ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓ ಪಾದಚಾರಿ, ನಿನಗೆ ಇಲ್ಲಿದೆ ದಾರಿ!

Last Updated 15 ಮಾರ್ಚ್ 2017, 20:27 IST
ಅಕ್ಷರ ಗಾತ್ರ

‘ಬೆಂಗಳೂರಿಗೆ ಬಜೆಟ್‌ನ ಕೊಡುಗೆ ಏನು’ ಎಂಬ ಪ್ರಶ್ನೆಗೆ ‘ಪ್ರತಿ ವಾರ್ಡ್‌ಗೊಂದು ನಮ್ಮ ಕ್ಯಾಂಟೀನ್‌ ಸೌಲಭ್ಯ’, ‘ಸಾವಿರ ಶೌಚಾಲಯಗಳ ನಿರ್ಮಾಣ’, ‘ಕೊಳಚೆ ಪ್ರದೇಶದ ನಿವಾಸಿಗಳಿಗೆ ಉಚಿತ ನೀರು ಪೂರೈಕೆ’ ಎಂದೆಲ್ಲ ಉತ್ತರ ಸಿಗಬಹುದು. ಆದರೆ, ನಗರಕ್ಕೆ ಇವೆಲ್ಲವುಗಳಿಗಿಂತ ಬಹುಮುಖ್ಯ ಕಾಣಿಕೆಯೊಂದಿದೆ. ಅದೆಂದರೆ ಪಾದಚಾರಿಗಳ ಓಡಾಟಕ್ಕೆ ಸರ್ಕಾರ ಕೊನೆಗೂ ಸೂಕ್ತ ಸೌಲಭ್ಯ ಕಲ್ಪಿಸಲು ಮುಂದಾಗಿರುವುದು.

ರಸ್ತೆಗಳ ಅಭಿವೃದ್ಧಿಗೆ ಕಳೆದ ವರ್ಷ ಘೋಷಣೆ ಮಾಡಲಾಗಿದ್ದ ವೈಟ್‌ ಟಾಪಿಂಗ್‌ ಯೋಜನೆಗೆ ಈ ಸಲ ಪಾದಚಾರಿ ಮಾರ್ಗಗಳ ಉನ್ನತೀಕರಣದ ಪ್ರಸ್ತಾವ ಕೂಡ ಸೇರ್ಪಡೆಯಾಗಿದೆ. ಟೆಂಡರ್‌ ಶ್ಯೂರ್‌ ಯೋಜನೆ ಮೂಲಕ ಅಭಿವೃದ್ಧಿ ಮಾಡಲಾಗುತ್ತಿರುವ 25 ರಸ್ತೆಗಳಲ್ಲಿ ಪಾದಚಾರಿಗಳ ಓಡಾಟಕ್ಕೇ ಮೊದಲ ಆದ್ಯತೆ ನೀಡಲಾಗುತ್ತಿದೆ. ಇದರ ಜತೆಗೆ ನಗರದ ಇತರ ರಸ್ತೆಗಳ 200 ಕಿ.ಮೀ. ಉದ್ದದ ಪಾದಚಾರಿ ಮಾರ್ಗದ ಅಭಿವೃದ್ಧಿಗೂ ಪ್ರಸ್ತಾಪ ಮಾಡಲಾಗಿದೆ.

‘ದಾರಿಹೋಕರ ಬಜೆಟ್‌’ ಎನ್ನುವುದು ಸಾಮಾನ್ಯವಾಗಿ ಕುಹಕಕ್ಕೆ ಬಳಸುವ ಉಕ್ತಿ. ಆದರೆ, ಮುಖ್ಯಮಂತ್ರಿಯವರು ಈ ಸಲ ದಾರಿಹೋಕರಿಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಬಡಜನರಿಗೆ ನೆರವಿನಹಸ್ತ ಚಾಚಲು ಇಂಥದ್ದೊಂದು ಕ್ರಮ ತುಂಬಾ ಅಗತ್ಯವಾಗಿತ್ತು.
ಸಮೂಹ ಸಾರಿಗೆ ವಿಚಾರಕ್ಕೆ ಬಂದರೆ, ಮೂರು ಸಾವಿರ ಹೊಸ ಬಸ್‌ಗಳನ್ನು ಒದಗಿಸುವ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಈ ಹೊಸ ಬಸ್‌ಗಳಲ್ಲಿ ಅರ್ಧದಷ್ಟನ್ನು ಗುತ್ತಿಗೆ ಆಧಾರದ ಮೇಲೆ ಪಡೆಯಲಾಗುತ್ತದಂತೆ. ಸಮೂಹ ಸಾರಿಗೆ ಬಳಕೆಯನ್ನು ಉತ್ತೇಜಿಸಲು ಪ್ರಯಾಣ ದರದ ಇಳಿಕೆ ಅಗತ್ಯವಾಗಿತ್ತು. ಆದರೆ, ದರ ಇಳಿಕೆಗೆ ಸಂಬಂಧಿಸಿದಂತೆ ಬಜೆಟ್‌ ಮೌನ ವಹಿಸಿದೆ.

ಜನರಿಗೆ ಸಮರ್ಪಕ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಖಾಸಗಿ ಸಾರಿಗೆ ಸಂಸ್ಥೆಗಳಿಗೂ ಕಾರ್ಯಾಚರಣೆ ನಡೆಸಲು ಅವಕಾಶವನ್ನು ನೀಡಲೇಬೇಕು. ಹಗುರವಾದ ಹೊಣೆಯ ಮೂಲಕ ಹೆಚ್ಚಿನ ಸೌಲಭ್ಯ ಒದಗಿಸುವುದು ಬಿಎಂಟಿಸಿ ಮುಂದಿರುವ ಆಯ್ಕೆಗಳಲ್ಲಿ ಉತ್ತಮ ಮಾದರಿ. ಉಪನಗರ ರೈಲು ಸಾರಿಗೆ ಸೌಲಭ್ಯಕ್ಕಾಗಿ ಹೆಚ್ಚುವರಿ ಅನುದಾನ ಒದಗಿಸಿದ್ದರಿಂದ ಅಂತೂ ಆ ಯೋಜನೆ ಈಗ ಹಳಿಯ ಮೇಲೆ ಬಂದಂತಾಗಿದೆ. ಮೆಟ್ರೊ ಕಾಮಗಾರಿ ಕಾಲಮಿತಿಗಿಂತ ಆರು ವರ್ಷಗಳಷ್ಟು ವಿಳಂಬ ಆಗಿದ್ದರೂ ಪೂರ್ಣಗೊಳ್ಳದೇ ಇರುವುದು ಕಳವಳಕಾರಿ ವಿದ್ಯಮಾನ. ಹೊರವರ್ತುಲ ರಸ್ತೆಯ ಯೋಜನೆಯನ್ನು ಪೂರ್ಣಗೊಳಿಸಲು ವಿನೂತನ ಹಣಕಾಸು ವ್ಯವಸ್ಥೆ ಕುರಿತಂತೆ ಪ್ರಸ್ತಾಪಿಸಲಾಗಿದೆ. ಈ ಯೋಜನೆ ಬಗೆಗೆ ಆಸಕ್ತಿ ಹೊಂದಿದ ಜನರಿಗೆ ಆ ವಿನೂತನ ಹಣಕಾಸು ವ್ಯವಸ್ಥೆ ಯಾವುದು ಎಂಬ ಗೊಂದಲ ಮಾತ್ರ ಹಾಗೇ ಉಳಿದಿದೆ.

ವಾಯುಮಾಲಿನ್ಯದ ಪ್ರಮಾಣವನ್ನು ಕುಗ್ಗಿಸಲು ಖಾಸಗಿ ವಾಹನಗಳ ಸಂಖ್ಯೆ ಕಡಿಮೆ ಆಗುವಂತೆ ನೋಡಿಕೊಳ್ಳಬೇಕು ಹಾಗೂ ನಿರ್ಮಾಣ ಕಾಮಗಾರಿಗಳ ಮೇಲೂ ಮಿತಿ ವಿಧಿಸಬೇಕು. ಖಾಸಗಿ ವಾಹನಗಳ ಪ್ರಮಾಣವನ್ನು ಕುಗ್ಗಿಸುವ ನಿಟ್ಟಿನಲ್ಲಿ ಆಟೊರಿಕ್ಷಾಗಳನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾಪ ಮಾಡಿರುವುದು ಸ್ವಾಗತಾರ್ಹ.

ಜಲಮಂಡಳಿಯ ನೀರು ಪೋಲಾಗುತ್ತಿರುವ ಪ್ರಮಾಣವನ್ನು ಶೇ 40ಕ್ಕೆ ಇಳಿಸುವತ್ತ ಹೆಜ್ಜೆ ಇಟ್ಟಿರುವುದು ಉತ್ತಮ ಬೆಳವಣಿಗೆ. ಜಲ ಸಂರಕ್ಷಣೆಗಾಗಿ ಒಂದೆಡೆ ಮಳೆನೀರು ಸಂಗ್ರಹದ ಕಡೆಗೆ ಒತ್ತುನೀಡಿ, ಇನ್ನೊಂದೆಡೆ ಅತಿಯಾದ ಅಂತರ್ಜಲ ಬಳಕೆ ತಡೆಯತ್ತ ಹೆಚ್ಚಿನ ಗಮನ ಕೊಡಬೇಕಿತ್ತು. ಕೆರೆಗಳ ಅಭಿವೃದ್ಧಿ ಕುರಿತಂತೆ ಬಜೆಟ್‌ನಲ್ಲಿ ಯೋಜನೆಯನ್ನೇನೋ ಘೋಷಿಸಲಾಗಿದೆ. ಆದರೆ, ಅನುಷ್ಠಾನದ ಕುರಿತು ಪ್ರಶ್ನೆಗಳು ಹಾಗೇ ಉಳಿದಿವೆ. ಕೆರೆ ಅಭಿವೃದ್ಧಿಯಂತಹ ಯೋಜನೆಗಳು ಕಟ್ಟುನಿಟ್ಟಾಗಿ, ತ್ವರಿತಗತಿಯಲ್ಲಿ ಜಾರಿಯಾಗಬೇಕು.

ಬಜೆಟ್‌ಗಳೆಂದರೆ ಭರವಸೆ ನೀಡುವ ಸಾಧನಗಳು. ಆ ಭರವಸೆಗಳ ಅನುಷ್ಠಾನ ತುಂಬಾ ಮುಖ್ಯ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಹಿಂದಿನಿಂದಲೂ ಕಹಿ ಅನುಭವಗಳೇ ಕಾಡಿವೆ. ಕಳೆದ ವರ್ಷ ಬೆಂಗಳೂರಿಗೆ ₹ 7,300 ಕೋಟಿ ಅನುದಾನ ಘೋಷಣೆ ಮಾಡಲಾಗಿತ್ತು. ಇಷ್ಟೊಂದು ಬೃಹತ್‌ ಗಾತ್ರದ ಅನುದಾನ ಹಂಚಿಕೆಯಲ್ಲಿ ಎಷ್ಟು ಯೋಜನೆಗಳು ಪೂರ್ಣಗೊಂಡಿವೆ, ಇನ್ನೂ ಎಷ್ಟು ಬಾಕಿ ಉಳಿದಿವೆ ಎಂಬ ವಿಷಯವಾಗಿ ಜನ ಮಾಹಿತಿ ಬಯಸಿದ್ದರು. ಬಜೆಟ್‌ ಯಥಾಪ್ರಕಾರ ಮೌನ ತಾಳಿದೆ. ಇದರಿಂದ ಸಂಶಯ ಹೆಚ್ಚಾಗಿದೆ. ಆದರೆ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಂಚಿಕೆಯಾದ ಅಷ್ಟೂ ಮೊತ್ತವನ್ನು ಖರ್ಚುಮಾಡುವ ಭರವಸೆಯನ್ನು ನೀಡಲಾಗಿದೆ.

ಬೃಹತ್‌ ಗಾತ್ರದ ಯೋಜನೆಗಳನ್ನು ಕಾಲಮಿತಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಬಿಬಿಎಂಪಿ ಸಮರ್ಥವಾಗಿಲ್ಲ. ಹಲವು ಸಲ ಈ ಸಂಗತಿ ನಿರೂಪಿತವಾಗಿದೆ. ಜನರಲ್ಲಿ ಕಳವಳ ಉಂಟುಮಾಡಿರುವ ಸಂಗತಿ ಇದು. 110 ಹಳ್ಳಿಗಳಿಗೆ ನೀರು ಪೂರೈಸುವ ಯೋಜನೆ 2008ರಿಂದ ಬಜೆಟ್‌ಗಳಲ್ಲಿ ಪ್ರಸ್ತಾಪ ಆಗುತ್ತಲೇ ಇದೆ. ಹೀಗಾಗಿ ಈ ಯೋಜನೆಯನ್ನು ಸಂಶಯದಿಂದ ನೋಡುವಂತಾಗಿದೆ. ಬಿಡಿಎಯ ಹಿಂದಿನ ಕಾರ್ಯವೈಖರಿ ನೋಡಿದಾಗ ಕೋನದಾಸನಪುರದಲ್ಲಿ ಹೊಸ ಟೌನ್‌ಷಿಪ್‌ ನಿರ್ಮಾಣ ಮಾಡುವಷ್ಟು ಆ ಸಾಮರ್ಥ್ಯ ಪ್ರಾಧಿಕಾರಕ್ಕೆ ಇದ್ದಂತಿಲ್ಲ.

ಭವಿಷ್ಯದ ಬಗೆಗೆ ಜನ ಆಶಾವಾದದಿಂದ ಬದುಕುತ್ತಾರೆ. ಅದರಲ್ಲೂ 2018ರಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಸಂಚಾರ ದಟ್ಟಣೆ, ಗಬ್ಬುನಾರುತ್ತಿರುವ ತ್ಯಾಜ್ಯ, ಕೆರೆಗಳ ಮಾಲಿನ್ಯ, ನೀರಿನ ಅಲಭ್ಯತೆ – ನಗರವನ್ನು ಕಾಡುತ್ತಿರುವ ಈ ಸಮಸ್ಯೆಗಳಿಗೆ ಎದ್ದು ಕಾಣುವಂತಹ ಪರಿಹಾರವನ್ನು ಜನ ಬಯಸಿದ್ದಾರೆ. ಚುನಾವಣೆ ಬಂದಿದೆ ಎಂದರೆ ಯೋಜನೆಗಳು ಫಲ ನೀಡುವ ಸಮಯ ಬಂದಿದೆ ಎನ್ನುವುದು ಅವರ ನಂಬಿಕೆಯಾಗಿದೆ.

* ಪಾದಚಾರಿ ಮಾರ್ಗ ಅಭಿವೃದ್ಧಿ 200 ಕಿ.ಮೀ ಉದ್ದ ₹ 200 ಕೋಟಿ ಅನುದಾನ

‘ದಾರಿಹೋಕರ ಬಜೆಟ್‌’
‘ದಾರಿಹೋಕರ ಬಜೆಟ್‌’ ಎನ್ನುವುದು ಸಾಮಾನ್ಯವಾಗಿ ಕುಹಕಕ್ಕೆ ಬಳಸುವ ಉಕ್ತಿ. ಆದರೆ, ಈ ಸಲ ಪಾದಚಾರಿ ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿ ದಾರಿಹೋಕರ ಬಜೆಟ್ಟನ್ನೇ ಮಂಡಿಸಲಾಗಿದೆ!

ದರ ಇಳಿಕೆಗೆ ಮೌನ
ಸಮೂಹ ಸಾರಿಗೆ ಬಳಕೆಯ ಉತ್ತೇಜನಕ್ಕಾಗಿ ಬಸ್‌ ಪ್ರಯಾಣ ದರದ ಇಳಿಕೆ ಅಗತ್ಯವಾಗಿತ್ತು. ಆದರೆ, ದರ ಇಳಿಕೆ ಸಂಬಂಧ ಬಜೆಟ್‌ ಮೌನ ವಹಿಸಿದೆ

ಬದಲಾವಣೆ ಗೋಚರಿಸುವುದೇ?
ಚುನಾವಣೆ ಬಂದಿದೆಯೆಂದರೆ ಯೋಜನೆಗಳು ಫಲ ನೀಡುವ ಸಮಯ ಬಂದಿದೆ ಎನ್ನುವುದು ಜನರ ನಂಬಿಕೆ. ಬಜೆಟ್‌ ಹಂಚಿಕೆಯಂತೆಯೇ ಹಣ ಒದಗಿಬಂದು ನಗರದಲ್ಲಿ ಕಣ್ಣಿಗೆ ಕಾಣುವಂತಹ ಬದಲಾವಣೆ ಗೋಚರಿಸುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT