ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಡ ಬಿತ್ತನೆ ಮುಂದುವರಿಕೆ?

ಇದುವರೆಗೆ ಶೇ 75ರಷ್ಟು ಪೂರ್ಣ; ಅ.21ಕ್ಕೆ 60 ದಿನಗಳ ಅವಧಿ ಮುಕ್ತಾಯ
Last Updated 15 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಗದಗ: ‘ರಾಜ್ಯದಲ್ಲಿ ಕಳೆದ ಒಂದೂವರೆ ತಿಂಗಳಿಂದ ನಡೆಯುತ್ತಿರುವ ಮೋಡಬಿತ್ತನೆ ಕಾರ್ಯಾಚರಣೆ ಇದುವರೆಗೆ ಶೇ 75ರಷ್ಟು ಪೂರ್ಣಗೊಂಡಿದೆ. ಮೋಡಬಿತ್ತನೆಯಾಗಿರುವ ಎಲ್ಲ ಪ್ರದೇಶಗಳಲ್ಲೂ ಉತ್ತಮ ಮಳೆ ಸುರಿದಿದೆ’ ಎಂದು ಈ ಯೋಜನೆ ಉಸ್ತುವಾರಿಗಾಗಿ ಸರ್ಕಾರ ರಚಿಸಿರುವ ಹವಾಮಾನ ಇಲಾಖೆಯ ನಿವೃತ್ತ ಅಧಿಕಾರಿಗಳ ತಂಡ ಹೇಳಿದೆ.

ಗದುಗಿನ ರೆಡಾರ್‌ ಕೇಂದ್ರದಲ್ಲಿ ಜೆ.ಆರ್‌ ಕುಲಕರ್ಣಿ, ವೈ.ಕೆ. ನರಸಿಂಹ ಮೂರ್ತಿ, ಡ್ಯಾನಿಯಲ್‌ ಗಿಲ್ಬರ್ಟ್‌ ಅವರನ್ನೊಳಗೊಂಡ ತಜ್ಞರ ತಂಡವು, ಮೋಡಬಿತ್ತನೆ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುತ್ತಿದೆ.

‘ಮಳೆ ಕೊರತೆ ಇದ್ದ ಪ್ರದೇಶಗಳಲ್ಲಿ ಈ ಕಾರ್ಯಾಚರಣೆ ನಡೆಸಿದ ನಂತರ ಮಳೆಯಾಗಿದೆ. ಇದು ಅತ್ಯಂತ ವೈಜ್ಞಾನಿಕ ವಿಧಾನ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು (ಕೆಎಸ್‌ಎನ್‌ಡಿಎಂಸಿ) ಮೋಡಬಿತ್ತನೆ ನಡೆದಿರುವ ಪ್ರದೇಶಗಳಲ್ಲಿ ಆ ದಿನ ಆಗಿರುವ ಮಳೆ ಪ್ರಮಾಣವನ್ನು ದಾಖಲಿಸಿದೆ. ಮಳೆ ಸುರಿಸಬಲ್ಲ ಫಲವತ್ತಾದ ಮೋಡಗಳು ಲಭಿಸದ ಕಾರಣ ಇನ್ನೂ ಕೆಲವು ಪ್ರದೇಶಗಳಲ್ಲಿ ಬಿತ್ತನೆ ಆಗಿಲ್ಲ. ಅಂತಹ ಪ್ರದೇಶಗಳಲ್ಲಿ ತೇವಾಂಶ ಹೊಂದಿರುವ ಮೋಡಗಳಿಗಾಗಿ ಕಾಯುತ್ತಿದ್ದೇವೆ. ಇದರಿಂದ ಮೋಡಬಿತ್ತನೆ ಕಾರ್ಯಾಚರಣೆ ಅವಧಿ ವಿಸ್ತರಣೆಯಾಗುವ ಸಾಧ್ಯತೆಗಳಿವೆ’ ಎಂದು ಈ ತಂಡವು ‘ಪ್ರಜಾವಾಣಿ’ಗೆ ಮಾಹಿತಿ ನೀಡಿತು.

ಅ.21ಕ್ಕೆ ಅವಧಿ ಮುಕ್ತಾಯ: ಕಾವೇರಿ, ಮಲಪ್ರಭಾ ಹಾಗೂ ತುಂಗಾಭದ್ರಾ ಜಲಾನಯನ ಪ್ರದೇಶದಲ್ಲಿ ಮೋಡ ಬಿತ್ತನೆ ನಡೆಸಲು ಹೊಯ್ಸಳ ಪ್ರವೇಟ್ ಲಿಮಿಟೆಡ್‌ ಸಂಸ್ಥೆ ಜತೆಗೆ ಸರ್ಕಾರ ಮಾಡಿಕೊಂಡಿರುವ 60 ದಿನಗಳ ಒಪ್ಪಂದವು ಅಕ್ಟೋಬರ್‌ 21ಕ್ಕೆ ಮುಗಿಯಲಿದೆ. ಆದರೆ, ‘ಕೆಎಸ್‌ಎನ್‌ಡಿಎಂಸಿ’ ವರದಿಯಂತೆ ಬೀದರ್‌, ಕಲ್ಬುರ್ಗಿ, ಯಾದಗಿರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇನ್ನೂ ಸಮರ್ಪಕ ಮಳೆಯಾಗಿಲ್ಲ. ‘ಮಳೆ ಕೊರತೆ ಇರುವ ಈ ಪ್ರದೇಶಗಳನ್ನು ಕೇಂದ್ರೀಕರಿಸಿ ಮೋಡಬಿತ್ತನೆ ಅವಧಿ ವಿಸ್ತರಿಸಿದರೆ ಒಳ್ಳೆಯದು. ಆದರೆ, ಇದನ್ನು ಮುಂದುವರಿಸಬೇಕೇ ಬೇಡವೇ ಎನ್ನುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ’ ಎಂದು ತಜ್ಞರ ತಂಡ ಸ್ಪಷ್ಟಪಡಿಸಿತು.

‘ಶೇ 45ಕ್ಕಿಂತ ಹೆಚ್ಚಿನ ತೇವಾಂಶ ಹೊಂದಿದ ಮೋಡಗಳನ್ನು ಮಾತ್ರ ಮೋಡಬಿತ್ತನೆಗೆ ಆಯ್ಕೆ ಮಾಡಿಕೊಳ್ಳುತ್ತೇವೆ. ಫಲವತ್ತಾದ ಮೋಡಗಳಿಗಾಗಿ ಕಾಯಬೇಕಾಗುತ್ತದೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ನಿಸರ್ಗ ಹೇಗೆ ಸ್ಪಂದಿಸುತ್ತದೆ ಎನ್ನುವುದೂ ಕೂಡ ಅಷ್ಟೇ ಮುಖ್ಯ’ ಎಂದು ಎಂದು ತಜ್ಞರ ತಂಡದ ಸದಸ್ಯರೊಬ್ಬರು ಅಭಿಪ್ರಾಯಪಟ್ಟರು.

‘ಮೋಡ ಬಿತ್ತನೆಗಾಗಿ ‘ಟೈಟನ್‌’ (ಥಂಡರ್‌ಸ್ಟಾರ್ಮ್‌ ಐಡೆಂಟಿಫಿಕೇಷನ್‌, ಟ್ರ್ಯಾಕಿಂಗ್‌, ಅನಾಲಿಸಿಸ್‌ ಅಂಡ್‌ ನೌಕಾಸ್ಟಿಂಗ್‌) ಎಂಬ ತಂತ್ರಾಂಶ ಬಳಸುತ್ತಿದ್ದೇವೆ. ಇದು ಮೋಡಗಳ ಬಗ್ಗೆ ಅತಿ ಸೂಕ್ಷ್ಮ ಮಾಹಿತಿಯನ್ನೂ ನೀಡುವ ರಿಯಲ್ ಟೈಮ್ ತಂತ್ರಜ್ಞಾನ. ಪ್ರತಿನಿತ್ಯ ಸರಾಸರಿ 3 ಗಂಟೆ ಕಾರ್ಯಾಚರಣೆ ನಡೆದಿದೆ. ಇದುವರೆಗೆ ಬಿತ್ತನೆಯಾಗಿರುವ ಎಲ್ಲ ಪ್ರದೇಶಗಳಲ್ಲಿ ಮಳೆ ಸುರಿದಿದೆ’ ಎಂದು ಗದಗ ರೆಡಾರ್‌ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕಾದ ವೆದರ್ ಮಾಡಿಫಿಕೇಷನ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯ ರೆಡಾರ್‌ ತಂತ್ರಜ್ಞ ಡ್ಯಾನಿಯಲ್‌ ಗಿಲ್ಬರ್ಟ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT