ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕದಲ್ಲಿ ಮಳೆ: ಸಂಚಾರಕ್ಕೆ ದೋಣಿ ಬಳಕೆ

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ವಿವಿಧೆಡೆ ಶನಿವಾರವೂ ಮಳೆ ಮುಂದುವರಿದಿದೆ. ಬನಹಟ್ಟಿ ಸಮೀಪದ ಕೃಷ್ಣಾ ನದಿಯ ಬ್ಯಾರೇಜ್ ಮೇಲೆ ನೀರು ಹರಿಯುತ್ತಿದ್ದು ಅಥಣಿ ತಾಲ್ಲೂಕಿನ ಹಲವಾರು ಗ್ರಾಮಗಳ ಜನ ಬನಹಟ್ಟಿ ಮತ್ತು ಜಮಖಂಡಿಗೆ ಬರಲು ದೋಣಿಯನ್ನು ಅವಲಂಬಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಶಿಂಗಳಾಪುರ-ಗೋಕಾಕ ನಡುವಿನ ಸಂಪರ್ಕ ಕಲ್ಪಿಸುವ ಸೇತುವೆ ಸಹ ನೀರಿನಲ್ಲಿ ಮುಳುಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಮತ್ತು ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಶನಿವಾರ ಬಿರುಸಿನ ಮಳೆಯಾಗಿದೆ. ನಿರಂತರ ವರ್ಷಧಾರೆಯಿಂದ ಶಿರಸಿ ತಾಲ್ಲೂಕಿನ ವಾನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಳ್ಳಿಯಲ್ಲಿ ಭೂಮಿ ಕುಸಿದಿದೆ. ಕುಮಟಾ ತಾಲ್ಲೂಕಿನ ಅಳ್ವೆಕೋಡಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಭಾಭವನದ ಮೇಲ್ಛಾವಣಿ ಶುಕ್ರವಾರ ಮಧ್ಯರಾತ್ರಿ ಕುಸಿದಿದ್ದು ್ಙ1.50 ಲಕ್ಷದಷ್ಟು ಹಾನಿಯಾಗಿದೆ.

ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ನಿರಂತವಾಗಿ ಸುರಿಯತ್ತಿದ್ದು  ಕಾಳಿ, ಶರಾವತಿ, ಅಘನಾಶಿನಿ, ಗಂಗಾವಳಿ ನದಿ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಕದ್ರಾ, ಕೊಡಸಳ್ಳಿ, ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ ಮತ್ತು ಗೇರುಸೊಪ್ಪ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆ ಆಗಿದ್ದರಿಂದ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆ ಕಂಡುಬಂದಿದೆ.

ಶನಿವಾರ ಬೆಳಿಗ್ಗೆ 8.30ಕ್ಕೆ ಅಂತ್ಯಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಶಿರಸಿಯಲ್ಲಿ 120, ಸಿದ್ದಾಪುರದಲ್ಲಿ 91, ಕಾರವಾರ 38, ಅಂಕೋಲಾ 26 ಮತ್ತು ಕುಮಟಾದಲ್ಲಿ 27 ಮಿಲಿ ಮೀಟರ್ ಮಳೆಯಾಗಿದೆ.

ಬನಹಟ್ಟಿ ವರದಿ: ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಮತ್ತು ಹಿಪ್ಪರಗಿ ಅಣೆಕಟ್ಟೆ ಗೇಟುಗಳನ್ನು ಬಂದ್ ಮಾಡಿದ್ದರಿಂದ ಬನಹಟ್ಟಿ ಬಳಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ನದಿಯ ಒಡಲು ತುಂಬಿರುವುದರಿಂದ ಹೆಚ್ಚಾದ ಹಿನ್ನೀರು ನದಿಯ ತೀರ ಪ್ರದೇಶದ ಹೊಲಗಳಿಗೆ ನುಗ್ಗಿದೆ. ಸದ್ಯ ಮೈತುಂಬಿಕೊಂಡು ಹರಿಯುತ್ತಿರುವ ನದಿ ಮತ್ತೆ ಈ ಭಾಗದ ಜನರಲ್ಲಿ ಹೊಸ ಕಳೆ ತುಂಬಿದ್ದಾಳೆ.

ಗೋಕಾಕ ವರದಿ: ಘಟಪ್ರಭೆ ಉಪನದಿಗಳಾದ ಹಿರಣ್ಯಕೇಶಿ ಮತ್ತು ಮಾರ್ಕಂಡೇಯ ನದಿಗಳ ಜಲಾನಯನ ಪ್ರದೇಶದಲ್ಲಿ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನಗರ ಹೊರವಲಯದಲ್ಲಿ ಘಟಪ್ರಭೆಗೆ ಅಡ್ಡಲಾಗಿ ನಿರ್ಮಿಸಿರುವ ಶಿಂಗಳಾಪುರ-ಗೋಕಾಕ ನಡುವಿನ ಸಂಪರ್ಕ ಕಲ್ಪಿಸುವ ಸೇತುವೆ ಶನಿವಾರ ಮುಳುಗಿದೆ.

ವಾಹನಗಳು ನಿಧಾನವಾಗಿ ಸೇತುವೆ  ದಾಟುತ್ತಿದ್ದರೆ, ಪಾದಚಾರಿಗಳು  ಗುಂಪು-ಗುಂಪಾಗಿ ಒಬ್ಬರ ಕೈಯನ್ನು  ಮತ್ತೊಬ್ಬರು ಹಿಡಿದು ಸಾಗುತ್ತಿದ್ದ ದೃಶ್ಯ ಕಂಡು ಬಂತು. ಮಹಾರಾಷ್ಟ್ರದಲ್ಲೂ ಮಳೆ ಸುರಿಯುತ್ತಿದ್ದು ಹಿರಣ್ಯಕೇಶಿ ನದಿಯಿಂದ ಹೆಚ್ಚು ನೀರು ಘಟಪ್ರೃಭೆಗೆ ಹರಿದು ಬರುವ ಸಾಧ್ಯತೆಗಳಿವೆ.

ಮಡಿಕೇರಿ ವರದಿ: ಕೊಡಗು ಜಿಲ್ಲೆಯಲ್ಲಿ ಶನಿವಾರ ಉತ್ತಮ ಮಳೆ ಸುರಿದಿದೆ. ಮಡಿಕೇರಿ, ನಾಪೋಕ್ಲು, ಭಾಗಮಂಡಲ, ಹುದಿಕೇರಿ, ಶ್ರೀಮಂಗಲ, ಶನಿವಾರಸಂತೆ, ಶಾಂತಳ್ಳಿ ಸೇರಿದಂತೆ ಜಿಲ್ಲೆಯ ಇತರೆಡೆ ಧಾರಾಕಾರ ಮಳೆಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಸರಾಸರಿ 14.45 ಮಿ.ಮೀ. ಮಳೆ ದಾಖಲಾಗಿದೆ. ಮೂರು ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿರುವ ಕಾರಣ ಜಿಲ್ಲೆಯಲ್ಲಿ ಎಲ್ಲಾ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ತುಂಬುತ್ತಿವೆ.

ಮಂಗಳೂರು ವರದಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಸಣ್ಣದಾಗಿ ಮಳೆ ಆಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಾಧಾರಣವಾಗಿ ಮಳೆ ಆಗುತ್ತಿದೆ.

ಶಿವಮೊಗ್ಗ ವರದಿ:
ಜಿಲ್ಲೆಯಲ್ಲಿ ಉತ್ತಮವಾಗಿ ಮಳೆಯಾಗಿದ್ದು ಲಿಂಗಮನಕ್ಕಿ ಜಲಾಶಯದ ನೀರಿನ ಮಟ್ಟ ಒಂದು ಅಡಿ ಹೆಚ್ಚಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT