ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನಗಳ ರಫ್ತು ಉತ್ತೇಜನಕ್ಕೆ ಯೋಜನೆ: ಸಚಿವೆ ಶೋಭಾ ಕರಂದ್ಲಾಜೆ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ
Last Updated 27 ಆಗಸ್ಟ್ 2021, 15:38 IST
ಅಕ್ಷರ ಗಾತ್ರ

ಬೆಂಗಳೂರು: ರೈತರ ಆದಾಯ ದ್ವಿಗುಣಗೊಳಿಸುವುದಕ್ಕೆ ಪೂರಕವಾಗಿ ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜಿಸಲು ರಾಜ್ಯದಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಕೃಷಿಕರ ಆದಾಯ ಹೆಚ್ಚಿಸಲು ಕಾರ್ಯತಂತ್ರ ರೂಪಿಸುವ ಸಂಬಂಧ ರಾಜ್ಯದ ಸಚಿವರು, ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳು ಹಾಗೂ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಮತ್ತಿತರ ಇಲಾಖೆಗಳ ಹಿರಿಯ ಅಧಿಕಾರಿಗಳ ಜತೆ ಶುಕ್ರವಾರ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕೃಷಿ ಉತ್ಪನ್ನಗಳ ರಫ್ತು ವಹಿವಾಟನ್ನು ಸುಲಲಿತಗೊಳಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ ಪ್ರತ್ಯೇಕವಾದ ಕೋಶವನ್ನು ಆರಂಭಿಸುವಂತೆ ಕೈಗಾರಿಕಾ ಸಚಿವರನ್ನು ಕೋರಲಾಗುವುದು. ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ರಫ್ತಿಗೆ ಅಗತ್ಯವಿರುವ ನೆರವು ಒದಗಿಸಲಾಗುವುದು ಎಂದರು.

ಆಂಧ್ರಪ್ರದೇಶದ ಮಾದರಿಯಲ್ಲಿ ಗ್ರಾಮಗಳ ಹಂತದಲ್ಲಿ ಕೃಷಿ ಉತ್ಪನ್ನ ಹಾಗೂ ಕೃಷಿ ಪರಿಕರಗಳ ಮಾರುಕಟ್ಟೆ ತೆರೆಯುವ ಯೋಜನೆ, ತಮಿಳುನಾಡಿನ ಮಾದರಿಯಲ್ಲಿ ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆಗೆ ಶೈತ್ಯಾಗಾರಗಳ ಸ್ಥಾಪನೆ, ಒಳನಾಡು ಮೀನುಗಾರಿಕೆಗೆ ಉತ್ತೇಜನ, ಸಿರಿ ಧಾನ್ಯಗಳ ಉತ್ಪಾದನೆ ಹೆಚ್ಚಳ, ಅಂತರರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಕೃಷಿ ಉತ್ಪನ್ನಗಳ ಗುಣಮಟ್ಟ ಹೆಚ್ಚಳಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದು ತಿಳಿಸಿದರು.

ಮೂರು ವರ್ಷಗಳಲ್ಲಿ 750 ಅಮೃತ ಕೃಷಿ ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಒಂದು ವರ್ಷದೊಳಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಕನಿಷ್ಠ ಒಂದರಂತೆ ಕೃಷಿ ಉತ್ಪಾದಕರ ಸಂಸ್ಥೆಗಳನ್ನು ಆರಂಭಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.

ರಫ್ತುದಾರರ ಸಮ್ಮೇಳನ: ಸೆಪ್ಟೆಂಬರ್‌ 22ರಂದು ಬೆಂಗಳೂರಿನಲ್ಲಿ ಕೃಷಿ ಉತ್ಪನ್ನಗಳ ರಫ್ತುದಾರರ ಸಮ್ಮೇಳನ ನಡೆಯಲಿದೆ. ರಫ್ತುದಾರರು, ಸಂಶೋಧಕರು, ರೈತರು ಮತ್ತು ಅಧಿಕಾರಿಗಳು ಒಂದೆಡೆ ಸೇರಿ ರಫ್ತು ಚಟುವಟಿಕೆಗೆ ಪೂರಕವಾದ ಕ್ರಮಗಳ ಕುರಿತು ಚರ್ಚಿಸಲು ಸಮ್ಮೇಳನ ವೇದಿಕೆಯಾಗಲಿದೆ ಎಂದು ಶೋಭಾ ಹೇಳಿದರು.

ಬೆಳೆ ಸಮೀಕ್ಷೆಗೆ ಶ್ಲಾಘನೆ: ರಾಜ್ಯದಲ್ಲಿ ಜಾರಿಗೆ ತಂದಿರುವ ಬೆಳೆ ಸಮೀಕ್ಷೆ ವಿಧಾನವು ಅತ್ಯುತ್ತಮವಾಗಿದೆ. ರೈತರೇ ನೇರವಾಗಿ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಿರುವ ಈ ವ್ಯವಸ್ಥೆಯನ್ನು ಇತರ ರಾಜ್ಯಗಳಲ್ಲೂ ಅಳವಡಿಸಿಕೊಳ್ಳುವಂತೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಕೃಷಿ ಸಚಿವ ಬಿ.ಸಿ. ಪಾಟೀಲ, ತೋಟಗಾರಿಕೆ ಸಚಿವ ಮುನಿರತ್ನ, ರೇಷ್ಮೆ ಸಚಿವ ಕೆ.ಸಿ. ನಾರಾಯಣ ಗೌಡ, ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರ ನೇಮಿಸಿರುವ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಅಶೋಕ್‌ ದಳವಾಯಿ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮ, ಕೃಷಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ ಸಭೆಯಲ್ಲಿದ್ದರು.

ಇ– ಮಾರುಕಟ್ಟೆಗೆ ಮೆಚ್ಚುಗೆ

ರೈತರು ನೇರವಾಗಿ ರೇಷ್ಮೆ ಗೂಡುಗಳನ್ನು ಮಾರಾಟ ಮಾಡಲು ಅವಕಾಶವಾಗುವಂತೆ ರೇಷ್ಮೆ ಇಲಾಖೆ ರೂಪಿಸಿರುವ ಇ– ಮಾರುಕಟ್ಟೆ ವ್ಯವಸ್ಥೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇತರ ಮಾರುಕಟ್ಟೆಗಳಲ್ಲೂ ಇಂತಹ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂಬಾರ ಪಾರ್ಕ್‌ ಸ್ಥಾಪನೆಗೆ ತೀರ್ಮಾನ

ಚಿಕ್ಕಮಗಳೂರು ಜಿಲ್ಲೆಯ ಹೊಸಕೋಟೆ ಸಮೀಪದ ಅಂಬಾಲಿ ಗ್ರಾಮದಲ್ಲಿ 10 ಎಕರೆ ವಿಸ್ತೀರ್ಣದಲ್ಲಿ ಸಂಬಾರ ಉತ್ಪನ್ನಗಳ ಪಾರ್ಕ್‌ ಸ್ಥಾಪನೆಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ಆರ್‌. ನಿರಾಣಿ ನೇತೃತ್ವದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ 10 ಎಕರೆ ಜಮೀನು ಒದಗಿಸಲಿದೆ. ಸಂಬಾರ ಪದಾರ್ಥಗಳ ಉತ್ಪಾದನೆ ಹೆಚ್ಚಳ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರಾಟಕ್ಕೆ ಪೂರಕವಾಗಿ ಈ ಪಾರ್ಕ್‌ ಕಾರ್ಯನಿರ್ವಹಿಸಲಿದೆ ಎಂದು ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT