ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ವಿರುದ್ಧ ಮತ್ತೊಂದು ದೂರು

Last Updated 7 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಆದೇಶಗಳಂತೆ ನಿಗದಿ­ಪಡಿಸಲಾದ ಆರು ಮಾರ್ಗಸೂಚಿ­ಗಳಲ್ಲಿ ‘ಬಿ’ ಮತ್ತು ‘ಎಫ್‌’ಗಳನ್ನು ತಪ್ಪಾಗಿ ಅರ್ಥೈಸಿ ಅರ್ಕಾವತಿ ಬಡಾ­ವಣೆಯ ಪರಿಷ್ಕೃತ ಯೋಜನೆಯಡಿ ಹೆಚ್ಚಿನ ಜಮೀನುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ವಕೀಲರೊಬ್ಬರು ನ್ಯಾಯಮೂರ್ತಿ ಎಚ್‌.ಎಸ್‌.ಕೆಂಪಣ್ಣ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.

‘ಅಧಿಸೂಚನೆಯಿಂದ ಕೈಬಿಟ್ಟ 983 ಎಕರೆಯಲ್ಲಿ ಶೇಕಡ 95ರಷ್ಟು ಜಮೀನು­ಗಳು ‘ಬಿ’ ಮತ್ತು ‘ಎಫ್‌’ ಮಾರ್ಗ­ಸೂಚಿ­ಗಳ ವ್ಯಾಪ್ತಿಗೆ ಬರು­ತ್ತವೆ ಎಂಬ ಕಾರಣ ನೀಡಲಾಗಿದೆ. ಈ ಎರಡೂ ಮಾರ್ಗಸೂಚಿಗಳನ್ನು ತಮಗೆ ಬೇಕಾ­ದಂತೆ ಅರ್ಥೈಸಿ ಜಮೀನುಗಳನ್ನು ಭೂ­ಸ್ವಾಧೀನ­ದಿಂದ ಕೈಬಿಡಲಾಗಿದೆ’ ಎಂದು ವಕೀಲ ಕೆ.ದಿಲೀಪ್‌­ಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಟಿ.ಶ್ಯಾಂಭಟ್‌ ಮತ್ತಿತರರ ವಿರುದ್ಧ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಲಾಗಿದೆ.

ಯೋಜನೆಯಿಂದ ಕೈಬಿಟ್ಟಿರುವ ಶೇಕಡ 60ರಿಂದ 70ರಷ್ಟು ಜಮೀನು ‘ಎಫ್‌’ ಮಾರ್ಗ­ಸೂಚಿಯ ವ್ಯಾಪ್ತಿಗೆ ಬರುತ್ತದೆ ಎಂದು ಗುರುತಿಸ­ಲಾಗಿದೆ. ದೊಡ್ಡ ಪ್ರಮಾಣದಲ್ಲಿ ಜಮೀನುಗ­ಳನ್ನು ಕೈಬಿಡುವುದಕ್ಕಾಗಿ ಈ ಮಾರ್ಗ­ಸೂಚಿ­ಯನ್ನು ಬಳಸಿ­ಕೊಳ್ಳಲಾಗಿದೆ.  ‘ಎಫ್‌’ ಪ್ರಕಾರ ಈಗಾಗಲೇ ಅಧಿ­ಸೂಚ­ನೆ­ಯಿಂದ ಕೈಬಿಡಲು ಆಧಾರ­ವಾಗಿ ಬಳಸಿದ ಕಾರಣಗಳ ವ್ಯಾಪ್ತಿಗೆ ಬರುವ ಜಮೀನುಗಳನ್ನು ಕೈಬಿಡಲು ಅವಕಾಶ ಇತ್ತು ಎಂದು ಉಲ್ಲೇಖಿಸಿದ್ದಾರೆ.

ಹಿಂದೆ ಡಿನೋಟಿಫಿಕೇಷನ್‌ಗೆ ಆಧಾರ­ವಾಗಿದ್ದ ಸಮಾನ ಕಾರಣಗಳ ವ್ಯಾಪ್ತಿಗೆ ಈ ಜಮೀನುಗಳು ಬರುತ್ತವೆಯೇ ಎಂಬು­ದನ್ನು ಪರಿಶೀಲಿಸಿ, ವರದಿ ಮಾಡುವ ಜವಾಬ್ದಾರಿಯನ್ನು ಬಿಡಿಎ ಅಧಿ­ಕಾರಿ­ಗಳೇ ನಿರ್ವಹಿಸಬೇಕಿತ್ತು. ಸುಪ್ರೀಂ­ಕೋರ್ಟ್‌ ಮತ್ತು ಹೈಕೋರ್ಟ್‌ ನಿರ್ದೇಶನಗಳನ್ನು ಅವರು ಪಾಲಿಸಿಲ್ಲ ಎಂದು ದೂರಿದ್ದಾರೆ. ‘ಬಿ’ ಮಾರ್ಗಸೂಚಿಯ ಪ್ರಕಾರ ಈಗಾ­ಗಲೇ ಕಟ್ಟಡಗಳಿರುವ ಪ್ರದೇಶ­ವನ್ನು ಕೈಬಿಡಲು ಅವಕಾಶ ಇತ್ತು. ಅದನ್ನೂ ದುರ್ಬಳಕೆ ಮಾಡಿಕೊಳ್ಳಲಾ­ಗಿದೆ ಎಂದು ಆರೋಪಿಸಿದ್ದಾರೆ.

ಸಂಘಕ್ಕೆ ಅಕ್ರಮವಾಗಿ ಜಮೀನು: ಹೈಕೋರ್ಟ್‌ ಆದೇಶದ ಪ್ರಕಾರ, ಅರ್ಕಾವತಿ ಬಡಾವಣೆಗೆ ಗುರುತಿಸಿದ್ದ ಪ್ರದೇಶದಲ್ಲಿ ಕಂದಾಯ ನಿವೇಶನ­ಗ­ಳನ್ನು ಖರೀದಿಸಿರುವವರಿಗೆ ಪರ್ಯಾಯ ನಿವೇಶನ ನೀಡಲು ಅವಕಾಶ ಇತ್ತು. ಅವರು ಹೊಂದಿರುವ ನಿವೇಶನಗಳನ್ನು ಮರುಮಂಜೂರು ಮಾಡಲು ಅವ­ಕಾಶ ಇರಲಿಲ್ಲ. ಆದರೆ, ಈ ಆದೇಶ ಉಲ್ಲಂ­ಘಿಸಿ ಖಾದಿ ಗ್ರಾಮೋದ್ಯೋಗ ಗೃಹ ನಿರ್ಮಾಣ ಸಹ­ಕಾರ ಸಂಘಕ್ಕೆ 12 ಎಕರೆ 10 ಗುಂಟೆ ಜಮೀನನ್ನು ವಾಪಸು ನೀಡ­ಲಾ­ಗಿದೆ ಎಂದು ಉಲ್ಲೇಖಿಸಿದ್ದಾರೆ.

‘ಬಿಡಿಎ ಅಧಿಕಾರಿಗಳು ಮನಸೋ­ಇಚ್ಛೆ ನಿರ್ಧಾರ ತೆಗೆದುಕೊಂಡು ಜಮೀ­ನು­­ಗಳನ್ನು ಕೈಬಿಟ್ಟಿ­ದ್ದಾರೆ. ಇದ­ರಿಂದ ಬಿಡಿಎಗೆ ₹10 ಸಾವಿರ ಕೋಟಿ ನಷ್ಟ­ವಾಗಿದೆ. ಮುಖ್ಯಮಂತ್ರಿಯವರೂ ಈ ಅಕ್ರಮ­­ದಲ್ಲಿ ಭಾಗಿಯಾಗಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.

ಇತರೆ ಆರೋಪಗಳು
* ಮಾನ್ಯತಾ ಡೆವಲಪರ್ಸ್‌ನ ತೇಜರಾಜ್‌ ಗುಲೇಚಾ ಅವರಿಗೆ ಮಾರಾಟವಾಗಿದ್ದ 37 ಗುಂಟೆ ಜಮೀನನ್ನು ಅಕ್ರಮವಾಗಿ ಕೈಬಿಟ್ಟಿರುವುದು.

* ಬಿಡಿಎ ಆಡಳಿತ ಮಂಡಳಿಯ 57/11ನೇ ಸಭೆಯ ನಿರ್ಣಯನ್ನು ತಪ್ಪಾತಿ ಅರ್ಥೈಸಿ 26 ಎಕರೆ ಡಿನೋಟಿಫಿಕೇಷನ್‌

* ಬಿಡಿಎ ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣಪತ್ರಕ್ಕೆ ವಿರುದ್ಧವಾಗಿ ಕೆಂಪಾಪುರ ಮತ್ತು ಶ್ರೀರಾಮಪುರ ಗ್ರಾಮಗಳ ಜಮೀನುಗಳ ಡಿನೋಟಿಫೈ.

* ಕಂದಾಯ ನಿವೇಶನಗಳಿದ್ದ 16 ಎಕರೆ 22 ಗುಂಟೆ ಜಮೀನುಗಳನ್ನು ಕಾನೂನುಬಾಹಿರವಾಗಿ ಕೈಬಿಟ್ಟಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT