ನವಲಗುಂದ: ಮಹಾದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತೀರ್ಪು ತಮ್ಮ ಪರವಾಗಿರಲಿದೆ ಎಂದು ಜುಲೈ 27ರ ಮಧ್ಯಾಹ್ನ ನವಲಗುಂದ ಪಟ್ಟಣದಲ್ಲಿ ಹೋರಾಟಗಾರರು ಶಿರಾ ತಯಾರಿಸಿಟ್ಟುಕೊಂಡು ಕಾದುನಿಂತಿದ್ದರು.

ಆದರೆ ಮಧ್ಯಾಹ್ನ 2.30ರ ಹೊತ್ತಿಗೆ ನ್ಯಾಯಮಂಡಳಿಯಿಂದ ಹೊರಬಿದ್ದ ವ್ಯತಿರಿಕ್ತ ತೀರ್ಪು ಇಲ್ಲಿನ ಜನರನ್ನು ಬೇಸರದಲ್ಲಿ ಕೆಡವಿದರೆ, ಹೋರಾಟಗಾರರನ್ನು ಕೆರಳಿಸಿತ್ತು. ಪರಿಣಾಮವಾಗಿ ಸರ್ಕಾರಿ ಕಚೇರಿಗಳು ಅವರ ಆಕ್ರೋಶಕ್ಕೆ ತುತ್ತಾದವು.

ಅಂದು ನಡೆದ ಗಲಭೆಯಲ್ಲಿ ತಾಲ್ಲೂಕು ಜೆಎಂಎಫ್ ನ್ಯಾಯಾಲಯ, ಬಿಎಸ್ಎನ್ಎಲ್ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಪುರಸಭೆ, ಲೋಕೋಪಯೋಗಿ ಇಲಾಖೆ, ಬಸ್ ನಿಲ್ದಾಣ ಹಾಗೂ ನೀರಾವರಿ ಇಲಾಖೆ ಕಚೇರಿಗಳಿಗೆ ಭಾರಿ ಹಾನಿಯಾಗಿದೆ. ಉಳಿದಂತೆ ಎಸ್ಬಿಎಂ ಹಾಗೂ ಎಸ್ಬಿಐ ಕಚೇರಿಗಳಿಗೂ ಪರೋಕ್ಷವಾಗಿ ಬಂದ್ ಬಿಸಿ ತಟ್ಟಿದೆ.

ಇಡೀ ಊರೇ ಈಗ ಬೂದಿ ಮುಚ್ಚಿದ ಕೆಂಡದಂತಿದೆ. ಉದ್ರಿಕ್ತರು ಇಟ್ಟ ಬೆಂಕಿಯಲ್ಲಿ ಕಚೇರಿಗಳ ಪೀಠೋಪಕರಣಗಳು ಉರಿದು ಇದ್ದಿಲಾಗಿವೆ. ಅರ್ಧದಷ್ಟು ಉರಿದು, ಇನ್ನರ್ಧ ಅಗ್ನಿಶಾಮಕದ ನೀರಿನಲ್ಲಿ ತೊಯ್ದ ಕಡತಗಳು ಯಾವುದಕ್ಕೆ ಸಂಬಂಧಿಸಿದವು ಎಂಬುದನ್ನು ಗುರುತು ಹಿಡಿಯಲಾಗುತ್ತಿಲ್ಲ.

ಇಲಾಖೆಗಳ ಕಟ್ಟಡಗಳ ಕಿಟಕಿ ಗಾಜು, ಬಾಗಿಲು, ಪೀಠೋಪಕರಣ, ವಾಹನ ಯಾವುದನ್ನೂ ಪ್ರತಿಭಟನಾಕಾರರು ಉಳಿಸಿಲ್ಲ. ಸಲಾಕೆ, ಕೊಡಲಿ, ಬಡಿಗೆಗಳನ್ನು ಹಿಡಿದು ಬಂದಿದ್ದ ಹೋರಾಟಗಾರರ ಸಿಟ್ಟಿಗೆ ಯಾವುದೇ ಜೀವ ಬಲಿಯಾಗದಿರುವುದೇ ದೊಡ್ಡ ಸಂಗತಿ ಎಂದು ಇಡೀ ಘಟನೆಯನ್ನು ಕಣ್ಣಾರೆ ಕಂಡ ಸಿಬ್ಬಂದಿ ಬಿಡಿಸಿಟ್ಟರು. ಎರಡು ದಿನಗಳ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈವರೆಗೆ 19 ಪ್ರಕರಣಗಳು ದಾಖಲಾಗಿವೆ.

ಬೆಂಕಿಪೊಟ್ಟಣ ಕೈಗೆ ಸಿಗದೇ ದಾಖಲೆ ಬಚಾವ್: ಹೋರಾಟಗಾರರು ಮೊದಲು ನ್ಯಾಯಾಲಯವೂ ಸೇರಿದಂತೆ ಕೆಲವು ಕಟ್ಟಡಗಳಿಗೆ ಕಲ್ಲು ಬೀಸಿದರು. ಪರಿಣಾಮ ಅವುಗಳ ಕಿಟಕಿ ಗಾಜುಗಳು ಪುಡಿಯಾದವು.

2009ರಲ್ಲಿ ನಿರ್ಮಾಣವಾದ ಈ ನ್ಯಾಯಾಲಯದ ಎಲ್ಲಾ ಕಿಟಕಿ ಮತ್ತು ಒಳಗಿನ ಗಾಜುಗಳು ಸಂಪೂರ್ಣ ಪುಡಿಯಾಗಿವೆ. ನೆಲದ ಮೇಲೆ ಬಿದ್ದಿರುವ ಗಾಜಿನ ಪುಡಿಗಳು, ಜಖಂಗೊಂಡು ಆವರಣದಲ್ಲಿ ಅನಾಥವಾಗಿ ಬಿದ್ದಿರುವ ಜಪ್ತಿ ಮಾಡಿದ್ದ ಬೈಕ್ ಇಡೀ ಘಟನೆಗೆ ಸಾಕ್ಷಿಯಾಗಿವೆ.

ಇಲ್ಲಿನ ಸಿಬ್ಬಂದಿ ಹೇಳುವಂತೆ, ‘ಅಂದು ಮಧ್ಯಾಹ್ನದ ಹೊತ್ತಿಗೆ ನ್ಯಾಯಾಲಯಕ್ಕೆ ನುಗ್ಗಿದ 300ಕ್ಕೂ ಹೆಚ್ಚು ಉದ್ರಿಕ್ತರು, ಸಿಬ್ಬಂದಿಗೆ ಸುಮ್ಮನಿರುವಂತೆ ಸೂಚಿಸಿದರು. ಜತೆಗೆ ಎಲ್ಲರೂ ಕಚೇರಿಯಿಂದ ಹೊರಹೋಗುವಂತೆ ಹೇಳಿದರು. ನಂತರ ಪೀಠೋಪಕರಣ ಸೇರಿ ಎಲ್ಲವನ್ನೂ ಧ್ವಂಸಗೊಳಿಸಿದರು. ಎಲ್ಲವನ್ನೂ ಗುಡ್ಡೆ ಹಾಕಿದ ಪ್ರತಿಭಟನಾಕಾರರು, ನಂತರ ಬೆಂಕಿ ಪೊಟ್ಟಣಕ್ಕಾಗಿ ತಡಕಾಡಿದರು. ಆ ಹೊತ್ತಿಗೆ ಅವರ ಕೈಗೆ ಬೆಂಕಿಪೊಟ್ಟಣ ಸಿಗಲಿಲ್ಲ.

ಸಿಕ್ಕಿದ್ದಿದ್ದರೆ 2009ರಿಂದ ಇಲ್ಲಿವರೆಗಿನ ವಿಲೇವಾರಿಯಾದ ಪ್ರಕರಣಗಳ ದಾಖಲೆಗಳು ಸಂಪೂರ್ಣ ಭಸ್ಮವಾಗುತ್ತಿತ್ತು. ಈ ನ್ಯಾಯಾಲಯದಲ್ಲಿ ಪ್ರತಿ ದಿನ 30 ರಿಂದ 40 ಪ್ರಕರಣಗಳು ಇತ್ಯರ್ಥವಾಗುತ್ತವೆ. ಜತೆಗೆ 1,600 ಪ್ರಕರಣಗಳು ವಿಚಾರಣಾ ಹಂತದಲ್ಲಿವೆ. ಆ ದಾಖಲೆಗಳೂ ಸುಟ್ಟು ಹೋಗುತ್ತಿದ್ದವು’ ಎಂದು ಹೋರಾಟಗಾರರ ಸಿಟ್ಟನ್ನು ನೆನೆದು ನಡುಗಿದರು ಅಲ್ಲಿನ ಸಿಬ್ಬಂದಿ.

‘ನೂರಾರು ಸಂಖ್ಯೆಯಲ್ಲಿದ್ದ ಹೋರಾಟಗಾರರನ್ನು ಪೊಲೀಸರು ನಿಯಂತ್ರಿಸದಿದ್ದರೆ ದಂಗೆಯೇ ಆಗುತ್ತಿತ್ತು. ಅಷ್ಟು ನಿಯಂತ್ರಿಸಿದರೂ ಇಷ್ಟು ನಷ್ಟವಾಗಿದೆ. ಒಂದೊಮ್ಮೆ ಇದನ್ನು ಹೀಗೇ ಬಿಟ್ಟಿದ್ದರೆ ಬಹುಶಃ ಇಡೀ ಊರೇ ಹೊತ್ತಿ ಉರಿಯುತ್ತಿತ್ತು’ ಎಂದು ಹೇಳಿದ ಅವರು, ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸಲಿಲ್ಲ.

ಕೇಂದ್ರದ ಮೇಲಿನ ಸಿಟ್ಟು: ಬಿಎಸ್ಎನ್ಎಲ್ ಕಚೇರಿಯಲ್ಲಿ ಸುಟ್ಟು ಕರಕಲಾದ ವಸ್ತುಗಳನ್ನು ಸೋಮವಾರ ತೆರವುಗೊಳಿಸುವ ಕಾರ್ಯ ನಡೆದಿತ್ತು. ಸುಟ್ಟು ಕರಕಲಾದ ಹವಾನಿಯಂತ್ರಿತ ಸಾಧನ, ಕೇಬಲ್, ಇನ್ವರ್ಟರ್ ಇತ್ಯಾದಿಗಳನ್ನು ಟ್ರ್ಯಾಕ್ಟರ್ಗೆ ತುಂಬಲಾಗುತ್ತಿತ್ತು.

ಕಚೇರಿಯ ನೆಲ ಮಾಳಿಗೆಯಲ್ಲಿದ್ದ ಗೋದಾಮು ಸಂಪೂರ್ಣ ಭಸ್ಮವಾಗಿದೆ. ಇದರೊಳಗಿದ್ದ ವಿವಿಧ ಗಾತ್ರದ ಕೇಬಲ್ಗಳು, 300 ಕೆವಿ ಎಕ್ಸ್ಚೇಂಜ್ ಬ್ಯಾಟರಿಗಳು ಸಂಪೂರ್ಣ ಹಾನಿಯಾಗಿದ್ದರಿಂದ ಸ್ಥಳೀಯ ಎಸ್ಬಿಐ, ಎಸ್ಬಿಎಂ ಬ್ಯಾಂಕ್ಗಳ ಇಂಟರ್ನೆಟ್ ಸಂಪರ್ಕ ಕಡಿತಗೊಂಡಿದೆ. ಬ್ಯಾಂಕ್ಗೆ ಸಂಪರ್ಕ ಕಲ್ಪಿಸುವ ಅಂತರ್ಜಾಲ ವ್ಯವಸ್ಥೆಯ ಮೋಡೆಮ್ ಇಲ್ಲೇ ಇರುವುದರಿಂದ ಬ್ಯಾಂಕ್ಗಳ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದೀಗ ಕಾರ್ಯ ನಿರ್ವಹಿಸುತ್ತಿವೆ.

ಕರಕಲಾದ ಪುರಸಭೆಯ ದಾಖಲೆ: ಪುರಸಭೆ ಕಚೇರಿಯಲ್ಲಿ ಜನನ, ಮರಣ ದಾಖಲೆ, ನಗರದಲ್ಲಿ ಕೈಗೊಂಡ ಹಲವು ಕಾಮಗಾರಿಗಳ ಟೆಂಡರ್ ದಾಖಲೆ, ತೆರಿಗೆ ಪಾವತಿ ಮಾಡಿದ ರಸೀದಿ, ಪಹಣಿ, ವಿದ್ಯುತ್ ಉಪಕರಣಗಳ ದಾಖಲೆಗಳು, ಆಸ್ತಿ ಕರ ದಾಖಲೆ ಹೀಗೆ ಈ ಊರಿಗೆ ಸಂಬಂಧಿಸಿದ ಬಹುತೇಕ ದಾಖಲೆಗಳು ಸುಟ್ಟಿವೆ. ಇನ್ನು ಮುಂದೆ ಅವುಗಳನ್ನು ಸಾರ್ವಜನಿಕರಿಗೆ ನೀಡುವುದೇ ಕಷ್ಟವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.