ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರ...ದೂರವಾಗುತ್ತಿರುವ ತಾರ್ಲೆ, ಬಂಗಡೆ

Last Updated 9 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಕಾರವಾರ: ಹವಾಮಾನ ವೈಪರೀತ್ಯದಿಂದಾಗಿ ದೇಶದ ಪಶ್ಚಿಮ ಹಾಗೂ ಪೂರ್ವ ಕರಾವಳಿಯಲ್ಲಿ ಮೀನು ಸಂತತಿ ಹಂಚಿಕೆ ಮೇಲೆ ವಿಪರೀತ ಪರಿಣಾಮವುಂಟಾಗಿದೆ.

ಕರ್ನಾಟಕ ಹಾಗೂ ಕೇರಳದಲ್ಲಿ ಮಾತ್ರ ಕಂಡು ಬರುತ್ತಿದ್ದ ಸಾರ್ಡೈನ್ (ತಾರ್ಲೆ ಮೀನು) ಹಾಗೂ ಮ್ಯಾಕರೆಲ್ (ಬಂಗಡೆ ಮೀನು) ಮೀನು ಸಂತತಿ ಈಗ ಗುಜರಾತ್ ಹಾಗೂ ಪಾಕಿಸ್ತಾನದವರೆಗೂ ಹಂಚಿಹೋಗಿದೆ ಎಂದು ಅಂತರರಾಷ್ಟ್ರೀಯ ಖ್ಯಾತ ಕಡಲು ತಜ್ಞ ಡಾ.ವಿವೇಕಾನಂದ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ನಡೆಯುತ್ತಿರುವ ಪಂಜರದಲ್ಲಿ ಮೀನು ಕೃಷಿ ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಅವರು, ಉಷ್ಣಾಂಶ ಹೆಚ್ಚಳ ಹಾಗೂ ಗಾಳಿ ದಿಕ್ಕು ಬದಲಾವಣೆಯಿಂದಾಗಿ ಈ ವ್ಯತ್ಯಾಸ ಕಂಡು ಬರುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನುಳಿದ ಜಾತಿಯ ಮೀನುಗಳೂ ಬೇರೆಡೆ ಪಸರಿಸಬಹುದಾಗಿದೆ ಎನ್ನುವ ಆತಂಕ ವ್ಯಕ್ತಪಡಿಸಿದರು.

ಈ ಮೊದಲು ವಿರಳವಾಗಿದ್ದ ವಿಷಯುಕ್ತ ’ಪಫರ್’ ಮೀನು ಸಂತತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಮೀನಿನ ಕರುಳು ಬೇರ್ಪಡಿಸಿ ತಿನ್ನಲು ರುಚಿಯಾಗಿರುವುದರಿಂದ ಜಪಾನ್ ದೇಶಕ್ಕೆ ರಫ್ತಾಗುತ್ತಿದೆ. ಹವಾಮಾನ ವೈಪರೀತ್ಯದಿಂದಾಗಿ ಮೀನುಮರಿ ಉತ್ಪಾದನೆ ಹಾಗೂ ತತ್ತಿಯಿಡುವ ಸಮಯದಲ್ಲಿ ತೀರ ಬದಲಾವಣೆಗಳಾಗುತ್ತಿದ್ದು ಮುಂದಿನ ದಿನಗಳಲ್ಲಿ ಮೀನು ಉತ್ಪಾದನೆಯ ಮೇಲೆ ಪರಿಣಾಮ ಕಂಡುಬರಬಹುದಾಗಿದೆ ಎಂದು ವಿವೇಕಾನಂದ ತಿಳಿಸಿದರು.

ಹವಳದ ಬಂಡೆಗೆ ಹಾನಿ: ಸಮುದ್ರದ ಉಷ್ಣತೆ ಹೆಚ್ಚುತ್ತಿರುವುದರಿಂದ ಅನೇಕ ಕಡೆ ಹವಳದ ಬಂಡೆಗಳಿಗೆ (coral reefs) ಹಾನಿ ಕಂಡು ಬಂದಿದೆ ಎಂದು ವಿವೇಕಾನಂದ ತಿಳಿಸಿದ್ದಾರೆ. ಅನೇಕ ವಿರಳ ಮೀನು ಜಾತಿ ಹಾಗೂ ಸಸ್ತನಿಗಳಿಗೆ ಆಧಾರವಾಗಿರುವ ಹವಳ ಬಂಡೆಗಳು ಹವಾಮಾನ ವೈಪರೀತ್ಯದಿಂದಾಗಿ ಸವೆದುಹೋಗುವ (bleec- hing) ಸ್ಥಿತಿಯಲ್ಲಿವೆ. ಇನ್ನು ಒಂದು ಡಿಗ್ರಿಯಷ್ಟು ಉಷ್ಣಾಂಶ ಹೆಚ್ಚಾದಲ್ಲಿ ಸಮುದ್ರದ ಹವಳ ಬಂಡೆಗಳು ನಾಶಗೊಳ್ಳುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ನೇತ್ರಾಣಿಯ ಹವಳ ಬಂಡೆಯನ್ನು ಬೆಳಕಿಗೆ ತಂದ ಸಿ.ಎಂ.ಎಫ್.ಆರ್.ಐ ಈ ಕುರಿತು ಕಾಳಜಿ ವಹಿಸಿದೆ. ನೇತ್ರಾಣಿಯ ಸುತ್ತಮುತ್ತ ಮೀನುಗಾರಿಕೆಯಿಂದಲೂ ಹವಳದ ಬಂಡೆಗೆ ಧಕ್ಕೆಯಾಗಬಹುದೆಂದು ವಿವೇಕಾನಂದ ತಿಳಿಸಿದ್ದಾರೆ.
ಸಮುದ್ರ ಸಸ್ತನಿಗಳ ವಿತರಣೆ ಹಾಗೂ ಸಮೀಕ್ಷೆ ನಡೆಸಿರುವ ಡಾ. ರಾಜಗೋಪಾಲ ಅವರು ತಿಮಿಂಗಲ, ಡಾಲ್ಫಿನ್ ಹಾಗೂ ಕಡಲು ಆಕಳುಗಳ ಮೇಲೆ ಅಧ್ಯಯನ ನಡೆಸಲಾಗುತ್ತಿದೆ. ಈ ಅಧ್ಯಯನದಿಂದಾಗಿ ನೂತನ ಮೂರು ಹೊಸ ತಳಿಗಳನ್ನು ಭಾರತೀಯ ಸಮುದ್ರದಲ್ಲಿ ಕಂಡು ಹಿಡಿಯಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT