ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲಾಸ್ಟ್‌ ಬೆಂಚ್‌ ಸ್ಟೂಡೆಂಟ್‌’ಗೆ ಸಿ.ಎಂ‌ ಬೊಮ್ಮಾಯಿ ಪಾಠ

ಯುವಿಸಿಇಗೆ ಐಐಟಿ ಮಾದರಿ ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನ
Last Updated 16 ಸೆಪ್ಟೆಂಬರ್ 2022, 5:21 IST
ಅಕ್ಷರ ಗಾತ್ರ

ಬೆಂಗಳೂರು: ‘ವಿದ್ಯಾರ್ಥಿ ಜೀವನದಲ್ಲಿ ಕ್ರಿಯಾಶೀಲತೆ, ಖುಷಿ ಸಿಗುವುದು ತರಗತಿಗಳಲ್ಲಿ ‘ಲಾಸ್ಟ್‌ ಬೆಂಚ್‌’ನಲ್ಲಿ ಕುಳಿತಾಗ, ಹಾಗಂತ ಜೀವನದಲ್ಲೂ ಕೊನೆಯಲ್ಲೇ ಉಳಿಯಬಾರದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿವಿಮಾತು ಹೇಳಿದರು.

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿ ಸಿಇ) ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಐಐಟಿ ಮಾದರಿಯ ಸ್ವಾಯತ್ತ ವಿಶ್ವವಿದ್ಯಾಲಯ ಘೋಷಣೆ, ಎಂಜಿನಿಯರ್‌ಗಳ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾರಂಭದಲ್ಲಿ ಹಿಂದೆ ಕುಳಿತು ಗಲಾಟೆ ಮಾಡುತ್ತಿದ್ದ ವಿದ್ಯಾರ್ಥಿ ಗಳನ್ನು ಹೊಗಳುತ್ತಲೇ, ಚಾಟಿ ಬೀಸಿದರು.

‘ನಾನೂ ವಿದ್ಯಾರ್ಥಿಯಾಗಿದ್ದಾಗ ತರಗತಿಗಳಲ್ಲಿ ಎಂದೂ ಮುಂದೆ ಕೂರಲಿಲ್ಲ.ಯುವಿಸಿಇಯಲ್ಲಿ ಓದಬೇಕೆಂಬಆಸೆ ಇತ್ತು. ಸೀಟು ಸಿಗದ ಕಾರಣ ನಮ್ಮೂರ ಎಂಜಿನಿಯರಿಂಗ್ ಕಾಲೇಜು ಸೇರಿದೆ. ಓದಿನ ಹೊರತಾದ ಅನುಭವಗಳಾಗಿದ್ದು ಹಿಂದಿನ ಬೆಂಚ್‌ನಿಂದಾಗಿ. ಹಾಗಂತ ಜೀವನ ಪಾಠ ಎದುರಾದಾಗ ಹಿಂದೆ ಉಳಿಯಲಿಲ್ಲ. ಹಣೆಬರಹ ಶಪಿಸುತ್ತಾ ಕೂರಲಿಲ್ಲ. ಹಣೆಬರಹ ಯಾರೂ ಬರೆಯುವುದಿಲ್ಲ. ಕೈಗೆರೆಗಳು ಸವೆಯಬೇಕು. ಅಂದರೆ, ಸತತ ಪರಿಶ್ರಮ, ಜ್ಞಾನದ ಮೂಲಕ ಉನ್ನತ ಸಾಧನೆ ಮಾಡಬೇಕು. ಅಂತಹ ಸಾಧಕರಲ್ಲಿ ವಿಶ್ವೇಶ್ವರಯ್ಯ ಮಾದರಿ’ ಎಂದರು. ‘ಹಿಂದೆ ಭೂಮಿ, ಬಂಡವಾಳ ಇದ್ದವರಿಗೆ ಸ್ಥಾನಮಾನ ಸಿಗುತ್ತಿತ್ತು. ಇಂದು ಜ್ಞಾನಕ್ಕೆ ಆ ಸ್ಥಾನವಿದೆ. ಅಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಗೂಗಲ್‌, ತಂತ್ರಜ್ಞಾನ ಎಷ್ಟೇ ಲಭ್ಯ ಇದ್ದರೂ, ಮೂಲ ಜ್ಞಾನವೂ ಅಷ್ಟೇ ಮುಖ್ಯ’ ಎಂದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ,ಯುವಿಸಿಇ ಅಧ್ಯಕ್ಷ ಮುತ್ತುರಾಮನ್ ಮಾತನಾಡಿದರು. ಉನ್ನತೀಕರಣ ಸಮಿತಿ ಅಧ್ಯಕ್ಷ ಎಸ್‌.ಸದಗೋಪನ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಪ್ರಾಂಶುಪಾಲ ಎಚ್‌.ಎನ್‌.ರಮೇಶ್‌ ಉಪಸ್ಥಿತರಿದ್ದರು.

ಐಐಟಿ ಕೇಂದ್ರವಾಗಿ ಯುವಿಸಿಇ ಅಭಿವೃದ್ಧಿ

ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಯುವಿಸಿಇಗೆ105 ವರ್ಷಗಳ ಇತಿಹಾಸವಿದ್ದು, ಸರ್ಕಾರ ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನ ನೀಡಿದೆ.

‘ಕಣ್ಣಳತೆಯ ದೂರದಲ್ಲಿರುವ ಈ ಕಾಲೇಜಿನತ್ತ ವಿಧಾನಸೌಧದಲ್ಲಿ ಕುಳಿತವರು ಸ್ವಲ್ಪ ತಿರುಗಿ ನೋಡಿದ್ದರೆ ಇಂದು ರಾಜ್ಯದ ಪ್ರಮುಖ ಐಐಟಿ ಕೇಂದ್ರವಾಗುತ್ತಿತ್ತು. ಆಡಳಿತ ನಡೆಸಿದವರಿಗೆ ಇಚ್ಚಾ ಶಕ್ತಿ ಇರಲಿಲ್ಲ. ಆ ಕೊರತೆಯನ್ನು ನಮ್ಮ ಸರ್ಕಾರ ನೀಗಿಸಿದೆ. ಮೂರು ವರ್ಷಗಳಲ್ಲಿ ಐಐಟಿ ಮಟ್ಟಕ್ಕೆ ಅಭಿವೃದ್ಧಿ ಪಡಿಸಲು ಎಲ್ಲ ರೀತಿಯ ನೆರವು ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT