ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಂತ ಪದ್ಮನಾಭ ಕ್ಷೇತ್ರ: ಬಿ-ನೆಲಮಾಳಿಗೆ ತೆರೆಯಲು ದೇವ ಸಮ್ಮತ ಇಲ್ಲ!

Last Updated 20 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಮಧೂರು (ಕಾಸರಗೋಡು): `ಅನಂತ, ಅನರ್ಘ್ಯ, ನಿಗೂಢ ಸಂಪತ್ತು ಅಡಗಿದೆ ಎಂದು ಶಂಕಿಸಲಾದ ತಿರುವನಂತಪುರ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ~ಬಿ~ ನೆಲಮಾಳಿಗೆಯ ಸತ್ಯಶೋಧನೆ ದೇವ ಸಮ್ಮತವಲ್ಲ. ಅದು ಶ್ರೀ ದೇವರ ಪದತಲ. ಅಲ್ಲಿ ಸಾಕ್ಷಾತ್ ನರಸಿಂಹ ಸ್ವಾಮಿಯೇ ಕಾವಲಿದ್ದಾನೆ. ಅಲ್ಲಿನ ಭದ್ರತೆಗೆ ಆಪತ್ತು ಎದುರಾದರೆ ನಿಯಂತ್ರಣಾತೀತ ಅನಾಹುತಗಳು ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. ಅಷ್ಟೇ ಅಲ್ಲ, ಸರ್ಕಾರದ ಅಭದ್ರತೆಗೂ ಕಾರಣವಾದೀತು~!

- ಹೀಗೊಂದು ಎಚ್ಚರಿಕೆ ನೀಡಿದೆ ಅಲ್ಲಿ ಇತ್ತೀಚೆಗೆ ನಡೆದ ~ದೇವಪ್ರಶ್ನೆ~.ಈ ~ದೇವ ಪ್ರಶ್ನೆ~ಯ ಪ್ರಧಾನ ದೈವಜ್ಞರಾಗಿದ್ದ ಕನ್ನಡಿಗ ಮಧೂರು ನಾರಾಯಣ ರಂಗ ಭಟ್, ಗುರುವಾರ  `ಪ್ರಜಾವಾಣಿ~ ಜತೆ ಮಾತನಾಡಿದರು. ದೇವಸ್ಥಾನದ ಆಡಳಿತ ವಹಿಸಿರುವ ತಿರುವನಂತಪುರ ರಾಜ ವಂಶಸ್ಥರ ವಿಶೇಷ ಆಮಂತ್ರಣ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿದ್ದ ರಂಗ ಭಟ್, ಅಲ್ಲಿನ ಸದ್ಯದ ಸ್ಥಿತಿಗತಿ-ಸಮಸ್ಯೆ, ಪರಿಹಾರ ನಿಟ್ಟಿನಲ್ಲಿ ~ದೇವ ಪ್ರಶ್ನೆ~ಯಲ್ಲಿ ಕಂಡುಬಂದ ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ.

~ಜೋತಿಷ್ಯ ಶಾಸ್ತ್ರ ಆಧಾರದಲ್ಲಿ ಕಂಡುಬಂದ ಯೋಗ, ಗ್ರಹಫಲ ಹಿನ್ನೆಲೆಯಲ್ಲಿ ಗ್ರಂಥಗಳನ್ನು ಪ್ರಮಾಣೀಕರಿಸಿ ~ದೇವ ಪ್ರಶ್ನೆ~ ನಡೆಸಲಾಗಿದೆ. ಸದ್ಯ ಅನಂತ ಪದ್ಮನಾಭ ಸ್ವಾಮಿ ~ಸಾನಿಧ್ಯ~ ಹೇಗಿದೆ? ಎಂಬ ಕುರಿತು ಎಂಟಕ್ಕೂ ಹೆಚ್ಚು ದೈವಜ್ಞರು, 110ಕ್ಕೂ ಹೆಚ್ಚು ಜೋತಿಷಿಗಳು, ನೂರಾರು ಪಂಡಿತರ ಸಮ್ಮುಖದಲ್ಲಿ ಶಾಸ್ತ್ರ ಆಧಾರಿತ ಸಾಕ್ಷ್ಯ, ಚರ್ಚೆ, ಚಿಂತನೆ ನಡೆದು ~ದೇವಪ್ರಶ್ನೆ~ ತೀರ್ಪು ಮುಂದಿಡಲಾಗಿದೆ. ಜ್ಯೋತಿಷ ಗ್ರಂಥಗಳ ಆಧಾರದಲ್ಲಿ ಈ ಬಗ್ಗೆ ಪ್ರಶ್ನಿಸುವವರೆಲ್ಲರಿಗೂ ಉತ್ತರಿಸಲು ಬದ್ಧ. ದೇವರೇ ಇಲ್ಲ ಎಂದು ವಾದಿಸುವವರ ವಾದ ಇಲ್ಲಿ ಅಪ್ರಸ್ತುತ~ ಎಂದು ಭಟ್ ಸವಾಲು ಹಾಕಿದ್ದಾರೆ.

~ಅನಂತಪದ್ಮನಾಭ ಸ್ವಾಮಿ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳಿಂದ ಭಕ್ತರಲ್ಲಿ ಭೀತಿ ಉಂಟಾಗಿದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ರಾಜಕುಟುಂಬ ದೇವ ಪ್ರಶ್ನೆಗೆ ಮುಂದಾಗಿತ್ತು. ಹೀಗಾಗಿ ಅಲ್ಲಿ ದೇವ ಸಾನಿಧ್ಯದ ಬಗ್ಗೆ ಚಿಂತನೆ ನಡೆಸಲಾಗಿದೆ. ಯಾವುದೇ ಕ್ಷೇತ್ರದಲ್ಲಿ ದೇವ ಸಾನಿಧ್ಯ ಅಸ್ತಿತ್ವದಲ್ಲಿರುವುದು ಐದಂಶಗಳಲ್ಲಿ. ಕ್ಷೇತ್ರದ ತಂತ್ರಿವರ್ಯರ ಉಪಾಸನೆ, ಆಚಾರ ಅನುಷ್ಠಾನ ಪದ್ಧತಿ, ನಿಯಮ, ಉತ್ಸವ, ಅನ್ನದಾನ- ಇಂತಹ ಧರ್ಮ-ಕರ್ಮಗಳ ವ್ಯವಸ್ಥೆಯಲ್ಲಿ. ಈ ಪೈಕಿ ಯಾವುದಾದರೂ ಒಂದರಲ್ಲಿ ನ್ಯೂನತೆ ಉಂಟಾದರೂ ಇಂತಹ ಸ್ಥಿತಿ ಸೃಷ್ಟಿಯಾಗುತ್ತದೆ. ಇಲ್ಲಿ ಈ ಹಿಂದೆಯೇ ~ದೇವ ಸಾನಿಧ್ಯ~ ತಿಳಿಯುವ ಯತ್ನ ಆಗಬೇಕಿತ್ತು. ಇದೀಗ ತುಂಬಾ ವಿಳಂಬವಾಗಿದೆ~ ಎಂದೂ ಅವರು ದೇವ ಪ್ರಶ್ನೆ ವೇಳೆ ಕಂಡುಬಂದ ~ಲಕ್ಷಣ~ ಮುಂದಿಟ್ಟು ವಿವರಿಸಿದರು.

~ಇನ್ನಷ್ಟು ಸಂಪತ್ತು ಇರಬಹುದೆಂದು ಶಂಕಿಸಲಾದ ~ಬಿ~ ನೆಲಮಾಳಿಗೆಯಲ್ಲಿ ಬೆಲೆ ಕಟ್ಟಲು ಅಸಾಧ್ಯವಾದ ಅನರ್ಘ್ಯ ವಸ್ತುಗಳೇ ಇವೆ. ಅದಿರುವುದು ಗರ್ಭಗುಡಿಯ ನೇರ ಕೆಳಗೆ; ಅರ್ಥಾತ್ ಅನಂತ ಪದ್ಮನಾಭನ ಪದತಲದಲ್ಲಿ. ಅಷ್ಟೇ ಅಲ್ಲ, ಪ್ರಾಚೀನ ಕಾಲದಲ್ಲಿದ್ದ ಪುಟ್ಟ ದೇವಸ್ಥಾನ ಕಾಲನ ಹೊಡೆತಕ್ಕೆ ಸಿಕ್ಕಿ ವಿನಾಶಗೊಂಡಿದ್ದು, ವಿಗ್ರಹ ಮತ್ತು ಮೌಲ್ಯವನ್ನೇ ನಿರ್ಧರಿಸಲು ಸಾಧ್ಯವಾಗದ ~ಶ್ರೀ ಚಕ್ರ~ವೂ ಬಿ ಕೋಣೆಯಲ್ಲಿವೆ. ಸ್ವಂತ ಸ್ವತ್ತು ಇರುವ ನೆಲಮಾಳಿಗೆ ರಕ್ಷಿಸುವ ಉದ್ದೇಶದಿಂದ ಸಾಕ್ಷಾತ್ ನರಸಿಂಹನನ್ನೇ ಅನಂತಪದ್ಮನಾಭ ಸ್ವಾಮಿ ನೇಮಿಸಿದ್ದಾನೆ.
 
ಹೀಗಾಗಿ ಆ ನೆಲಮಾಳಿಗೆಯನ್ನು ಪರೀಕ್ಷಾ ದೃಷ್ಟಿಯಿಂದ ಸ್ಪರ್ಶಿಸಲೆತ್ನಿಸಿದರೆ ಸ್ವಾಮಿ ಕೋಪಗೊಳ್ಳುವುದು ಖಚಿತ. ಅದರ ಪರಿಣಾಮ ರಾಜ ಕುಟುಂಬಕ್ಕಷ್ಟೇ ಅಲ್ಲ, ಪ್ರಾಕೃತಿಕ ಕ್ಷೋಭೆ, ಪ್ರಾದೇಶಿಕ ವಿಪತ್ತಿಗೆ ಕಾರಣವಾಗಬಹುದು. ಸರ್ಕಾರಕ್ಕೂ ಅಭದ್ರತೆ ಸೃಷ್ಟಿಯಾಗಬಹುದು. ಮಹಾರೋಗ ಬರಬಹುದು. ಹಾಗೆಂದು ಈ ದೋಷಗಳು ನೆಲಮಾಳಿಗೆ ತೆರೆದ ತಕ್ಷಣವೇ ಸಂಭವಿಸುತ್ತವೆ ಎಂದಲ್ಲ, ಅದು ನಿರಂತರ ಪ್ರಕ್ರಿಯೆ ಆಗಬಹುದು~ ಎನ್ನುವುದು ~ದೇವಪ್ರಶ್ನೆ~ಯ ತೀರ್ಪು ಎನ್ನುತ್ತಾರೆ ಭಟ್.

~ಎಲ್ಲ ದೋಷಗಳಿಗೆ ಪರಿಹಾರವನ್ನೂ ಸೂಚಿಸಲಾಗಿದೆ. ಆ ನಿಟ್ಟಿನಲ್ಲಿ ರಾಜಕುಟುಂಬ ಮತ್ತು ಸಂಬಂಧಿಸಿದವರು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ. 2012ರಲ್ಲಿ ಶ್ರೀಸನ್ನಿಧಿಯಲ್ಲಿ 56 ದಿನಗಳ ಮೂರ್ಜ ಜಪ, ಭದ್ರ ದೀಪ, ಲಕ್ಷ ದೀಪೋತ್ಸವ ಮತ್ತಿತರ ಪೂಜಾ ವಿಧಿ-ವಿಧಾನ ನಡೆಸಲು ದೇವ ಪ್ರಶ್ನೆ ಆದೇಶ~ ಎಂದರು. ಅನಂತ ಸಂಪತ್ತಿನ ಶೋಧಕ್ಕೆ ಮುಂದಾಗಿರುವ ಸುಪ್ರೀಂ ಕೋರ್ಟ್, ದೇವ ಪ್ರಶ್ನೆ ~ತೀರ್ಪು~ ಒಪ್ಪಿಕೊಳ್ಳುವುದೇ?, ಒಪ್ಪಿದರೆ ನ್ಯಾಯಾಂಗಕ್ಕಿಂತ ~ದೇವಪ್ರಶ್ನೆ~ಯೇ ಮಿಗಿಲು ಎಂದಾಗುತ್ತದೆ. ಒಪ್ಪಿಕೊಳ್ಳದಿದ್ದರೆ ದೇವಕೋಪಕ್ಕೆ ತುತ್ತಾಗಿ ಅನಾಹುತ ಸಂಭವಿಸಬಹುದೇ ಎಂಬ ಆತಂಕ ಇದೆ. ಇದರಿಂದ ದೇವವಿಶ್ವಾಸಿಗಳಿಗೆ, ಜಿಜ್ಞಾಸುಗಳಿಗೆ ~ಧರ್ಮ ಸಂಕಟ~ ತಂದಿಟ್ಟಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT