ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮ ಹಗರಣ: ಸಚಿವ ನಾಗೇಂದ್ರ ರಾಜೀನಾಮೆ?

Published 5 ಜೂನ್ 2024, 23:30 IST
Last Updated 5 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ₹94.73 ಕೋಟಿ ಹಣ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾದ ಆರೋ‍ಪಕ್ಕೆ ಗುರಿಯಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರಿಗೆ ರಾಜೀನಾಮೆ ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಗುರುವಾರ ಅವರು ರಾಜೀನಾಮೆ ನೀಡುವ ಸಾಧ್ಯತೆ ಹೆಚ್ಚಿದೆ.

ಸಚಿವ ನಾಗೇಂದ್ರ ಅವರನ್ನು ಬುಧವಾರ ರಾತ್ರಿ ತಮ್ಮ ನಿವಾಸ ‘ಕಾವೇರಿ’ಗೆ ಕರೆಯಿಸಿಕೊಂಡ ಮುಖ್ಯಮಂತ್ರಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚನೆ ನೀಡಿದರು ಎಂದು ಗೊತ್ತಾಗಿದೆ.

ನಿಗಮದ ₹94.73 ಕೋಟಿ ಮೊತ್ತವನ್ನು ಯೂನಿಯನ್ ಬ್ಯಾಂಕ್‌ನ ವಸಂತನಗರ ಶಾಖೆಯಿಂದ ಎಂ.ಜಿ. ರಸ್ತೆಯ ಶಾಖೆಗೆ ವರ್ಗಾಯಿಸಲಾಗಿತ್ತು. ಅಲ್ಲಿಂದ, ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್‌ ಸೊಸೈಟಿಯ 18 ಖಾತೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಸೊಸೈಟಿಯ ಖಾತೆಗಳಿಂದ ಹೈದರಾಬಾದ್‌ನ ರತ್ನಾಕರ ಬ್ಯಾಂಕ್ ಲಿಮಿಟೆಡ್‌ಗೆ (ಆರ್‌ಬಿಎಲ್‌) ವರ್ಗಾಯಿಸಿ, ಅಲ್ಲಿಂದ ಹಣವನ್ನು ಡ್ರಾ ಮಾಡಿಕೊಳ್ಳಲಾಗಿತ್ತು ಎಂಬ ಆರೋಪ ಇದೆ. ಈ ಅಕ್ರಮದ ತನಿಖೆಗೆ ಮನೀಷ್ ಖರ್ಬೀಕರ್ ನೇತೃತ್ವದಲ್ಲಿ ರಚಿಸಿದ್ದ ಎಸ್ಐಟಿಯು ನಿಗಮದ ಅಧಿಕಾರಿಗಳನ್ನು ಹಾಗೂ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಅವರನ್ನು ಈಗಾಗಲೇ ಬಂಧಿಸಿದೆ. 

ಸಚಿವ ನಾಗೇಂದ್ರ ರಾಜೀನಾಮೆ ಜೂನ್‌ 6ರಂದು ಗಡುವು ನೀಡಿರುವ ಬಿಜೆಪಿ ನಾಯಕರು, ಅದರೊಳಗೆ ರಾಜೀನಾಮೆ ಪಡೆಯದಿದ್ದರೆ ಹೋರಾಟವನ್ನು ತೀವ್ರ ಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಗುರುವಾರ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. 

ಈ ಬೆಳವಣಿಗೆ ಬೆನ್ನಲ್ಲೇ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಜತೆ ಎರಡು ತಾಸು ಸಭೆ ನಡೆಸಿದ ಸಿದ್ದರಾಮಯ್ಯ ಹಗರಣದ ವಿವರ ಪಡೆದರು. ಎಸ್‌ಐಟಿಯು ನಾಗೇಂದ್ರ ಅವರ ಆಪ್ತನನ್ನು ಬಂಧಿಸಿರುವುದು, ಸಚಿವರ ಪಾತ್ರ ಇರುವುದರ ಬಗ್ಗೆ ಸಂಶಯಗಳು ಇವೆ ಎಂಬ ಖಚಿತ ಮಾಹಿತಿಯನ್ನೂ ಮುಖ್ಯಮಂತ್ರಿ ಪಡೆದುಕೊಂಡರು. ಬಳಿಕ, ನಾಗೇಂದ್ರ ಅವರನ್ನು ಕರೆಯಿಸಿ ರಾಜೀನಾಮೆ ಕೊಡುವಂತೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.

ಆಪ್ತನ ಬಂಧನ; ಸಚಿವರ ಪಾತ್ರಕ್ಕೆ ಪುರಾವೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್‌ ಹಾಗೂ ನಾಗೇಶ್ವರರಾವ್ ಅವರನ್ನು ಬುಧವಾರ ಬಂಧಿಸಲಾಗಿದ್ದು, ಪ್ರಕರಣ ದಲ್ಲಿ ನಾಗೇಂದ್ರ ಅವರ ಪಾತ್ರವಿರುವ ಬಗ್ಗೆಯೂ ಎಸ್‌ಐಟಿ ಪುರಾವೆಗಳನ್ನು ಕಲೆಹಾಕಿದೆ. ಯೂನಿಯನ್‌ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಪೂರ್ವ ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ (ಡಿಜಿಎಂ) ಮಹೇಶ್ ಜೆ. ಅವರ ದೂರು ಆಧರಿಸಿ ಸಿಬಿಐ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದು, ಬಂಧಿತ ಆರೋಪಿಗಳು ಹಾಗೂ ಸಚಿವ ನಾಗೇಂದ್ರ ಅವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT