ಭಾರತೀಸುತ ವೇದಿಕೆ (ಮಡಿಕೇರಿ): ‘ಇವತ್ತು ತೆಲಂಗಾಣಕ್ಕೆ ಬಂದಿರುವ ಪರಿಸ್ಥಿತಿ ನಮಗೆ ಒಂದು ಪಾಠವಾಗಬೇಕು. ನಾಡಿನ ಯಾವುದೇ ಪ್ರದೇ ಶದ ಜನ, ನಮ್ಮನ್ನು ಯಾರೂ ಕೇಳುತ್ತಿಲ್ಲ, ಸಿಗಬೇಕಾದ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಕೊರಗುವಂತಹ ಸ್ಥಿತಿ ಬಾರದ ಹಾಗೆ ನೋಡಿಕೊಳ್ಳಬೇಕಿದೆ’– ಇಂಥದೊಂದು ಎಚ್ಚರಿಕೆಯನ್ನು ನಾ.ಡಿಸೋಜ ಸರ್ಕಾರಕ್ಕೆ ನೀಡಿದರು.

ಎಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ತಮ್ಮ ಅಧ್ಯಕ್ಷ ಭಾಷಣದಲ್ಲಿ ಮಂಗಳವಾರ ವಿವರವಾಗಿ ಹೇಳಬಯಸಿದ್ದ ಈ ವಿಷಯವನ್ನು ಅವರು ಚುಟುಕಾಗಿಸಿ ಹೇಳಿದರು. ಆಲೂರು ವೆಂಕಟರಾಯರು, ಕಡಪ ರಾಘ ವೇಂದ್ರ, ಮುದವೀಡು ಕೃಷ್ಣರಾಯರು ಯಾವುದೇ ಅಧಿಕಾರದ ಆಸೆ ಇಲ್ಲದೆ, ಅನ್ಯಾಯ ಮಾಡದೆ, ಮೊಮ್ಮಕ್ಕಳಿಗೆ ಆಸ್ತಿ ಮಾಡದೆ ಕಟ್ಟಿದ ನಾಡು ಇದು. ಇದನ್ನು ನಾವು ಹಾಗೆಯೇ ಇರಿಸಿಕೊಳ್ಳಬೇಕು. ಹೈದರಾ ಬಾದ್ ಕರ್ನಾಟಕ, ಮದ್ರಾಸ್ ಕರ್ನಾಟಕ, ಮುಂಬೈ ಕರ್ನಾಟಕ ಎಂದೆಲ್ಲ ಕರೆಯುವ ಪರಿಪಾಠ ಈಗಲೂ ಮುಂದುವರಿದಿರುವುದು ಸೂಕ್ತವಲ್ಲ ಎಂಬುದು ಅವರ ಕಿವಿಮಾತು.

ಇದೆಂಥಾ ಭಾಗ್ಯ?: ‘ನಮ್ಮ ದೇಶದಲ್ಲಿ ಹುಟ್ಟುವ ಮಕ್ಕಳೆಲ್ಲ ಕೈ ಮುಷ್ಟಿ ಯನ್ನು ಬಿಗಿಯಾಗಿಟ್ಟುಕೊಂಡೇ ಇರುತ್ತಿದ್ದವು. ಈಗ ಕೈಚಾಚಿಕೊಂಡೇ ಹುಟ್ಟುತ್ತಿವೆ. ತಾ ತಾ ತಾ ಎಂಬುದು ನಮ್ಮ ಜನರ ಮನೋಧರ್ಮವಾಗುತ್ತಿದೆ. ಇದಕ್ಕೆ ‘ಭಾಗ್ಯ’ ಎಂದು ಹೆಸರಿಟ್ಟಿದ್ದೇವೆ. ಸೈಕಲ್ ಭಾಗ್ಯ, ಅನ್ನ ಭಾಗ್ಯ, ಶಾದಿ ಭಾಗ್ಯ, ಪುಸ್ತಕ ಭಾಗ್ಯ... ಇಲ್ಲಿ ನಮ್ಮ ಆತ್ಮಾಭಿಮಾನದ ಕೊರತೆ ಇದೆ’ ಎಂದು ಡಿಸೋಜ ಸರ್ಕಾರದ ಯೋಜನೆಗಳ ಕುರಿತು ವ್ಯಂಗ್ಯವಾಡಿದರು.

ವ್ಯವಸಾಯವನ್ನು ದಿವಾಳಿಕೋರತನ ಎನ್ನುವಂತೆ ಬಿಂಬಿಸುತ್ತಿರುವ ಬಗೆಗೂ ಅವರಿಗೆ ಸಿಟ್ಟಿದೆ. ಹತ್ತು ಸಾವಿರ ಎಕರೆ ಸರ್ಕಾರಿ ಜಮೀನಿನಲ್ಲಿ 30 ಸಾವಿರ ಕುಟುಂಬಗಳು ಗೇಣಿದಾರರಾಗಿ ಬದುಕುತ್ತಿವೆ ಎಂದು ಉದಾಹರಿಸಿದ ಅವರಿಗೆ, ರೈತನನ್ನು ತಾನು ಬೆಳೆಯುತ್ತಿದ್ದ ಭೂಮಿಯ ಮೇಲಿನ ಕಾರ್ಖಾನೆಯ ಕಾವಲುಗಾರನನ್ನಾಗಿ ನಿಲ್ಲಿಸುವುದು ಇಂದಿನ ದುಸ್ಥಿತಿಯ ರೂಪಕದಂತೆ ಕಾಣುತ್ತಿದೆ.

ಜ್ಞಾನವೂ ವಿವೇಕವೂ: ಆಧುನಿಕ ಯಂತ್ರಗಳನ್ನು ಜನಪ್ರಿಯಗೊಳಿಸಿ, ಅದರ ಮೂಲಕ ಇಡೀ ಜಗತ್ತನ್ನು ಆಳಬೇಕು ಎನ್ನುವ ಅಭಿಲಾಷೆಯ ಹಿಂದೆ ಡಿಸೋಜ ಅವರಿಗೆ ಕುತಂತ್ರ ಮನಸ್ಸೊಂದು ಕಾಣುತ್ತಿದೆ. ಯಂತ್ರ ಮನುಷ್ಯನ ವಿವೇಕವನ್ನು ನಾಶಗೊಳಿಸಿ, ಆಮೇಲೆ ಹೃದಯದ ಮೇಲೆ ದಾಳಿ ಇಡುತ್ತದೆ. ಇದಕ್ಕೇ ಗಾಂಧೀಜಿ ಯಂತ್ರವನ್ನು ರಕ್ಕಸ ಎಂದು ಕರೆದದ್ದು ಎಂದು ಅವರು ನೆನಪಿಸಿಕೊಂಡರು.

ಮಾಹಿತಿ ತಂತ್ರಜ್ಞಾನದ ಈ ದಿನಗಳು ಜ್ಞಾನದ ದಾರಿಗಳನ್ನು ತೆರೆದಿಟ್ಟಿವೆಯೇ ಹೊರತು ವಿವೇಚನೆ ಮಾಡುವ ಶಕ್ತಿಯನ್ನಲ್ಲ ಎಂಬುದಕ್ಕೆ ಅವರು ಉದಾಹರಣೆಯಾಗಿ ಹೇಳಿದ್ದು ಹೀಗೆ: ‘ನದಿಯೊಂದರ ಕುರಿತ ಅಂಕಿಅಂಶಗಳನ್ನು ಅರಿಯುವ ನಾವು ಅದರ ಮಾನವೀಯ ಸಂಬಂಧಗಳ ಬಗೆಗೆ, ಅದರಿಂದ ಕಲಿಯುವ ಪಾಠಗಳ ಬಗೆಗೆ ಕುರುಡಾಗುತ್ತೇವೆ.’

ಭಾಷೆಯ ದುರವಸ್ಥೆ: ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ವಿಧಾನಸೌಧಕ್ಕೆ ಬಂದ. ಆತ ಅಲ್ಲಿ ಕುಳಿತು ತಮಿಳಿನಲ್ಲಿ ಮಾತನಾಡಿದ.

ನಮ್ಮ ಮುಖ್ಯಮಂತ್ರಿ ಆತನಿಗೆ ಇಂಗ್ಲಿಷ್‌ನಲ್ಲಿ ಉತ್ತರ ನೀಡಿದರು. ಇದು ಸರ್ಕಾರದ ಲಕ್ಷಣ ಖಂಡಿತ ಅಲ್ಲ. ‘ನರಕಕ್ಕೆ ಇಳಿಸಿ ನಾಲಿಗೆ ಸೀಳ್ಸಿ ಬಾಯಿ ಹೊಲೆಸಾಕಿದ್ರೂನೆ ಮೂಗ್ನಲ್ ಕನ್ನಡ ಪದ ವಾಡ್ತೀನಿ’ ಅನ್ನುವ ನಮ್ಮ ಕವಿಗಳ ಶಪಥಕ್ಕೆ ಮಂತ್ರಿಗಳು ಎಂತಹ ಅವಮಾನ ಮಾಡುತ್ತಾರಲ್ಲ. ಇದು ಚಿಂತಿಸಬೇಕಾದ ವಿಷಯ– ಹೀಗೆ ನೇರವಾಗಿ ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರು.

ನಾಯಿಯನ್ನು ಡಾಗಿ, ಬೆಕ್ಕನ್ನು ಕ್ಯಾಟಿ, ಚಂದ್ರನನ್ನು ಮೂನ್, ಅಂಕಲ್ ಎಂದು ಮಕ್ಕಳು ಕರೆದಾಗ ತೆಂಗಿನಮರ ಹತ್ತಿ ಕೂರುವ ಪೋಷಕರ ಮೇಲೂ ಮಾತಿನ ಚಾಟಿ ಬೀಸಿದರು. ‘ಹೆದ್ದಾರಿಯ ಮೇಲೆ ರಕ್ತದ ಕಲೆ ಬಿದ್ದಿರುವಾಗ ನಾನು ಕವಿತೆ ಹೇಗೆ ಬರೆಯಲಿ?’ ಕಪ್ಪು ಕವಿಯೊಬ್ಬ ಹೀಗೆ ಕೇಳಿದ್ದಾನೆ. ನನ್ನದೂ ಅದೇ ಮನಸ್ಥಿತಿ’ ಎನ್ನುತ್ತಾ ಭಾವುಕರಾದರು.

ಪುಸ್ತಕ ಮೇಳ – ಅಧಿಕಾರಿಗಳು ಮಾಡಿದ್ದು ತರವಲ್ಲ: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಪುಸ್ತಕ ಮೇಳದ ಅವಧಿಯನ್ನು ಹತ್ತು ದಿನಗಳಿಂದ ಮೂರು ದಿನಕ್ಕೆ ಇಳಿಸಿದ ಅಧಿಕಾರಿಗಳ ಕ್ರಮವನ್ನೂ ಅವರು ಖಂಡಿಸಿದರು. ಪುಸ್ತಕೋದ್ಯಮಿಗಳು ಹಣ ಮಾಡುತ್ತಾರೆ ಎಂದು ಅಧಿಕಾರಿಗಳು ನೀಡಿದ ಕಾರಣವೇ ಅವರಿಗೆ ಅಚ್ಚರಿಯಾಗಿ ಕಂಡಿದೆ. ‘ಪುಸ್ತಕ ಮೇಳ ಒಂದು ಸಾಂಸ್ಕೃತಿಕ ಕ್ರಿಯೆ. ಅದು ಉತ್ತಮ ಕೆಲಸ ಎಂದು ತಿಳಿಯಬೇಕೇ ವಿನಾ ಲಾಭದ ಮಾತಾಡುವುದು ಅಕ್ಷಮ್ಯ ಅಪರಾಧ’ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತಿನ ಬಿಸಿ ಮುಟ್ಟಿಸಿದರು. ರಾಜ್ಯದಲ್ಲಿ ಇರುವ ಕನ್ನಡಾಭಿಮಾನಿ ಅಭಿಮಾನಿಗಳ ಸಂಖ್ಯೆ ಕಡಿಮೆ ಎಂಬ ಕುರಿತೂ ಅವರು ಆತಂಕ ವ್ಯಕ್ತಪಡಿಸಿದರು.

ಪಶ್ಚಿಮ ಘಟ್ಟ ದೋಚದಿರಿ: ಪರಿಸರವನ್ನು ಬೇಕಾಬಿಟ್ಟಿಯಾಗಿ ನಾಶ ಮಾಡಿದ್ದರಿಂದಲೇ ಕಸ್ತೂರಿ ರಂಗನ್ ವರದಿ ಬರಲು ಕಾರಣ ಎಂದ ಡಿಸೋಜ, ಪರಿಸರ ಇರುವುದೇ ನಮಗಾಗಿ ಎಂಬ ಭ್ರಮೆಯಲ್ಲಿ ಅದನ್ನು ದೋಚಿದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ಕತ್ತರಿಸಿದಂ ತಾಗುತ್ತದೆ ಎಂದು ಎಚ್ಚರಿಸಿದರು.

ಸಮ್ಮೇಳನದ ನಿರ್ಣಯ ಜಾರಿಯ ದಾರಿ: ಸಾಹಿತ್ಯ ಸಮ್ಮೇಳನಕ್ಕೆ ಕೋಟಿ ಹಣ ನೀಡುವ ಸರ್ಕಾರ ಅಷ್ಟಕ್ಕೇ ಸುಮ್ಮನಾಗದೆ ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಆತ ಸಮ್ಮೇಳನದಲ್ಲಿ ಬರುವ ಸಲಹೆ ಸೂಚನೆಗಳನ್ನು ದಾಖಲೆ ಮಾಡಬೇಕು. ಅವೆಲ್ಲವೂ ಜಾರಿ ಆಗುವಂತೆಯೂ ಆತ ಕಾರ್ಯ ನಿರ್ವಹಿಸಬೇಕು. ಕನ್ನಡ ಸಾಹಿತ್ಯ ಸಮ್ಮೇಳನ ಏನೋ ಒಂದು ಜಾತ್ರೆ ಎನ್ನುವ ಅಭಿಪ್ರಾಯ ಸರ್ಕಾರದ್ದಾಗಬಾರದು ಎಂಬುದು ಡಿಸೋಜ ಬಯಕೆ.

ಪಂಜೆ ಮಂಗೇಶರಾಯರ ‘ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ’ ಸಾಲಿನಿಂದ ಶುರುವಾದ ಅವರ ಲಿಖಿತ ಭಾಷಣ ಮುಗಿದದ್ದು ಬೇಂದ್ರೆಯವರ ‘ಲೇಸೆ ಕೇಳಿಸಲಿ ಕಿವಿಗೆ, ನಾಲಗೆಗೆ ಲೇಸೆ ನುಡಿದು ಬರಲಿ, ಲೇಸೆ ಕಾಣಿಸಲಿ ಕಣ್ಗೆ, ಜಗದೊಳಗೆ ಲೇಸೆ ಹಬ್ಬುತಿರಲಿ, ಲೇಸೆ ಕೈಗಳಿಂದಾಗುತಿರಲಿ, ತಾ ಬರಲಿ ಲೇಸೆ ನಡೆದು, ಲೇಸನುಂಡು, ಲೇಸನುಸುರಿ, ಇಲ್ಲಿರಲಿ ಲೇಸೆ ಮೈಯ ಪಡೆದು’ ಎಂಬ ಸಾಲುಗಳಿಂದ.

ಆದರೆ, ಮೊಟಕುಗೊಳಿಸಿ ಭಾಷಣ ಮಾಡಬೇಕಾದ ಒತ್ತಡ ಇದ್ದಿದ್ದರಿಂದ, ಅವರ ಪಾಲಿಗೆ ಸಂದರ್ಭ ಅಷ್ಟೇನೂ ಲೇಸಾಗಿ ಇದ್ದಂತೆ ಕಾಣಲಿಲ್ಲ. ಸಮಸ್ಯೆಗಳ ರಾಶಿಯನ್ನು ಹರಡಿದಂಥ ಅವರ ಭಾಷಣದಲ್ಲಿ ಪರಿಹಾರದ ಹುಡುಕಾಟವೂ ಅಡಗಿತ್ತು.

ಅಪ್ಪನ ಪದ್ಯ
ತೆಂಗಿನ ಮರಗಳು ಕುಳ್ಳಾಗಿದ್ದು
ಕಾಯ್ಗಳು ಕೈಗೆ ಸಿಗುವಂತಿದ್ದು
ಕೊಬ್ಬರಿ ಎಲ್ಲ ಮೇಲ್ಗಡೆ ಇರಲು
ಎಳನೀರಿನ ಮುಚ್ಚಳ ತೆಗೆದಿರಲು
ಎಷ್ಟೋ ಚೆನ್ನಾಗಿರುತ್ತಿತ್ತು ಇನ್ನೂ ಚೆನ್ನಾಗಿರುತ್ತಿತ್ತು

–ಇದು ನಾ.ಡಿಸೋಜ ಅವರ ತಂದೆ ಮಕ್ಕಳಿಗೆಂದು ಬರೆದ ಪದ್ಯ. ಶಿಕ್ಷಕರಾಗಿದ್ದ ಅವರ ಈ ಪದ್ಯವನ್ನು ಓದಿದಾಗ ಡಿಸೋಜ ಅವರ ವಯಸ್ಸು ಐದು ವರ್ಷ. ತಮ್ಮ ಬಾಯಿಗೆ ಕನ್ನಡದ ಎಳನೀರು, ಸವಿನೀರು ಮೊದಲು ಬಿದ್ದದ್ದು ಆ ಪದ್ಯದ ಮೂಲಕ ಎಂದು ತುಸು ಭಾವುಕರಾಗಿ ಅಧ್ಯಕ್ಷ ಭಾಷಣದಲ್ಲಿ ಹೇಳಿಕೊಂಡರು.

ಅಧ್ಯಕ್ಷರ ಅಸಮಾಧಾನ
ಪಂಜೆ ಮಂಗೇಶರಾಯರ ಪದ್ಯದಿಂದ ಪ್ರಾರಂಭಿಸಿ, ಬೇಂದ್ರೆಯವರ ಸಾಲುಗಳೊಂದಿಗೆ ಮುಗಿಯುವಂಥ 24 ಪುಟಗಳ ಮುದ್ರಿತ ಭಾಷಣವನ್ನು ಸಾಹಿತ್ಯ ಸಮ್ಮೇಳನದಲ್ಲಿ ನಾ.ಡಿಸೋಜ ಮಂಡಿಸಬೇಕಿತ್ತು. ಸಮಾರಂಭ ಶುರುವಾದದ್ದು ತಡವಾಗಿ. ಹೀಗಾಗಿ ಅವರ ಮೇಲೆ ಬೇಗ ಭಾಷಣ ಮುಗಿಸುವ ಒತ್ತಡ ಬಂದಿತು. ಹಣೆ ಮೇಲೆ ಕುಂಕುಮ, ಮೊರದಗಲದ ಮುಖ ಹೊತ್ತು ನಿಂತ ಅವರ ಮಾತಿನಲ್ಲಿ ಅಸಮಾಧಾನ ಎದ್ದು ಕಾಣುತ್ತಿತ್ತು. ‘ಹಸಿದು ಕುಳಿತ ಜನರೇ’ ಎಂದು ಪ್ರೇಕ್ಷಕರನ್ನು ಅವರು ಸಂಬೋಧಿಸಿದ್ದೇ ಇದಕ್ಕೆ ಸಾಕ್ಷಿ.

ಅಂದುಕೊಂಡಿದ್ದಕ್ಕಿಂತ ಅರ್ಧದಷ್ಟು ಕಡಿಮೆ ಅವಧಿಯಲ್ಲೇ ಭಾಷಣ ಮುಗಿಸಿದ ಡಿಸೋಜ, ಕೊನೆಯಲ್ಲಿ ತಮ್ಮ ಅಸಮಾಧಾನವನ್ನು ನೇರವಾಗಿಯೇ ಹೊರಹಾಕಿದರು: ‘ಹಲವು ವಿಷಯಗಳನ್ನು ಕತ್ತರಿಸಿ, ಎಷ್ಟೋ ಸಂಗತಿಗಳನ್ನು ಕೈಬಿಟ್ಟು ಭಾಷಣ ಮಾಡುವುದು ಒಂದು ವಿಧದಲ್ಲಿ ಸಂತೋಷ; ಇನ್ನೊಂದು ಬಗೆಯಲ್ಲಿ ನೋವು. ಇನ್ನು ಮುಂದೆ ಹೀಗೆ ಒತ್ತಡ ಹೇರಿ ಭಾಷಣವನ್ನು ಮೊಟಕು ಗೊಳಿಸುವ ಪರಿಸ್ಥಿತಿ ಬರದೇ ಇರಲಿ. ನನ್ನ ಅವಸರ ಭಾಷಣವನ್ನು ಮುಗಿಸುತ್ತಿದ್ದೇನೆ’ ಎಂದರು. ಹೀಗೆ ಮುದ್ರಿತ ಭಾಷಣದಲ್ಲಿ ಇದ್ದ ಎಷ್ಟೋ ಸಂಗತಿಗಳನ್ನು ಡಿಸೋಜ ಅವರಿಗೆ ಅಂದುಕೊಂಡಂತೆ ದಾಟಿಸಲು ಸಮಯದ ಅಭಾವದಿಂದ ಆಗಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.