ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಪರಿಷತ್‌ ಉಪ ಚುನಾವಣೆ: ಮೂರೂ ಸ್ಥಾನ ‘ಕೈ’ಗೆ ನಿಶ್ಚಿತ

Published 8 ಜೂನ್ 2023, 4:10 IST
Last Updated 8 ಜೂನ್ 2023, 4:10 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ಇದೇ 30ರಂದು ನಡೆಯಲಿರುವ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ವಿಧಾನಸಭೆಯಲ್ಲಿ ಕಾಂಗ್ರೆಸ್‌ 135 ಸ್ಥಾನಗಳನ್ನು ಹೊಂದಿದ್ದು, ಪಕ್ಷೇತರರಾಗಿ ಗೆದ್ದಿರುವ ಲತಾ ಮಲ್ಲಿಕಾರ್ಜುನ, ಕೆ. ಪುಟ್ಟಸ್ವಾಮಿಗೌಡ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಬಿಜೆಪಿ 66, ಜೆಡಿಎಸ್‌ 19 ಹಾಗೂ ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಒಬ್ಬರು ಶಾಸಕರಿದ್ದಾರೆ.

ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಾಬೂರಾವ್‌ ಚಿಂಚನಸೂರ ಅವರ ಅವಧಿ 2024ರ ಜೂನ್‌ 17ರಂದು, ಆರ್‌. ಶಂಕರ್‌ ಅವರ ಅವಧಿ 2026 ಜೂನ್‌ 30, ಲಕ್ಷ್ಮಣ ಸವದಿ ಅವರ ಅವಧಿ 2028ರ ಜೂನ್‌14ರವರೆಗೆ ಇತ್ತು. ಈ ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ಉಪ ಚುನಾವಣೆ ಜೂನ್‌ 30ರಂದು ನಿಗದಿಯಾಗಿದೆ.

‘ಮೂರೂ ಸ್ಥಾನಗಳ ಮುಕ್ತಾಯದ ಅವಧಿ ಬೇರೆ ಇದೆ. ಈ ಮೂರೂ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗ ಒಂದೇ ದಿನ ಉಪ ಚುನಾವಣೆ ನಡೆಸಲಿದ್ದು, ಪ್ರತ್ಯೇಕವಾಗಿ ಒಂದೇ ದಿನ (ಜೂನ್‌ 13) ಅಧಿಸೂಚನೆ ಹೊರಡಿಸಲಿದೆ. ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ಚುನಾವಣೆಯಲ್ಲಿ ನಡೆಯಲಿದ್ದು, ಎಲ್ಲ 224 ಶಾಸಕರೂ ಮತ  ಚಲಾಯಿಸಲು ಅರ್ಹರಾಗಿದ್ದಾರೆ. ಖಾಲಿಯಾಗುವ‌ ಸ್ಥಾನದ ಅವಧಿಯವರೆಗೆ, ಆ ಸ್ಥಾನಕ್ಕೆ ಆಯ್ಕೆಯಾದ ಸದಸ್ಯರ ಅವಧಿ ಇರಲಿದೆ’ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ತಿಳಿಸಿದರು.

ವಿಧಾನಸಭೆಯಲ್ಲಿ ಭಾರಿ ಬಹುಮತವನ್ನು ಕಾಂಗ್ರೆಸ್ ಹೊಂದಿದ್ದು, ಉಳಿದೆರಡು ಪಕ್ಷಗಳು ಸೇರಿಕೊಂಡರೂ ಆ  ಸಂಖ್ಯೆಯ ಹತ್ತಿರವೂ ಬರುವುದಿಲ್ಲ. ಹೀಗಾಗಿ ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುವುದು ಖಚಿತವಾಗಿದೆ.

‘ಬಿಜೆಪಿ ತ್ಯಜಿಸಿ ಕಾಂಗ್ರೆಸ್‌ ಸೇರ್ಪಡೆಯಾಗಿರುವ ಬಾಬೂರಾವ್‌ ಚಿಂಚನಸೂರ ಅವರು ವಿಧಾನಸಭೆ ಚುನಾವಣೆಯಲ್ಲಿ ಗುರುಮಠಕಲ್‌ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡಿದ್ದರು. ಆ ಸ್ಥಾನಕ್ಕೆ ಅವರನ್ನೇ ಅಭ್ಯರ್ಥಿ ಮಾಡಲು ಪಕ್ಷದ ನಾಯಕರು ಮುಂದಾಗಿದ್ದಾರೆ. ಆರ್‌. ಶಂಕರ್‌ ಮತ್ತು ಲಕ್ಷ್ಮಣ ಸವದಿ ಅವರಿಂದ ತೆರವಾದ ಸ್ಥಾನವನ್ನು ಪಕ್ಷದ ಕಾರ್ಯಕರ್ತರಿಗೆ ನೀಡುವ ಸಾಧ್ಯತೆಯಿದೆ. ಈ ಸ್ಥಾನಗಳ ಸದಸ್ಯತ್ವ ಅವಧಿ ಕಡಿಮೆ ಇದ್ದರೂ, 20ಕ್ಕೂ ಹೆಚ್ಚು ಆಕಾಂಕ್ಷಿಗಳು ಕಣ್ಣಿಟ್ಟಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಈ ಮಧ್ಯೆ, ಪರಿಷತ್‌ನಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಕಾಂಗ್ರೆಸ್‌ ಪ್ರಾತಿನಿಧ್ಯ ನೀಡಬೇಕು ಎಂದು ಆಗ್ರಹಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡರಾದ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರಿಗೆ ಟ್ವೀಟ್‌ ಮೂಲಕ ಮನವಿ ಸಲ್ಲಿಸಲಾಗಿದೆ.

‘ಪಕ್ಷ ಅಧಿಕಾರಕ್ಕೆ ಬರಲು ಕಿಸಾನ್‌ ಘಟಕ ಕೂಡಾ ಕಾರಣ. ಹೀಗಾಗಿ, ಖಾಲಿ ಸ್ಥಾನಕ್ಕೆ ರೈತ ನಾಯಕರಿಗೆ ಅವಕಾಶ ನೀಡಬೇಕು’ ಎಂದು ಕೆಪಿಸಿಸಿ ಕಿಸಾನ್‌ ಘಟಕದ ಅಧ್ಯಕ್ಷ ಸಚಿನ್‌ ಮಿಗಾ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT