ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಬಡ್ತಿ ಮೀಸಲಾತಿ ಮಸೂದೆ ಅಂಗೀಕಾರ

Last Updated 17 ನವೆಂಬರ್ 2017, 20:11 IST
ಅಕ್ಷರ ಗಾತ್ರ

ಬೆಳಗಾವಿ: ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ತತ್ಪರಿಣಾಮವಾದ ಜ್ಯೇಷ್ಠತೆ ವಿಸ್ತರಿಸಲು ಅವಕಾಶ ಕಲ್ಪಿಸುವ ಮಸೂದೆ ವಿಧಾನಸಭೆಯಲ್ಲಿ ಶುಕ್ರವಾರ ಅಂಗೀಕಾರಗೊಂಡಿತು.

‌ಬಡ್ತಿ ಮೀಸಲಾತಿ ಕಾಯ್ದೆ–2002 ಅನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ್ದರಿಂದಾಗಿ ಹಿಂಬಡ್ತಿ ಆತಂಕ ಎದುರಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಿಬ್ಬಂದಿಯ ಹಿತ ಕಾಪಾಡುವ ಉದ್ದೇಶದಿಂದ ಸರ್ಕಾರ ಈ ಮಸೂದೆ ಮಂಡಿಸಿದೆ.

ಮಸೂದೆಗೆ ಅನುಮೋದನೆ ಕೋರಿ ಮಾತನಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ, ‘ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಪರಿಶಿಷ್ಟ ಜಾತಿ, ಪಂಗಡದವರ ಹಿಂದುಳಿದಿರುವಿಕೆ, ಉದ್ಯೋಗದಲ್ಲಿ ಮೀಸಲಾತಿ ಜಾರಿ, ಬಡ್ತಿಯಲ್ಲಿ ಮೀಸಲಾತಿ ನೀಡಿದ್ದರಿಂದ ಕಾರ್ಯದಕ್ಷತೆಯ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ನೀಡಿದ ವರದಿ, ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌, ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮತ್ತು ಅಡ್ವೊಕೇಟ್‌ ಜನರಲ್‌ ಅಭಿಪ್ರಾಯ ಪಡೆದು ಮಸೂದೆ ಸಿದ್ಧಪಡಿಸಲಾಗಿದೆ’ ಎಂದರು.

ಚರ್ಚೆ ಆರಂಭಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಮಸೂದೆಗೆ ನಮ್ಮ ತಕರಾರು ಇಲ್ಲ. ಆದರೆ, ಬಡ್ತಿ ಮೀಸಲಾತಿ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ  ವಾದ– ವಿವಾದ ನಡೆದಾಗ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸಲು ವಿಫಲವಾಗಿದೆ. ಕಾನೂನು ಹೋರಾಟದಲ್ಲಿ ಸರ್ಕಾರ ವಿಫಲವಾಗಿದ್ದರಿಂದ ಇಂಥದ್ದೊಂದು ಮಸೂದೆ ತರುವ ಅಗತ್ಯ ಬಿತ್ತು. ವಾಸ್ತವ ಅಂಶಗಳು ಮತ್ತು ಸರಿಯಾದ ಅಂಕಿಅಂಶಗಳನ್ನು ವಾದ ಮಂಡನೆಯ ಸಂದರ್ಭದಲ್ಲಿ ಸರ್ಕಾರ ನ್ಯಾಯಾಲಯದ ಮುಂದಿಟ್ಟಿಲ್ಲ. ಈ ಹಿಂದೆ, ಕಾವೇರಿ ವಿಷಯದಲ್ಲೂ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಸರ್ಕಾರ ವಿಫಲವಾಗಿತ್ತು’ ಎಂದು ನೆನಪಿಸಿದರು.

‘ಬಡ್ತಿ ಮೀಸಲಾತಿ ಪ್ರಕರಣದಲ್ಲಿ ಸರ್ಕಾರ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿ ವಿಲೇವಾರಿಗೆ ಬಾಕಿ ಇರುವಾಗ ಮಸೂದೆ ತರುವ ಅನಿವಾರ್ಯ ಇತ್ತೇ?  ಸುಪ್ರೀಂ ಕೋರ್ಟ್ ಆದೇಶ ಪಾಲನೆಯಿಂದ ತಪ್ಪಿಸಿಕೊಳ್ಳಲು ಮಸೂದೆ ತರಲಾಗುತ್ತಿದೆಯೇ’ ಎಂದೂ ಪ್ರಶ್ನಿಸಿದ ಶೆಟ್ಟರ್‌, ‘ಕಾನೂನು ಆಯೋಗ, ಅಡ್ವೊಕೇಟ್‌ ಜನರಲ್‌ ಹಾಗೂ ನ್ಯಾಯಮೂರ್ತಿಗಳಾದ ಠಾಕೂರ್‌ ಮತ್ತು ಗೋಪಾಲ ಗೌಡ ಅವರು ಯಾವ ಅಭಿಪ್ರಾಯ ನೀಡಿದ್ದಾರೆ ಎಂಬುದನ್ನು ತಿಳಿಸಬೇಕು’ ಎಂದೂ ಆಗ್ರಹಿಸಿದರು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮೊಸರಿನಲ್ಲಿ ಕಲ್ಲು ಹುಡುಕುವುದು ಬೇಡ. ಮಸೂದೆಯನ್ನು ಸ್ವಾಗತಿಸುತ್ತೀರೊ, ಇಲ್ಲವೊ’ ಎಂದು ಪ್ರಶ್ನಿಸಿದರು.

ಮಾತು ಮುಂದುವರಿಸಿದ ಶೆಟ್ಟರ್‌, ‘ಮಸೂದೆಗೆ ನಮ್ಮ ವಿರೋಧ ಇಲ್ಲ. ಆದರೆ, ಇದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ರಕ್ಷಣೆಗೆ ನಿಲ್ಲಬೇಕೇ ಹೊರತು ಕಣ್ಣೊರೆಸುವ ತಂತ್ರ ಆಗಬಾರದು’ ಎಂದು ವಾದಿಸಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಮಸೂದೆಗೆ ನಮ್ಮ ವಿರೋಧ ಇಲ್ಲ. ಆದರೆ, ಮಸೂದೆ ಅಂಗೀಕಾರವಾದರೆ ಲಾಭವೇನು, ಮರು ಪರಿಶೀಲನಾ ಅರ್ಜಿಗೆ ಇದರಿಂದ ಬಲ ಬರುತ್ತದೆಯೇ. ಕೇವಲ ಎಸ್‌ಸಿ, ಎಸ್‌ಟಿ ವರ್ಗವನ್ನು ಸಮಾಧಾನಪಡಿಸಲು ಮಸೂದೆ ತರಲಾಗುತ್ತಿದೆಯೇ, ಕಾನೂನು ತಜ್ಞರ ಅಭಿಪ್ರಾಯಗಳೇನು, ಮಸೂದೆ ಅಂಗೀಕಾರಗೊಂಡರೆ ಹಿಂಬಡ್ತಿ ಆತಂಕದಲ್ಲಿರುವ ನೌಕರರ ಹಿತ ಕಾಪಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

‘ಸಾಮಾಜಿಕ ನ್ಯಾಯದಡಿ ಶೋಷಿತ ವರ್ಗಗಳ ಹಿತ ಕಾಪಾಡಬೇಕೆನ್ನುವುದು ನಿರ್ವಿವಾದ. ಆದರೆ, ಸ್ವಾಭಾವಿಕ ನ್ಯಾಯಕ್ಕೆ ಇದರಿಂದ ಧಕ್ಕೆ ಆಗಬಾರದು. ಎರಡನ್ನೂ ಪಾಲಿಸಬೇಕಾದ ಅಗತ್ಯವಿದೆ. ಇದೊಂದು ಸೂಕ್ಷ್ಮ ವಿಷಯವಾಗಿರುವುದರಿಂದ ಎಚ್ಚರಿಕೆಯ ನಡೆ ಇಡಬೇಕು’ ಎಂದು ಬಿಜೆಪಿಯ ಸಿ.ಟಿ ರವಿ ಸಲಹೆ ನೀಡಿದರು.

ಬಿಜೆಪಿಯ ಗೋವಿಂದ ಕಾರಜೋಳ, ‘ಸುಪ್ರೀಂ ಕೋರ್ಟ್‌ ಬಡ್ತಿ ಮೀಸಲಾತಿ ಕಾಯ್ದೆಯನ್ನು ಫೆಬ್ರುವರಿಯಲ್ಲೇ ರದ್ದುಪಡಿಸಿದೆ. ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸಬಹುದಿತ್ತು. ತರಾತುರಿಯಲ್ಲಿ ಮಸೂದೆ ಮಂಡಿಸುವ ಅಗತ್ಯವೇನಿತ್ತು. ಕೂಸನ್ನು ಚಿವುಟುವುದು, ರಮಿಸುವುದು ಮಾಡಿದರೆ ಹೇಗೆ, ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಯಾಕೆ’ ಎಂದು ಪ್ರಶ್ನಿಸಿದರು.

‘ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಬಾಕಿ ಇದ್ದರೂ, ಪವಿತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನುಷ್ಠಾನದ ಅನಿವಾರ್ಯತೆ ಇದೆ. ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಹೀಗಾಗಿ ಕಾನೂನು ರಕ್ಷಣೆ ಅಗತ್ಯವಾಗಿದೆ. ಹಾಗೆಂದು, ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಮಸೂದೆ ತರುತ್ತಿಲ್ಲ. ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ’ ಎಂದು ಜಯಚಂದ್ರ ಸ್ಪಷ್ಟಪಡಿಸಿದರು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮೊಸರಿನಲ್ಲಿ ಕಲ್ಲು ಹುಡುಕುವುದು ಬೇಡ. ಮಸೂದೆಯನ್ನು ಸ್ವಾಗತಿಸುತ್ತೀರೊ, ಇಲ್ಲವೊ’ ಎಂದು ಪ್ರಶ್ನಿಸಿದರು.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಮಸೂದೆಗೆ ನಮ್ಮ ವಿರೋಧ ಇಲ್ಲ. ಆದರೆ, ಮಸೂದೆ ಅಂಗೀಕಾರವಾದರೆ ಲಾಭವೇನು, ಮರು ಪರಿಶೀಲನಾ ಅರ್ಜಿಗೆ ಇದರಿಂದ ಬಲ ಬರುತ್ತದೆಯೇ. ಕೇವಲ ಎಸ್‌ಸಿ, ಎಸ್‌ಟಿ ವರ್ಗವನ್ನು ಸಮಾಧಾನಪಡಿಸಲು ಮಸೂದೆ ತರಲಾಗುತ್ತಿದೆಯೇ, ಕಾನೂನು ತಜ್ಞರ ಅಭಿಪ್ರಾಯಗಳೇನು, ಮಸೂದೆ ಅಂಗೀಕಾರಗೊಂಡರೆ ಹಿಂಬಡ್ತಿ ಆತಂಕದಲ್ಲಿರುವ ನೌಕರರ ಹಿತ ಕಾಪಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.

ಬಿಜೆಪಿಯ ಗೋವಿಂದ ಕಾರಜೋಳ, ‘ಸುಪ್ರೀಂ ಕೋರ್ಟ್‌ ಬಡ್ತಿ ಮೀಸಲಾತಿ ಕಾಯ್ದೆಯನ್ನು ಫೆಬ್ರುವರಿಯಲ್ಲೇ ರದ್ದುಪಡಿಸಿದೆ. ವಿಶೇಷ ಅಧಿವೇಶನ ಕರೆದು ಮಸೂದೆ ಮಂಡಿಸಬಹುದಿತ್ತು. ತರಾತುರಿಯಲ್ಲಿ ಮಸೂದೆ ಮಂಡಿಸುವ ಅಗತ್ಯವೇನಿತ್ತು. ಕೂಸನ್ನು ಚಿವುಟುವುದು, ರಮಿಸುವುದು ಮಾಡಿದರೆ ಹೇಗೆ, ಯುದ್ದ ಕಾಲದಲ್ಲಿ ಶಸ್ತ್ರಾಭ್ಯಾಸ ಯಾಕೆ’ ಎಂದು ಪ್ರಶ್ನಿಸಿದರು.

‘ಮರು ಪರಿಶೀಲನಾ ಅರ್ಜಿ ವಿಚಾರಣೆಗೆ ಬಾಕಿ ಇದ್ದರೂ, ಪವಿತ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನುಷ್ಠಾನದ ಅನಿವಾರ್ಯತೆ ಇದೆ. ಪಾಲಿಸದಿದ್ದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಹೀಗಾಗಿ ಕಾನೂನು ರಕ್ಷಣೆ ಅಗತ್ಯವಾಗಿದೆ. ಹಾಗೆಂದು, ಸುಪ್ರೀಂ ಕೋರ್ಟ್ ತೀರ್ಪು ವಿರೋಧಿಸಿ ಮಸೂದೆ ತರುತ್ತಿಲ್ಲ. ಕಾನೂನು ತಜ್ಞರ ಅಭಿಪ್ರಾಯ ಪಡೆದೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ’ ಎಂದು ಜಯಚಂದ್ರ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT