ಬೆಂಗಳೂರು: ‘ರಾಜ್ಯದ ವಿಶ್ವವಿದ್ಯಾಲಯಗಳ ಅಂಕಪಟ್ಟಿ ಮುದ್ರಣ ಕಾಗದ ಖರೀದಿಯಲ್ಲಿ ನನ್ನ ಪಾತ್ರ ಇಲ್ಲ. ನಾನು ಭ್ರಷ್ಟಾಚಾರ ಮಾಡಿದ್ದರೆ ಈ ಜಾಗದಲ್ಲಿ ಕೂಡುವುದಿಲ್ಲ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ದೂರು ನೀಡಿದವರು ಈ ವಿಷಯದ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಬೇಕಿತ್ತು. ಯಾರೊ ಹೇಳಿದ್ದಾರೆ ಎಂದೋ, ಸ್ವಪ್ರತಿಷ್ಠೆಗಾಗಿಯೋ ತಪ್ಪು ಮಾಹಿತಿಗಳೊಂದಿಗೆ ದೂರು ನೀಡುವುದು ಖಂಡನೀಯ ಎಂದು ಅವರು ಗುರುವಾರ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಅನೇಕ ವಿಶ್ವವಿದ್ಯಾಲಯಗಳು ಕಳಪೆ ಗುಣಮಟ್ಟದ ಕಾಗದದಲ್ಲಿ ಮುದ್ರಿಸಿದ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದವು. ಈ ಬಗ್ಗೆ ಉನ್ನತ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ಒಮ್ಮೆ ಚರ್ಚಿಸಲಾಯಿತು. ಅಲ್ಲದೆ, ಇಂತಹ ಕಾಗದಕ್ಕಾಗಿ ವಿಶ್ವವಿದ್ಯಾಲಯಗಳು ₹28.50 ರಿಂದ ₹212 ವರೆಗೆ ನೀಡುತ್ತಿರುವುದನ್ನೂ ಗಮನಿಸಲಾಯಿತು. ಇದರ ಬದಲು ಎಂಎಸ್‌ಐಎಲ್‌ನ (ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್) ಲೇಖಕ್ ಬ್ರ್ಯಾಂಡ್‌ನ ಕಾಗದ ಖರೀದಿಸುವಂತೆ ಸಲಹೆ ನೀಡಿ ವಿಶ್ವವಿದ್ಯಾಲಯಗಳಿಗೆ ಪತ್ರ ಬರೆಯಲಾಗಿತ್ತು ಎಂದರು.

‘ತುಮಕೂರು ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಎಂಎಸ್‌ಐಎಲ್ ಮೂಲಕ ಕಾಗದ ಖರೀದಿಸಲು ನಿರ್ಧರಿಸಿದವು. ಈ ಸಂಬಂಧ ಎಂಎಸ್‌ಐಎಲ್ ಟೆಂಡರ್ ಕರೆದು ಕಡಿಮೆ ಮೊತ್ತ ಬಿಡ್ ಮಾಡಿದ ಕಂಪೆನಿಗೆ ಟೆಂಡರ್ ನೀಡಿದೆ. ಅಲ್ಲಿಂದ ನೇರವಾಗಿ ವಿಶ್ವವಿದ್ಯಾಲಯಗಳಿಗೆ ಕಾಗದ ಸರಬರಾಜು ಆಗುತ್ತದೆ. ಇದರಲ್ಲಿ ನನ್ನ ಪಾತ್ರ ಎಲ್ಲಿದೆ’ ಎಂದು ರಾಯರಡ್ಡಿ ಪ್ರಶ್ನಿಸಿದರು.

ಮಾಧ್ಯಮಗಳಲ್ಲಿ ಆರೋಪಿಸಿದಂತೆ ಎಂಎಸ್‌ಐಎಲ್ ₹ 90 ದರದಲ್ಲಿ ಅಂಕಪಟ್ಟಿ ಮುದ್ರಣ ಕಾಗದ ಸರಬರಾಜು ಮಾಡಿಲ್ಲ. ವಿವಿಧ ಜಿಎಸ್‌ಎಂ ಮತ್ತು ಕನಿಷ್ಠ ಎಂಟು ರಹಸ್ಯ ಗುಣಗಳೊಂದಿಗೆ (ಸೆಕ್ಯೂರಿಟಿ ಫೀಚರ್ಸ್) ₹ 18.50ರಿಂದ ₹36.50 ದರದಲ್ಲಿ ಸರಬರಾಜು ಮಾಡಲಾಗಿದೆ. ಅಲ್ಲದೆ, ಆರು ವಿಶ್ವವಿದ್ಯಾಲಯಗಳಲ್ಲಿ ಮೊದಲು ಖರೀದಿಸುತ್ತಿದ್ದ ದರಕ್ಕೂ ಮತ್ತು ಎಂಎಸ್‌ಐಎಲ್ ನಿಂದ ಖರೀದಿಸಿದ ದರಕ್ಕೂ ಹೋಲಿಸಿದರೆ ₹ 2.25 ಕೋಟಿ ಉಳಿತಾಯವಾಗಿದೆ ಎಂದು ಮಾಹಿತಿ ನೀಡಿದರು.

‘35 ವರ್ಷಗಳಿಂದ ರಾಜಕೀಯ ಮಾಡುತ್ತಿದ್ದೇನೆ. ಹಣ ಮತ್ತು ವೈಯಕ್ತಿಕ ಲಾಭಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ರಾಜ್ಯದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿ ಭ್ರಷ್ಟಾಚಾರ ಎಸಗಿದ್ದರೆ ಈ ಜಾಗದಲ್ಲಿ ಕೂಡುವುದಿಲ್ಲ’ ಎಂದು ರಾಯರಡ್ಡಿ ಹೇಳಿದರು.

ಒಂದೇ ದರ ನಿಗದಿಗೆ ಪ್ರಯತ್ನ: ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಲು ಒಂದೊಂದು ದರ ನಿಗದಿಪಡಿಸಿವೆ. ಮೈಸೂರು ವಿಶ್ವವಿದ್ಯಾಲಯ ₹ 260, ಮಂಗಳೂರು ವಿಶ್ವವಿದ್ಯಾಲಯ ₹200, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ₹ 75 ನಿಗದಿ ಮಾಡಿವೆ. ಕಾಗದದ ವೆಚ್ಚ ತೆಗೆದು ಉಳಿದ ಹಣವನ್ನು ವಿಶ್ವವಿದ್ಯಾಲಯದ ಖಾತೆಗೆ ಜಮೆ ಮಾಡಲಾಗುತ್ತದೆ. ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಅಂಕಪಟ್ಟಿಗಾಗಿ ಒಂದೇ ದರ ನಿಗದಿ ಮಾಡುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

‘ಫೇಲಾದವರನ್ನು ಪಾಸ್ ಮಾಡುವಂತೆ ಬಂದಿದ್ದರು’

‘ವೇಣುಗೋಪಾಲ್ ಅವರಿಗೆ ದೂರು ನೀಡಿದ ಎನ್‌ಎಸ್‌ಯುಐ ಅಧ್ಯಕ್ಷ ಮಂಜುನಾಥ್ ನನಗೆ ಪರಿಚಯ ಇಲ್ಲ. ವಿಟಿಯುನಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ಪಾಸ್ ಮಾಡಲು ಶಿಫಾರಸು ಮಾಡುವಂತೆ ನನ್ನನ್ನು ಹಿಂದೊಮ್ಮೆ ಭೇಟಿ ಮಾಡಿದ್ದರು’ ಎಂದು ರಾಯರಡ್ಡಿ ಹೇಳಿದರು.

‘ಒಂದು ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿ ಫೇಲಾದರೆ ಅವರಿಗೆ ಮುಂದಿನ ಸೆಮಿಸ್ಟರ್‌ಗೆ ಅವಕಾಶ ನೀಡುವುದು ಆಯಾ ವಿಶ್ವವಿದ್ಯಾಲಯದ ತೀರ್ಮಾನಕ್ಕೆ ಬಿಟ್ಟಿದ್ದು. ಇಂತಹ ಶಿಫಾರಸು ನಾನು ಮಾಡಲು ಬರುವುದಿಲ್ಲ ಎಂದು ಹೇಳಿ ಕಳುಹಿಸಿದ್ದೆ’ ಎಂದರು.

ಈ ದೂರಿನ ಹಿಂದೆ ಕೆಲ ಗುತ್ತಿಗೆದಾರರೂ ಇರಬಹುದು. ಕಳಪೆ ಕಾಗದ ಪೂರೈಸಿ ಹೆಚ್ಚಿನ ಹಣ ಪಡೆಯುತ್ತಿದ್ದವರಿಗೆ ಈಗ ತೊಂದೆಯಾಗಿದೆ. ಅವರೂ ಇದರಲ್ಲಿ ಸೇರಿಕೊಂಡಿರುವ ಅನುಮಾನ ಇದೆ ಎಂದು ರಾಯರಡ್ಡಿ ಶಂಕೆ ವ್ಯಕ್ತಪಡಿಸಿದರು.

ಟೆಂಡರ್ ಪಡೆದ ಸಂಸ್ಥೆ ಬಗ್ಗೆ ಪರಿಶೀಲನೆ

‘ಅಂಕಪಟ್ಟಿ ಕಾಗದ ಪೂರೈಕೆ ಟೆಂಡರ್ ಪಡೆದ ದೇವಾರ್ಸ್ ಇನ್ಫೋಟೆಕ್ ಪ್ರೈ.ಲಿ ಕಪ್ಪು ಪಟ್ಟಿಗೆ ಸೇರಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು’ ಎಂದು ಸಚಿವರು ಹೇಳಿದರು.

‘ಸರ್ಕಾರದ ಅಂಗಸಂಸ್ಥೆ ಎಂಎಸ್‌ಐಎಲ್ ಎಲ್ಲವನ್ನೂ ಪರಿಶೀಲಿಸಿ ಟೆಂಡರ್ ನೀಡಿರುತ್ತದೆ ಎಂಬ ವಿಶ್ವಾಸ ಇದೆ. ಕಪ್ಪು ಪಟ್ಟಿಗೆ ಸೇರಿದ ಕಂಪೆನಿಗೆ ಟೆಂಡರ್ ನೀಡಿದ್ದರೆ ಎಂಎಸ್‌ಐಎಲ್ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಮುಖ್ಯಮಂತ್ರಿಗೆ ಶಿಫಾರಸು ಮಾಡುತ್ತೇನೆ’ ಎಂದರು.

* ನನ್ನ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿ ರಾಜ್ಯಪಾಲರು ಪತ್ರ ಬರೆದಿರುವ ಬಗ್ಗೆ ಗೊತ್ತಿಲ್ಲ. ಮುಖ್ಯಮಂತ್ರಿ ಅಂತಹ ಪತ್ರವನ್ನು ನನಗೆ ಕೊಟ್ಟಿಲ್ಲ

– ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.