ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಇಂದಿನಿಂದ ‘ಮಹಾಸಮರ್ಪಣೆ’

Last Updated 27 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆದಿ ಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿ ಹಾಗೂ ದಕ್ಷಿಣಾಮೂರ್ತಿ ಅಷ್ಟಕಗಳ ಸಾಮೂಹಿಕ ಪಾರಾಯಣೋತ್ಸವ ‘ಮಹಾಸಮರ್ಪಣೆ’ ಕಾರ್ಯಕ್ರಮ ಶನಿವಾರದಿಂದ ಎರಡು ದಿನ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.

‘ವೇದಾಂತ ಭಾರತಿ’ ಏರ್ಪಡಿಸಿರುವ ಎರಡು ದಿನಗಳ ಈ ಕಾರ್ಯಕ್ರಮದಲ್ಲಿ 80 ಸಾವಿರ ಮಂದಿ ಶ್ಲೋಕಗಳನ್ನು ಪಠಣ ಮಾಡಲಿದ್ದಾರೆ. ಕೃಷ್ಣರಾಜನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತಿ ಮಠದ ಪೀಠಾಧೀಶ ಶಂಕರಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕಾಗಿ ಅರಮನೆ ಮೈದಾನದ ಕೃಷ್ಣವಿಹಾರದಲ್ಲಿ ವಿಶಾಲವಾದ ಸಭಾಮಂಟಪವನ್ನು ಸಿದ್ಧಪಡಿಸಲಾಗುತ್ತಿದೆ.

ಕಾರ್ಯಕ್ರಮದ ಪೂರ್ವತಯಾರಿ ಬಗ್ಗೆ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಚಾಲನಾ ಸಮಿತಿ ಅಧ್ಯಕ್ಷ ಎಸ್‌.ಎಸ್‌.ನಾಗಾನಂದ್‌, ‘ಶನಿವಾರ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಸುಮಾರು 40 ಸಾವಿರ ವಿದ್ಯಾರ್ಥಿಗಳು ಪಾರಾಯಣ ನಡೆಸಲಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಎ.ಎಸ್‌.ಕಿರಣ್‌ ಕುಮಾರ್‌ ಅತಿಥಿಯಾಗಿ ಭಾಗವಹಿಸಲಿದ್ದಾರೆ’ ಎಂದರು.

ಪ್ರಧಾನಿಯಿಂದಲೂ ಪಾರಾಯಣ:

‘ಭಾನುವಾರ ಮಧ್ಯಾಹ್ನ 1ಗಂಟೆಯಿಂದ ಸಂಜೆ 4 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿಯವರು ಸುಮಾರು 40 ನಿಮಿಷ ಪಾರಾಯಣ ಮಾಡಲಿದ್ದಾರೆ. ಬಳಿಕ ಮಾತನಾಡಲಿದ್ದಾರೆ’ ಎಂದು ಅವರು ತಿಳಿಸಿದರು. 

ಪ್ರಧಾನಿ ಭಾಗವಹಿಸುವ ಕಾರ್ಯಕ್ರಮ ಇದಾಗಿದ್ದರಿಂದ, ಭದ್ರತೆಯ ಸಲುವಾಗಿ, ಪಾರಾಯಣಕರ್ತರು ಮಧ್ಯಾಹ್ನ 12 ಗಂಟೆಯ ಒಳಗೆ  ಸಭಾ ಮಂಟಪದಲ್ಲಿ ಇರುವಂತೆ ಸೂಚನೆ ನೀಡಿದ್ದೇವೆ. ಕೇಂದ್ರ ಸಚಿವರಾದ ಅನಂತ ಕುಮಾರ್‌, ಅನಂತ ಕುಮಾರ್‌ ಹೆಗಡೆ, ರಮೇಶ ಜಿಗಜಿಣಗಿ, ರಾಜ್ಯದ ಸಚಿವರಾದ ರಾಮಲಿಂಗಾ ರೆಡ್ಡಿ ಹಾಗೂ ಆರ್‌.ವಿ.ದೇಶಪಾಂಡೆ ಭಾಗವಹಿಸಲಿದ್ದಾರೆ ಎಂದರು.

20 ಸಾವಿರ ಆಸನ: ‘ಹೆಚ್ಚಿನವರು ವೇದಿಕೆಯ ಮುಂಭಾಗದಲ್ಲಿ ನೆಲದಲ್ಲೇ ಕುಳಿತು ಪಾರಾಯಣ ಮಾಡಲಿದ್ದಾರೆ. ವೃದ್ಧರಿಗೆ ಹಾಗೂ ಆರೋಗ್ಯ ಸಮಸ್ಯೆ ಇರುವವರಿಗೆ ಕಷ್ಟ ಆಗಬಾರದು ಎಂಬ ಕಾರಣಕ್ಕೆ 20 ಸಾವಿರ ಕುರ್ಚಿಗಳನ್ನು ಅಳವಡಿಸಲಿದ್ದೇವೆ. ಗಣ್ಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆ ಕಲ್ಪಿಸಲಿದ್ದೇವೆ. ಮೈದಾನದ 16 ಕಡೆ ಎಲ್‌ಇಡಿಯ ಬೃಹತ್‌ ಪರದೆಗಳನ್ನು ಜೋಡಿಸಿ ಕಾರ್ಯಕ್ರಮದ ದೃಶ್ಯಗಳನ್ನು ನೇರಪ್ರಸಾರ ಮಾಡಲಾಗುವುದು’ ಎಂದರು.

‘ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಇದೆ. ಇದಕ್ಕಾಗಿ 150 ಕಡೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗುತ್ತದೆ’ ಎಂದರು.

‘10 ವರ್ಷದ ಹಿಂದೆಯೂ ಸಂಸ್ಥೆ ವತಿಯಿಂದ ನಗರದಲ್ಲಿ ಸಾಮೂಹಿಕ ಸೌಂದರ್ಯ ಲಹರಿ ಪಾರಾಯಣ ಹಮ್ಮಿಕೊಳ್ಳಲಾಗಿತ್ತು. 50 ಸಾವಿರ ಮಂದಿ ಭಾಗವಹಿಸಿದ್ದರು’ ಎಂದು ಅವರು ಮೆಲುಕು ಹಾಕಿದರು.

‘ಪ್ರಧಾನಿ ಅವರು ಭಾಗವಹಿಸುವ ಈ ಕಾರ್ಯಕ್ರಮಕ್ಕೆ ವಿಶೇಷ ಭದ್ರತೆ ಒದಗಿಸಲು 2000 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ’ ಎಂದು ನಗರ ಪೊಲೀಸ್‌ ಕಮೀಷನರ್‌ ಟಿ.ಸುನಿಲ್‌ ಕುಮಾರ್‌ ತಿಳಿಸಿದರು.

'ಜಗನ್ಮಾತೆಯ ಸ್ತುತಿ’

‘ಸೌಂದರ್ಯ ಲಹರಿಯು ಜಗನ್ಮಾತೆಯನ್ನು ಸ್ತುತಿಸುವ 100 ಶ್ಲೋಕಗಳನ್ನು ಒಳಗೊಂಡಿದೆ. ಇದರ ಹಾಗೂ ದಕ್ಷಿಣಾಮೂರ್ತಿ ಅಷ್ಟಕಗಳ ಪಾರಾಯಣಕ್ಕೆ 1 ಗಂಟೆ 10 ನಿಮಿಷ ಬೇಕಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಈ ಶ್ಲೋಕಗಳನ್ನು ಸುಶ್ರಾವ್ಯವಾಗಿ ಪಠಣ ಮಾಡಲು ತರಬೇತಿ ನೀಡಿದ್ದೇವೆ. ಪಾರಾಯಣ ನಡೆಸುವವರಿಗೆ ಈಗಾಗಲೇ ಗುರುತಿನ ಚೀಟಿ ನೀಡಿದ್ದೇವೆ. ಗುರುತಿನಚೀಟಿ ಸಿಗದವರಿಗೆ ಸ್ಥಳದಲ್ಲೇ ಅದನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ’ ಎಂದು ನಾಗಾನಂದ್‌ ತಿಳಿಸಿದರು.

ಅಂಕಿ ಅಂಶ

* 80 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

* 20 ಸಾವಿರ ಮಂದಿಗೆ ಆಸನ ವ್ಯವಸ್ಥೆ

* 40 ಸಾವಿರ ವಿದ್ಯಾರ್ಥಿಗಳು ಪಾರಾಯಣ ನಡೆಸಲಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT