ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮೂರ ಶಾಲೆಯತ್ತ ಪೋಷಕರ ಚಿತ್ತ!

Last Updated 26 ಮೇ 2017, 20:21 IST
ಅಕ್ಷರ ಗಾತ್ರ

ಬೈಂದೂರು: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ಅವಸಾನ ಹೊಂದುತ್ತಿರುವ ವಿದ್ಯಮಾನಗಳು ನಡೆಯುತ್ತಿರುವಂತೆಯೇ ಬೈಂದೂರು ಭಾಗದಲ್ಲಿ  ಖಾಸಗಿ ಶಾಲೆಗಳೂ ಕಂಪಿಸುವ ಮಟ್ಟಿಗೆ ಸರ್ಕಾರಿ ಶಾಲೆಗಳು ಮೈಕೊಡವಿ ನಿಂತುಬಿಟ್ಟಿವೆ.

ಇಲ್ಲಿನ ಕೆಲವು ಸರ್ಕಾರಿ ಶಾಲೆಗಳಿಗೆ ಅವುಗಳ ಹಳೆ ವಿದ್ಯಾರ್ಥಿ ಸಂಘಗಳು ಮತ್ತು ಅನ್ಯ ಸಂಘಟನೆಗಳು ಬೆಂಬಲವಾಗಿ ನಿಂತಿವೆ. ಆ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಲಾಗಿದೆ. ಸರ್ಕಾರದ ಹೊಸ ನೀತಿಗನುಗುಣವಾಗಿ ಆರನೇ ತರಗತಿಯಿಂದ ಆಂಗ್ಲ ಮಾಧ್ಯಮ ತರಗತಿಗಳನ್ನೂ ನಡೆಸಲಾಗುತ್ತಿದೆ. ಅವುಗಳನ್ನು ನಡೆಸಲು ಅಗತ್ಯವಿರುವ ಶಿಕ್ಷಕ, ಶಿಕ್ಷಕಿಯರೂ ಸೇರಿದಂತೆ ಮೂಲ ಸೌಕರ್ಯಗಳನ್ನು ಬೆಂಬಲಕ್ಕೆ ನಿಂತ ಸಂಸ್ಥೆಗಳು ಒದಗಿಸುತ್ತಿವೆ.

ಮಕ್ಕಳ ಪ್ರಯಾಣಕ್ಕೆ ವಾಹನ ಸೌಲಭ್ಯ ಒದಗಿಸುವ ಪರಪಾಠವೂ ಆರಂಭವಾಗಿದೆ. ಕಳೆದ ವರ್ಷ ವಂಡ್ಸೆ ಮತ್ತು ಮರವಂತೆ ಸರ್ಕಾರಿ ಶಾಲೆಗಳಲ್ಲಿ ಅದರ ಮೊದಲ ಪ್ರಯೋಗ ನಡೆಯಿತು. ವಂಡ್ಸೆಯಲ್ಲಿ ಈ ಉದ್ದೇಶಕ್ಕಾಗಿ ಟ್ರಸ್ಟ್ ಅಸ್ತಿತ್ವಕ್ಕೆ ಬಂದರೆ, ಮರವಂತೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಅದರ ಹೊಣೆ ಹೊತ್ತುಕೊಂಡಿತ್ತು. ಈ ವರ್ಷ ನಾವುಂದ, ಉಪ್ಪುಂದ, ಗುಜ್ಜಾಡಿ, ಗಂಗೊಳ್ಳಿಯಲ್ಲಿ ಸಿದ್ಧತೆಗಳು ನಡೆದಿವೆ.

ಸರ್ಕಾರಿ ಶಾಲೆಗಳಿಗೆ ಹೊಂದಿಕೊಂಡು ಸರ್ಕಾರೇತರ ಸಂಘಟನೆಗಳ ಅಧೀನ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆರಂಭಿಸಿದೆಡೆ ಆ ಮಕ್ಕಳು ಅದೇ ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯುವುದರಿಂದ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವೃದ್ಧಿ ಆಗಿರುವುದು ಕಂಡುಬಂದಿದೆ.

ಸರ್ಕಾರಿ ಶಾಲೆಗಳನ್ನು ಆಕರ್ಷಕವಾಗಿಸಲು ಮಕ್ಕಳಿಗೆ ಕಂಪ್ಯೂಟರ್ ಬಳಕೆ, ಚಿತ್ರಕಲೆ, ಯಕ್ಷಗಾನ, ನಾಟಕ, ಸಂಗೀತ, ನೃತ್ಯ, ಕ್ರೀಡೆ, ಯೋಗ ತರಬೇತಿಗಳನ್ನು ನಡೆಸುವ, ಪಠ್ಯೇತರ ಚಟುವಟಿಕೆಗಳನ್ನು ಹೆಚ್ಚಿಸುವ, ನೋಟ್‌ ಪುಸ್ತಕಗಳನ್ನು ಉಚಿತವಾಗಿ ವಿತರಿಸುವಂತಹ ಅನೇಕ ಚಟುವಟಿಕೆ
ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳು ಶೂ, ಸಾಕ್ಸ್, ಸಮವಸ್ತ್ರ, ನೇಮ್ ಟ್ಯಾಲಿ ಧರಿಸಿ ಆಂಗ್ಲ ಮಾಧ್ಯಮ ಶಾಲೆಗಳ ಮಕ್ಕಳಿಗೆ ಸರಿಸಮನಾಗಿ ಕಾಣುವಂತೆ ಮಾಡಲಾಗುತ್ತಿದೆ.

‘ಕಳೆದ ವರ್ಷ ಆರಂಭವಾದ ನಮ್ಮ ಪ್ರಯತ್ನ ಸಕಾರಾತ್ಮಕ ಫಲ ನೀಡುತ್ತಿದೆ. ನಮ್ಮ ಶಾಲೆಗೆ ಹೊಂದಿಕೊಂಡಿರುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಈ ವರ್ಷ ಗಣನೀಯ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ನೋಂದಣಿಯಾಗಿದೆ. ಹಲವು ಪೋಷಕರು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಯುತ್ತಿರುವ ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ’ ಎನ್ನುತ್ತಾರೆ ಮರವಂತೆ ಶಾಲೆಯ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ.
ಎಸ್. ಜನಾರ್ದನ ಮರವಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT