ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ಲದ `ಕೈ' ಬಂಡಾಯ

ಕಾಂಗ್ರೆಸ್: 40 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ
Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ಕಾರ್ಯಕರ್ತರ ಅತೃಪ್ತಿ- ಅಸಮಾಧಾನ ಮತ್ತು ಪ್ರತಿಭಟನೆಗಳಿಗೆ ಕಿವಿಗೊಡದ ಕಾಂಗ್ರೆಸ್ ಹೈಕಮಾಂಡ್, ಭಾನುವಾರ 40 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೂರು ವಾರಗಳಿಂದ ನಡೆಯುತ್ತಿರುವ ಕಸರತ್ತಿನ ನಡುವೆ ಇನ್ನೂ 9 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಮೊದಲ ಪಟ್ಟಿಯಲ್ಲಿ ಎರಡು ಬದಲಾವಣೆ ಮಾಡಲಾಗಿದೆ.

ಕಾಂಗ್ರೆಸ್ ಇದುವರೆಗೆ 215 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿ ಪ್ರಕಟಿಸಿದಂತಾಗಿದ್ದರೂ ಪಕ್ಷದಲ್ಲಿ ಇನ್ನೂ ಬಂಡಾಯ ಶಮನವಾಗಿಲ್ಲ. ಸಂಸದ ಅನಿಲ ಲಾಡ್ ಬಂಡಾಯವೂ ಬಳ್ಳಾರಿಯಲ್ಲಿ ಫಲ ನೀಡಿದರೆ, ಅಂಬರೀಷ್ ಮಂಡ್ಯದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಬಂಡಾಯದ ಬಾವುಟ ಹಾರಿಸಿದ್ದಾರೆ.
ಬಾದಾಮಿಯಲ್ಲಿ ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ, ಲಿಂಗಸುಗೂರಿನಲ್ಲಿ ದುರ್ಗಪ್ಪ ಸಂಗಪ್ಪ ಹುಲಗೆರೆ ಅವರಿಗೆ ಟಿಕೆಟ್ ಕೊಡಲಾಗಿದೆ.

ಇವೆರಡೂ ಕ್ಷೇತ್ರಗಳಲ್ಲಿ  ದೇವರಾಜ ಎಚ್. ಪಾಟೀಲ್ ಮತ್ತು ಪಿ. ಮುರಾರಿ ಅವರಿಗೆ ಟಿಕೆಟ್ ಸಿಕ್ಕಿತ್ತು. ಈಗ ಇವರ ಹೆಸರನ್ನು ಕೈಬಿಡಲಾಗಿದೆ. ಬೆಳಗಾವಿ ದಕ್ಷಿಣ, ದಾವಣಗೆರೆ ಉತ್ತರ, ಭದ್ರಾವತಿ, ಕಾಪು, ಚಿಕ್ಕಬಳ್ಳಾಪುರ, ಮಾಲೂರು, ಹೆಬ್ಬಾಳ, ಪುತ್ತೂರು, ರಾಜರಾಜೇಶ್ವರಿನಗರದ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಸೋನಿಯಾ ಬಳಗಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ತೀವ್ರ ಪೈಪೋಟಿ ಹಿನ್ನೆಲೆಯಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಶೀಘ್ರದಲ್ಲೇ  ಈ ಕ್ಷೇತ್ರಗಳ ಅಭ್ಯರ್ಥಿ ಹೆಸರು ಬಿಡುಗಡೆ ಆಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ ಚಿತ್ತಾಪುರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರ ಪುತ್ರ ಅಜಯ್ ಸಿಂಗ್ ಜೇವರ್ಗಿಯಿಂದ ಕಣಕ್ಕಿಳಿಯಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಅವರ ಸೋದರ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ. ಶಿವರಾಂ ಅವರಿಗೆ ನಿರೀಕ್ಷೆಯಂತೆ ಮಲ್ಲೇಶ್ವರಂ ಕ್ಷೇತ್ರ ಸಿಕ್ಕಿದೆ. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಾ ಶಶಿಧರ್‌ಗೆ ಟಿಕೆಟ್ ನಿರಾಕರಿಸಲಾಗಿದೆ.

ರೂಪಾ ಕೆಜಿಎಫ್‌ನಿಂದ ಟಿಕೆಟ್ ಕೇಳಿದ್ದರು. ವಿ.ಶಂಕರ್‌ಗೆ ಇಲ್ಲಿಂದ ಟಿಕೆಟ್ ದೊರೆತಿದೆ. ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್ ಅವರಿಗೂ ಜಯನಗರ ಟಿಕೆಟ್ ಸಿಕ್ಕಿಲ್ಲ. ಜಯನಗರ ವೇಣುಗೋಪಾಲ್ ಅವರಿಗೆ ಟಿಕೆಟ್ ಕೊಡಲಾಗಿದೆ. ಮನ್ಸೂರ್, ಯು.ಬಿ. ವೆಂಕಟೇಶ್, ವಿ. ಸುದರ್ಶನ್ ಒಳಗೊಂಡಂತೆ ಅನೇಕರು ಈ ಕ್ಷೇತ್ರದ ಟಿಕೆಟ್‌ಗೆ ಪ್ರಯತ್ನಿಸಿದ್ದರು.

ಅನಿಲ್ ಲಾಡ್ ಸಫಲ: ಬಳ್ಳಾರಿ ಸಾಮಾನ್ಯ ಕ್ಷೇತ್ರದಿಂದ ರಾಜ್ಯಸಭೆ ಸದಸ್ಯ ಅನಿಲ್ ಲಾಡ್ ಟಿಕೆಟ್ ಪಡೆಯುವಲ್ಲಿ ಸಫಲರಾಗಿದ್ದಾರೆ. ತಮಗೆ ಟಿಕೆಟ್ ಕೊಡದಿದ್ದರೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಲಾಡ್ ಹೈಕಮಾಂಡ್‌ಗೆ ಬೆದರಿಕೆ ಹಾಕಿದ್ದರು. ಇವರ ಬೆದರಿಕೆಗೆ ಹೈಕಮಾಂಡ್ ಮಣಿದಿದೆ.

ಭುಗಿಲೆದ್ದ ಬಂಡಾಯ
ರಾಜ್ಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ, ಮಾಜಿ ಸಚಿವ ದಿವಾಕರ ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು ಅವರಿಗೂ ಈ ಕ್ಷೇತ್ರದ ಟಿಕೆಟ್ ತಪ್ಪಿದೆ. ಕಲಘಟಗಿಯಿಂದ ಅನಿಲ್ ಲಾಡ್ ಸೋದರ ಸಂತೋಷ್ ಲಾಡ್ ಅವರಿಗೆ ಮತ್ತೆ ಟಿಕೆಟ್ ದೊರೆತಿದೆ. ಸ್ಥಳೀಯ ಕಾಂಗ್ರೆಸ್ ನಾಯಕರ ವಿರೋಧ ಲೆಕ್ಕಿಸದೆ ಹಿರಿಯೂರಿನಲ್ಲಿ ಡಿ. ಸುಧಾಕರ ಅವರಿಗೇ ಟಿಕೆಟ್ ನೀಡಲಾಗಿದೆ.

ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ ಸ್ಪರ್ಧೆ ಮಾಡಲಿದ್ದಾರೆ. ದಾವಣಗೆರೆ ಉತ್ತರದ ಅಭ್ಯರ್ಥಿ ಹೆಸರು ಇನ್ನೂ ನಿರ್ಧಾರ ಆಗಿಲ್ಲ. ತಮ್ಮ ಮಗ ಮಲ್ಲಿಕಾರ್ಜುನ ಅವರಿಗೆ ಈ ಕ್ಷೇತ್ರ ಬಿಡಬೇಕೆಂದು ಶಿವಶಂಕರಪ್ಪ ಒತ್ತಡ ಹೇರುತ್ತಿದ್ದಾರೆ. ಆದರೆ, ಕಾಂಗ್ರೆಸ್ ಇದಕ್ಕೆ ಒಪ್ಪಿಲ್ಲ.
ಭಾರಿ ಪ್ರತಿಭಟನೆಗೆ ಕಾರಣವಾಗಿದ್ದ ಮಹಾದೇವಪುರ, ಸಿ.ವಿ.ರಾಮನ್‌ನಗರ, ಚಾಮರಾಜಪೇಟೆ, ಬೆಂಗಳೂರು ದಕ್ಷಿಣ, ಕೆ.ಆರ್. ಪುರದಿಂದ ಕ್ರಮವಾಗಿ ಎ. ಸಿ. ಶ್ರೀನಿವಾಸ್, ಪಿ. ರಮೇಶ್, ಜಿ.ಎ. ಬಾವ, ತೇಜಸ್ವಿನಿಗೌಡ, ಭೈರತಿ ಬಸವರಾಜ್ ಅವರಿಗೆ ಟಿಕೆಟ್ ಸಿಕ್ಕಿದೆ.

ಇವರೆಲ್ಲರಿಗೂ ಟಿಕೆಟ್ ಕೊಡಬಾರದು ಎಂದು ಒತ್ತಾಯ ಕೇಳಿ ಬಂದಿತ್ತು. ಕಾಂಗ್ರೆಸ್ ಹೈಕಮಾಂಡ್ ಸ್ಥಳೀಯ ಕಾರ್ಯಕರ್ತರ ವಿರೋಧಕ್ಕೆ ಸೊಪ್ಪು ಹಾಕಿಲ್ಲ.
ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಡಾ. ಜಿ. ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ. ಇಬ್ಬರೂ ತಮ್ಮ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ.

ಕೆಲವು ಕೇಂದ್ರ ಸಚಿವರು ಹಾಗೂ ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕರ ಹಿಂಬಾಲಕರನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪಗಳೂ ಬಂದಿವೆ.
ಇಬ್ಬರು ಮಹಿಳೆಯರು: ಎರಡನೇ ಪಟ್ಟಿಯಲ್ಲಿ ಇಬ್ಬರು ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಒಟ್ಟು 224 ವಿಧಾನಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಹತ್ತು ಕ್ಷೇತ್ರಗಳನ್ನು ಮಾತ್ರ ಮಹಿಳೆಯರಿಗೆ ಬಿಟ್ಟುಕೊಟ್ಟಿದೆ. ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೂಗು ಹೈಕಮಾಂಡ್ ಅಂಗಳಕ್ಕೆ ಮುಟ್ಟಿಲ್ಲ.

ಸ್ಪರ್ಧೆಗೆ ಅಂಬಿ ನಕಾರ

ಬೆಂಗಳೂರು/ಮಂಡ್ಯ:  ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಎ.ಎಸ್.ರವೀಂದ್ರ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಪಕ್ಷದ ವರಿಷ್ಠರ ನಿರ್ಧಾರ ವಿರೋಧಿಸಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸದಿರಲು ಅಂಬರೀಷ್ ನಿರ್ಧರಿಸಿದ್ದಾರೆ. `ರವೀಂದ್ರ  ಅವರು ಶ್ರೀರಂಗಪಟ್ಟಣದಿಂದ ಕಣಕ್ಕೆ ಇಳಿಯುವುದಾದರೆ ನಾನು ಮಂಡ್ಯದಿಂದ ಸ್ಪರ್ಧಿಸಲಾರೆ. ಅವರಿಗೆ ಟಿಕೆಟ್ ನೀಡುವುದು ನನಗೆ ಅವಮಾನ ಮಾಡಿದಂತೆ' ಎಂದು ಭಾನುವಾರ ಖಾಸಗಿ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

`ನಾನು ನಾಳೆ (ಸೋಮವಾರ) ನಾಮಪತ್ರ ಸಲ್ಲಿಸುವ ಉದ್ದೇಶ ಹೊಂದಿದ್ದೆ. ಆದರೆ ನಾಮಪತ್ರ ಸಲ್ಲಿಸದಿರುವ ನಿರ್ಧಾರ ಕೈಗೊಂಡಿದ್ದೇನೆ. ರವೀಂದ್ರ ಅವರಿಗೆ ಶ್ರೀರಂಗಪಟ್ಟಣ ಕ್ಷೇತ್ರದಿಂದ ಟಿಕೆಟ್ ನೀಡಬಾರದು ಎಂದು ವರಿಷ್ಠರಿಗೆ ಈ ಹಿಂದೆಯೂ ಹೇಳಿದ್ದೆ. ನನ್ನನ್ನು ನಂಬಿ ಸಾಲ ಮಾಡಿದವರಿದ್ದಾರೆ. ಅವರು ಎಲ್ಲಿಗೆ ಹೋಗಬೇಕು?' ಎಂದು ಅಂಬರೀಷ್ ಪ್ರಶ್ನಿಸಿದರು.

ಮಂಡ್ಯ ಹೊರತುಪಡಿಸಿ ಬೇರೆ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಪ್ರತಿಭಟನೆ ಬಿಸಿ: ರವೀಂದ್ರ ಶ್ರೀಕಂಠಯ್ಯ ಅವರಿಗೆ ಟಿಕೆಟ್ ನೀಡಿರುವುದನ್ನು ಖಂಡಿಸಿ ಭಾನುವಾರ ಶ್ರೀರಂಗಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಇನ್ನೊಂದೆಡೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್.ಡಿ. ರವಿ ಅವರು ಅಂಬರೀಷ್ ಯಾವುದೇ ನಿರ್ಧಾರ ಕೈಗೊಂಡರೂ ಬೆಂಬಲಿಸುವುದಾಗಿ ಘೋಷಿಸಿದ್ದಾರೆ.

`ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಅಂಬರೀಷ್ ಸ್ಪರ್ಧಿಸುವುದಿಲ್ಲ ಎನ್ನುವ ಮಾತು ನನ್ನ ಕಿವಿಗೂ ಬಿದ್ದಿದೆ. ಅವರು ಸ್ಪರ್ಧಿಸದಿದ್ದರೆ,  ಮೇಲುಕೋಟೆ ವಿಧಾನಸಭೆ ಕ್ಷೇತ್ರದಿಂದ ನಾನೂ ಸ್ಪರ್ಧಿಸುವುದಿಲ್ಲ. ಅವರ ನಿರ್ಣಯ ಬೆಂಬಲಿಸುತ್ತೇನೆ' ಎಂದು ಎಲ್.ಡಿ. ರವಿ `ಪ್ರಜಾವಾಣಿ'ಗೆ ತಿಳಿಸಿದರು.
ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಬಳಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಮಾಡಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ನೀಡಿರುವ ಟಿಕೆಟ್ ಅನ್ನು ಕೂಡಲೇ ಹಿಂದೆ ಪಡೆಯಬೇಕು ಎಂದು ಆಗ್ರಹಿಸಿದರು.

ಶ್ರೀರಂಗಪಟ್ಟಣದಿಂದ ಅಂಬರೀಷ್ ಅವರೇ ಸ್ಪರ್ಧಿಸಬೇಕು. ಅವರು ನಿಲ್ಲದಿದ್ದರೆ ಬ್ಲಾಕ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು. `ಅಂಬರೀಷ್ ಯಾವುದೇ ನಿರ್ಣಯ ಕೈಗೊಂಡರೂ ನಮ್ಮ ಬೆಂಬಲವಿದೆ. ಅವರು ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದು ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎಲ್. ಲಿಂಗರಾಜು `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT