ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾನೂನು ರೂಪಿಸಿದರೂ ತೊಲಗದ ಬಾಲಕಾರ್ಮಿಕ ಪದ್ಧತಿ’

ನಿವೃತ್ತ ನ್ಯಾ.ಮದನ್ ಬಿ.ಲೋಕೂರ್ ಬೇಸರ
Last Updated 12 ಜೂನ್ 2021, 19:24 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಪರಿಸ್ಥಿತಿ ಎದುರಾದ ನಂತರ ದೇಶದಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಳ ಕಂಡಿದೆ. ಕಾನೂನುಗಳ ಚೌಕಟ್ಟು ಇದ್ದರೂ ಈ ಪದ್ಧತಿ ನಿರ್ಮೂಲನೆ ಯಶಸ್ವಿಯಾಗಿಲ್ಲ. ಬಾಲಕಾರ್ಮಿಕರ ಪದ್ಧತಿಯನ್ನುಬೇರಿನಿಂದಲೇ ಹತ್ತಿಕ್ಕಬೇಕು’ ಎಂದುಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ.ಲೋಕೂರ್ ತಿಳಿಸಿದರು.

ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನವು (ಸಿಎಸಿಎಲ್) ಆನ್‌ಲೈನ್ ಮೂಲಕ ಶನಿವಾರ ಹಮ್ಮಿಕೊಂಡಿದ್ದ ‘ಭಾರತದಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯ ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತು ರಾಷ್ಟ್ರೀಯ ಸಮಾಲೋಚನೆಯಲ್ಲಿ ಅವರು ಮಾತನಾಡಿದರು.

‘40 ಸಾವಿರ ಬಾಲಕಾರ್ಮಿಕರನ್ನು ರಕ್ಷಣೆ ಮಾಡಿರುವುದಾಗಿ ಸರ್ಕಾರಗಳು ಹೇಳಿಕೊಂಡಿವೆ. ಆದರೆ, ಸುಮಾರು 700 ಪ್ರಕರಣಗಳು ಮಾತ್ರ ದಾಖಲಾಗಿರುವುದು ವಿಪರ್ಯಾಸ. ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವವರಿಗೆ ವಿಧಿಸುವ ಶಿಕ್ಷೆಯ ಪ್ರಮಾಣವೂ ಕಡಿಮೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಬಾಲಕಾರ್ಮಿಕ ಪದ್ಧತಿಯೂ ಸೇರಿದಂತೆ ಅನೇಕ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗಾಗಿ ಸರ್ಕಾರಗಳು ಅನುದಾನ ಮೀಸಲಿಡುತ್ತವೆ. ಆದರೆ, ಅದು ಬಳಕೆಯಾದ ಮಾಹಿತಿ ಹೊರಬರುವುದಿಲ್ಲ. ಈ ವ್ಯವಸ್ಥೆ ಪಾರದರ್ಶಕಗೊಳ್ಳಲು ಅಂಕಿ–ಅಂಶಗಳನ್ನು ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಬೇಕು’ ಎಂದು ಸಲಹೆ ನೀಡಿದರು.

‘ಗಣಿಗಾರಿಕೆ, ಬಳೆ ತಯಾರಿ ಸೇರಿದಂತೆ ಅನೇಕ ಅಪಾಯಕಾರಿ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಶಿಕ್ಷಣ ಪಡೆಯದಿರುವುದು ಹಾಗೂ ಬಡತನ ಇದಕ್ಕೆ ಪ್ರಮುಖ ಕಾರಣ. ಬಾಲಕಾರ್ಮಿಕ ಪದ್ಧತಿ ತೊಲಗಿಸಲುಜಿಲ್ಲಾ ಮಟ್ಟದ ಅಧಿಕಾರಿಗಳು ಹೆಚ್ಚು ಕಾರ್ಯಪ್ರವೃತ್ತರಾಗಬೇಕು’ ಎಂದರು.

ಸಿಎಸಿಎಲ್ ಸದಸ್ಯ ಕುಮಾರ್ ಶೈಲಾಬ್, ‘ದೇಶದಲ್ಲಿ ಪ್ರಸ್ತುತ 45 ಲಕ್ಷ ಬಾಲಕಿಯರು ಹಾಗೂ 56 ಲಕ್ಷ ಬಾಲಕರು ಸೇರಿದಂತೆ1.01 ಕೋಟಿ ಬಾಲಕಾರ್ಮಿಕರಿದ್ದಾರೆ. ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಬಾಲಕಾರ್ಮಿಕರ ಸಂಖ್ಯೆ ಹೆಚ್ಚು ಇದೆ’ ಎಂದು ವರದಿ ಮಂಡಿಸಿದರು.

ರಾಷ್ಟ್ರೀಯ ಬಾಲಕಾರ್ಮಿಕ ವಿರೋಧಿ ಆಂದೋಲನದ ಮುಖ್ಯಸ್ಥ ಮ್ಯಾಥ್ಯು ಫಿಲಿಪ್, ಆಂದೋಲನದ ವಕ್ತಾರ ಅಶೋಕ್‌ ಕುಮಾರ್ ಸೇರಿದಂತೆ ಹಲವು ಮಂದಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT