ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಿಂದ ಕಾಯ್ದೆ ಉಲ್ಲಂಘನೆ

: ₹₹19.92 ಕೋಟಿ ಗುತ್ತಿಗೆಯಲ್ಲಿ ಪಕ್ಷಪಾತ
Published 16 ಆಗಸ್ಟ್ 2023, 21:31 IST
Last Updated 16 ಆಗಸ್ಟ್ 2023, 21:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಜಾಗೃತಿ ಕಾರ್ಯಕ್ರಮಗಳ ಕಾರ್ಯಾದೇಶ ನೀಡುವಲ್ಲಿ ಕಾಯ್ದೆಗಳನ್ನು ಉಲ್ಲಂಘಿಸಿದ್ದಾರೆ ಎಂದು ರಾಜ್ಯ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿ ವರದಿಯಲ್ಲಿ ತಿಳಿಸಲಾಗಿದೆ. 

ಜಲ ಮಾಲಿನ್ಯ ಕಾಯ್ದೆ 1974 ಮತ್ತು ವಾಯು ಮಾಲಿನ್ಯ ಕಾಯ್ದೆ 1981ರ ಪ್ರಕಾರ ಮಂಡಳಿ ಅಧ್ಯಕ್ಷರಿಗೆ ಯಾವುದೇ ಸಮಿತಿಯನ್ನು ರಚಿಸುವ ಅಧಿಕಾರ ಇಲ್ಲ. ಅಧ್ಯಕ್ಷ ಶಾಂತ್ ತಮ್ಮಯ್ಯ ಅದನ್ನು ಉಲ್ಲಂಘಿಸಿ ಏಕ ಸಮಿತಿಯನ್ನು ರಚಿಸಿದ್ದಾರೆ ಎಂದು ವರದಿಯಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಹೆಚ್ಚುವರಿ ನಿರ್ದೇಶಕ ಮಹದೇವ ಅವರು ಸರ್ಕಾರ ರಚಿಸಿರುವ ಸಮಿತಿಯ ತನಿಖಾಧಿಕಾರಿಯಾಗಿದ್ದಾರೆ. ಯೋಜಿತ ಸಂಸ್ಥೆಗಳಿಗೆ ಗುತ್ತಿಗೆ ನೀಡುವ ಉದ್ದೇಶದಿಂದಲೇ ಏಕ ಮೂಲ ಸಂಸ್ಥೆಯನ್ನು ಆಯ್ಕೆ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಮಂಡಳಿ ಅಧ್ಯಕ್ಷರು ಸ್ವಯಂ ಘೋಷಿತವಾಗಿ ಏಕ ಮೂಲ ಸಂಸ್ಥೆಯ ಅಧ್ಯಕ್ಷರನ್ನು ನೇಮಕ ಮಾಡಿಕೊಂಡಿದ್ದಾರೆ. ಪಾರದರ್ಶಕ ಕಾಯ್ದೆ 1999 -4(ಬಿ) ಅಡಿಯಲ್ಲಿ ಮೂರು ತಜ್ಞರ ಸಮಿತಿ ರಚಿಸಬೇಕು. ಮಂಡಳಿಯಲ್ಲಿರುವ ಇದೇ ವಿಷಯದ ತಜ್ಞರೇ ಸದಸ್ಯರಾಗಬೇಕು. 

ಕಚೇರಿ ಜ್ಞಾಪನಾ ಪತ್ರವನ್ನು ಅಧ್ಯಕ್ಷರೇ ಹೊರಡಿಸಿ, ಅವರೇ ಏಕ ಸಂಸ್ಥೆಯನ್ನು ರಚಿಸಿದ್ದಾರೆ. ಐದು ಸಂಸ್ಥೆಗಳಿಗೆ ಯೋಜಿತ ಜಾಹೀರಾತು ಕಾರ್ಯಗಳನ್ನು ನೀಡಲು ಅನುಮೋದನೆ ನೀಡುವ ಉದ್ದೇಶದಿಂದಲೇ ಈ ಸಮಿತಿ ರಚಿಸಲಾಗಿದೆ. ₹19.92 ಕೋಟಿ ಮೌಲ್ಯದ ಜಾಹೀರಾತು ನೀಡುವ ಬಗ್ಗೆ ಐದು ಸಂಸ್ಥೆಗಳ ಪ್ರಸ್ತಾವನೆ ಪರಿಗಣಿಸಿ, ನಾಲ್ಕು ಸಂಸ್ಥೆಗಳನ್ನು ಏಕ ಮೂಲ ಸಂಸ್ಥೆ ಎಂದು ಪರಿಗಣಿಸಲಾಗಿದೆ.

ರಾಜ್ಯ ಸರ್ಕಾರದ 1976 ನಿಯಮಗಳ ಸೆಕ್ಷನ್ 15(ಇ) ಪ್ರಕಾರ, ಪ್ರತಿ ಪ್ರಕರಣದಲ್ಲಿ ₹25 ಸಾವಿರ ಮೌಲ್ಯದ ಟೆಂಡರ್ ಗಳನ್ನು ಮಾತ್ರ ಅಧಕ್ಷರು ಅನುಮೋದಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ. 35 ದಿನಗಳ ಅಲ್ಪಾವಧಿ ಟೆಂಡರ್ ಆಹ್ವಾನಿಸಬಹುದಿತ್ತು. ಅದನ್ನು ಪರಿಗಣಿಸದೆ ಯೋಜಿತ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಉದ್ದೇಶದಿಂದ, ಸ್ಪರ್ಧಾತ್ಮಕತೆ ನಿಯಂತ್ರಿಸುವ ಉದ್ದೇಶದಿಂದ ಪಕ್ಷಪಾತ ಎಸಗಿರುವುದು ಕಂಡುಬಂದಿದೆ.

ಪರಿಸರ ಜಾಗೃತಿ ಉಂಟು ಮಾಡುವ ಕಾರ್ಯಕ್ರಮಗಳು ಹೆಚ್ಚು ಜನರನ್ನು ತಲುಪಿಸುವ ಮುನ್ನೋಟವಿಲ್ಲದೆ, ಯೋಜಿತ ಸಂಸ್ಥೆಗಳಿಗೆ ಗುತ್ತಿಗೆಯನ್ನು ನೀಡುವ ಉದ್ದೇಶದಿಂದಲೇ ಏಕ ಮೂಲ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.

ಇದರ ಜೊತೆಗೆ, ಮಹದೇವ ಅವರು ಆ.16 ರಂದು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಅವರಿಗೆ ಬರೆದಿರುವ ಪತ್ರದಲ್ಲಿ, ₹24.60 ಕೋಟಿ ಆಯವ್ಯಯದಲ್ಲಿ ಮರಿ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಪ್ರಸ್ತಾವನೆಯನ್ನೂ ಮಂಡಳಿಯ ಸಭೆಗೆ ಸಲ್ಲಿಸಲಾಗಿದೆ. ಈ ಲೆಕ್ಕ ಶೀರ್ಷಿಕೆ ಗಳಿ ಮರು ಹೊಂದಾಣಿಕೆಗೆ ಸರ್ಕಾರದಿಂದ ಪಡೆದಿರುವ ಅಧಿಕಾರ ಪ್ರತ್ಯಾಯೋಜನೆಯ ಆದೇಶ ಪ್ರತಿಗಳನ್ನು ಒದಗಿಸಲು ಸೂಚಿಸಿದ್ದಾರೆ.

ಪ್ರಕರಣದ ಹಿನ್ನೆಲೆ

ಮಂಡಳಿಯ ಅಧ್ಯಕ್ಷ ಶಾಂತ್‌ ತಿಮ್ಮಯ್ಯ ನೇತೃತ್ವದ ‘ಸಿಂಗಲ್ ಸೋರ್ಸ್ ಕಮಿಟಿ’ ಸಭೆಯಲ್ಲಿ ₹17.85 ಕೋಟಿ ಮೌಲ್ಯದ ಜಾಗೃತಿ ಕಾರ್ಯಕ್ರಮಗಳನ್ನು ನಿರ್ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯ್ದೆ -1999 ಅನ್ನು (ಕೆಟಿಪಿಪಿ) ಉಲ್ಲಂಘಿಸಿ, ಈ ಗುತ್ತಿಗೆಯನ್ನು ನಿರ್ದಿಷ್ಟ ಏಜೆನ್ಸಿಗಳಿಗೆ ನೀಡಲು ಸಮ್ಮತಿ ನೀಡಲಾಗಿತ್ತು.

ಇದೆಲ್ಲ, ಕೆಟಿಪಿಪಿ ಕಾಯ್ದೆಯ ಉಲ್ಲಂಘನೆಯಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಮಂಡಳಿಯ ಸದಸ್ಯ ಕಾರ್ಯದರ್ಶಿಯಾಗಿದ್ದ ಸೂರಿ ಪಾಯಲ ಅವರೇ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪರಿಸರ ಹಾಗೂ ಜೀವಪರಿಸ್ಥಿತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಜುಲೈ 3ರಂದು ಪತ್ರ ಬರೆದು, ‘ಸಿಂಗಲ್ ಸೋರ್ಸ್ ಕಮಿಟಿ’ ಸಭೆಯಲ್ಲಿ ಅನುಮೋದನೆ ನೀಡಲಾಗಿರುವ ಎಲ್ಲ ಮಾಹಿತಿಯನ್ನೂ ನೀಡಿದ್ದರು. ಇದನ್ನು ಆಧರಿಸಿ ಸರ್ಕಾರ ತನಿಖಾ ಸಮಿತಿ ರಚಿಸಿತ್ತು.

ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಜುಲೈ 17 ರಂದು ‘ಮಾಲಿನ್ಯ ನಿಯಂತ್ರಣ ಮಂಡಳಿ - ಸರ್ಕಾರದ ಮಧ್ಯೆ ಸಂಘರ್ಷ’ ಶೀರ್ಷಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT