ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಗೆ ಯಾರ ಬೆಂಬಲವೂ ಬೇಕಿಲ್ಲ-ಯಡಿಯೂರಪ್ಪ

Last Updated 25 ನವೆಂಬರ್ 2019, 20:01 IST
ಅಕ್ಷರ ಗಾತ್ರ

ಹೊಸಪೇಟೆ: 'ನಮಗೆ ಯಾರ ಬೆಂಬಲವೂ ಬೇಕಿಲ್ಲ. ನಮಗೆ ಜನರ ಬೆಂಬಲವಿದೆ. ಕಾಂಗ್ರೆಸ್‌, ಜೆ.ಡಿ.ಎಸ್‌. ಪಕ್ಷದವರೂ ಏನು ಬೇಕಾದರೂ ಮಾತನಾಡಿಕೊಳ್ಳಲಿ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ವಿಜಯನಗರ ಕ್ಷೇತ್ರದ ಉಪಚುನಾವಣೆ ನಿಮಿತ್ತ ತಾಲ್ಲೂಕಿನ ಕಮಲಾಪುರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, 'ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ವಿಜಯನಗರದಲ್ಲಿ ಆನಂದ್‌ ಸಿಂಗ್‌ ಈಗಾಗಲೇ ಗೆದ್ದಾಗಿದೆ. ನಮ್ಮ ಪಕ್ಷದ ಮುಖಂಡರು ಬೇರೆ ಕ್ಷೇತ್ರಗಳಿಗೆ ಹೋಗಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.

'ರಾಜ್ಯದಲ್ಲಿ ನಮ್ಮ ಸರ್ಕಾರ ಬರುತ್ತದೆ ಎಂದು ಕನಸು ಕಂಡಿರಲಿಲ್ಲ. ಆದರೆ, ಆನಂದ್ ಸಿಂಗ್ ಮೊದಲು ರಾಜೀನಾಮೆ ನೀಡಿ ಅದಕ್ಕೆ ಬುನಾದಿ ಹಾಕಿದರು. ಉಳಿದ ಶಾಸಕರು ಅವರ ಮಾರ್ಗ ಅನುಸರಿಸಿದರು. ಚುನಾವಣೆಯಲ್ಲಿ ಗೆದ್ದ ನಂತರ ಈ ಕ್ಷೇತ್ರದ ಏನೇನು ಬೇಡಿಕೆಗಳಿವೆಯೋ ಅವುಗಳೆಲ್ಲವನ್ನೂ ಈಡೇರಿಸಲಾಗುವುದು’ ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠಕ್ಕೆ ಭೇಟಿ ನೀಡಿ, ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಅವರ ಆಶೀರ್ವಾದ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ‘ಹದಿನೈದು ಕ್ಷೇತ್ರಗಳ ಪೈಕಿ ಆನಂದ್ ಸಿಂಗ್ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುವರು. ಇನ್ನೂ ಮೂರುವರೆ ವರ್ಷ ಸುಭದ್ರ, ಸ್ಥಿರ ಸರ್ಕಾರ ರಾಜ್ಯದಲ್ಲಿ ಇರಲಿದೆ. ಉಪಚುನಾವಣೆ ನಂತರ ಸಾರ್ವತ್ರಿಕ ಚುನಾವಣೆ ನಡೆಯುತ್ತದೆ ಎಂದು ವಿರೋಧ ಪಕ್ಷಗಳು ಹೇಳುವ ಮಾತು ಸುಳ್ಳಾಗುತ್ತದೆ. ಸಿದ್ದರಾಮಯ್ಯನವರು ಹತಾಶರಾಗಿ ಏನೇನೋ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅವರ ಮಾತುಗಳಿಗೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ’ ಎಂದರು.

ಸಿ.ಎಂ. ಸಭೆಗೂ ಬರದಅತೃಪ್ತ ಮುಖಂಡರು

ಆನಂದ್‌ ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿರುವುದಕ್ಕೆ ಆರಂಭದಿಂದಲೂ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿರುವ ಸ್ಥಳೀಯ ಬಿಜೆಪಿ ಮುಖಂಡರು, ಸೋಮವಾರ ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಬಹಿರಂಗ ಸಭೆಗೂ ಬರಲಿಲ್ಲ.

ಬಿಜೆಪಿ ಮುಖಂಡರಾದ ಎಚ್.ಆರ್.ಗವಿಯಪ್ಪ, ರಾಣಿ ಸಂಯುಕ್ತಾ, ಕಿಶೋರ್ ಪತ್ತಿಕೊಂಡ ಕಾರ್ಯಕ್ರಮದಿಂದ ದೂರ ಉಳಿದರು. ಇನ್ನು ವಿಜಯನಗರ ಜಿಲ್ಲೆ ರಚನೆ ವಿಚಾರದಲ್ಲಿ ಆನಂದ್‌ ಸಿಂಗ್‌ ಮೇಲೆ ಬೇಸರಗೊಂಡಿರುವ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿ ಕೂಡ ಕಾರ್ಯಕ್ರಮಕ್ಕೆ ಗೈರಾಗಿದ್ದರು.

‘ಬಹು ಮುಖ್ಯವಾದ ಕೆಲಸದ ನಿಮಿತ್ತ ಗವಿಯಪ್ಪನವರು ಸಭೆಗೆ ಬಂದಿಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮುಖಂಡ ಕಾರ್ತಿಕ್‌ ಘೋರ್ಪಡೆ ಕಾರ್ಯಕ್ರಮದಲ್ಲಿ ಹೇಳಿದರು.

ಚಪ್ಪಲಿ ಎತ್ತಿಕೊಟ್ಟ ಆನಂದ್‌ ಸಿಂಗ್‌

ಮಾಜಿ ಶಾಸಕ ಶಂಕರಗೌಡ ಅವರ ಮಗ, ಬಿಜೆಪಿ ಮುಖಂಡ ಭರಮನಗೌಡ ಅವರ ಮನೆಗೆ ಬಿ.ಎಸ್‌.ಯಡಿಯೂರಪ್ಪ ಭೇಟಿ ನೀಡಿ ಹಿಂತಿರುಗುವಾಗ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರು ಸಿ.ಎಂ. ಅವರಿಗೆ ಚಪ್ಪಲಿಗಳನ್ನು ಎತ್ತಿ ಕೊಟ್ಟರು.

ಮನೆಯಲ್ಲಿ ಕಿಕ್ಕಿರಿದು ಜನ ನೆರೆದಿದ್ದರಿಂದ ಗಣ್ಯರು ಬಿಟ್ಟು ಹೋಗಿದ್ದ ಚಪ್ಪಲಿಗಳ ಜಾಗ ಬದಲಾಗಿತ್ತು. ಭರಮನಗೌಡ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿ ಹಿಂತಿರುಗುವಾಗ ಸಿ.ಎಂ. ತಮ್ಮ ಚಪ್ಪಲಿಗಳನ್ನು ಹುಡುಕಾಡಿದರು. ಆಗ ಅದನ್ನು ಗಮನಿಸಿದ ಆನಂದ್‌ ಸಿಂಗ್‌ ತಕ್ಷಣವೇ ಅವರ ಚಪ್ಪಲಿಗಳನ್ನುಎತ್ತಿ ಕೊಟ್ಟರು.

‘ಬಿಜೆಪಿ ಸೇರಲು ಕಾಂಗ್ರೆಸ್ಸಿಗರಲ್ಲಿ ಉತ್ಸಾಹ’

ಬೆಳಗಾವಿ: ‘ಕಾಂಗ್ರೆಸ್‌ನ ಹಲವು ಶಾಸಕರು ಬಿಜೆಪಿಗೆ ಬರುವ ಹಾದಿ
ಯಲ್ಲಿದ್ದಾರೆ. ಹಲವರು ಉತ್ಸಾಹದಿಂದ ಕಾಯುತ್ತಿದ್ದಾರೆ. ಇದನ್ನು ಆಧರಿಸಿಯೇ, 35 ಮಂದಿ ಕಾಂಗ್ರೆಸ್‌ನವರು ನನ್ನ ಸಂರ್ಪಕದಲ್ಲಿದ್ದಾರೆ ಎಂದು ರಮೇಶ ಜಾರಕಿಹೊಳಿ ಹೇಳಿರುವುದು. ಇಡೀ ದೇಶದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ’ ಎಂದು ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ತಿಳಿಸಿದರು. ಕಾಗವಾಡ ಕ್ಷೇತ್ರದಲ್ಲಿ ಅಭ್ಯರ್ಥಿ ಶ್ರೀಮಂತ ಪಾಟೀಲ ಪರ ಪ್ರಚಾರ ಮಾಡಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT