ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಧ್ಯಾಪಕ ಹುದ್ದೆಗೆ ಬಡ್ತಿ ನೀಡಲು ಸಮಿತಿ ರಚನೆ

Last Updated 13 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಪ್ರಾಧ್ಯಾಪಕರ ಹುದ್ದೆಗಳಲ್ಲಿ ಶೇ 10ರಷ್ಟು ಹುದ್ದೆಗಳನ್ನು ವೃತ್ತಿ ಪದೋನ್ನತಿ ಮೂಲಕ ಪ್ರಾಧ್ಯಾಪಕರ ಹುದ್ದೆಗಳಿಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಆಯ್ಕೆ ಸಮಿತಿ ರಚಿಸಿ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.

ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಇಲಾಖೆಯ ಹೆಚ್ಚುವರಿ ನಿರ್ದೇಶಕ, ಜಂಟಿ ನಿರ್ದೇಶಕ, ವಿಶ್ವವಿದ್ಯಾಲಯದ ಇಬ್ಬರು ಪ್ರತಿನಿಧಿಗಳು ಹಾಗೂ ಇಬ್ಬರು ವಿಷಯ ತಜ್ಞರು ಸಮಿತಿಯ ಇತರ ಸದಸ್ಯರು.

ವಿಶ್ವವಿದ್ಯಾಲಯದ ಇಬ್ಬರು ಪ್ರತಿನಿಧಿ ಹಾಗೂ ಇಬ್ಬರು ವಿಷಯ ತಜ್ಞರ ನೇಮಕಕ್ಕೆ ಸಂಬಂಧಿಸಿದಂತೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ವಿ.ವಿಗಳ ಕುಲಪತಿಗಳ ಜತೆ ಸಮಾಲೋಚಿಸಬೇಕು. ಕುಲಪತಿಗಳು ನಾಮ ನಿರ್ದೇಶಿಸಿದ ಅಥವಾ ಶಿಫಾರಸು ಮಾಡಿದವರನ್ನು ಸದಸ್ಯರನ್ನಾಗಿ ಆಯುಕ್ತರು ನೇಮಿಸಬೇಕು.

ಪ್ರಾಧ್ಯಾಪಕರ ಹುದ್ದೆ ನೇಮಕಕ್ಕೆ ಸಂಬಂಧಿಸಿದಂತೆ ಸರ್ಕಾರ 2009ರ ಡಿಸೆಂಬರ್‌ 24ರಂದು ಹೊರಡಿಸಿದ್ದ ಆದೇಶದಲ್ಲಿನ ಮಾನದಂಡಗಳನ್ನು ಅನುಸರಿಸಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸರ್ಕಾರದ ಅನುಮೋದನೆಗೆ ಕಳುಹಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

500 ಬೋಧಕರಿಗೆ ಅನುಕೂಲ:
ರಾಜ್ಯದಲ್ಲಿ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ವಿವಿಧ ವಿಷಯಗಳಲ್ಲಿ ಸುಮಾರು 2,000 ಸಹ ಪ್ರಾಧ್ಯಾಪಕರಿದ್ದಾರೆ. ಅವರಲ್ಲಿ ಶೇ 10ರಷ್ಟು ಬೋಧಕರಿಗೆ ಬಡ್ತಿ ದೊರೆತರೆ 200 ಮಂದಿ ಪ್ರಾಧ್ಯಾಪಕರಾಗಲಿದ್ದಾರೆ.  ಆರ್ಥಿಕ ಅನುಕೂಲವೂ ದೊರೆಯಲಿದೆ. ಅಲ್ಲದೆ ಅನುದಾನಿತ ಪದವಿ ಕಾಲೇಜುಗಳಲ್ಲಿ 3,000ಕ್ಕೂ ಹೆಚ್ಚು ಸಹ ಪ್ರಾಧ್ಯಾಪಕರಿದ್ದು, ಇಲ್ಲಿ 300ಕ್ಕೂ ಹೆಚ್ಚು ಮಂದಿಗೆ ಪ್ರಾಧ್ಯಾಪಕರಾಗುವ ಅವಕಾಶ ದೊರೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

‘ಯುಜಿಸಿ ನಿರ್ದೇಶನದಂತೆ ವಿಶ್ವವಿದ್ಯಾಲಯಗಳಲ್ಲಿನ ಅರ್ಹ ಸಹ ಪ್ರಾಧ್ಯಾಪ‍ಕರಿಗೆ 2009ರಲ್ಲಿಯೇ ಪ್ರಾಧ್ಯಾಪಕ ಹುದ್ದೆಗೆ ಸರ್ಕಾರ ಬಡ್ತಿ ನೀಡಿದೆ. ಅವಕಾಶ ಇದ್ದರೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ಸಹ ಪ್ರಾಧ್ಯಾಪಕರಿಗೆ ಸರ್ಕಾರ ಬಡ್ತಿ ಭಾಗ್ಯ ನೀಡಿರಲಿಲ್ಲ. ಈ ಕುರಿತು ಹಲವು ಬಾರಿ ಮನವಿಗಳನ್ನು ಸಲ್ಲಿಸಲಾಗಿತ್ತು. ಅದಕ್ಕೆ ಈಗಲಾದರೂ ಸರ್ಕಾರ ಸ್ಪಂದಿಸಿರುವುದು ಸ್ವಾಗತಾರ್ಹ‘ ಎಂದು ಕರ್ನಾಟಕ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಟಿ.ಎಂ.ಮಂಜುನಾಥ್‌ ಪ್ರತಿಕ್ರಿಯಿಸಿದರು.

ಆರ್ಥಿಕ ಅನುಕೂಲ:
ಪ್ರಾಧ್ಯಾಪಕರಾಗಿ ಬಡ್ತಿ ಪಡೆಯುವ ಸಹ ಪ್ರಾಧ್ಯಾ‍ಪಕರಿಗೆ ಯುಜಿಸಿ 6ನೇ ವೇತನ ಆಯೋಗದ ಶ್ರೇಣಿ ಪ್ರಕಾರ (₹37,400–67,000) ಗ್ರೇಡ್‌ ಪೇ ₹ 9,000ದಿಂದ 10,000ಕ್ಕೆ ಏರಿಕೆಯಾಗಲಿದೆ. ಇದಕ್ಕೆ ಮನೆ ಬಡ್ತಿ, ತುಟ್ಟಿ ಭತ್ಯೆ ಸೇರಿದರೆ ತಿಂಗಳಿಗೆ ಅಂದಾಜು ₹ 2,500 ಹೆಚ್ಚಳವಾಗಬಹುದು. ಆದರೆ ಯುಜಿಸಿಯ ಏಳನೇ ವೇತನ ಆಯೋಗದ ಶಿಫಾರಸು ಜಾರಿಯಾದರೆ ಇವರ ವೇತನವು 1.44 ಲಕ್ಷಕ್ಕೆ ಏರಿಕೆಯಾಗುತ್ತದೆ.

ಅದರ ಜತೆಗೆ ಪದವಿ ಕಾಲೇಜುಗಳಲ್ಲಿನ ಬೋಧಕರಿಗೆ ವಿಶ್ವವಿದ್ಯಾಲಯಗಳಲ್ಲಿನ ಕುಲಸಚಿವ ಮತ್ತು ಕುಲಪತಿ ಹುದ್ದೆಗಳಿಗೆ ಸ್ಪರ್ಧಿಸಲು ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರ ಇತ್ತೀಚೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬೋಧಕರ ಹುದ್ದೆಗಳನ್ನು ‘ಎ’ ಶ್ರೇಣಿ ಹುದ್ದೆಗಳೆಂದು ಪರಿಗಣಿಸಿ ಆದೇಶ ಹೊರಡಿಸಿತ್ತು.

**

1994ಕ್ಕೂ ಮುನ್ನ ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರು, ರೀಡರ್‌, ಪ್ರಾಧ್ಯಾ‍ಪಕ ಹುದ್ದೆಗಳಿದ್ದವು. ಬಳಿಕ ಅದನ್ನು ಉಪನ್ಯಾಸಕ, ಹಿರಿಯ ಶ್ರೇಣಿ ಉಪನ್ಯಾಸಕ, ಆಯ್ಕೆ ಶ್ರೇಣಿ ಉಪನ್ಯಾಸಕರ ಎಂದು ಹೆಸರಿಸಲಾಯಿತು. 2006ರಲ್ಲಿ ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಮತ್ತು ಪ್ರಾಧ್ಯಾಪಕ ಎಂದು ಹೆಸರಿಸಲಾಯಿತು. ಆದರೆ ರಾಜ್ಯದಲ್ಲಿ ಪದವಿ ಕಾಲೇಜಿನ ಬೋಧಕರಿಗೆ ಪ್ರಾಧ್ಯಾಪಕ ಹುದ್ದೆಗೆ ಭಾಗ್ಯ ದೊರೆತಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT