ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ `ಲೆವಿ' ಸಮಸ್ಯೆ

Last Updated 28 ಜೂನ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಯೋಜನೆಗೆ ಅಗತ್ಯವಾದ ಅಕ್ಕಿಗಾಗಿ ಸರ್ಕಾರ ಲೆವಿ ಸಂಗ್ರಹಕ್ಕೆ ಮುಂದಾಗಿದೆ. ಆದರೆ, ಕಳೆದ ವರ್ಷ ಬರಗಾಲ ಕಾಡಿದ ಹಿನ್ನೆಲೆಯಲ್ಲಿ ರಾಜ್ಯದ ಅಚ್ಚುಕಟ್ಟು ಪ್ರದೇಶಗಳಲ್ಲಿ ಅಗತ್ಯ ಪ್ರಮಾಣದಲ್ಲಿ ಭತ್ತವನ್ನೇ ಬೆಳೆದಿಲ್ಲ. ಹೀಗಾಗಿ, ಅಕ್ಕಿ ಗಿರಣಿಗಳು ಲೆವಿ ನೀಡಲು ಹಿಂದೇಟು ಹಾಕುತ್ತಿವೆ.

ಬರಗಾಲದ ಹಿನ್ನೆಲೆಯಲ್ಲಿ ಬೇಸಿಗೆ ಭತ್ತದ ಬೆಳೆಗೆ ಜಲಾಶಯಗಳಿಂದ ಅಗತ್ಯ ನೀರು ಒದಗಿಸಲಿಲ್ಲ. ರೈತರು ಭತ್ತ ಬೆಳೆಯಬಾರದು ಎಂದು ಭದ್ರಾ ಬಲದಂಡೆ ನಾಲೆ, ಗಂಗಾವತಿ, ಕಾವೇರಿ ಜಲಾನಯನ ಭಾಗದ ರೈತರಿಗೆ ಸರ್ಕಾರವೇ ಸೂಚನೆ ನೀಡಿತ್ತು!

`ಭತ್ತದ ಉತ್ಪಾದನೆಯಲ್ಲಿ ಸಾಕಷ್ಟು ಇಳಿಕೆಯಾಗಿದೆ. ಇದನ್ನು ಗಮನಿಸದೇ ಲೆವಿ ವಸೂಲಾತಿಗೆ ಆದೇಶ ನೀಡಿರುವುದು ಆಘಾತ ತಂದಿದೆ. ಸರ್ಕಾರ ವಿನಾಯಿತಿ ನೀಡದಿದ್ದರೆ ಅಕ್ಕಿ ಗಿರಣಿಗಳೂ ಬಾಗಿಲು ಹಾಕುವ ಪರಿಸ್ಥಿತಿ ಬರುತ್ತದೆ' ಎನ್ನುತ್ತಾರೆ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಸದಸ್ಯರು.

ಭತ್ತದ ಉತ್ಪಾದನೆಯಲ್ಲಿ ಇಳಿಕೆ:  ಐಆರ್- 64, 1,001, ಜ್ಯೋತಿ ತಳಿಯ ಅಕ್ಕಿಯನ್ನು ಲೆವಿ ರೂಪದಲ್ಲಿ ನೀಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಈ ತಳಿಯ ಭತ್ತ ಬೆಳೆಯಲಾಗುತ್ತಿಲ್ಲ. ಬೇರೆಲ್ಲಾ ಭತ್ತಕ್ಕೆ ಹೋಲಿಸಿದರೆ ಸೋನಾ ಮಸೂರಿ ಭತ್ತಕ್ಕೆ ಹೆಚ್ಚು ಬೆಲೆ. ಆದ್ದರಿಂದ, ರೈತರು ಇದರ ಮೊರೆ ಹೋಗಿದ್ದಾರೆ. ಸರ್ಕಾರ ನಿಗದಿ ಮಾಡಿದ ಧಾರಣೆಯಲ್ಲಿ ಸೋನಾ ಮಸೂರಿ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯಾಧ್ಯಕ್ಷ ಬಿ.ಎಂ.ನಂಜಯ್ಯ `ಪ್ರಜಾವಾಣಿ'ಗೆ ತಿಳಿಸಿದರು.

ಹಿಂದಿನ ಸರ್ಕಾರ ಗಿರಣಿಗಳಲ್ಲಿ ಹೆಚ್ಚುವರಿ ಭತ್ತ ಸಂಗ್ರಹ ಮಾಡದಂತೆ ಸೂಚಿಸಿತ್ತು. ಇದರಿಂದ ಹೊರ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಸಾಗಣೆ ಆಗಿದೆ. ಹೊರ ರಾಜ್ಯಗಳಿಗೆ ಭತ್ತ ಸಾಗಣೆಯ ವೇಳೆ ಲೆವಿ ಸಂಗ್ರಹಕ್ಕೆ ಅವಕಾಶವಿದೆ. ಆದರೆ, ಆಗ ಸರ್ಕಾರ ಲೆವಿ ಸಂಗ್ರಹಿಸಲಿಲ್ಲ ಎಂದು ದೂರುತ್ತಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ 1,50,000 ಮೆಟ್ರಿಕ್ ಟನ್ ಅಕ್ಕಿ ನೀಡಲು ಬೇಡಿಕೆ ಇಡಲಾಗಿತ್ತು. ಆ ಸಂದರ್ಭದಲ್ಲಿ ಶೇ 55ರಷ್ಟು ಅಕ್ಕಿಯನ್ನು ಹೊರ ರಾಜ್ಯಗಳಿಂದ ಅಕ್ಕಿ ತರಿಸಿಕೊಂಡು ನೀಡಲಾಗಿತ್ತು. ಲೆವಿ ಸಂಗ್ರಹ ಆದೇಶ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಲ್ಲಿರುವ 750-800 ಅಕ್ಕಿ ಗಿರಣಿಗಳ ಬಾಗಿಲು ಮುಚ್ಚುತ್ತವೆ ಎನ್ನುತ್ತಾರೆ ಅವರು.

`ಲೆವಿ ಅಕ್ಕಿಯನ್ನು ರೈತರಿಂದ ನೇರವಾಗಿ ಖರೀದಿಸಬೇಕು. ಇಲ್ಲದಿದ್ದರೆ ಅಕ್ಕಿ ಗಿರಣಿ ಉದ್ಯಮ ನಷ್ಟಕ್ಕೆ ಸಿಲುಕುತ್ತಿದೆ. ಗಿರಣಿ ಮಾಲೀಕರ ಸಮಸ್ಯೆಯನ್ನು ಸರ್ಕಾರ ಪರಿಹರಿಸಬೇಕು' ಎಂದು ಸಂಘದ ಸದಸ್ಯ ಕೆ.ಜಿ.ನಾಗರಾಜ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT