ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಮುಂದೆ ಚುನಾವಣೆ ಪರ್ವ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗ ಶೀಘ್ರದಲ್ಲೇ ಚುನಾವಣೆಯ ದಿನಾಂಕ ಪ್ರಕಟಿಸಲಿದೆ. ಅಲ್ಲದೆ ಮೇ ಕೊನೆಯಲ್ಲಿ ಅಥವಾ ಜೂನ್‌ನಲ್ಲಿ ವಿಧಾನ ಪರಿಷತ್ತಿನ 17 ಸ್ಥಾನಗಳಿಗೆ ಚುನಾವಣೆ  ನಡೆಯಲಿದೆ.

ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಅದಕ್ಕೂ ಮೊದಲೇ ರಾಜ್ಯಸಭೆ ಮತ್ತು ವಿಧಾನ ಪರಿಷತ್‌ಗೆ ಚುನಾವಣೆ ನಡೆಯಲಿದ್ದು, ಮಾರ್ಚ್‌ನಿಂದಲೇ ರಾಜ್ಯದಲ್ಲಿ ಚುನಾವಣಾ ಪರ್ವ ಆರಂಭವಾಗಲಿದೆ.

ರಾಜ್ಯಸಭೆಯ ಉಪಸಭಾಪತಿ ಕೆ.ರೆಹಮಾನ್   ಖಾನ್, ಕೆ.ಬಿ.ಶಾಣಪ್ಪ, ರಾಜೀವ್ ಚಂದ್ರಶೇಖರ್ ಮತ್ತು ಚಿತ್ರನಟಿ ಹೇಮಾಮಾಲಿನಿ ಅವರ ಅವಧಿ ಮಾರ್ಚ್ 27ರಂದು ಮುಗಿಯಲಿದೆ. ಈ ಸ್ಥಾನಗಳ ಜೊತೆಗೆ ಬೇರೆ ರಾಜ್ಯಗಳಲ್ಲೂ ತೆರವಾಗುವ ಸುಮಾರು 60 ಸ್ಥಾನಗಳಿಗೆ ಒಟ್ಟಿಗೆ ಚುನಾವಣೆ ನಡೆಯಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ವಿಧಾನಸಭೆಯಲ್ಲಿ ಈಗಿರುವ ಪಕ್ಷಗಳ ಬಲಾಬಲವನ್ನು ಗಮನಿಸಿದರೆ ಬಿಜೆಪಿ ಎರಡು, ಕಾಂಗ್ರೆಸ್ ಒಂದು ಸ್ಥಾನವನ್ನು ಸುಲಭವಾಗಿ ಪಡೆಯಲಿವೆ. ನಾಲ್ಕನೇ ಸ್ಥಾನಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ನಡೆಸಬೇಕಾಗುತ್ತದೆ. 2008ರಲ್ಲಿ ಆದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆಯಾದರೆ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗಳಿಸಬಹುದು.

ಒಟ್ಟು 224 ಸದಸ್ಯ ಬಲದ ವಿಧಾನ ಸಭೆಯಲ್ಲಿ ಬಿಜೆಪಿ 120, ಕಾಂಗ್ರೆಸ್ 71, ಜೆಡಿಎಸ್ 26 ಸದಸ್ಯರನ್ನು ಹೊಂದಿದ್ದರೆ, ಏಳು ಮಂದಿ ಪಕ್ಷೇತರರು ಇದ್ದಾರೆ. ಒಬ್ಬರು ನಾಮಕರಣ ಸದಸ್ಯರಿದ್ದು, ಅವರಿಗೆ ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಲು ಅವಕಾಶ ಇಲ್ಲ. ಆದರೆ ವಿಧಾನಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಗೆಲ್ಲಬೇಕಾದರೆ ಒಬ್ಬ ಅಭ್ಯರ್ಥಿ ಕನಿಷ್ಠ 45 ಮತಗಳನ್ನು ಪಡೆಯಬೇಕಾಗುತ್ತದೆ.

ಬಿಜೆಪಿಯ ಶಾಣಪ್ಪ, ಹೇಮಾಮಾಲಿನಿ, ಕಾಂಗ್ರೆಸ್‌ನ ರೆಹಮಾನ್ ಖಾನ್ ಅವರಿಂದ ತೆರವಾಗುವ ಸ್ಥಾನಗಳು ಮತ್ತೆ ಆ ಪಕ್ಷಗಳ ಪಾಲಾಗಲಿವೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಬಿಜೆಪಿ, ಜೆಡಿಎಸ್ ಬೆಂಬಲದಿಂದ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ ಸ್ಥಾನ ಈ ಬಾರಿ ಯಾರ ಪಾಲಾಗಲಿದೆ ಎಂಬ ಕುತೂಹಲವಿದೆ. ಹಿಂದಿನ ಹಾಗೆ ಪಕ್ಷೇತರ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿಯುವ ಸಾಧ್ಯತೆಗಳಿವೆ.

ವಿಧಾನ ಪರಿಷತ್: ನಾಮಕರಣ ಸದಸ್ಯರಾದ ಬಿಜೆಪಿಯ ಎನ್.ತಿಪ್ಪಣ್ಣ, ಶ್ರೀನಾಥ್, ಜೆಡಿಎಸ್‌ನ ವೈ.ಎಸ್.ವಿ.ದತ್ತ ಅವರ ಅವಧಿ ಮೇ 20ಕ್ಕೆ ಮುಕ್ತಾಯವಾಗಲಿದೆ. ಇವರಿಂದ ತೆರವಾಗುವ ಮೂರು ಸ್ಥಾನಗಳಿಗೆ ಸರ್ಕಾರ ನಾಮನಿರ್ದೇಶನ ಮಾಡಲಿದೆ. ನಾಮಕರಣ ಸದಸ್ಯರಲ್ಲದೆ ಇನ್ನೂ 17 ಮಂದಿ ಜೂನ್‌ನಲ್ಲಿ ನಿವೃತ್ತಿ ಹೊಂದಲಿದ್ದಾರೆ.

ಸಭಾಪತಿ ಡಿ.ಎಚ್.ಶಂಕರಮೂರ್ತಿ, ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, ಮನೋಹರ ಮಸ್ಕಿ, ಗಣೇಶ್ ಕಾರ್ಣಿಕ್, ಮರಿತಿಬ್ಬೇಗೌಡ, ವೈ.ಎ.ನಾರಾಯಣಸ್ವಾಮಿ ಅವಧಿ ಜೂನ್ 21ಕ್ಕೆ ಮುಕ್ತಾಯವಾಗಲಿದ್ದು, ಈ ಸ್ಥಾನಗಳನ್ನು ತುಂಬಲು ಪದವೀಧರ ಮತ್ತು ಶಿಕ್ಷಕರ ತಲಾ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಉಪಸಭಾಪತಿ ವಿಮಲಾಗೌಡ, ಜಿ.ಜನಾರ್ದನ ರೆಡ್ಡಿ, ತೋಂಟದಾರ್ಯ, ಡಿ.ಎಸ್.ವೀರಯ್ಯ, ಎಚ್.ಸಿ.ನೀರಾವರಿ, ಅಬ್ದುಲ್ ಅಜೀಂ, ಎಸ್.ಚಿಕ್ಕಮಾದು, ವಿ.ಆರ್.ಸುದರ್ಶನ್, ಕೆ.ಸಿ.ಕೊಂಡಯ್ಯ ಹಾಗೂ ಕಾಜಿ ಅರ್ಷದ ಅಲಿ ಅವರ ಅವಧಿ ಜೂನ್ 17ರಂದು ಮುಕ್ತಾಯವಾಗಲಿದೆ.

ನಿವೃತ್ತಿಯಾಗುವ 11 ಸದಸ್ಯರ ಪೈಕಿ ಬಿಜೆಪಿ, ಕಾಂಗ್ರೆಸ್‌ನ ತಲಾ ನಾಲ್ಕು ಹಾಗೂ ಮೂವರು ಜೆಡಿಎಸ್‌ಗೆ ಸೇರಿದವರಾಗಿದ್ದಾರೆ. ವಿಧಾನ ಸಭೆಯಿಂದ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲ್ಲಬೇಕಾದರೆ ಕನಿಷ್ಠ 20 ಮತಗಳನ್ನು ಪಡೆಯಬೇಕಾಗುತ್ತದೆ. ಈ ಚುನಾವಣೆಯಲ್ಲಿ ಬಿಜೆಪಿ ಎರಡು ಸ್ಥಾನಗಳನ್ನು ಹೆಚ್ಚುವರಿಯಾಗಿ ಪಡೆಯಲಿದ್ದರೆ, ಜೆಡಿಎಸ್ ಎರಡು ಸ್ಥಾನಗಳನ್ನು ಕಳೆದುಕೊಳ್ಳಲಿದೆ.

ಇನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ಮೂರು ಸ್ಥಾನಗಳನ್ನು ಸುಲಭವಾಗಿ ಪಡೆಯಲಿದ್ದು, ಪಕ್ಷೇತರರ ನೆರವು ಪಡೆದರೆ ಪ್ರಯಾಸದಿಂದ ನಾಲ್ಕನೇ ಸ್ಥಾನವನ್ನು ಉಳಿಸಿಕೊಳ್ಳಬಹುದಾಗಿದೆ. ಮೋಟಮ್ಮ, ಸುದರ್ಶನ್, ಕೊಂಡಯ್ಯ ಅವರು ಪುನರಾಯ್ಕೆಯಾಗುವ ಸಾಧ್ಯತೆಗಳಿವೆ. ಪದವೀಧರ/ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಶಂಕರಮೂರ್ತಿ, ರಾಮಚಂದ್ರಗೌಡ, ಗಣೇಶ್ ಕಾರ್ಣಿಕ್ ಅವರಿಗೆ ಬಿಜೆಪಿ ಈಗಾಗಲೇ ಟಿಕೆಟ್ ನೀಡಿದೆ. ಪಕ್ಷೇತರ ಸದಸ್ಯರಾದ ನಾರಾಯಣಸ್ವಾಮಿ ಈ ಬಾರಿ ಬಿಜೆಪಿಯಿಂದ ಕಣಕ್ಕೆ ಇಳಿಯಲಿದ್ದಾರೆ.

ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ರಾಜೀನಾಮೆಯಿಂದ ತೆರವಾಗಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯೂ ಶೀಘ್ರದಲ್ಲಿಯೇ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT