ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್–150ಕ್ಕಾಗಿ ಜೆಡಿಎಸ್‌ಗೆ ಆಪರೇಶನ್!

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ವಂತ ಬಲದ ಮೇಲೆ ಗೆಲ್ಲುವ ಶಕ್ತಿಯಿಲ್ಲದ ಏಳು ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರನ್ನು ಸೆಳೆದು ಅಲ್ಲಿ ಪಕ್ಷದ ಬಾವುಟ ಹಾರಿಸಲು ಬಿಜೆಪಿ ಪ್ರಮುಖರು ಕಾರ್ಯ ಪ್ರವೃತ್ತರಾಗಿದ್ದಾರೆ.

2008ರ ಚುನಾವಣೆಯಲ್ಲಿ 110 ಸ್ಥಾನ ಪಡೆದಿದ್ದ ಬಿಜೆಪಿ ಅಧಿಕಾರದ ಗದ್ದುಗೆಗೆ ಹತ್ತಿರವಾಗಿತ್ತು. ಆದರೆ, ಸರಳ ಬಹುಮತಕ್ಕೆ ಮೂರು ಸ್ಥಾನ ಬೇಕಿತ್ತು. ಹೀಗಾಗಿ ಪಕ್ಷೇತರ ಶಾಸಕರಿಗೆ ಸಚಿವ ಸ್ಥಾನ ನೀಡಿ ಸರ್ಕಾರವನ್ನು ರಚಿಸಲಾಯಿತು.

‘ಈ ಬಾರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ‘ಮಿಷನ್–150’ ಗುರಿ ನೀಡಿದ್ದರೂ ಅದು ಸಾಕಾರವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಚುನಾವಣೆ ಬಳಿಕ ಬೇರೆ ಪಕ್ಷ ಅಥವಾ ಸ್ವತಂತ್ರವಾಗಿ ಗೆದ್ದವರ ಕಡೆ ಕೈಚಾಚುವುದು ಬೇಡ. ಸಮರ್ಥ ಅಭ್ಯರ್ಥಿಗಳಿಲ್ಲದೆ ಗೆಲ್ಲಲು ಕಷ್ಟವಾಗಿರುವ ಕ್ಷೇತ್ರಗಳಲ್ಲಿ ಬೇರೆ ಪಕ್ಷದವರನ್ನು ಕರೆತರುವುದು ಸೂಕ್ತ ಎಂಬ ನಿರ್ಣಯಕ್ಕೆ ರಾಜ್ಯ ಹಾಗೂ ರಾಷ್ಟ್ರ ನಾಯಕತ್ವ ಬಂದಿದೆ. ಈ ಕಾರಣದಿಂದ ಆಪರೇಶನ್ ಆರಂಭ ಮಾಡಿದ್ದೇವೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಪ್ರಬಲ ನೆಲೆ ಇಲ್ಲ. ಸಮಾಜವಾದಿ ಪಕ್ಷದಿಂದ ಗೆದ್ದು, ಕಾಂಗ್ರೆಸ್ ಸಹ ಸದಸ್ಯರಾಗಿ ಸೇರಿಕೊಂಡಿದ್ದ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಕರೆತರಲಾಯಿತು. ಇದೇ ಮಾದರಿಯನ್ನು ಉಳಿದ ಕ್ಷೇತ್ರಗಳಲ್ಲೂ ಅನುಸರಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಜೆಡಿಎಸ್‌ನತ್ತ ಗಮನ: ‘ಕಳೆದ ಐದಾರು ತಿಂಗಳ ಮೊದಲು ಕಾಂಗ್ರೆಸ್‌ನಿಂದ ಅನೇಕರು ಪಕ್ಷಕ್ಕೆ ಬರಲಿದ್ದಾರೆ ಎಂದು ಅಂದಾಜಿಸಿದ್ದೆವು. ಗುಂಡ್ಲುಪೇಟೆ ಮತ್ತು ನಂಜನಗೂಡು ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ, ಸಿದ್ದರಾಮಯ್ಯನವರು ನೀಡುತ್ತಿರುವ ಜನಪ್ರಿಯ ಕಾರ್ಯಕ್ರಮಗಳಿಂದಾಗಿ ಪಕ್ಷದಲ್ಲೇ ಉಳಿದರೆ ಹೆಚ್ಚು ಅನುಕೂಲ ಎಂದು ಕಾಂಗ್ರೆಸ್‌ ಶಾಸಕರು ಲೆಕ್ಕಾಹಾಕುತ್ತಿದ್ದಾರೆ. ಗುಜರಾತ್‌ ಚುನಾವಣೆ ಫಲಿತಾಂಶ ನೋಡಿ, ನಂತರ ತೀರ್ಮಾನಿಸುವುದಾಗಿ ಕೆಲವರು ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಶಾಸಕರ ಕಡೆ ಹೆಚ್ಚಿನ ಗಮನ ಕೇಂದ್ರೀಕರಿಸಿದ್ದೇವೆ’ ಎಂದು ಬಿಜೆಪಿ ನಾಯಕರು ತಿಳಿಸಿದರು.

‘ಬೆಂಗಳೂರು ಪದವೀಧರ ಕ್ಷೇತ್ರದಿಂದ ಮೂಲ ಬಿಜೆಪಿಯವರಿಗೆ ಟಿಕೆಟ್ ಕೊಡಬೇಕು ಎಂಬ ಬೇಡಿಕೆ ಇತ್ತು. ಗೆಲ್ಲಲೇಬೇಕು ಎಂಬ ಕಾರಣಕ್ಕೆ ಜೆಡಿಎಸ್‌ನ ಅ. ದೇವೇಗೌಡ ಅವರನ್ನು ಕರೆತಂದು ಟಿಕೆಟ್‌ ನೀಡಲಾಯಿತು. ಇದೇ ನೀತಿ ವಿಧಾನಸಭಾ ಕ್ಷೇತ್ರಗಳಿಗೂ ಅನ್ವಯವಾಗಲಿದೆ’ ಎಂದೂ ಅವರು ವಿವರಿಸಿದರು.

ಪುನರಾಯ್ಕೆಯಾಗುವ ಶಾಸಕರು ಎಂದು ಜೆಡಿಎಸ್‌ ಲೆಕ್ಕ ಹಾಕಿರುವ ಅರಸೀಕರೆಯ ಕೆ.ಎಂ. ಶಿವಲಿಂಗೇಗೌಡ, ಶಿವಮೊಗ್ಗ ಗ್ರಾಮಾಂತರದ ಶಾರದಾ ಪೂರ್ಯಾನಾಯ್ಕ್, ನೆಲಮಂಗಲದ ಕೆ. ಶ್ರೀನಿವಾಸ ಮೂರ್ತಿ, ದೇವನಹಳ್ಳಿಯ ಪಿಳ್ಳ ಮುನಿಶ್ಯಾಮಪ್ಪ, ರಾಯಚೂರಿನ ಶಿವರಾಜ ಪಾಟೀಲ, ಶಿಡ್ಲಘಟ್ಟದ ಎಂ. ರಾಜಣ್ಣ, ಲಿಂಗಸಗೂರಿನ ಮಾನಪ್ಪ ವಜ್ಜಲ್‌ ಅವರನ್ನು ಕರೆತರುವ ಲೆಕ್ಕಾಚಾರ ಬಿಜೆಪಿಯವರದ್ದಾಗಿತ್ತು.

‘ಶಾಸಕರ ಜತೆ ಮಾತುಕತೆ ನಡೆಸಿದ ನಾಯಕರು, ಬಿಜೆಪಿ ಸರ್ಕಾರ ಬಂದರೆ ಸಚಿವ ಸ್ಥಾನ ಅಥವಾ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಆಮಿಷ ಒಡ್ಡಿದ್ದಾರೆ’ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

‘ಹಾಸನ ಜಿಲ್ಲೆಯಲ್ಲಿ ಎಚ್‌.ಡಿ. ರೇವಣ್ಣ ಪ್ರಬಲವಾಗಿರುವವರೆಗೆ ಅದೇ ಜಿಲ್ಲೆಯನ್ನು ಪ್ರತಿನಿಧಿಸುವ ನಿಮಗೆ ಮಂತ್ರಿ ಸ್ಥಾನ ಸಿಗುವುದಿಲ್ಲ. ನಮ್ಮ ಪಕ್ಷಕ್ಕೆ ಬಂದರೆ ಮಂತ್ರಿಯಾಗುವುದು ಖಚಿತ ಎಂದು ಶಿವಲಿಂಗೇಗೌಡ ಅವರನ್ನು ಒಲಿಸಲು ಬಿಜೆಪಿ ನಾಯಕರು ಯತ್ನಿಸಿದರು. ಮಂತ್ರಿ ಸ್ಥಾನಕ್ಕಿಂತ ಪಕ್ಷವೇ ಮುಖ್ಯ, ನಿಮ್ಮ ಸಿದ್ಧಾಂತ ನಮಗೆ ಒಗ್ಗುವುದಿಲ್ಲ ಎಂದು ಶಿವಲಿಂಗೇಗೌಡ ಸ್ಪಷ್ಟವಾಗಿ ತಿಳಿಸಿದರು’ ಎಂದು ಮೂಲಗಳು ಹೇಳಿವೆ.

‘ಕೆಲವರು ಬಿಜೆಪಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ. ಕೆಲವರು, ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ತೀರ್ಮಾನ ಮಾಡುವುದಾಗಿ ತಿಳಿಸಿದ್ದಾರೆ. ಕಾದುನೋಡುತ್ತೇವೆ’ ಎಂದು ಬಿಜೆಪಿ ನಾಯಕರು ತಿಳಿಸಿದರು.

**

ಪಕ್ಷಕ್ಕೆ ಬರುವಂತೆ ಬಿಜೆಪಿ, ಕಾಂಗ್ರೆಸ್‌ನವರು ಪ್ರಯತ್ನ ಪಡುತ್ತಲೇ ಇದ್ದಾರೆ. ನಾನು ಪಕ್ಷ ಬಿಟ್ಟು ಬರುವುದಿಲ್ಲ ಎಂದು ಹೇಳಿದ್ದೇನೆ
–ಕೆ.ಎಂ. ಶಿವಲಿಂಗೇಗೌಡ, ಜೆಡಿಎಸ್ ಶಾಸಕ

ಅಂತಹ ಯಾವುದೇ ಚಿಂತನೆ ಸದ್ಯಕ್ಕಿಲ್ಲ. ಪ್ರಚಾರ ಅಷ್ಟೆ. ಪಕ್ಷದಲ್ಲೇ ಇರುತ್ತೇನೆ
–ಮಾನಪ್ಪ ವಜ್ಜಲ್‌, ಜೆಡಿಎಎಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT