ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗೆ; ವಿಮಾನದಿಂದ ಹಾರಿದ ಪ್ರಯಾಣಿಕರು

Last Updated 16 ಜೂನ್ 2016, 0:29 IST
ಅಕ್ಷರ ಗಾತ್ರ

ಬೆಂಗಳೂರು/ಮಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎಎಲ್) ಮಂಗಳೂರಿಗೆ ಹೊರಟಿದ್ದ ಜೆಟ್ ಏರ್‌ವೇಸ್ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡು ಬುಧವಾರ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ವಾಯಿತು.

ಜೆಟ್‌ ಏರ್‌ವೇಸ್‌ನ ‘9W 2839’ ವಿಮಾನ ಬೆಳಿಗ್ಗೆ 10.05ಕ್ಕೆ ಕೆಐಎಎಲ್‌ ನಿಲ್ದಾಣದಿಂದ ಮಂಗಳೂರಿನ ಕಡೆಗೆ ಹಾರಿದ ಐದಾರು ನಿಮಿಷದಲ್ಲೇ ತಾಂತ್ರಿಕ ದೋಷ ಕಾಣಿಸಿಕೊಂಡು ವಿಮಾನದ ಒಳಗೆಲ್ಲ ದಟ್ಟ ಹೊಗೆ  ತುಂಬಿಕೊಂಡಿತು. ಕೂಡಲೇ ಪೈಲಟ್, ವಿಮಾನವನ್ನು ವಾಪಸ್ ಕೆಐಎಎಲ್‌ಗೆ ತಂದಿಳಿಸಿದರು.

‘ವಿಮಾನದಲ್ಲಿ 65 ಪ್ರಯಾಣಿಕರು ಹಾಗೂ ಏರ್‌ವೇಸ್‌ನ ಐವರು ಸಿಬ್ಬಂದಿ ಇದ್ದರು. ಅದೃಷ್ಟವಷಾತ್ ಯಾವುದೇ ದುರಂತ ಸಂಭವಿಸಿಲ್ಲ. ವಿಮಾನದಿಂದ ಹೊರಗೆ ಓಡುವಾಗ ಉಂಟಾದ ತಳ್ಳಾಟದಲ್ಲಿ ನಾಲ್ಕೈದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಜೆಟ್‌ ಏರ್‌ವೇಸ್‌ನ ಇನ್ನೊಂದು ವಿಮಾನದಲ್ಲಿ ಪ್ರಯಾಣಿಕರನ್ನು ಮಂಗಳೂರಿಗೆ ಕಳುಹಿಸಲಾಗಿದೆ’ ಎಂದು ಕೆಐಎಎಲ್ ಅಧಿಕಾರಿಯೊಬ್ಬರು ತಿಳಿಸಿದರು.

‘ನಾನು ಹಾಗೂ ಪತ್ನಿ ಮಂಗಳೂರಿಗೆ ಹೊರಟಿದ್ದೆವು. ಕಿಟಕಿ ಪಕ್ಕ ಕುಳಿತಿದ್ದ ನನಗೆ, ಎಂಜಿನ್‌ ಭಾಗದಿಂದ ಹೊಗೆ ಬರುತ್ತಿರುವುದು ಕಾಣಿಸಿತು. ಈ ವಿಷಯವನ್ನು ಕೂಡಲೇ ಸಿಬ್ಬಂದಿಗೆ ತಿಳಿಸಿದೆ. ನೋಡ ನೋಡುತ್ತಲೇ ದಟ್ಟ ಹೊಗೆಯು ಇಡೀ ವಿಮಾನವನ್ನು ಆವರಿಸಿತು’ ಎಂದು ವಿಮಾನದಲ್ಲಿದ್ದ ಮಂಗಳೂರಿನ ಅಜಿತ್ ಖೇರ್ ಪರಿಸ್ಥಿತಿ ವಿವರಿಸಿದರು.

‘ಸಿಬ್ಬಂದಿಯು ಕರವಸ್ತ್ರಗಳನ್ನು ಕೊಟ್ಟು ಮುಖ ಮುಚ್ಚಿಕೊಳ್ಳುವಂತೆ ಹೇಳಿದರು. ಇತರೆ ಪ್ರಯಾಣಿಕರು ನೆರವಿಗಾಗಿ ಕೂಗಿಕೊಳ್ಳುತ್ತಿದ್ದರು. ಏಳೆಂಟು ನಿಮಿಷಗಳಲ್ಲೇ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಪೈಲಟ್‌ನ ಸಮಯ ಪ್ರಜ್ಞೆಯಿಂದಾಗಿ ಸುರಕ್ಷಿತವಾಗಿ ಕೆಐಎಎಲ್‌ಗೆ ಬಂದಿಳಿದೆವು’ ಎಂದರು.

‘ಕೆಐಎಎಲ್‌ ಬರುತ್ತಿದ್ದಂತೆಯೇ ವಿಮಾನದಿಂದ ಇಳಿದು, ಓಡಿದೆವು. ಈ ವೇಳೆಗಾಗಲೇ ಸ್ಥಳಕ್ಕೆ ಬಂದಿದ್ದ ಅಗ್ನಿಶಾಮಕ ಸಿಬ್ಬಂದಿಯು ಎಂಜಿನ್ ಮೇಲೆ ನೀರು ಹಾಯಿಸಿ ಹೊಗೆ ನಿಯಂತ್ರಣಕ್ಕೆ ತಂದರು’ ಎಂದು ಅವರು ಹೇಳಿದರು.

ದೇವರ ದಯೆ:  ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮಂಗಳೂರಿನ ಪ್ರಯಾಣಿಕರಿಗೆ ಒಂದು ದುಃಸ್ವಪ್ನದಂತೆ ಕಾಡಿತು. ಪ್ರಯಾಣಿಕರೆಲ್ಲ ಬದಲಿ ವಿಮಾನದಲ್ಲಿ ಮಧ್ಯಾಹ್ನ 2.28ಕ್ಕೆ ಮಂಗಳೂರಿಗೆ ಬಂದಿಳಿದರು. ಈ ಪೈಕಿ ಕೆಲವರು ಇನ್ನೊಂದು ವಿಮಾನದಲ್ಲಿ ತಮಗಾದ ಭಯಾನಕ ಅನುಭವವನ್ನು ‘ಪ್ರಜಾವಾಣಿ’ ಜತೆಗೆ ಹಂಚಿಕೊಂಡರು.

‘ದೇವರ ದಯೆ, ಪೈಲಟ್‌ ಅವರ ಸಮಯ ಪ್ರಜ್ಞೆಯಿಂದ ಸುರಕ್ಷಿತವಾಗಿ ವಿಮಾನ ಕೆಳಕ್ಕೆ ಇಳಿಯಿತು. ಪೈಲಟ್‌ ಪರ್ಫ್ಯೂಮ್‌ ಬಳಸಿರಬಹುದು ಅಥವಾ ಎಸಿ ವ್ಯವಸ್ಥೆಯಲ್ಲಿ ಚಿಕ್ಕ ತೊಂದರೆ ಆಗಿರಬಹುದು ಎಂದುಕೊಂಡಿದ್ದೆ.  ಆದರೆ, ವಿಮಾನದಲ್ಲಿ ದಟ್ಟ ಹೊಗೆ ಆವರಿಸಿತ್ತು. ಏನಾಗುತ್ತೋ ಎನ್ನುವ ಆತಂಕ ಕಾಡಿತು’ ಎಂದು ಬೆಂಗಳೂರಿನ ಓರಿಯಂಟಲ್‌ ಟೂಲ್ಸ್ ಕಂಪೆನಿಯ ಹರೀಶ ಸೋಯ್ಲ ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ, ‘ವಿಮಾನದ ಎಂಜಿನ್‌ನಲ್ಲಿ ಕೇವಲ ಹೊಗೆ ಕಾಣಿಸಿಕೊಂಡಿತ್ತು. ಬೆಂಕಿ ಇರಲಿಲ್ಲ. ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದು, ಪ್ರಯಾಣಿಕರೆಲ್ಲ ಸುರಕ್ಷಿತವಾಗಿದ್ದಾರೆ. ಎಲ್ಲ ಪ್ರಯಾಣಿಕರನ್ನು ಇನ್ನೊಂದು ವಿಮಾನದಲ್ಲಿ ಮಂಗಳೂರಿಗೆ ಕರೆತರಲಾಗಿದೆ’ ಎಂದರು.

‘ರನ್‌ವೇ ತಾತ್ಕಾಲಿಕ ಸ್ಥಗಿತ’
‘ತಾಂತ್ರಿಕ ದೋಷ ಉಂಟಾದ ಕಾರಣ ವಿಮಾನವು 10.20ಕ್ಕೆ ಕೆಐಎಎಲ್‌ಗೆ ವಾಪಸಾಗಲಿದೆ ಎಂದು ಸಿಬ್ಬಂದಿ ಮಾಹಿತಿ ಕೊಟ್ಟರು. ಅದೇ ಸಮಯದಲ್ಲಿ ಇತರೆ ಮೂರು ವಿಮಾನಗಳು ಟೇಕ್‌ ಆಫ್‌ ಆಗಬೇಕಿತ್ತು. ಅಲ್ಲದೆ, ಬೇರೆ ಕಡೆಗಳಿಂದಲೂ ನಾಲ್ಕು ವಿಮಾನಗಳು ಕೆಐಎಎಲ್‌ಗೆ ಬರಬೇಕಿತ್ತು. ಆ ಎಲ್ಲ ವಿಮಾನಗಳ ಸಿಬ್ಬಂದಿಗೂ ಮಾಹಿತಿ ರವಾನಿಸಿ, ತಾತ್ಕಾಲಿಕವಾಗಿ ರನ್‌ವೇ ಓಡಾಟ ಸ್ಥಗಿತಗೊಳಿಸಲಾಯಿತು’ ಎಂದು ಕೆಐಎಎಲ್‌ನ ಕಾರ್ಪೊರೇಟ್ ಸೇವೆಗಳ ವಿಭಾಗದ ಸರೋಜ್ ಜೋಸೆಫ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ವಿಮಾನ ತುರ್ತು ಭೂ–ಸರ್ಶ ಮಾಡಿದ ಬಳಿಕ, ಹೊಗೆ ಆರಿಸಿ 10.51ಕ್ಕೆ ರನ್‌–ವೇಯನ್ನು ಮುಕ್ತಗೊಳಿಸಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT