ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕ್ಕರೆ ಇಲ್ಲದ ಗೋದಾಮಿಗೆ ಬೀಗ!

ಜಪ್ತಿ ಮಾಡುವಲ್ಲಿಯೂ ಸರ್ಕಾರದ ತಾರತಮ್ಯ: ಬಿಜೆಪಿ ಆರೋಪ
Last Updated 7 ಜುಲೈ 2015, 19:57 IST
ಅಕ್ಷರ ಗಾತ್ರ

ಬೆಳಗಾವಿ: ಸಕ್ಕರೆ ಕಾರ್ಖಾನೆಗಳ ಗೋದಾಮು ಜಪ್ತಿ ಮಾಡಿ ಬೀಗ ಜಡಿಯುವ ಕೆಲಸದಲ್ಲಿಯೂ ಸರ್ಕಾರ ತಾರತಮ್ಯ ಎಸಗಿದೆ ಎಂದು ಬಿಜೆಪಿಯ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ಮಂಗಳವಾರ ಆರೋಪಿಸಿದರು.

ಸಹಕಾರ ಇಲಾಖೆ ಕುರಿತ ಚರ್ಚೆಯ ವೇಳೆ ಸವದಿ, 'ಅಧಿಕಾರಿಗಳು ಸಕ್ಕರೆ ಜಪ್ತಿ ಮಾಡುವ ವೇಳೆ, ಮಾಲೀಕರು ತೋರಿಸಿದ ಗೋದಾಮುಗಳಿಗಷ್ಟೇ ಬೀಗ ಹಾಕಿದ್ದಾರೆ. ಕೆಲವು ಪ್ರಭಾವಿ ವ್ಯಕ್ತಿಗಳ ನೇತೃತ್ವದ ಕಾರ್ಖಾನೆಗಳ ಗೋದಾಮುಗಳಲ್ಲಿ ಸಕ್ಕರೆಯೇ ಇಲ್ಲದಿದ್ದರೂ ಅದಕ್ಕೆ ಬೀಗ ಜಡಿಯಲಾಗಿದೆ' ಎಂದು ಆರೋಪಿಸಿದರು.

'ಸಕ್ಕರೆಯೇ ಇಲ್ಲದ ಗೋದಾಮಿಗೆ ಬೀಗ ಹಾಕಿದ್ದಾರಾ? ಅರೇ, ಇದು 420 ಪ್ರಕರಣ (ಮೋಸ ಮಾಡಿದವರ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿ ದಾಖಲಿಸುವ ಪ್ರಕರಣ) ಅಲ್ವಾ' ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪ್ರಶ್ನಿಸಿದರು. ಇಂತಹದ್ದು ಯಾವ ಕಾರ್ಖಾನೆಯಲ್ಲಿ ನಡೆದಿದೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತದೆ ಎಂದು ಸಕ್ಕರೆ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಹೇಳಿದರು.

'ಯಾವ ಕಾರ್ಖಾನೆಯಲ್ಲಿ ಹಾಗಾಗಿದೆ ಎಂಬುದನ್ನು ಸಚಿವರಿಗೆ ಖುದ್ದಾಗಿ ತಿಳಿಸುವೆ' ಎಂದು ಸವದಿ ಹೇಳಿದರು. ಆದರೆ ಕಾರ್ಖಾನೆಯ ಹೆಸರನ್ನು ಸದನದಲ್ಲೇ ಹೇಳುವಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ‘ಪ್ರತಿ ಟನ್ ಕಬ್ಬಿಗೆ ರೈತರಿಗೆ ₨ 2,350 ದರ ಪಾವತಿಸಿರುವ ಕೃಷ್ಣಾ ಸಹಕಾರ ಸಕ್ಕರೆ ಕಾರ್ಖಾನೆಯ ಗೋದಾಮಿಗೆ ಬೀಗ ಹಾಕುವ ಸರ್ಕಾರ ಘಟಪ್ರಭಾ ಕಾರ್ಖಾನೆಯ ಗೋದಾಮಿಗೆ ಏಕ ಬೀಗ ಹಾಕಿಲ್ಲ? ಬೀಗ ಜಡಿಯುವ ವಿಚಾರದಲ್ಲೂ ತಾರತಮ್ಯ ಎಸಗಲಾಗುತ್ತಿದೆ’ ಎಂದು ಸವದಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ 3 ಎಕ್ಕಗಳು!
ಬೆಳಗಾವಿ: ಇಸ್ಪೀಟು ಆಡುವವರಿಗೆ 'ಎಕ್ಕ'ದ ಬೆಲೆ ಗೊತ್ತು. ರಾಜ್ಯ ಮಂತ್ರಿ ಮಂಡಲದಲ್ಲಿ ಯಾರು, ಯಾವ 'ಎಕ್ಕ'ಕ್ಕೆ ಸಮ?! ಈ ಪ್ರಶ್ನೆಗೆ ಲಕ್ಷ್ಮಣ ಸವದಿ ವಿಧಾನಸಭೆಯಲ್ಲಿ ವಿವರಣೆ ನೀಡಿದರು. ಇಸ್ಪೀಟು ಆಟದಲ್ಲಿ ಪ್ರಮುಖವಾದ 'ಇಸ್ಪೀಟು ಎಕ್ಕ' ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸರಿಹೊಂದುತ್ತದೆ ಎಂದು ಸವದಿ ಹೇಳಿದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ‘ಚೌಕ’ ಎಕ್ಕಕ್ಕೆ ಹಾಗೂ ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ‘ಹುಕುಂ’ ಎಕ್ಕಕ್ಕೆ ಸಮ ಎಂದರು.

ಬಿದಾಯಿಗೆ ₨ 20 ಕೋಟಿ
ಬೆಳಗಾವಿ:
ಅಲ್ಪಸಂಖ್ಯಾತ ಹೆಣ್ಣು ಮಕ್ಕಳ ವಿವಾಹಕ್ಕೆ ಸಹಾಯಧನ ನೀಡುವ ಬಿದಾಯಿ ಯೋಜನೆಗೆ ಎರಡು ವರ್ಷಗಳಲ್ಲಿ 20 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ ಎಂದು ಅಲ್ಪಸಂಖ್ಯಾತರ ಅಭಿವೃದ್ಧಿ  ಮತ್ತು ವಕ್ಫ್ ಸಚಿವ ಖಮರುಲ್ ಇಸ್ಲಾಂ ವಿಧಾನಪರಿಷತ್ತಿಗೆ ತಿಳಿಸಿದರು.

ಬಿಜೆಪಿಯ ಭಾನುಪ್ರಕಾಶ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಈ ಯೋಜನೆಗೆ ಪ್ರಸಕ್ತ ವರ್ಷ ₨ 20 ಕೋಟಿ ಮೀಸಲಿಡಲಾಗಿದೆ. ಮೊದಲ ತ್ರೈಮಾಸಿಕ ಕಂತು ₨ 5 ಕೋಟಿಯನ್ನು ಬಿಡುಗಡೆ ಮಾಡಲಾಗಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT