ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಪಿಂಚಣಿ: ‘ತಬರ’ಳಾದ ಮೀರಾ ನಾಯಕ

13 ವರ್ಷಗಳಿಂದ ಹಣಕ್ಕೆ ಸರ್ಕಾರಿ ಶಾಲೆ ನಿವೃತ್ತ್ತ ಸಹಶಿಕ್ಷಕಿ ಪರದಾಟ
Last Updated 18 ಜೂನ್ 2015, 19:30 IST
ಅಕ್ಷರ ಗಾತ್ರ

ಮೈಸೂರು:  ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಪಿಂಚಣಿಗಾಗಿ ಅಲೆಯುವ ‘ತಬರ’ನ ಕುರಿತು ಬರೆದ ಕಥೆ ಎಲ್ಲರಿಗೂ ಗೊತ್ತು. ತೇಜಸ್ವಿ ಅವರಿಗೆ ಆತ್ಮೀಯರಾದ ಮೀರಾ ನಾಯಕ ಅವರೂ ‘ತಬರ’ಳಾಗಿ, 13 ವರ್ಷಗಳಿಂದ   ಪಿಂಚಣಿಗಾಗಿ ಕಾದು ಕುಳಿತಿದ್ದಾರೆ.

ಸಮತಾ ವೇದಿಕೆಯ ಸಂಸ್ಥಾಪಕ ಸದಸ್ಯರಲ್ಲೊಬ್ಬರಾದ ಮೀರಾ ನಾಯಕ ಪ್ರತಿ ಬುಧವಾರ ಮೈಸೂರಿನಲ್ಲಿನ ಸರಸ್ವತಿಪುರಂನಲ್ಲಿರುವ ತಮ್ಮ ಮನೆಯಲ್ಲಿ ಸಭೆ ನಡೆಸುತ್ತಾರೆ. ಅಲ್ಲಿ ಅಸಹಾಯಕ ಮಹಿಳೆಯರಿಗೆ ನೆರವಾಗುವುದು, ಅನ್ಯಾಯಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸುವ ಕುರಿತು ಚರ್ಚಿಸುತ್ತಾರೆ.

ಅಗತ್ಯವಾದರೆ ಹೋರಾಟಕ್ಕೂ ಇಳಿಯುತ್ತಾರೆ. ಹೋರಾಟಗಾರ್ತಿಯಾದ ಅವರಿಗೆ ತಮ್ಮ ಪಿಂಚಣಿಯನ್ನು ಕಳೆದ 13 ವರ್ಷಗಳಿಂದ ಪಡೆಯಲು ಸಾಧ್ಯವಾಗಿಲ್ಲ.
ಮೈಸೂರು ವಿಶ್ವವಿದ್ಯಾನಿಲಯದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹಶಿಕ್ಷಕಿಯಾಗಿದ್ದ ಅವರು, 2003ರಲ್ಲಿ ನಿವೃತ್ತಿಯಾದರು. ಪ್ರತಿ ತಿಂಗಳು ₨ 7 ಸಾವಿರ ಪಿಂಚಣಿಯಿಂದ ಅವರು ವಂಚಿತರಾಗಿದ್ದಾರೆ. ಅವರ ಉದ್ಯೋಗ ಕಾಯಂಗೊಂಡ 1985ರಿಂದ ನಿವೃತ್ತಿಯಾದ 2003ರವರೆಗಿನ ಪಿಂಚಣಿಯೇ ₨ 10 ಲಕ್ಷ ದಾಟುತ್ತದೆ. ಜತೆಗೆ, ಅದರ ಬಡ್ಡಿ ಬೇರೆ ಪಾವತಿಯಾಗಬೇಕು.

ವಿವರ: ವಿಮರ್ಶಕ ಜಿ.ಎಚ್‌. ನಾಯಕ ಅವರ ಪತ್ನಿ  ಮೀರಾ ಅವರು, ಬಿ.ಎ, ಬಿ.ಇಡಿ ಪದವಿ ಪಡೆದಿದ್ದರು. ಹೀಗಾಗಿ, 1975ರಲ್ಲಿ ಮೈಸೂರು ತಾಲ್ಲೂಕಿನ ಮೇಗಳಾಪುರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಗೆ ಸಹಶಿಕ್ಷಕಿಯಾಗಿ ನೇಮಕಗೊಂಡರು. ಅಲ್ಲಿ 11 ತಿಂಗಳು ಸೇವೆ ಸಲ್ಲಿಸಿದ ನಂತರ ಮೈಸೂರಲ್ಲಿ ಮೈಸೂರು ವಿವಿಯ ಪೂರ್ವ ಪ್ರಾಥಮಿಕ ಶಾಲೆಗೆ ಬಿ.ಎ ಹಾಗೂ ಬಿ.ಇಡಿ ಪದವಿ ಪಡೆದ ಶಿಕ್ಷಕಕರಿಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಮೈಸೂರಲ್ಲಿಯೇ ಸೇವೆ ಸಲ್ಲಿಸಬಹುದೆಂಬ ಕಾರಣಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾದರು. ನಂತರ ಆ ಶಾಲೆ ಹಿರಿಯ ಪ್ರಾಥಮಿಕ ಶಾಲೆಯಾಯಿತು. ಪ್ರೌಢಶಾಲೆಯಾಗಬೇಕೆಂದು ಮೀರಾ ಅವರು ಇತರ ಶಿಕ್ಷಕರೊಂದಿಗೆ ಉಪವಾಸ ಸತ್ಯಾಗ್ರಹ ಮಾಡಿದರು. ಆಮೇಲೆ ಪ್ರೌಢಶಾಲೆಯೂ ಆಯಿತು.

ಮುಖ್ಯ ಶಿಕ್ಷಕಿಯಾಗುವ ಸಾಧ್ಯತೆಯಿದ್ದರೂ ನಿರಾಕರಿಸಿ ಪಾಠ ಮಾಡುವುದರಲ್ಲೇ ಖುಷಿಪಟ್ಟರು. ನಂತರ ಮುಕ್ತ ವಿವಿಯಿಂದ ಕನ್ನಡ ಎಂ.ಎ. ಪದವಿ ಪಡೆದರೂ ತಾವಿದ್ದ ಶಾಲೆಗೇ ಸೀಮಿತರಾದರು. ಅಂದರೆ, 16 ವರ್ಷದೊಳಗಿನ ಮಕ್ಕಳಿಗೆ ಕಲಿಸಬೇಕೆಂದು ಅವರು ನಿರ್ಧರಿಸಿದ ಪರಿಣಾಮ ಪ್ರೌಢಶಾಲೆಯಲ್ಲಿಯೇ ಉಳಿದರು. ಈ ಶಾಲೆ 1985ರಲ್ಲಿ ಅನುದಾನ ಪಡೆದ ಕಾರಣ ಮೀರಾ ಅವರ ನೌಕರಿ ಕಾಯಂ ಆಯಿತು.

ಒಟ್ಟು 27 ವರ್ಷ ಶಿಕ್ಷಕಿಯಾಗಿ ದುಡಿದರೂ, 1985ರಿಂದ ಮಾತ್ರ ಅವರು ಪಿಂಚಣಿ ಪಡೆಯಲು ಅರ್ಹರಾದರು. ನಿವೃತ್ತಿಯ ನಂತರ ಪಿಂಚಣಿ ಸಲುವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ದೇಶಕರು, ಪ್ರೌಢಶಿಕ್ಷಣ ಸಚಿವರಿಗೆ ಪತ್ರ ಬರೆದರು. ಭರವಸೆ ಸಿಕ್ಕಿತೇ ವಿನಾ ಪಿಂಚಣಿ ಸಿಗಲಿಲ್ಲ. ನಂತರ ಅವರು ಹೈಕೋರ್ಟ್‌ ಮೆಟ್ಟಿಲೇರಿದರು. ಅಲ್ಲಿ ಅವರ ಪರವಾಗಿ ತೀರ್ಪು ಸಿಕ್ಕಿತು. ಆದರೆ, ಪರಿಹಾರ ಸಿಗಲಿಲ್ಲ.

ಶಿಕ್ಷಣ ಇಲಾಖೆಯಿಂದ ನಿವೃತ್ತರಾದ ಶಿಕ್ಷಕರು ಹಾಗೂ ಶಿಕ್ಷಕೇತರರ ಪಿಂಚಣಿಗೆ ಸಂಬಂಧಿಸಿ ಮೀರಾ ಅವರನ್ನೂ ಸೇರಿಸಿ ರಾಜ್ಯ ಸರ್ಕಾರವು ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ದಿತು. ‘ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋದ ಪ್ರಕರಣದಲ್ಲಿ ನನ್ನನ್ನು ಸೇರಿಸಿದ್ದು ಯಾಕೆಂದು ಗೊತ್ತಿಲ್ಲ.

ಹೋರಾಟ ಮಾಡಿದೆ. ಅಲ್ಲಿಯೂ ನ್ಯಾಯ ಒದಗಿಸಬೇಕೆಂದು ಆದೇಶವಾಯಿತು. ಇದಾಗಿ 3–4 ವರ್ಷಗಳಾಯಿತು. ಇದುವರೆಗೆ ಪಿಂಚಣಿ ಸಿಕ್ಕಿಲ್ಲ. ನನಗೆ ಲಂಚ ಕೊಟ್ಟು ಗೊತ್ತಿಲ್ಲ. ಹೀಗಾಗಿ, ಮತ್ತೆ ಈಗ ಹೈಕೋರ್ಟ್ ಮೆಟ್ಟಿಲೇರಿರುವೆ’ ಎಂದು ಬೇಸರದಿಂದ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT