ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ಯತೀತರಿಗೆ ಅಪ್ಪ ಅಮ್ಮನ ಗುರುತಿಲ್ಲ

Last Updated 24 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಕೊಪ್ಪಳ: ‘ಅಪ್ಪ ಅಮ್ಮನ ಗುರುತು ಇಲ್ಲದಿರುವವರು ಜಾತ್ಯತೀತರು ಎಂದು ಕರೆಸಿಕೊಳ್ಳುತ್ತಿದ್ದಾರೆ’ ಎಂದು ಕೇಂದ್ರ ಉದ್ಯೋಗ ಮತ್ತು ಕೌಶಲ ಅಭಿವೃದ್ಧಿ ಸಚಿವ ಅನಂತಕುಮಾರ್‌ ಹೆಗಡೆ ಲೇವಡಿ ಮಾಡಿದರು.

ಯಲಬುರ್ಗಾ ತಾಲ್ಲೂಕು ಕುಕನೂರಿನ ಮಹಾಮಾಯಿ ದೇವಸ್ಥಾನದಲ್ಲಿ ಬ್ರಾಹ್ಮಣ ಯುವ ಪರಿಷತ್ತಿನ ಮಹಿಳಾ ಸಂಘ, ವೆಬ್‌ಸೈಟ್ ಉದ್ಘಾಟಿಸಿ ಭಾನುವಾರ ಅವರು ಮಾತನಾಡಿದರು.

‘ಈಗ ಹೊಸ ಸಂಪ್ರದಾಯ ಬಂದು ಬಿಟ್ಟಿದೆ, ಜಾತ್ಯತೀತರು ಎನ್ನುವುದು. ಯಾರಾದರು ನಾನೊಬ್ಬ ಮುಸ್ಲಿಂ, ಕ್ರಿಶ್ಚಿಯನ್‌, ಲಿಂಗಾಯತ, ಬ್ರಾಹ್ಮಣ, ಹಿಂದೂ ಎಂದರೆ ಖುಷಿಯಾಗುತ್ತದೆ. ಏಕೆಂದರೆ ಆತನಿಗೆ ತನ್ನ ರಕ್ತದ ಪರಿಚಯ ಇದೆ ಎಂದರ್ಥ. ಆದರೆ, ಈ ಜಾತ್ಯತೀತರು ಅಂತ ಕರೆದುಕೊಳ್ಳುವವರಿಗೆ ಯಾರು ಅಂತ ಕರೆಯಬೇಕೋ ಗೊತ್ತಾಗುತ್ತಿಲ್ಲ. ಅಪ್ಪ ಅಮ್ಮನ ಗುರುತೇ ಇಲ್ಲದ ರಕ್ತವನ್ನ ಜಾತ್ಯತೀತರು ಅಂತ ಕರೆದುಕೊಳ್ಳುತ್ತಾರೆ' ಎಂದು ಗೇಲಿ ಮಾಡಿದರು.

'ತಮ್ಮ ಗುರುತೇ ತಮಗೆ ಇರುವುದಿಲ್ಲ. ಮಾತೆತ್ತಿದರೆ ದೊಡ್ಡ ವಿಚಾರವಾದಿಗಳು, ಜಾತ್ಯತೀತರು. ಅಪ್ಪ ಅಮ್ಮನ ಪರಿಚಯವೇ ಇರುವುದಿಲ್ಲ; ಆ ನನ್‌ ಮಕ್ಳಿಗೆ. ಆದರೂ ದೊಡ್ಡ ವಿಚಾರವಾದಿಗಳು. ದಯವಿಟ್ಟು ಇಲ್ಲಿ ಯಾರೂ ಕೂಡ ಜಾತ್ಯತೀತರು ಇಲ್ಲ ಎಂದು ಭಾವಿಸುತ್ತೇನೆ. ನಿಮ್ಮ ಜಾತಿ ಜತೆ ಗುರುತಿಸಿಕೊಳ್ಳುತ್ತೀರೋ, ಕುಲದ ಜತೆ ಗುರುತಿಸಿಕೊಳ್ಳುತ್ತೀರೋ ಗುರುತಿಸಿಕೊಳ್ಳಿ. ನಿಮ್ಮ ರಕ್ತದ ಪರಿಚಯ ನಿಮಗಿದೆ. ನಿಮ್ಮ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದರೆ, ಜಾತ್ಯತೀತರು ಎಂದು ಕರೆದರೆ ಮಾತ್ರ ಸ್ವಲ್ಪ ಸಂಶಯ ಬರುತ್ತದೆ, ನೀವು ಯಾರು ಅಂತ' ಎಂದು ಹೇಳಿದರು.

‘ತಮ್ಮ ರಕ್ತದ ಪರಿಚಯವಾದರೆ ಹೊಸ ತಲೆಮಾರಿಗೂ ಹೊಸ ಸ್ವಾಭಿಮಾನ ಉಕ್ಕಿ ಬರುತ್ತದೆ. ರಕ್ತದ ಪರಿಚಯ ಇಲ್ಲದೇ ಇದ್ದರೆ ಖಂಡಿತವಾಗಿಯೂ ನಮ್ಮತನವನ್ನು ನಾವು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

‘ಸಂವಿಧಾನ ಬದಲಾಯಿಸುತ್ತೇವೆ'

'ಜಾತ್ಯತೀತತೆ ಕುರಿತು ಸಂವಿಧಾನ ಹೇಳಿದೆ, ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ, ಸಂವಿಧಾನ ಕೂಡಾ ಕಾಲಕ್ಕೆ ತಕ್ಕಂತೆ ಎಷ್ಟೋ ಬಾರಿ ಬದಲಾಗಿದೆ. ಮುಂದಿನ ದಿನಗಳಲ್ಲೂ ಕೂಡ ಬದಲಾಗುತ್ತದೆ. ಆ ಸಂವಿಧಾನವನ್ನು ಬದಲಾಯಿಸುವುದಕ್ಕಾಗಿಯೇ ನಾವು ಇರುವುದು, ಬಂದಿರುವುದು' ಎಂದು ಸಚಿವ ಅನಂತಕುಮಾರ್‌ ಹೆಗಡೆ ಹೇಳಿದರು.

'ಸ್ಮೃತಿಗಳು ಎಂದರೆ ಏನು? ಆಯಾ ಕಾಲದ ಸಂವಿಧಾನಗಳು, ಶಾಸನಗಳು. ಈಗ ಮನುಸ್ಮೃತಿಯ ಬಗ್ಗೆ ಮಾತನಾಡುತ್ತಾರೆ. ಅದು ಹಳೆಯದು. ಈಗ ನಡೆಯುತ್ತಿರುವುದು ಅಂಬೇಡ್ಕರ್‌ ಸ್ಮೃತಿ. ಯಾವುದೋ ಕಾಲದಲ್ಲಿ ಹುಟ್ಟಿದ ಮನುಸ್ಮೃತಿಯನ್ನು ಹಿಡಿದುಕೊಂಡು ಕೆಲವು ವಿಚಾರವಾದಿಗಳು ತಿಕ್ಕಾಡುತ್ತಾ ನಮ್ಮನ್ನು ಮನುವಾದಿಗಳು ಎನ್ನುತ್ತಾರೆ. ನೀವು ಸಂಪ್ರದಾಯವಾದಿಗಳು. ಪರಂಪರೆ, ಸಂಪ್ರದಾಯ, ಸ್ಮೃತಿಗಳ ಐತಿಹಾಸಿಕ ಗುರುತುಗಳೇ ಗೊತ್ತಿಲ್ಲದ ಮೂರ್ಖರು’ ಎಂದು ಕಿಡಿ ಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT