ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಮಟ್ಟದಲ್ಲಿ ‘ಸವಿರುಚಿ ಕೈತುತ್ತು’ ಸಂಚಾರಿ ಕ್ಯಾಂಟೀನ್

Last Updated 30 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯಾರಂಭ ಮಾಡಿದ ಬಳಿಕ ಜಿಲ್ಲಾ ಮಟ್ಟದಲ್ಲಿ ಸಂಚಾರಿ ಕ್ಯಾಂಟೀನ್ ‘ಸವಿರುಚಿ ಕೈತುತ್ತು’ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವುದು ಮತ್ತು ಅವರಲ್ಲಿ ಉದ್ಯಮಶೀಲತೆ ಬೆಳೆಸುವ ಉದ್ದೇಶದಿಂದ ಈ ಸಂಚಾರಿ ಕ್ಯಾಂಟೀನ್‌ಗಳ ನಿರ್ವಹಣೆಯನ್ನು ಸ್ತ್ರೀ ಶಕ್ತಿ ಸಂಘಗಳಿಗೆ ವಹಿಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕಳೆದ ಮಾರ್ಚ್‌ನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಸಂಚಾರಿ ಕ್ಯಾಂಟೀನ್‌ಗಳ ಬಗ್ಗೆ ಪ್ರಸ್ತಾಪಿಸಿದ್ದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನ ನವೆಂಬರ್ 19ರಂದು ಈ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಪ್ರತಿ ಸಂಘಕ್ಕೆ ಒಂದು ವಾಹನ : 15ರಿಂದ 20 ಮಹಿಳೆಯರು ಇರುವಂತಹ ಸಂಘಗಳನ್ನು ಗುರುತಿಸಿ ಅವರಿಗೆ ಕ್ಯಾಂಟನ್‌ ನಿರ್ವಹಣೆ ಜವಾಬ್ದಾರಿ ನೀಡಲಾಗುತ್ತದೆ. ಪ್ರತಿಸಂಘಕ್ಕೆ ಬಡ್ಡಿ ರಹಿತವಾಗಿ ₹ 10 ಲಕ್ಷ ಮೌಲ್ಯದ ಒಂದು ವಾಹನ ನೀಡಲಾಗುತ್ತದೆ. ಈ ವಾಹನದಲ್ಲಿ ಅಡುಗೆ ತಯಾರಿಸುವ ಪಾತ್ರೆಗಳು, ಸಿಲಿಂಡರ್ ಮತ್ತು ಆಹಾರ ಪದಾರ್ಥಗಳನ್ನು ಇಡಲು ವ್ಯವಸ್ಥೆ ಮಾಡಲಾಗುತ್ತದೆ.

ವಾಹನ ಎಲ್ಲೆಲ್ಲಿ ಸಂಚರಿಸುತ್ತದೋ ಅಲ್ಲಿ ಗ್ರಾಹಕರಿಗೆ ಆಹಾರ ವಿತಣೆಗೆ ಅನುಕೂಲ ಆಗುವಂತೆ ಟೇಬಲ್ ಮತ್ತು ಖುರ್ಚಿಗಳನ್ನೂ ಹಾಕುವ ವ್ಯವಸ್ಥೆ ಇರುತ್ತದೆ. ಅಂದು ಏನೇನು ಊಟ ಲಭ್ಯ ಇರುತ್ತದೆ ಮೆನು ಪಟ್ಟಿ ವಾಹನದಲ್ಲಿ ಕಾಣಿಸುತ್ತದೆ.

ಸಸ್ಯಹಾರ, ಮಾಂಸಹಾರ: ಸವಿರುಚಿ ಕೈತುತ್ತು ಕ್ಯಾಂಟೀನ್‌ನಲ್ಲಿ ಮಹಿಳೆಯರೇ ತಯಾರಿಸಿದ ಸಸ್ಯಹಾರ ಮತ್ತು ಮತ್ತು ಮಾಂಸಹಾರ ಊಟ ಲಭ್ಯವಿರುತ್ತದೆ. ಇದಲ್ಲದೆ, ಕುರುಕಲು ತಿಂಡಿಗಳೂ ಸಿಗುತ್ತವೆ. ಆಯಾ ಜಿಲ್ಲೆಯಲ್ಲಿ ಯಾವ ಆಹಾರ ಪದ್ಧತಿ ಇರುತ್ತದೋ ಅದನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಲಾಗುತ್ತದೆ. ಬೆಂಗಳೂರಿನಲ್ಲಿ ಈ ರೀತಿಯ 10 ಕ್ಯಾಂಟೀನ್‌ಗಳು ಸಂಚರಿಸಲಿವೆ. ಪ್ರಮುಖ ನಗರಗಳಾದ ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ತಲಾ ಎರಡರಿಂದ ಐದು ವಾಹನಗಳನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮುಖ್ಯವಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಸೇರಿದಂತೆ ಪ್ರಮುಖ ಸರ್ಕಾರಿ ಕಚೇರಿಗಳು ಇರುವಲ್ಲಿ ಸಂಚರಿಸಿ ಜನಸಾಮಾನ್ಯರಿಗೆ ಆಹಾರ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

ಮಹಿಳೆಯರಿಗೆ ಅಡುಗೆ ತರಬೇತಿ: ಭಾರತಿ ಶಂಕರ್
‘ಸ್ವಸಹಾಯ ಸಂಘಗಳಲ್ಲಿನ ಮಹಿಳೆಯರಿಗೆ ಅಡುಗೆ ಸಿದ್ಧಪಡಿಸುವುದು, ಶುಚಿತ್ವ, ಹೋಟೆಲ್‌ಗಳ ನಿರ್ವಹಣೆ ಕುರಿತು ಸೆಪ್ಟೆಂಬರ್ 12ರಿಂದ 20 ದಿನ ತರಬೇತಿ ನೀಡಲಾಗುವುದು.

ಈ ಸಂಬಂಧ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಿದೆ’ ಎಂದು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ ಭಾರತಿ ಶಂಕರ್ ಹೇಳಿದರು.

ಅಂದಿನ ಅಡುಗೆ ಮೆನು ಮತ್ತು ದರ ನಿಗದಿ ಮಾಡುವ ಸ್ವಾತಂತ್ರ್ಯ ಮಹಿಳೆಯರಿಗೇ ಇರುತ್ತದೆ. ಇಂದಿರಾ ಕ್ಯಾಂಟೀನ್‌ನಂತೆ ಅತ್ಯಂತ ಕಡಿಮೆ ದರ ಇರುವುದಿಲ್ಲ. ಆಹಾರ ತಯಾರಿಕೆ ಮತ್ತು ವಿವಿಧೆಡೆ ಸಂಚರಿಸಿ ಪೂರೈಸುವ ವೆಚ್ಚ ಗ್ರಾಹಕರಿಂದಲೇ ಸಿಗುವಂತೆ ದರ ನಿಗದಿ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

ಯೋಜನೆ ಆರಂಭದ ಮೊದಲ ಕೆಲ ತಿಂಗಳು ಸಂಘಗಳಿಂದ ಯಾವುದೇ ರೀತಿ ಹಣ ಪಡೆಯುವುದಿಲ್ಲ. ಬಳಿಕ ಪ್ರತಿ ತಿಂಗಳು ₹ 10,000 ಮರು ಪಾವತಿ ಮಾಡಿಕೊಳ್ಳಲು ಯೋಚಿಸಲಾಗಿದೆ ಎಂದು ಭಾರತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT