ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ ಕೊನೆಗೆ ಸಂಪುಟ ಪುನರ್‌ರಚನೆ

ದೆಹಲಿಗೆ ಬರದಂತೆ ಸಿ.ಎಂ ಮತ್ತು ಶಾಸಕರಿಗೆ ಹೈಕಮಾಂಡ್‌ ತಾಕೀತು
Last Updated 13 ಏಪ್ರಿಲ್ 2016, 19:51 IST
ಅಕ್ಷರ ಗಾತ್ರ

ಬೆಂಗಳೂರು: ‘ಐದು ರಾಜ್ಯಗಳ ಚುನಾವಣಾ ಪ್ರಕ್ರಿಯೆ (ಮೇ ಕೊನೆ ವಾರ) ಮುಗಿದ ನಂತರವೇ ಸಂಪುಟ ಪುನರ್‌ರಚನೆ. ಅಲ್ಲಿಯವರೆಗೂ ದೆಹಲಿಗೂ ಬರಬೇಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಪುಟ ಪುನರ್‌ರಚನೆಗೆ ಒತ್ತಾಯಿಸುತ್ತಿರುವ ಶಾಸಕರ ತಂಡಕ್ಕೆ  ಕಾಂಗ್ರೆಸ್‌ ಹೈಕಮಾಂಡ್‌ ಸ್ಪಷ್ಟ ಸೂಚನೆ ನೀಡಿದೆ.

ರಾಜ್ಯದಲ್ಲಿ ತೀವ್ರ ಬರ ಇದ್ದು, ಅದರ ನಿರ್ವಹಣೆಗೆ ಆದ್ಯತೆ ನೀಡುವಂತೆ ಹೈಕಮಾಂಡ್‌ ಪರವಾಗಿ ಪಕ್ಷದ ರಾಜ್ಯ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಅವರು ಮುಖ್ಯಮಂತ್ರಿ ಮತ್ತು ಶಾಸಕರಿಗೆ ಸಲಹೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೆಪಿಸಿಸಿ ಕಾರ್ಯಕ್ರಮದಲ್ಲಿ  ಭಾಗವಹಿಸಲು ಸಿಂಗ್‌ ನಗರಕ್ಕೆ ಬಂದಿದ್ದರು.

ಚುನಾವಣಾ ಪ್ರಕ್ರಿಯೆ ಮೇ 19ಕ್ಕೆ ಮುಗಿಯಲಿದೆ. ಅಲ್ಲಿಯವರೆಗೂ ವರಿಷ್ಠರು ಪ್ರಚಾರದಲ್ಲಿ ತಲ್ಲೀನರಾಗಿರುತ್ತಾರೆ ಎಂಬುದನ್ನು ಸಿಂಗ್ ಅವರು ಸಿದ್ದರಾಮಯ್ಯನವರ ಗಮನಕ್ಕೆ ತಂದರು ಎಂದು ಗೊತ್ತಾಗಿದೆ. 

ಶಾಸಕರ ಭೇಟಿ: ಈ ನಡುವೆ ಕನಿಷ್ಠ 25 ಸಚಿವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರನ್ನು ಸಂಪುಟಕ್ಕೆ ತೆಗೆದುಕೊಳ್ಳ ಬೇಕು ಎನ್ನುವ ಬೇಡಿಕೆ ಮುಂದಿಟ್ಟಿರುವ ಎಸ್‌.ಟಿ. ಸೋಮಶೇಖರ್‌ ನೇತೃತ್ವದ ಸಚಿವ ಸ್ಥಾನ ಆಕಾಂಕ್ಷಿಗಳ ಶಾಸಕರ ನಿಯೋಗ ಕೂಡ ಸಿಂಗ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಪಕ್ಷದ ವರಿಷ್ಠರ ಭೇಟಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿತು.

ತೀವ್ರ ಬರ ಇರುವ ಕಾರಣ, ಶಾಸಕರು ತಮ್ಮ ಕ್ಷೇತ್ರಗಳಲ್ಲೇ ಇದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ವರಿಷ್ಠರ ಕಚೇರಿಯಿಂದ ಕರೆ ಬಂದಾಗ ಮಾತ್ರ ದೆಹಲಿಗೆ ಬರಬೇಕು ಎನ್ನುವ ಸೂಚನೆಯನ್ನು ಸಿಂಗ್‌ ನೀಡಿದರು ಎಂದು ಮೂಲಗಳು ತಿಳಿಸಿವೆ.

ಪರಿಷತ್‌ ಸದಸ್ಯರ ಒತ್ತಡ: ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯರ ನಿಯೋಗ ಕೂಡ ದಿಗ್ವಿಜಯ್‌ ಸಿಂಗ್ ಅವರನ್ನು ಭೇಟಿಯಾಗಿ ಸಂಪುಟ ಪುನರ್‌ರಚನೆ ಸಂದರ್ಭದಲ್ಲಿ ತಮಗೂ ಅವಕಾಶ ನೀಡಬೇಕು ಎನ್ನುವ ಮನವಿ ಮಾಡಿತು. ‘ಹಿಂದೆಲ್ಲ ಸರ್ಕಾರದಲ್ಲಿ ಕನಿಷ್ಠ 5ರಿಂದ 6 ಮಂದಿ ಪರಿಷತ್‌ ಸದಸ್ಯರು ಸಚಿವರಾಗಿರುತ್ತಿದ್ದರು.

ಈಗ ಕೇವಲ ಇಬ್ಬರು (ಎಸ್‌.ಆರ್‌.ಪಾಟೀಲ, ಡಾ.ಜಿ.ಪರಮೇಶ್ವರ) ಸಚಿವರಾಗಿದ್ದಾರೆ. ಹೀಗಾಗಿ ಕನಿಷ್ಠ ಇನ್ನೂ ನಾಲ್ಕು ಮಂದಿಯನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎನ್ನುವ ಬೇಡಿಕೆ ಮುಂದಿಟ್ಟರು. ಇದೇ ಸಂದರ್ಭದಲ್ಲಿ ಕೆಪಿಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಿಸುವಂತೆಯೂ ಅವರು ಮನವಿ ಮಾಡಿದರು ಎನ್ನಲಾಗಿದೆ. ಪರಿಷತ್‌ ಸದಸ್ಯರಾದ ವಿ.ಎಸ್‌.ಉಗ್ರಪ್ಪ, ವೀರಣ್ಣ ಮತ್ತೀಕಟ್ಟಿ, ಮೋಟಮ್ಮ, ಆರ್‌.ವಿ.ವೆಂಕಟೇಶ್‌ ಸೇರಿದಂತೆ 28 ಮಂದಿ ನಿಯೋಗದಲ್ಲಿದ್ದರು.

ನಿಗಮ– ಮಂಡಳಿ ಅಧ್ಯಕ್ಷರ ಅಧಿಕಾರಾವಧಿ ವಿಸ್ತರಣೆ ಇಲ್ಲ: ನಿಗಮ– ಮಂಡಳಿಗಳ ಅಧ್ಯಕ್ಷರ  ಅಧಿಕಾರಾವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ದಿಗ್ವಿಜಯ್‌ ಸಿಂಗ್‌ ಸ್ಪಷ್ಟಪಡಿಸಿದ್ದಾರೆ.

ಮೇ 20ಕ್ಕೆ ಬಹುತೇಕ ನಿಗಮ–ಮಂಡಳಿಗಳ ಅಧ್ಯಕ್ಷರ ಅವಧಿ 18 ತಿಂಗಳಾಗುತ್ತದೆ. ಅದರ ನಂತರವೂ ತಮ್ಮನ್ನೇ ಮುಂದುವರಿಸಿ ಎಂದು ಅಧ್ಯಕ್ಷರ ನಿಯೋಗ, ದಿಗ್ವಿಜಯ ಸಿಂಗ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಅಸಮಾಧಾನ
ಬಿಜೆಪಿ ಸರ್ಕಾರದ ಸಚಿವರ ಜತೆ ಇದ್ದ ಅಧಿಕಾರಿಗಳನ್ನೇ ಈಗಿನ ಕೆಲವು ಸಚಿವರು ನೇಮಕ ಮಾಡಿಕೊಂಡಿರುವ ಬಗ್ಗೆ ದಿಗ್ವಿಜಯ್‌ ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಎಚ್ಚರವಹಿಸುವಂತೆ ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದರು ಎನ್ನಲಾಗಿದೆ.

ಎಐಸಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ
‘ರಾಜ್ಯದ ಕಾಂಗ್ರೆಸ್‌ ಉಸ್ತುವಾರಿ ಬದಲಾಯಿಸುವ ಸಂಬಂಧ ಎಐಸಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದರು. ರಾಜ್ಯದ ಕಾಂಗ್ರೆಸ್ ಉಸ್ತುವಾರಿಯನ್ನು ಬದಲಾಯಿಸಬೇಕು ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಹೇಳಿಕೆ ನೀಡಿದ್ದರು.

ಈ ತಿಂಗಳಲ್ಲೇ ಪುನರ್‌ರಚನೆ
ದಿಗ್ವಿಜಯ್‌ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿಯವರು ‘ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ಪುನರ್‌ರಚನೆ’ ಎಂದು ಹೇಳಿದರು.

‘ಬರ ಅಧ್ಯಯನಕ್ಕೆ 15ರಿಂದ ನಾಲ್ಕು ದಿನ ರಾಜ್ಯ ಪ್ರವಾಸ ಮಾಡುತ್ತೇನೆ.  ನಂತರ ದೆಹಲಿಗೆ ಹೋಗುತ್ತೇನೆ’ ಎಂದು ಅವರು ವಿವರಿಸಿದರು.
ಆದರೆ, ಸಂಪುಟ ಪುನರ್‌ರಚನೆಗೆ ಒತ್ತಡ ಹೆಚ್ಚಿರುವ ಕಾರಣ ಮುಖ್ಯಮಂತ್ರಿ ಈ ರೀತಿ ಹೇಳಿದ್ದು, ಮೇ ಕೊನೆ ವಾರದವರೆಗೂ ಸಂಪುಟದಲ್ಲಿ ಯಾವ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT