ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಮುಖ್ಯಮಂತ್ರಿ ಸೂಚನೆ

ಅಪೌಷ್ಟಿಕತೆಯಿಂದ ಬೆಂಗಳೂರಿನಲ್ಲಿ ಮಗು ಸಾವು
Last Updated 20 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಪೌಷ್ಟಿಕತೆಯಿಂದ ಮೃತಪಟ್ಟ ಆರು ವರ್ಷದ ಮಗು ದೇವರಜೀವನಹಳ್ಳಿಯ ಮೇಘಲಾ ಪ್ರಕರಣದ ದಾಖಲೆಗಳನ್ನು ತರಿಸಿಕೊಂಡು ತನಿಖೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಶನಿವಾರ ಭರವಸೆ ನೀಡಿದರು.

ರಾಜಧಾನಿಯ ಅಂಗನವಾಡಿ ಕೇಂದ್ರಗಳಲ್ಲಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಸಿಗದ ಶುಶ್ರೂಷೆ ಹಾಗೂ ಮಗುವೊಂದು ಸತ್ತ ಬಗ್ಗೆ  `ಪ್ರಜಾವಾಣಿ'ಯಲ್ಲಿ ಶನಿವಾರ ಪ್ರಕಟವಾದ ವಿಶೇಷ ವರದಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಾಖಲೆಗಳನ್ನು ಪರಿಶೀಲಿಸಿದ ನಂತರವಷ್ಟೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿಧಾನಸೌಧದಿಂದ ಕೆಲವೇ ಕಿ.ಮೀ ದೂರದಲ್ಲಿರುವ ಡಿ.ಜೆ.ಹಳ್ಳಿಯಲ್ಲಿ ಅಪೌಷ್ಟಿಕತೆಯಿಂದ ಪೌಷ್ಟಿಕ ಹಾಗೂ ಔಷಧಿಯುಕ್ತ ಆಹಾರ, ನಿಯಮಿತ ವೈದ್ಯಕೀಯ ತಪಾಸಣೆಯಿಲ್ಲದೇ ಮೇಘಲಾಳಿಗೆ ಶಾಸ್ವಕೋಶದ ಸೋಂಕು ಕೂಡ ತಗುಲಿ ಬುಧವಾರ ಮೃತಪಟ್ಟ ಘಟನೆ ನಡೆದಿದೆ.

ಈ ಸಂಬಂಧ ಮಹಾನಗರ ಪಾಲಿಕೆ ಸದಸ್ಯ ಸಂಪತ್‌ರಾಜು ಕೂಡ ಮೇಘಲಾ ಮನೆಗೆ ಭೇಟಿ ನೀಡಿ ತಾಯಿ ಮುರುಗಮ್ಮ ಅವರಿಗೆ ಸಾಂತ್ವನ ಹೇಳಿದರು.

ದೇವರಜೀವನಹಳ್ಳಿಯ ವ್ಯಾಪ್ತಿಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿಯ ಸಂಪರ್ಕ ಸಮರ್ಪಕವಾಗಿಲ್ಲ. ಇದರಿಂದ ಕಾಯಿಲೆಗಳು ಹೆಚ್ಚಾಗುತ್ತವೆ. ಈಗಾಗಲೇ ಬಿಬಿಎಂಪಿ ಆಯುಕ್ತ ಲಕ್ಷ್ಮಿನಾರಾಯಣ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರ  ಹಾಗೂ ಅಂಗನವಾಡಿ ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿ ಪಡಿಸುವಂತೆ ಮಹಿಳಾ ಮತ್ತು  ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಅಪೌಷ್ಟಿಕತೆಯಿಂದ ಮೃತಪಟ್ಟ ದೇವರಜೀವನಹಳ್ಳಿಯ ಮೇಘಲಾ ಕುಟುಂಬಕ್ಕೆ ಯಾವ ಕಾರಣದಿಂದ ಬಿಪಿಎಲ್ ಪಡಿತರ ಚೀಟಿ ದೊರೆತಿಲ್ಲ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು ತನಿಖೆ ನಡೆಸಲಿದ್ದಾರೆ. ಎಪಿಎಲ್ ಪಡಿತರ ಚೀಟಿಯನ್ನು ಯಾರು, ಹೇಗೆ ಮತ್ತು ಯಾವ ಆಧಾರದ ಮೇಲೆ ನೀಡಿದ್ದಾರೆ. ಎಪಿಎಲ್ ಪಡಿತರ ಚೀಟಿಯನ್ನು ಬದಲಾಯಿಸಿಕೊಳ್ಳಲು ಅವರು ಪ್ರಯತ್ನ ನಡೆಸಿದ್ದರೇ, ಇಲ್ಲವೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲು ತಿಳಿಸಲಾಗಿದೆ. ಎಲ್ಲಿ ಲೋಪ ಆಗಿದೆ ಎಂದು ತನಿಖೆಯಿಂದ ಗೊತ್ತಾದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
- ದಿನೇಶ್ ಗುಂಡೂರಾವ್, ಆಹಾರ, ನಾಗರಿಕ ಸರಬರಾಜು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT