪನೆಯನ್ನು ಮರು ಪರಿಚಯಿಸುವ ಅಗತ್ಯ ಇದೆ. ರಾಜ್ಯದಲ್ಲಿ 63 ನಗರ ಸ್ಥಳೀಯ ಸಂಸ್ಥೆಗಳು ಆಟದ ಮೈದಾನಗಳನ್ನು ಹೊಂದಿಲ್ಲ. ಕೆಲವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಹಳ ಸಣ್ಣ ಪ್ರದೇಶದಲ್ಲಿ ಆಟದ ಮೈದಾನಗಳಿವೆ. ಬೆಂಗಳೂರು ನಗರವು 1,331 ಎಕರೆಯಲ್ಲಿ ಆಟದ ಮೈದಾನಗಳನ್ನು ಹೊಂದಿದೆ. ಇದು ನಗರದ ಒಟ್ಟು ವಿಸ್ತೀರ್ಣದ ಶೇ 1.87ರಷ್ಟು ಮಾತ್ರ.

ರಾಜ್ಯದಲ್ಲಿ 312 ಸ್ಥಳೀಯ ಸಂಸ್ಥೆಗಳಿವೆ. 114 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಾತ್ರ ಮಹಾಯೋಜನೆಗಳಿವೆ (ಮಾಸ್ಟರ್ ಪ್ಲಾನ್‌). 14 ನಗರಗಳಲ್ಲಿ ಮಾತ್ರ ಸಮಗ್ರ ನಗರ ಮಹಾ ಯೋಜನೆ (ಸಿಎಂಪಿ) ಇದೆ. ಆದರೆ, ಬೆಂಗಳೂರು ನಗರ ರಚನಾ ಯೋಜನೆ ಹೊರತುಪಡಿಸಿ ನಗರ ಪ್ರದೇಶಗಳಿಗೆ ಸಂಬಂಧಿಸಿ ಪ್ರಾದೇಶಿಕವಾಗಿ ಒಂದೇ ಒಂದು ಯೋಜನೆಯೂ ಇಲ್ಲ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT