ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಲಯ ಅಮಾವಾಸ್ಯೆ : ಏನು ವಿಶೇಷ?

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭಾದ್ರಪದ ಕೃಷ್ಣ ಅಮಾವಾಸ್ಯೆ-ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಇದು ಪಿತೃ ಪಕ್ಷದ ಕೊನೆಯಲ್ಲಿ  ಬರುವುದರಿಂದ ಸರ್ವಪಿತೃ ಅಮಾವಾಸ್ಯೆ ಎಂತಲೂ ಕರೆಯುತ್ತಾರೆ.

ನಮ್ಮ ಹಿಂದಿನ ಋಷಿ ಮುನಿಗಳು ಗೋತ್ರ-ಸೂತ್ರ ಪ್ರವರ್ತಕರು ಮತ್ತು ಸಂಸ್ಕತಿಯ ಸಂಸ್ಥಾಪಕರು. ಮನೆಯಲ್ಲೂ ನಮ್ಮ ಹಿರಿಯರಿಂದ ನಾವು ಈ ಭೂಮಿಗೆ ಬಂದಿದ್ದೇವೆ. ನಮ್ಮ ಬಾಳನ್ನು ರೂಪಿಸುವಲ್ಲಿ  ನಮ್ಮ ಹಿರಿಯರು ಅಪಾರ ತ್ಯಾಗ ಮಾಡಿದ್ದಾರೆ.

ನಮಗಾಗಿ ಅವರು ಅನೇಕ ಕಷ್ಟ ನಷ್ಟ ಅನುಭವಿಸಿ ಕೆಲವೊಮ್ಮೆ ಸಾಲ ಮಾಡಿ, ವಿದ್ಯೆ-ಬುದ್ಧಿ ಕಲಿಸಿ ನಮ್ಮನ್ನು ತಿದ್ದಿ ಬೆಳೆಸಿ, ನಮ್ಮ ಬಾಳು ಬಂಗಾರವಾಗುಂತೆ ಮಾಡಿದವರು. ಅವರು ಇಂದು ಸ್ಥೂಲ ಶರೀರದಿಂದ ಪ್ರತ್ಯಕ್ಷವಾಗಿ ನಮ್ಮ ಕಣ್ಮುಂದೆ ಇಲ್ಲವಾದರೂ ಸೂಕ್ಷ್ಮ ಶರೀರದಿಂದ ಪರೋಕ್ಷವಾಗಿ ನಮ್ಮ ಕರ್ತವ್ಯ ಕರ್ಮಗಳನ್ನು ವೀಕ್ಷಿಸುತ್ತಾ ಇರುತ್ತಾರೆ. 

ನಮ್ಮನ್ನಗಲಿದ ತಂದೆ-ತಾಯಿಯರನ್ನು ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಸಹಕರಿಸಿ ನಮ್ಮನ್ನಗಲಿದ ಎಲ್ಲ ಆಪ್ತರನ್ನು ನಮ್ಮ ಜೀವನದಜಂಜಾಟದಲ್ಲಿ ನಿತ್ಯವೂ ಸ್ಮರಿಸಲು ಸಾಧ್ಯವಾಗುವುದಿಲ್ಲ.

ಕೊನೆಯ ಪಕ್ಷ ವರ್ಷಕ್ಕೊಮ್ಮೆ ಪಿತೃ ಪಕ್ಷದಲ್ಲಿ ಅಥವಾ ಮಹಾಲಯ ಅಮಾವಾಸ್ಯೆಯಂದು ಅವರನ್ನು ಸ್ಮರಿಸಿ ತಿಲ ತರ್ಪಣವನ್ನು, ಜಲ ತರ್ಪಣವನ್ನು ಹಾಗೂ ಬಲಿಯನ್ನೋ, ಪಿಂಡದಾನವನ್ನೋ, ನೀಡಿ ಸ್ಮರಿಸಬೇಕು. ಇದು ಈ ಮಹಾಲಯ ಅಮಾವಾಸ್ಯೆಯ ವಿಶೇಷವಾಗಿದೆ.

ಮಹಾಲಯ ಅಮಾವಾಸ್ಯೆಯ ಪೌರಾಣಿಕ ಹಿನ್ನೆಲೆಯೇನೆಂದರೆ, ಮಹಾಭಾರತದ ಬಹು ದೊಡ್ಡ ನಾಯಕರಲ್ಲಿ ಒಬ್ಬನಾದ ಕರ್ಣನು, ಯುದ್ಧದಲ್ಲಿ ಅರ್ಜುನನಿಂದ ಹತನಾದ ಮೇಲೆ ದೇವದೂತರು ಅವನನ್ನು ಸ್ವರ್ಗಕ್ಕೆ ಕರೆದು ಕೊಂಡು ಹೋಗುತ್ತಾರೆ. ಮಾರ್ಗಮಧ್ಯದಲ್ಲಿ  ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ.

ಅವನಿಗೆ ಎಲ್ಲೆಲ್ಲೂ ಬಂಗಾರ, ಬೆಳ್ಳಿ ಮುಂತಾದ ಒಡವೆಗಳು ಕಾಣುತ್ತವೆ. ಇದರಿಂದ ಅವನು ತೀವ್ರವಾಗಿ ಮನನೊಂದು, ಸಾವಿನ ದೇವತೆಯಾದ ಯಮನನ್ನು ಕುರಿತು ಭಕ್ತಿಯಿಂದ ಪ್ರಾರ್ಥಿಸುತ್ತಾನೆ. ಕರ್ಣನ ಪ್ರಾರ್ಥನೆಗೆ ಯಮನು ಪ್ರತ್ಯಕ್ಷನಾಗಿ ಭಾದ್ರಪದಮಾಸದ ಮಹಾಲಯ ಪಕ್ಷದ ದಿನಗಳಂದು ದಾನವನ್ನು ಮಾಡುವಂತೆ ಹೇಳುತ್ತಾನೆ.

ಯಮನ ಆದೇಶದಂತೆ ಕರ್ಣನು  ಮತ್ತೆ ಭೂಮಿಗೆ ಹಿಂತಿರುಗಿ ಭಾದ್ರಪದ ಮಾಸದ ಮಹಾಲಯ ಪಕ್ಷದ ದಿನಗಳಂದು ಯಥೇಚ್ಚವಾಗಿ ತನ್ನ ಹಿರಿಯರಿಗೆ, ಹಾಗು ಬಡವರಿಗೆ ಅನ್ನ ಹಾಗು ವಸ್ತ್ರದಾನವನ್ನು ಮಾಡುತ್ತಾನೆ. ಇದರಿಂದ ಸಂತುಷ್ಟರಾದ ಪಿತೃಗಳು ಅವನನ್ನು ಹರಸುತ್ತಾರೆ.

ಅವರ ಆಶೀರ್ವಾದದಿಂದ ಕರ್ಣನು ಯಾವುದೇ ತೊಂದರೆಯಿಲ್ಲದೇ ಸ್ವರ್ಗಕ್ಕೆ ಹೋಗುತ್ತಾನೆ ಎಂದು ಪುರಾಣಗಳಲ್ಲಿ ಹೇಳಿದೆ.  ಹಿರಿಯರಿಗೆ ಮಾಡುವ ಈ ಕಾರ್ಯವನ್ನು ಸಾಮಾನ್ಯವಾಗಿ ಎಡೆ ಇಡುವ ಕಾರ್ಯವೆಂದು ಸವರ್ಣೀಯರೂ ಮಾಡುತ್ತಾರೆ. ಅಲ್ಲದೇ ಅವರ ಹಿರಿಯರಿಗೆ ಇಷ್ಟವಾದ ತಿಂಡಿ, ತಿನಿಸುಗಳನ್ನು ಬಟ್ಟೆ-ಬರೆಗಳನ್ನು ಅವರ ಭಾವಚಿತ್ರದ ಬಳಿ ಇಟ್ಟು ಪೂಜೆ ಮಾಡಿ ನಂತರ ಮನೆಯವರು ಪ್ರಸಾದದ ರೂಪದಲ್ಲಿ ಸೇವಿಸಿ ನಂತರ ಬಡವರಿಗೆ ಇವುಗಳನ್ನು ದಾನ ಮಾಡುವುದು ವಾಡಿಕೆಯಾಗಿದೆ.

ಈ ಪಿತೃಪಕ್ಷದ ದಿನಗಳಂದು ಅಥವಾ ಮಹಾಲಯ ಅಮಾವಾಸ್ಯೆಯಂದು ನಮ್ಮಲ್ಲಿರುವುದರಲ್ಲಿ  ಸ್ವಲ್ಪವನ್ನಾದರೂ ದಾನ ಮಾಡಿದರೆ ಪಿತೃಗಳು ಸಂತುಷ್ಟರಾಗಿ ನಮಗೆ ಇನ್ನೂ ಹೆಚ್ಚಿನ ಸುಖ ಸಂತೋಷಗಳನ್ನು ನೀಡುತ್ತಾರೆ ಎಂಬ ನಂಬಿಕೆಯಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT