ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸದ ಕೊನೆಯ ದಿನ ಕಚೇರಿಗೆ ಕುದುರೆ ಏರಿ ಬಂದ ಟೆಕಿ

Last Updated 16 ಜೂನ್ 2018, 14:30 IST
ಅಕ್ಷರ ಗಾತ್ರ

ಬೆಂಗಳೂರು: ಟೆಕಿಯೊಬ್ಬ ತನ್ನ ಕೆಲಸದ ಕೊನೆಯ ದಿನ ನಗರದ ರಿಂಗ್ ರಸ್ತೆಯಲ್ಲಿನ ಎಂಬೆಸ್ಸಿ ಗಾಲ್ಫ್‌ ಲಿಂಕ್ಸ್(ಇಜಿಎಲ್‌) ಕ್ಯಾಂಪಸ್‌ನಲ್ಲಿನ ಕಚೇರಿಗೆ ಕುದುರೆ ಮೇಲೇರಿ ಬರುವ ಮೂಲಕ ಗಮನ ಸೆಳೆದಿದ್ದಾನೆ. ರಸ್ತೆಯಲ್ಲಿ ಕುದುರೆ ಏರಿ ಬಂದ ಟೆಕಿಯನ್ನು ಕಂಡು ಹಲವರಲ್ಲಿ ಅಚ್ಚರಿ.

ಈ ಸನ್ನಿವೇಶ ಸೃಷ್ಟಿಸಿದ್ದು ರೂಪೇಶ್‌ ಕುಮಾರ್‌ ವರ್ಮಾ. ಜತೆಗೆ, ಅವರು ಬೆಂಗಳೂರಿನ ‘ಆಮೆ’ ವೇಗದ ಸಂಚಾರ(ಟ್ರಾಫಿಕ್‌ ಜಾಮ್‌) ಕುರಿತು ಸಂದೇಶವೊಂದನ್ನು ರವಾನಿಸಿದರು.

ರೂಪೇಶ್‌ ಕುಮಾರ್‌ ಅವರು ಕುದುರೆಯಲ್ಲಿ ತೆರಳುವ ಕುರಿತು ಸಾಕಷ್ಟು ತಯಾರಿ ಮಾಡಿದ್ದರಾದರೂ, ಟ್ರಾಫಿಕ್‌ನಿಂದಾಗಿ ಮತ್ತೀಕೆರೆಯಲ್ಲಿನ ತಮ್ಮ ನಿವಾಸದಿಂದ ಬೆಳಿಗ್ಗೆ 7ಕ್ಕೆ ಹೊರಟು ಮಧ್ಯಾಹ್ನ 2ಕ್ಕೆ ಇಜಿಎಲ್‌ ಆವರಣ ತಲುಪಿದ್ದಾರೆ. ಬರೋಬ್ಬರಿ ಏಳು ತಾಸು ಪ್ರಯಾಣ ಮಾಡಿದ್ದಾರೆ.

ಕುದುರೆಯ ಹೊಟ್ಟೆಯ ಕೆಳಗೆ, ಸವಾರ ಕಾಲಿಟ್ಟುಕೊಳ್ಳುವಲ್ಲಿ ಕಟ್ಟಿದ್ದ ‘ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸದ ಕೊನೆಯ ದಿನ’ ಎಂಬ ಫಲಕ ಸೇರಿದಂತೆ ಕುದುರೆ ಸವಾರಿ ಮಾಡುತ್ತಿದ್ದ ಚಿತ್ರಗಳು ವಾಟ್ಸ್‌ಆ್ಯಪ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ವೇಗವಾಗಿ ಹರಿದಾಡಿದವು.

ಗುರುವಾರ ಅವರು ಯಾಕೆ ಹೀಗೆ ಮಾಡಿದರು ಎಂದು ರಾಜಸ್ಥಾನದ ಪಿಲಾನಿ ಮೂಲದವರಾದ ಶರ್ಮಾ ಅವರನ್ನು ‘ಪ್ರಜಾವಾಣಿ’ ಮಾತಿಗೆಳೆದಾಗ ಪ್ರತಿಕ್ರಿಯಿಸಿದ ಅವರು, ‘ಕೆಲಸದ ಬಗ್ಗೆ ಹತಾಶೆಗೊಂಡಿದ್ದೇನೆ’ ಎಂದರು. ಕುದುರೆ ಏರಿದ್ದಕ್ಕೆ ಹಲವು ಕಾರಣಗಳಿವೆ ಎಂದೂ ಹೇಳಿದರು.

ಸಾಫ್ಟ್‌ವೇರ್‌ ಎಂಜಿನಯರ್‌ಗಳಾದ ನಾವು ಬಹುರಾಷ್ಟ್ರೀಯ ಕಂಪನಿಗಳ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಮ್ಮ ದೇಶದಲ್ಲಿನ ಸಮಸ್ಯೆಗಳನ್ನು ನಾವು ಏಕೆ ಪರಿಹರಿಸಲು ಸಾಧ್ಯವಾಗುತ್ತಿಲ್ಲ? ಎಂದು ಪ್ರಶ್ನೆಗಳನ್ನು ಮುಂದಿಟ್ಟ ಅವರು, ನನ್ನ ದೇಶಕ್ಕಾಗಿ ನಾನು ಏನನ್ನಾದರೂ ಮಾಡಬೇಕು ಎಂದು ಬಯಸಿದ್ದೇನೆ ಎಂದರು.

ಕುದುರೆ ಮೇಲೆ ಬಂದ ವರ್ಮಾ ಅವರನ್ನು ಇಜಿಎಲ್ ಕ್ಯಾಂಪಸ್‌ನ ಗೇಟ್‌ನಲ್ಲಿ ಭದ್ರತಾ ಸಿಬ್ಬಂದಿ ತಡೆದು ನಿಲ್ಲಿಸಿದ್ದಾರೆ. ಅದಕ್ಕೆ ವರ್ಮಾ ಕುದುರೆಯೂ ಒಂದು ವಾಹನ ಎಂದು ವಾದಿಸಿದ್ದಾಗಿ ಹೇಳಿಕೊಂಡರು.

ಐಟಿ ಕಂಪನಿಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದರೂ ಆ ಸಂಸ್ಥೆಗಳು ಭಾರತೀಯರದ್ದಲ್ಲ ಎನ್ನುವ ಅವರು, ತಮ್ಮದೇ ಆದ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದೇನೆ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.

ಬೆಂಗಳೂರು ನಗರದಲ್ಲಿನ ‘ಟ್ರಾಫಿಕ್‌ ಜಾಮ್’, ಮಾಲಿನ್ಯ ಮತ್ತು ಮರಗಳ ಕಡಿತಲೆ, ಅಭಿವೃದ್ಧಿಯಾಗದ ರಸ್ತೆಗಳ ಬಗ್ಗೆ ತೀವ್ರ ಹತಾಶೆಯಾಗಿದೆ ಎಂದು ಅವರು ಹೇಳಿದರು.

ಭಾರತೀಯ ಸೇನೆ ಸೇರಬೇಕು ಎಂದು ನಾನು ಬಯಸಿದ್ದೆ. ಆದರೆ, ದುರಾದೃಷ್ಟವಶಾತ್‌ ಎಂಜಿನಿಯರ್‌ ಆದೆ ಎನ್ನುವ ಅವರು, ಶೀಘ್ರದಲ್ಲೇ ನನ್ನ ನಿರ್ಧಾರದ ಬಗ್ಗೆ ಪೂರ್ಣ ವಿವರಗಳನ್ನೊಳಗೊಂಡ ವಿಡಿಯೊವನ್ನು ಬಿಡುಗಡೆ ಮಾಡಲಿದ್ದೇನೆ ಎಂದರು.

ವರ್ಮಾ ಎಂಜಿನಿಯರ್‌ ಆಗಿ 8 ವರ್ಷಗಳಿಂದ ಮಣಿಪಾಲ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ.

‘ನಾನು ಕುದುರೆ ಏರಿ ಯಾವುದೇ ಸಮಸ್ಯೆಗಳಿಲ್ಲದೆ ಕಚೇರಿ ತಲುಪುತ್ತೇನೆ ಎಂದು ಖಚಿತಪಡಿಸಿಕೊಳ್ಳಲು ಸುಮಾರು ಒಂದು ತಿಂಗಳು ಕಾಲ ಕುದುರೆ ಸವಾರಿ ಅಭ್ಯಾಸ ಮಾಡಿದ್ದೇನೆ. ನನ್ನ ಸ್ನೇಹಿತರು ಈ ಬಗೆಯ ಸವಾರಿಯಲ್ಲಿ ಬರುವಂತೆ ಯೋಚಿಸಲು ಮತ್ತು ಕಾರ್ಯಗತಗೊಳಿಸಲು ಸಹಾಯ ಮಾಡಿದರು. ನಾನು ಶುದ್ಧ ಸಸ್ಯಹಾರಿ ಮತ್ತು ಪ್ರಾಣಿಪ್ರಿಯ. ಅದಕ್ಕಾಗಿ ಸಂದೇಶವೊಂದನ್ನು ನೀಡಲು ಕುದುರೆ ಏರಿದೆ ಎಂದು ಶರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT