ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲಿ 1 ಲಕ್ಷ ಬಹುಮಹಡಿ ವಸತಿ ಯೋಜನೆಗೆ ಚಾಲನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಾರ್ಷಿಕ ಆದಾಯ ₹87,600ಕ್ಕಿಂತ ಕಡಿಮೆ ಇದ್ದವರಿಗೆ ಮನೆ
Last Updated 5 ಜುಲೈ 2017, 12:13 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ವಾಸ ಮಾಡುತ್ತಿರುವ ವಸತಿ ರಹಿತ ಬಡವರಿಗೆ ಮನೆಗಳನ್ನು ನಿರ್ಮಿಸಿ ಹಂಚಿಕೆ ಮಾಡುವ ‘ಮುಖ್ಯಮಂತ್ರಿಯವರ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ’ಗೆ ಶೀಘ್ರವೇ ಚಾಲನೆ ದೊರೆಯಲಿದೆ.

ಯೋಜನೆ ರೂಪುರೇಷೆ ಕುರಿತು ಚರ್ಚಿಸಲು ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ವಸತಿ, ಹಣಕಾಸು, ಕಂದಾಯ ಇಲಾಖೆ ಮತ್ತು ಗೃಹ ಮಂಡಳಿ, ಬಿಬಿಎಂಪಿ ಅಧಿಕಾರಿಗಳ ಸಭೆ ಕರೆದಿದ್ದ ಮುಖ್ಯಮಂತ್ರಿಯವರು, ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸುವಂತೆ ಸೂಚಿಸಿದರು.

ಬಹುಮಹಡಿಗಳ ನಿರ್ಮಾಣಕ್ಕೆ ಅಗತ್ಯವಾದ ಭೂಮಿಯನ್ನು ಕೂಡಲೇ ವಸತಿ ಇಲಾಖೆಗೆ ಹಸ್ತಾಂತರ ಮಾಡುವಂತೆಯೂ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು. ಒಂದು ಲಕ್ಷ ಬಹುಮಹಡಿ ವಸತಿ ಯೋಜನೆಯನ್ನು ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಘೋಷಿಸಿದ್ದರು.

ಯೋಜನೆಗೆ ಅಗತ್ಯವಾದ 1130 ಎಕರೆ ಸರ್ಕಾರಿ ಜಮೀನು ಗುರುತಿಸಿ ಪಟ್ಟಿಯನ್ನು ಈಗಾಗಲೇ ಮಂಜೂರಾತಿಗಾಗಿ ಕಂದಾಯ ಇಲಾಖೆಗೆ ಸಲ್ಲಿಸಲಾಗಿದೆ ಎಂದು ವಸತಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಗುರುತಿಸಿರುವ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಬಹುದೇ? ಅದು ವಾಸ ಯೋಗ್ಯವೇ ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಹತ್ತು ದಿನದಲ್ಲಿ ವರದಿ ನೀಡುವಂತೆ ಮುಖ್ಯಮಂತ್ರಿಯವರು ಅಧಿಕಾರಿಗಳಿಗೆ ಸೂಚಿಸಿದರು.

ಈ ಯೋಜನೆಯಲ್ಲಿ ಮನೆಗಳನ್ನು ಪಡೆಯಲು ಫಲಾನುಭವಿಗಳಿಗೆ ಮಾನದಂಡ ನಿಗದಿ ಮಾಡಲಾಗಿದೆ. ವಾರ್ಷಿಕ ಆದಾಯ ₹87,600 ಇರಬೇಕು. ವಸತಿ ರಹಿತರಾಗಿರಬೇಕು. ಸ್ವಂತ ಮನೆ ಅಥವಾ ಬೇರೆ ಯಾವುದೇ ಯೋಜನೆಯಲ್ಲಿ ಮನೆಗಳನ್ನು ಪಡೆದಿರಬಾರದು. ಹೊರ ರಾಜ್ಯದವರು ಮತ್ತು ಇತ್ತೀಚೆಗೆ ಬೆಂಗಳೂರಿಗೆ ಬಂದು ನೆಲೆಸಿದವರಿಗೆ ಈ ಸೌಲಭ್ಯ ಸಿಗುವುದಿಲ್ಲ.

ಆರ್ಥಿಕವಾಗಿ ಹಿಂದುಳಿದವರಿಗೆ ನಿಗದಿ ಮಾಡುವ ಮನೆಗಳಲ್ಲಿ ಶೇ 30 ಪರಿಶಿಷ್ಟ ಜಾತಿಯವರಿಗೆ, ಶೇ 10 ಪರಿಶಿಷ್ಟ ಪಂಗಡದವರಿಗೆ, ಶೇ 10 ಅಲ್ಪಸಂಖ್ಯಾತರು, ಉಳಿದ ಶೇ 50 ಸಾಮಾನ್ಯ ವರ್ಗದವರಿಗೆ ಮೀಸಲಿಡಲಾಗುವುದು ಎಂದು ಸಭೆಯಲ್ಲಿ ಅಧಿಕಾರಿಗಳು ವಿವರಿಸಿದರು.

ಮನೆಗಳನ್ನು ಅತ್ಯಂತ ಪಾರದರ್ಶಕವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲು ಅವಕಾಶ ನೀಡಲಾಗುವುದು. ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲಿದೆ ಎಂದು ಹೇಳಿದರು.

ಸಚಿವರಾದ ಕೆ.ಜೆ. ಜಾರ್ಜ್, ಎಂ. ಕೃಷ್ಣಪ್ಪ, ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT