ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲಮೂಲಗಳ ರಕ್ಷಣೆ ಆದ್ಯತೆ ಆಗಬೇಕು: ಸಿಎಂ

Last Updated 12 ಫೆಬ್ರುವರಿ 2020, 18:39 IST
ಅಕ್ಷರ ಗಾತ್ರ

ಬೆಂಗಳೂರು: ‘ಘನತ್ಯಾಜ್ಯ ನಿರ್ವಹಣೆ, ಮಳೆ ನೀರು ಸಂಗ್ರಹಣೆ ಮತ್ತು ಜಲಮೂಲಗಳ ಸಂರಕ್ಷಣೆ ಸ್ಥಳೀಯ ಸಂಸ್ಥೆಗಳ ಆದ್ಯತೆ ಆಗಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಸ್ಮಾರ್ಟ್‌ ಮತ್ತು ಸುಸ್ಥಿರ ನಗರಕ್ಕೆ ಪರಿಹಾರಗಳು ಕುರಿತು ಅರಮನೆ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೆಚ್ಚು ಆವಿಷ್ಕಾರಗಳು ನಡೆಯಬೇಕು. ಜಲ ಮತ್ತು ಇಂಧನ ಮೂಲಗಳ ಮಿತವ್ಯಯ ಮತ್ತು ಪರಿಸರ ಸಂರಕ್ಷಣೆ ಹಿಂದಿಗಿಂತ ಈಗ ಹೆಚ್ಚು ಅವಶ್ಯ. ‍ಪ್ರವಾಹ, ಭೂಕುಸಿತ ರೀತಿಯ ಪ್ರಕೃತಿ ವಿಕೋಪಗಳಿಂದ ನಗರಗಳನ್ನು ರಕ್ಷಿಸುವ ನಿಟ್ಟಿನಲ್ಲೂ ಯೋಚನೆ ಮಾಡಬೇಕು’ ಎಂದರು.

‘ವಿಶ್ವದ ಎಲ್ಲ ನಗರಗಳಿಗೂ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ನಗರದಲ್ಲಿ ಸಂಚಾರ ಸುಗಮಗೊಳಿಸಲು ಉಪನಗರ ರೈಲು, ಸಮೀಪದ ನಗರಗಳಿಗೆ ತ್ವರಿತ ಸೇವೆ ಒದಗಿಸಲು ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲಾಗುವುದು’ ಎಂದು ಹೇಳಿದರು.

ಕಸ ಪತ್ತೆಗೆ ಕೃತಕ ಬುದ್ಧಿಮತ್ತೆ

ಕೃತಕ ಬುದ್ಧಿಮತ್ತೆ ಬಳಸಿಕೊಂಡು ಕಸ ಪತ್ತೆ ಮತ್ತು ನಿರ್ವಹಣೆ ವ್ಯವಸ್ಥೆಯನ್ನು ಬೆಳಗಾವಿ ಪಾಲಿಕೆ ಅಳವಡಿಸಿಕೊಂಡಿದ್ದು, ಬೆಂಗಳೂರಿನಲ್ಲೂ ಈ ಮಾದರಿ ಅನುಸರಿಸಲು ತಯಾರಿ ನಡೆಯುತ್ತಿದೆ.

ಎಸ್‌ಸಿಎನ್‌ ಇನ್ನೋವೇಷನ್ಸ್‌ ಕಂಪನಿ ಈ ಆ್ಯಪ್ ಅಭಿವೃದ್ಧಿಪಡಿಸಿದೆ. ಕಸ ಬಿದ್ದಿರುವುದನ್ನು ಮೊಬೈಲ್‌ನಲ್ಲಿ ಚಿತ್ರ ತೆಗೆದು ಆ್ಯಪ್‌ಗೆ ಅಪ್‌ಲೋಡ್ ಮಾಡಿದರೆ ಅದು ಯಾವ ಮಾದರಿಯ ಕಸ(ಒಣ, ಹಸಿ ಅಥವಾ ಪ್ಲಾಸ್ಟಿಕ್‌) ಎಂಬುದು ಸರ್ವರ್‌ ಮೂಲಕ ಪಾಲಿಕೆಗೆ ತಿಳಿಯಲಿದೆ.

‘ಪೋಟೋ ತೆಗೆದ ಜಾಗ ಕೂಡ ಜಿಪಿಎಸ್‌ನಿಂದ ಪತ್ತೆಯಾಗಲಿದ್ದು, ಆ ಸ್ಥಳಕ್ಕೆ ಪಾಲಿಕೆ ಸಿಬ್ಬಂದಿ ಕೂಡಲೇ ಹೋಗಿ ಕಸ ಸ್ವಚ್ಛಗೊಳಿಸಬಹುದು. ಎಷ್ಟು ಕಸ ಇದೆ ಎಂಬುದು ನಿಖರವಾಗಿ ತಿಳಿಯುವುದರಿಂದ ಕಸ ಸಂಸ್ಕರಿಸಿ ಮಾರಾಟ ಮಾಡುವುದರಿಂದ ಬರುವ ವರಮಾನವೂ ವೃದ್ಧಿಯಾಗಲಿದೆ’ ಎಂದು ಎಸ್‌ಸಿಎನ್‌ ಇನ್ನೋವೇಷನ್ ಎಲ್‌ಎಲ್‌ಪಿಯ ಸುಮಿತ್ ಅನ್ವೇಕರ್ ತಿಳಿಸಿದರು.

‘ಈ ವ್ಯವಸ್ಥೆ ಬೆಂಗಳೂರಿನಲ್ಲಿ ಅಳವಡಿಸುವ ಬಗ್ಗೆ ಬಿಬಿಎಂಪಿ ಜತೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT