ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಣದಿಂದ ಪಕ್ಷ ಬೆಳೆಯದು

Last Updated 27 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಕ್ರಮ ಹಣದಿಂದ, ಜಾತಿ-ಧರ್ಮ ಪೀಠಗಳ ಅನುಗ್ರಹದಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಅಹಂಕಾರ ಬಿಜೆಪಿಯವರಲ್ಲಿದೆ, ಚನ್ನಪಟ್ಟಣದ ಜನ ಈ ಅಹಂಕಾರವನ್ನು ಮುರಿಯುವ ನಿರ್ಧಾರ ಮಾಡಿದ್ದಾರೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಇಲ್ಲಿ ಹೇಳಿದರು.

ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬೆಂಗಳೂರು ಮಹಾನಗರ ಜೆಡಿಎಸ್ ಕಾರ್ಯಕರ್ತರ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.‘ಬಿಜೆಪಿಯವರ ಆಪರೇಷನ್ ಕಮಲ ಪಿಡುಗಿನ ಕಾರಣ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದೆ, ಕೇಶವಕೃಪಾದ ನಾಯಕರು ಇದಕ್ಕೆ ಮರುಗುತ್ತಾರೋ, ಹೆಮ್ಮೆ ಪಡುತ್ತಾರೋ ಗೊತ್ತಿಲ್ಲ’ ಎಂದು ಅಣಕಿಸಿದರು.

‘ಉಪ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರು ಸ್ಪರ್ಧಿಸುವುದು ನನಗೂ ಇಷ್ಟ ಇರಲಿಲ್ಲ. ಈಗ ಕುಮಾರಸ್ವಾಮಿ ಅವರು ಪಕ್ಷಕ್ಕೆ ಬಹಳ ನಿಷ್ಠೆಯಿಂದ ಸೇವೆ ಸಲ್ಲಿಸಿದ ಸಿಂ.ಲಿಂ. ನಾಗರಾಜ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ’ ಎಂದು ಪ್ರಶಂಸಿಸಿದರು.‘ದೇವೇಗೌಡ ಅಥವಾ ಕುಮಾರಸ್ವಾಮಿ ಅವರ ಭಾಷಣದಿಂದ ಪಕ್ಷ ಬೆಳೆಯುವುದಿಲ್ಲ, ಪಕ್ಷ ಬೆಳೆಯುವುದು ಕಾರ್ಯಕರ್ತರಿಂದ. ಇನ್ನು ಮುಂದೆಯೂ ಸಾಕಷ್ಟು ಹೋರಾಟ ಇದೆ’ ಎಂದು ಕಾರ್ಯಕರ್ತರಿಗೆ ಎಚ್ಚರಿಕೆಯ ಮಾತುಗಳನ್ನು ಹೇಳಿದರು.

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾತನಾಡಿ, ‘ಚನ್ನಪಟ್ಟಣ ಉಪಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಮೊದಲೇ ಘೋಷಿಸಿದ್ದರೆ ಅಲ್ಲಿ ಪಕ್ಷದಲ್ಲೇ ಏಳೆಂಟು ಗುಂಪುಗಳು ಹುಟ್ಟಿಬಿಡುತ್ತಿದ್ದವು. ಜೆಡಿಎಸ್ ಹಣಕ್ಕಾಗಿ ರಾಜಕೀಯ ಮಾಡುತ್ತಿಲ್ಲ ಎಂಬುದನ್ನು ತೋರಿಸಲಿಕ್ಕೆಂದೇ ಪಕ್ಷ ನಿಷ್ಠ ನಾಗರಾಜ್ ಅವರಿಗೆ ಚನ್ನಪಟ್ಟಣದಲ್ಲಿ ಟಿಕೆಟ್ ನೀಡಿದ್ದೇವೆ’ ಎಂದರು.

‘ಅಧಿಕಾರಕ್ಕೆ ಬಂದಾಗಿನಿಂದಲೂ ಯಡಿಯೂರಪ್ಪ ಅವರ ಸ್ಥಾನ ಅಭದ್ರವಾಗಿಯೇ ಇದೆ. ಹವಾಲ ಹಣದಿಂದ ಇಲ್ಲಿಯವರೆಗೆ ಅಧಿಕಾರ ಉಳಿಸಿಕೊಂಡಿದ್ದಾರೆ. ಹವಾಲ ಕಾರ್ಯಕ್ರಮ ನಡೆಸಲಿಕ್ಕೆಂದೇ ಅವರು ವಿಧಾನ ಪರಿಷತ್ ಸದಸ್ಯರೊಬ್ಬರನ್ನು ಇಟ್ಟುಕೊಂಡಿದ್ದಾರೆ’ ಎಂದು ಆರೋಪಿಸಿದರು.‘ಬಂಗಾರಪೇಟೆ ಮತ್ತು ಚನ್ನಪಟ್ಟಣ ಉಪಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವುದು ಖಚಿತ’ ಎಂದ ಅವರು ‘ಇನ್ನು ಎರಡು ತಿಂಗಳಲ್ಲಿ ಸರ್ಕಾರ ಉರುಳುತ್ತದೆ, ಹವಾಲ ಹಣದಿಂದಲೂ ಆಗ ಸರ್ಕಾರ ಉಳಿಯುವುದಿಲ್ಲ’ ಎಂದರು.

ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಮಾತನಾಡಿ, ಬಿಜೆಪಿಯಂತಹ ಅನೀತಿಯ ಸರ್ಕಾರ ಮತ್ತೊಂದಿಲ್ಲ, ಇವರು ಮಾಡಿದ್ದನ್ನೆಲ್ಲ ಆ ಪಕ್ಷದ ಹೈಕಮಾಂಡ್ ಒಪ್ಪುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಬೆಂಗಳೂರು ನಗರದ ಮೂಲಸೌಕರ್ಯ, ಭ್ರಷ್ಟಾಚಾರ ಸೇರಿದಂತೆ ಒಟ್ಟು ಎಂಟು ನಿರ್ಣಯಗಳನ್ನು ಇದೇ ವೇಳೆ ತೆದುಕೊಳ್ಳಲಾಯಿತು. ಪಕ್ಷದ ನಗರ ಘಟಕದ ಅಧ್ಯಕ್ಷ ಎಂ.ಎಸ್. ನಾರಾಯಣ ರಾವ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ರೇವಣ್ಣ, ವಕ್ತಾರ ವೈ.ಎಸ್.ವಿ. ದತ್ತ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT