ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಯನ್ನೇ ದೋಚಿ ಪರಾರಿ!

Last Updated 20 ಜುಲೈ 2013, 20:01 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಹೈಗ್ರೌಂಡ್ಸ್ ಠಾಣೆಯ ಎಸ್‌ಐ ಗಿರೀಶ್ ಹಾಗೂ ಅವರ ಸ್ನೇಹಿತ ಹರಿದಾಸುಲು ಅವರನ್ನು ರೀನಿಯಸ್ ಸ್ಟ್ರೀಟ್‌ನಲ್ಲಿ ಶುಕ್ರವಾರ ರಾತ್ರಿ ಅಡ್ಡಗಟ್ಟಿದ ದುಷ್ಕರ್ಮಿಗಳು ಗುಂಡು ಹಾರಿಸಿ ಒಂಬತ್ತು ಸಾವಿರ ನಗದು ಹಾಗೂ ಬೆಲೆಬಾಳುವ ಮೂರು ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ಹರಿದಾಸುಲು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಿರೀಶ್ ಇತ್ತೀಚೆಗೆ ಕಚೇರಿ ಕೆಲಸದ (ಒಒಡಿ) ಮೇಲೆ ಕಬ್ಬನ್ ಉದ್ಯಾನದ ಕೇಂದ್ರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಮಫ್ತಿಯಲ್ಲಿದ್ದ ಅವರು ರಾತ್ರಿ 8ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಹೊರಟು ಬ್ಯಾಂಕ್ ಉದ್ಯೋಗಿಯಾಗಿರುವ ಸ್ನೇಹಿತ ಹರಿದಾಸುಲು ಅವರ ಕಾರಿನಲ್ಲಿ ರೆಸಿಡೆನ್ಸಿ ರಸ್ತೆಯಲ್ಲಿರುವ ಹೋಟೆಲ್ ಒಂದಕ್ಕೆ ಊಟಕ್ಕೆ ಹೋಗಿದ್ದಾರೆ. ಅಲ್ಲಿಂದ ಕಾರಿನಲ್ಲಿಯೇ ಮನೆಗೆ ಹೋಗುವಾಗ ಈ ಘಟನೆ ನಡೆದಿದೆ.

ರಾತ್ರಿ ಒಂದು ಗಂಟೆ ಸುಮಾರಿಗೆ ರಿಚ್ಮಂಡ್ ಉದ್ಯಾನ ಸಮೀಪ ರೀನಿಯಸ್ ಸ್ಟ್ರೀಟ್‌ನಲ್ಲಿ ಹೋಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ದುಷ್ಕರ್ಮಿಯೊಬ್ಬ ಕಾರನ್ನು ಅಡ್ಡಗಟ್ಟಿದ್ದಾನೆ. ಕಾರು ಚಾಲನೆ ಮಾಡುತ್ತಿದ್ದ ಗಿರೀಶ್ ವಾಹನ ನಿಲ್ಲಿಸಿದ್ದಾರೆ. ಕೆಲಕ್ಷಣಗಳಲ್ಲೇ ಮತ್ತೆರಡು ಬೈಕ್‌ಗಳಲ್ಲಿ ಅಲ್ಲಿಗೆ ಬಂದ ಇತರೆ ಮೂವರು ದುಷ್ಕರ್ಮಿಗಳು ಗಿರೀಶ್ ಜತೆ ಜಗಳ ತೆಗೆದು ಪಿಸ್ತೂಲ್ ಹಾಗೂ ಚಾಕು ತೋರಿಸಿ ಹಣ ಹಾಗೂ ಮೊಬೈಲ್‌ಗಳನ್ನು ನೀಡುವಂತೆ ಬೆದರಿಸಿದ್ದಾರೆ.

ಗಿರೀಶ್ ಹಾಗೂ ಹರಿದಾಸುಲು ಅವರು ಕಾರಿನಿಂದ ಕೆಳಗೆ ಇಳಿಯದೇ ಇದ್ದಾಗ ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ನಂತರ ಗಿರೀಶ್ ಬಳಿಯಿದ್ದ ರೂ.9 ಸಾವಿರ ನಗದು ಹಾಗೂ 2 ಮೊಬೈಲ್‌ಕಸಿದುಕೊಂಡಿದ್ದಾರೆ. ಹರಿದಾಸುಲು ಮೊಬೈಲ್ ಕೊಡಲು ನಿರಾಕರಿಸಿದಾಗ ಅವರ ಎಡ ತೊಡೆಗೆ ಚಾಕುವಿಂದ ಇರಿದು ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

`ದುಷ್ಕರ್ಮಿಗಳೆಲ್ಲರೂ 20 ವರ್ಷ ಆಸುಪಾಸಿನವರು. ಅವರು ಪಿಸ್ತೂಲ್ ತೋರಿಸಿದ್ದರಿಂದ ಹೆದರಿ ಕಾರ್‌ನಿಂದ ಕೆಳಗಿಳಿಯಲಿಲ್ಲ. ಅವರು ಅಲ್ಲಿಂದ ಹೋದ ನಂತರ ಗಾಳಿಯಲ್ಲಿ ಹಾರಿಸಿದ್ದು ನಕಲಿ ಗುಂಡುಗಳು ಎಂದು ಗೊತ್ತಾಯಿತು' ಎಂದು ಗಿರೀಶ್ ಹೇಳಿಕೆ ಕೊಟ್ಟಿದ್ದಾರೆ. ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  
ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ
`ರಿಚ್ಮಂಡ್ ಉದ್ಯಾನ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿದ್ದು, ಪರಿಶೀಲನೆ ನಡೆಸಲಾಗಿದೆ. ದೃಶ್ಯಗಳಲ್ಲಿ ದುಷ್ಕರ್ಮಿಗಳ ಚಹರೆ ಸರಿಯಾಗಿ ಗುರುತಿಸಲಾಗುತ್ತಿಲ್ಲ. ಆದರೂ ಗಿರೀಶ್ ನೀಡಿರುವ ಮಾಹಿತಿಯಿಂದ ದುಷ್ಕರ್ಮಿಗಳ ಪತ್ತೆ ಕಾರ್ಯ ಆರಂಭಿಸಲಾಗಿದೆ. ಘಟನೆ ನಡೆದಾಗ ಗಿರೀಶ್ ಮಫ್ತಿಯಲ್ಲಿದ್ದರು. ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿದ್ದರಿಂದ ಹೆದರಿದ್ದ ಗಿರೀಶ್, ಮೊದಲಿಗೆ ಗಾಯಗೊಂಡಿದ್ದ ಹರಿದಾಸುಲು ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಹೀಗಾಗಿ ಬೈಕ್‌ಗಳ ನೋಂದಣಿ ಸಂಖ್ಯೆ ದಾಖಲಿಸಿಕೊಳ್ಳಲು ಅವರಿಂದ ಸಾಧ್ಯವಾಗಿಲ್ಲ. ಪ್ರಕರಣದ ತನಿಖೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿದೆ' ಎಂದು ಕೇಂದ್ರ ವಿಭಾಗದ ಡಿಸಿಪಿ ರವಿಕಾಂತೇಗೌಡ ತಿಳಿಸಿದರು.

ಇಲಾಖೆಗೆ ಕಸಿವಿಸಿ
`ಈ ಘಟನೆ ಪೊಲೀಸ್ ಇಲಾಖೆಗೆ ಕಸಿವಿಸಿ ಉಂಟುಮಾಡುವಂತಿದೆ. ತರಬೇತಿ ಪಡೆದು ಸೇವೆಯಲ್ಲಿರುವ ಎಸ್‌ಐ ನಾಲ್ವರು ಆರೋಪಿಗಳಿಗೆ ಹೆದರಿದೆ ಎಂದು ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಅಲ್ಲದೇ ಆತ ದುಷ್ಕರ್ಮಿಗಳು ಪರಾರಿಯಾದ ಬೈಕ್‌ಗಳ ನೋಂದಣಿ ಸಂಖ್ಯೆ ಗುರುತಿಸಿಕೊಂಡಿಲ್ಲ. ದುಷ್ಕರ್ಮಿಗಳು ಗಾಳಿಯಲ್ಲಿ ಹಾರಿಸಿದ ಗುಂಡುಗಳು ನಕಲಿ ಎಂಬ ಬಗ್ಗೆಯೂ ಕೂಡಲೇ ಅರಿವಾಗಿಲ್ಲ. ಘಟನೆಯಿಂದ ಪೊಲೀಸ್ ವ್ಯವಸ್ಥೆ ಮೇಲೆ ಜನರಿಗೆ ವಿಶ್ವಾಸ ಕಡಿಮೆಯಾಗುತ್ತದೆ'
-ಕಮಲ್ ಪಂತ್ ಹೆಚ್ಚುವರಿ ಪೊಲೀಸ್ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT