ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣ್ಯರಿಗಾಗಿ ಐಷಾರಾಮಿ ಕಾರು

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ದೇಶ– ವಿದೇಶಗಳ ಅತಿ ಗಣ್ಯರ ಬಳಕೆಗಾಗಿ ಗುಂಡು ನಿರೋಧಕ ಐಷಾರಾಮಿ ಕಾರನ್ನು ರಾಜ್ಯ ಸರ್ಕಾರ ಖರೀದಿಸಿದೆ.

‘ಇ–ಗಾರ್ಡ್’ ಶ್ರೇಣಿಯ ಈ ಮರ್ಸಿಡಿಸ್‌ ಬೆಂಜ್‌   ಕಾರನ್ನು ಜರ್ಮನಿಯಿಂದಲೇ ನೇರವಾಗಿ ಆಮದು ಮಾಡಿಕೊಳ್ಳಲಾಗಿದೆ. ಇದರ ಮಾರುಕಟ್ಟೆ ಬೆಲೆ ಸುಮಾರು ಒಂದೂವರೆ ಕೋಟಿ ರೂಪಾಯಿ. ಆದರೆ ಕೇಂದ್ರ ಸರ್ಕಾರ ಅಬಕಾರಿ ಸುಂಕದ ವಿನಾಯಿತಿ ನೀಡಿರುವ  ಕಾರಣ ₨ 64 ಲಕ್ಷಕ್ಕೆ ಸಿಕ್ಕಿದೆ.

ಪ್ರತಿಷ್ಠಿತ ಮರ್ಸಿಡಿಸ್‌ ಬೆನ್ಜ್‌ ಇ–ಕ್ಲಾಸ್‌ ಕಾರಿನಲ್ಲಿರುವ ಎಲ್ಲ ಆಧುನಿಕ ಸೌಲಭ್ಯಗಳು ಇದರಲ್ಲಿ ಇವೆ. ಇದರ ವಿಶೇಷ ಅಂದರೆ ಗುಂಡು ಮತ್ತು ಬಾಂಬ್‌ ನಿರೋಧಕ ಶಕ್ತಿ. ಇದಕ್ಕಾಗಿ ಕಾರಿನ ಒಳ ಮತ್ತು ಹೊರಮೈ ಭಾಗದಲ್ಲಿ ವಿಶೇಷ ಗಡಸು ಕಬ್ಬಿಣದ ಶೀಟ್‌ ಬಳಸಲಾಗಿದೆ.

ಅತಿ ಗಣ್ಯರು ನಗರಕ್ಕೆ ಬಂದಾಗ ಸರ್ಕಾರದ ಶಿಷ್ಟಾಚಾರ ವಿಭಾಗದಲ್ಲಿ ಗುಂಡು ನಿರೋಧಕ ಕಾರು ಇಲ್ಲ ಎನ್ನುವ ಕೊರಗು ಹಲವು ವರ್ಷಗಳಿಂದ ಕಾಡುತ್ತಿತ್ತು. ಅತಿ ಗಣ್ಯರಿಗೆ, ಪೊಲೀಸ್‌ ಇಲಾಖೆಯ­ಲ್ಲಿರುವ ಗುಂಡು ನಿರೋಧಕ ಕಾರುಗಳನ್ನೇ ನೀಡಲಾಗುತ್ತಿತ್ತು.
ನಾಲ್ಕು ತಿಂಗಳಿಂದ ಕೇಂದ್ರ ಸರ್ಕಾರದ ಜತೆ ಸತತ ಪತ್ರ ವ್ಯವಹಾರ ಮಾಡಿ, ಈ ಕಾರಿಗೆ ಅಬಕಾರಿ ಸುಂಕ ವಿನಾಯಿತಿ ಪಡೆಯುವಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಯಿತು.

ಕೇಂದ್ರ ಷರತ್ತು: ಆರಂಭದಲ್ಲಿ ಕೇಂದ್ರ ಸರ್ಕಾರ ಸುಂಕ ಮನ್ನಾಕ್ಕೆ ಒಪ್ಪುವ ಸೂಚನೆ ಇರಲಿಲ್ಲ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಮತ್ತು ವಿದೇಶಿ ಸರ್ಕಾರಗಳ ಮುಖ್ಯಸ್ಥರಿಗೆ  ಮಾತ್ರ ಈ ಕಾರನ್ನು ಬಳಸುವುದಾಗಿ ಪತ್ರದ ಮೂಲಕ ತಿಳಿಸಿದ ನಂತರ  ಒಪ್ಪಿಕೊಂಡಿತು.

ನಗರದ ಸುಂದರಂ ಮೋಟಾರ್ಸ್ ಮೂಲಕ ಜರ್ಮನಿಯಿಂದಲೇ ಕಾರನ್ನು ತರಿಸಿ ಪೂಜೆ ಮಾಡಿ, ಕುಮಾರಕೃಪಾ ಅತಿಥಿಗೃಹದ ಶೆಡ್‌ನಲ್ಲಿ ನಿಲ್ಲಿಸಲಾಗಿತ್ತು.

ಉಪ ರಾಷ್ಟ್ರಪತಿ ಹಮೀದ್‌ ಅನ್ಸಾರಿ ಅವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದಾಗ ಈ ಕಾರನ್ನು ಮೊದಲು ಬಳಸಿದ್ದರು. ಅವರ ನಂತರ ಸೋಮವಾರ ನಗರಕ್ಕೆ ಬಂದ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಈ ಕಾರು ಬಳಸಿದ ಎರಡನೇ ಅತಿ ಗಣ್ಯ ವ್ಯಕ್ತಿ.

ಮುಖ್ಯಮಂತ್ರಿಗೂ ಭಾಗ್ಯ ಇಲ್ಲ: ಈ ಕಾರಿನಲ್ಲಿ ಓಡಾಡುವ ಭಾಗ್ಯ  ಮುಖ್ಯಮಂತ್ರಿಗೂ ಇಲ್ಲ. ಕೇಂದ್ರ ಸರ್ಕಾರಕ್ಕೆ ಬರೆದುಕೊಟ್ಟಿರುವ ಮುಚ್ಚಳಿಕೆ ಪ್ರಕಾರ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಿ ಮತ್ತು ವಿದೇಶಿ ರಾಷ್ಟ್ರ ಪ್ರಮುಖರಿಗಾಗಿ ಮಾತ್ರ ಇದು ಮೀಸಲು.
ಉಳಿದ ಸಮಯದಲ್ಲಿ ಇದು ಕುಮಾರಕೃಪಾ ಅತಿಥಿ ಗೃಹದ ಶೆಡ್‌ನಲ್ಲೇ ಇರುತ್ತದೆ. ಹದಿನೈದು ದಿನಕ್ಕೊಮ್ಮೆ ಅದನ್ನು 15–20 ಕಿ.ಮೀ ಓಡಿಸಿ, ನಂತರ ಅದೇ ಜಾಗದಲ್ಲಿ ನಿಲ್ಲಿಸಬೇಕು.

‘ಪಾಯಿಂಟ್‌ 44’ ರಿವಾಲ್ವರ್‌ಗೂ ಜಗ್ಗಲ್ಲ: ಅತಿ ಹೆಚ್ಚು ಸಾಮರ್ಥ್ಯದ ಪಾಯಿಂಟ್ 44 ರಿವಾಲ್ವರ್‌ನಿಂದ ಗುಂಡು ಹಾರಿಸಿದರೂ ಈ ಕಾರು ಮತ್ತು ಒಳಗಿರುವವರಿಗೆ ಏನೂ ಆಗುವುದಿಲ್ಲ.

ಅವಘಡ ಸಂಭವಿಸಿದಾಗ ತುರ್ತಾಗಿ ವೇಗ ಹೆಚ್ಚಿಸಿಕೊಂಡು ಸ್ಥಳದಿಂದ ನಿರ್ಗಮಿಸಲು ಅನುಕೂಲ ಆಗುವ ಹಾಗೆ ಕಾರಿನ ಚಕ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ಸಮತಟ್ಟು (ಫ್ಲಾಟ್‌ ಟೈರ್‌) ಚಕ್ರಗಳು ನೆಲ ಬಾಂಬ್‌ ಮತ್ತು ಗುಂಡು ನಿರೋಧಕ ಶಕ್ತಿ ಹೊಂದಿದೆ.

ಕಿಟಕಿಯ ಗಾಜು ಇಳಿಸದೆ ಹೊರಗಿನ ವ್ಯಕ್ತಿಯೊಂದಿಗೆ ಸಂಭಾಷಣೆ ನಡೆಸುವ ಸೌಲಭ್ಯವೂ ಇದರಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT