ಬೆಂಗಳೂರು: ‘ಪಕ್ಷ ಅಧಿಕಾರಕ್ಕೆ ಬಂದರೆ ಘೋಷಿತ ಐದೂ ‘ಗ್ಯಾರಂಟಿ’ಗಳನ್ನು ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿ ಮಾಡುತ್ತೇವೆ’ ಎಂದು ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆ, ಎರಡನೇ ಸಚಿವ ಸಂಪುಟ ಸಭೆ ಬಳಿಕವೂ ಅನುಷ್ಠಾನದ ಹಂತ ತಲುಪಿಲ್ಲ.
ಕಾಂಗ್ರೆಸ್ ಘೋಷಿಸಿದ ‘ಗ್ಯಾರಂಟಿ’ಗಳ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ವಿಷಯಗಳು ಈಗ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿವೆ. ಬಸ್ ಪ್ರಯಾಣ ಉಚಿತವೆಂದು ಸರ್ಕಾರ ಹೇಳಿದ್ದು, ಟಿಕೆಟ್ ಖರೀದಿಸುವುದಿಲ್ಲ ಎಂದು ಕೆಲವು ಕಡೆಗಳಲ್ಲಿ ಮಹಿಳೆಯರು ತಕರಾರು ತೆಗೆದು, ಬಸ್ ನಿರ್ವಾಹಕರ ಜತೆಗೆ ಜಗಳವನ್ನೂ ಮಾಡುತ್ತಿದ್ದಾರೆ. ಉಚಿತ ವಿದ್ಯುತ್ ವಿಷಯದಲ್ಲೂ ಎಸ್ಕಾಂಗಳ ಸಿಬ್ಬಂದಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ನಾಯಕರು, ‘ಗ್ಯಾರಂಟಿ’ ಅನುಷ್ಠಾನಕ್ಕೆ ಗಡುವು ನೀಡಿದ್ದು, ಹೋರಾಟದ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಈ ಬೆಳವಣಿಗೆಗಳ ಮಧ್ಯೆಯೇ, ಸಚಿವ ಸಂಪುಟ ವಿಸ್ತರಣೆ ಶನಿವಾರ ನಡೆದಿದ್ದು, ಪೂರ್ಣ ಸರ್ಕಾರ ಅಧಿಕಾರಕ್ಕೆ ಬಂದಿದೆ. 24 ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸಂಪುಟ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅನೌಪಚಾರಿಕವಾಗಿ ಚರ್ಚೆ ನಡೆಸಿದರು. ಈ ಸಭೆಯಲ್ಲಿ ಗ್ಯಾರಂಟಿ ಜಾರಿ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ ಎಂದು ಗೊತ್ತಾಗಿದೆ.
ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿದ್ದರಾಮಯ್ಯ, ‘ಐದು ಗ್ಯಾರಂಟಿಗಳ ಕುರಿತು ಸಂಪುಟದ ಮುಂದಿನ ಸಭೆಯಲ್ಲಿ ವಿವರಗಳನ್ನು ಮಂಡಿಸಲು ಸೂಚಿಸಲಾಗಿದೆ. ಈ ಕುರಿತು ಚರ್ಚಿಸಿ ಅನುಮೋದನೆ ನೀಡಿ, ಶೀಘ್ರವೇ ಜಾರಿಗೆ ತರಲಾಗುವುದು’ ಎಂದು ತಿಳಿಸಿದರು.
‘ಸರ್ಕಾರವಾಗಿ ನಾವು ಕೊಟ್ಟ ಭರವಸೆಗಳನ್ನು ಈಡೇರಿಸಬೇಕು. ವಿರೋಧ ಪಕ್ಷಗಳು ತಾವು ಕೊಟ್ಟ ಮಾತನ್ನು ಈಡೇರಿಸಿಲ್ಲ. ನಾವು ಹಿಂದೆಯೂ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದೇವೆ, ಈಗಲೂ ಈಡೇರಿಸುತ್ತೇವೆ’ ಎಂದರು.
ಎರಡನೇ ಸಂಪುಟ ಸಭೆ:
135 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್, ಮೇ 20ರಂದು ಸರ್ಕಾರ ರಚಿಸಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಎಂಟು ಸಚಿವರೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅದೇ ದಿನ ಮೊದಲ ಸಂಪುಟ ಸಭೆಯನ್ನೂ ನಡೆಸಿದ್ದರು.
ಐದು ಗ್ಯಾರಂಟಿಗಳ ಅನುಷ್ಠಾನದ ಪ್ರಸ್ತಾವಗಳಿಗೆ ಮೊದಲ ಸಂಪುಟ ಸಭೆಯಲ್ಲಿ ತಾತ್ವಿಕ ಅನುಮೋದನೆಯನ್ನಷ್ಟೇ ನೀಡಲಾಗಿತ್ತು. ಸಂಪುಟದ ನಿರ್ಣಯದಂತೆ ಯೋಜನೆ ಅನುಷ್ಠಾನಗೊಳಿಸಲು ಅದೇ ದಿನ ಸಂಬಂಧ ಪಟ್ಟ ಇಲಾಖೆಗಳು ಐದು ಆದೇಶಗಳನ್ನು ಹೊರಡಿಸಿದ್ದವು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ನಿಖರ ಅಂಕಿಅಂಶಗಳ ವರದಿಯೊಂದಿಗೆ ಚರ್ಚಿಸಿ, ಮಾರ್ಗಸೂಚಿಗಳನ್ನು ಅಂತಿಮಗೊಳಿಸಬೇಕಿದೆ. ಪ್ರತಿ ಯೋಜನೆಗೂ ಪ್ರತ್ಯೇಕವಾಗಿ ಅನುದಾನ ಮೀಸಲಿರಿಸುವ ಹಾಗೂ ವೆಚ್ಚಕ್ಕೆ ಒಪ್ಪಿಗೆ ನೀಡುವ ನಿರ್ಧಾರವೂ ಆಗಬೇಕಿದೆ. ಶನಿವಾರ ನಡೆದ ಎರಡನೇ ಸಂಪುಟ ಸಭೆಯಲ್ಲೂ ಈ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
ಖಾತೆ ಬಿಕ್ಕಟ್ಟು ಅಂತ್ಯ: ಅಧಿಸೂಚನೆ ಬಾಕಿ
ಸಂಪುಟದ ಎಲ್ಲ 34 ಸ್ಥಾನಗಳನ್ನು ಭರ್ತಿ ಮಾಡಿದ್ದರೂ, ಕೆಲವು ಸಚಿವರು ಪ್ರಮುಖ ಖಾತೆಗಳಿಗೆ ಪಟ್ಟು ಹಿಡಿದಿದ್ದರಿಂದ ಖಾತೆ ಹಂಚಿಕೆ ಮಾಡುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಬಹುತೇಕರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಬೆಳಿಗ್ಗೆ ಸಂಪುಟ ವಿಸ್ತರಣೆಗೂ ಮೊದಲೇ ಸಚಿವರ ಸಂಭವನೀಯ ಖಾತೆಗಳ ಮಾಹಿತಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸಂಪುಟ ವಿಸ್ತರಣೆ ಬಳಿಕ ಸಚಿವರ ಹೆಸರಿನ ಮುಂದೆ ಖಾತೆಗಳ ವಿವರ ಇರುವ ಪಟ್ಟಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು.
‘ರಾಮಲಿಂಗಾ ರೆಡ್ಡಿ ಪ್ರಮುಖ ಖಾತೆಗೆ ಪಟ್ಟುಹಿಡಿದಿದ್ದಾರೆ. ತಮಗೆ ನೀಡಲು ಉದ್ದೇಶಿಸಿರುವ ಖಾತೆ ಬೇಡವೆಂದು ಹೇಳಿದ್ದ ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಅವರು ಸಿ.ಎಂ ಮನವೊಲಿಕೆಯಿಂದ ಪಟ್ಟು ಸಡಿಲಿಸಿದ್ದಾರೆ. ರಾಜಭವನದಿಂದ ಭಾನುವಾರ ಖಾತೆ ಹಂಚಿಕೆಯ ಅಧಿಸೂಚನೆ ಹೊರ
ಬೀಳಲಿದೆ’ ಎಂದೂ ಮೂಲಗಳು ತಿಳಿಸಿವೆ.
ಅನುಷ್ಠಾನಕ್ಕೆ ತಿಂಗಳ ಗಡುವು: ಬಿಜೆಪಿ
ಮಂಗಳೂರು: ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬಿಜೆಪಿ ಒಂದು ತಿಂಗಳ ಗಡುವು ವಿಧಿಸಿದೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ‘ರಾಜ್ಯ ಸರ್ಕಾರವು ಒಂದು ತಿಂಗಳ ಒಳಗೆ ಗ್ಯಾರಂಟಿಗಳನ್ನು ಈಡೇರಿಸದೇ ಇದ್ದರೆ, ರಾಜ್ಯದಾದ್ಯಂತ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಕಾಂಗ್ರೆಸ್‌ನವರಿಗೆ ಯಾವ ರೀತಿ ತಿರುಗೇಟು ನೀಡಬೇಕೆಂಬ ಬಗ್ಗೆ ಕಾರ್ಯತಂತ್ರ ರೂಪಿಸುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.